
ರಸ್ತೆಬದಿಯಲ್ಲಿ ಓಡಾಡುವವರ ಮೇಲೆ ಬೀದಿ ನಾಯಿಗಳು (Stray dog attack) ದಾಳಿ ನಡೆಸುವ ಪ್ರಕರಣಗಳು ಇತ್ತೀಚಿಗೆ ಜಾಸ್ತಿ ಕೇಳಿ ಬರುತ್ತಿದೆ. ಇನ್ನೂ ರಾಷ್ಟ್ರ ರಾಜಧಾನಿಯಲ್ಲಿ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ನವ ದೆಹಲಿ ಮತ್ತು ರಾಷ್ಟ್ರ ರಾಜಧಾನಿ (ಎನ್‌ಸಿಆರ್) ವಲಯದಲ್ಲಿನ ಜನ ವಸತಿ ಪ್ರದೇಶಗಳ ಬಳಿಯಿರುವ ಎಲ್ಲಾ ಬೀದಿ ನಾಯಿಗಳನ್ನು ನಗರ ಹೊರ ವಲಯದಲ್ಲಿರುವ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪ್ರಾಣಿ ಸಂರಕ್ಷಣೆ ಕಾರ್ಯಕರ್ತರು ಮತ್ತು ಪ್ರಾಣಿ ಪ್ರೇಮಿಗಳು ನ್ಯಾಯಾಲಯದ ಈ ತೀರ್ಪನ್ನು ವಿರೋಧಿಸಿದ್ದಾರೆ. ಹೀಗಿರುವಾಗ ನಿಜಕ್ಕೂ ಬೀದಿ ನಾಯಿಗಳ ಹಾವಳಿ ಹೆಚ್ಚಿದೆಯೇ, ನಾಯಿ ಕಡಿತ (Dog Bite) ಹಾಗೂ ರೇಬಿಸ್ ಪ್ರಕರಣ ಹೆಚ್ಚಾಗಿದೆಯೇ, ಇಲ್ಲಿಯವರೆಗೆ ನಾಯಿ ಕಡಿತದಿಂದ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶವನ್ನು ನೀವು ತಿಳಿಯಲೇಬೇಕು.
ದಿನದಿಂದ ದಿನಕ್ಕೆ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿದೆ ಎನ್ನಲಾಗುತ್ತಿದೆ. ಈ ಬಗೆಗಿನ ಅಂಕಿ ಅಂಶಗಳನ್ನು ನೋಡುವುದಾದರೆ, 2018 ರಲ್ಲಿ, ದೇಶಾದ್ಯಂತ 75.7 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಅವಧಿಯ ಬಳಿಕ ಇದರಲ್ಲಿ ಇಳಿಕೆ ಕಂಡುಬಂದಿದ್ದು, 2020 ರಲ್ಲಿ 47.6 ಲಕ್ಷ ಪ್ರಕರಣಗಳು ಮತ್ತು 2021 ರಲ್ಲಿ 32.4 ಲಕ್ಷ ಪ್ರಕರಣಗಳು ವರದಿಯಾಗಿವೆ. ಆದರೆ 2023 ರಿಂದ ನಾಯಿ ಕಡಿತದ ಪ್ರಕರಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಹೌದು 2023 ರಲ್ಲಿ ನಾಯಿ ಕಡಿತದ ಪ್ರಕರಣದ ಸಂಖ್ಯೆ 30.5 ಲಕ್ಷದಷ್ಟಿತ್ತು. ಆದರೆ ಕಳೆದ ವರ್ಷ ಅಂದರೆ 2024 ರಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ನಾಯಿ ಕಡಿತದಿಂದ ಉಂಟಾಗುವ ರೇಬಿಸ್‌ನಿಂದಲೂ ಸಾಯುವವರ ಸಂಖ್ಯೆ ಹೆಚ್ಚಾಗಿದೆ. 2022 ರಲ್ಲಿ, ರೇಬಿಸ್‌ನಿಂದ 21 ಸಾವುಗಳು ಸಂಭವಿಸಿವೆ, 2023 ರಲ್ಲಿ ಈ ಸಂಖ್ಯೆ 50 ಕ್ಕೆ ಏರಿತು. 2024 ರಲ್ಲೂ ಈ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಕಳೆದ ವರ್ಷ ರೇಬಿಸ್‌ನಿಂದ 54 ಜನ ಸಾವನ್ನಪ್ಪಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ, ಇದರ ಡೇಟಾವನ್ನು ನೋಡುವುದಾದರೆ, ಕಳೆದ ವರ್ಷ ಅಂದರೆ 2024 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25 ಸಾವಿರಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 4 ಲಕ್ಷದ 85 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ ನಾಲ್ಕು ಲಕ್ಷದ 80 ಸಾವಿರ, ಗುಜರಾತ್‌ನಲ್ಲಿ ಮೂರು ಲಕ್ಷದ 92 ಸಾವಿರ, ಕರ್ನಾಟಕದಲ್ಲಿ ಮೂರು ಲಕ್ಷದ 61 ಸಾವಿರ, ಉತ್ತರ ಪ್ರದೇಶದಲ್ಲಿ ಒಂದು ಲಕ್ಷದ 64 ಸಾವಿರ, ರಾಜಸ್ಥಾನದಲ್ಲಿ ಒಂದು ಲಕ್ಷದ 40 ಸಾವಿರ, ಬಿಹಾರದಲ್ಲಿ ಎರಡು ಲಕ್ಷದ 63 ಸಾವಿರ, ಆಂಧ್ರಪ್ರದೇಶದಲ್ಲಿ ಎರಡು ಲಕ್ಷದ 45 ಸಾವಿರ ಮತ್ತು ಅಸ್ಸಾಂನಲ್ಲಿ ಒಂದು ಲಕ್ಷದ 66 ಸಾವಿರ ಪ್ರಕರಣಗಳು ವರದಿಯಾಗಿವೆ.
2025 ರ ಅಂಕಿಅಂಶವನ್ನು ನೋಡುವುದಾದರೆ ನಾಯಿ ಕಡಿತದ ಪ್ರಕರಣದಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಜನವರಿಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 56,538 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಗುಜರಾತ್ 53,942 ಪ್ರಕರಣಗಳೊಂದಿಗೆ ಹಾಗೂ ತಮಿಳುನಾಡು 48,931 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನೂ ಕರ್ನಾಟಕದಲ್ಲಿ 39,500 ಪ್ರಕರಣಗಳು ಮತ್ತು ಬಿಹಾರದಲ್ಲಿ 34,000 ನಾಯಿ ಕಡಿತದ ಪ್ರಕರಣಗಳು 2025 ರಲ್ಲಿ ವರದಿಯಾಗಿವೆ.
ಇದನ್ನೂ ಓದಿ: ಗಜಗಳ ದಿನ; ವಿಶ್ವ ಆನೆ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳನ್ನು ಪರಿಶೀಲಿಸುತ್ತದೆ. ನಾಯಿ ಕಡಿತದಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕಾಗಿ, ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದ (NRCP) ಅಡಿಯಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇವುಗಳಲ್ಲಿ ರಾಜ್ಯಗಳಿಗೆ ರೇಬೀಸ್ ಲಸಿಕೆಗಾಗಿ ಬಜೆಟ್ ಒದಗಿಸುವುದು, ಪ್ರತಿ ಪಟ್ಟಣ ಮತ್ತು ಹಳ್ಳಿಯಲ್ಲಿರುವ ಸಮುದಾಯ ಕೇಂದ್ರಗಳಿಗೆ ರೇಬೀಸ್ ವಿರೋಧಿ ಲಸಿಕೆಯನ್ನು ತಲುಪಿಸುವುದು, ರೇಬೀಸ್ ವಿರೋಧಿ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದು, ರೇಬೀಸ್ ಮುಕ್ತ ಉಪಕ್ರಮಗಳನ್ನು ಪ್ರಾರಂಭಿಸುವುದು, ತರಬೇತಿ ಕಾರ್ಯಕ್ರಮಗಳು ಮತ್ತು ರೇಬೀಸ್ ಸಹಾಯವಾಣಿಗಳನ್ನು ಸ್ಥಾಪಿಸುವುದು ಸೇರಿವೆ.
2020-21 ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಮಿಷನ್ ಉಚಿತ ಔಷಧವನ್ನು ಪ್ರಾರಂಭಿಸಿದೆ. ರೇಬೀಸ್ ತಡೆಗಟ್ಟಲು ರೇಬೀಸ್ ವಿರೋಧಿ ಲಸಿಕೆ (ARV) ಮತ್ತು ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ (RIG) ಖರೀದಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಸಹಾಯ ಒದಗಿಸಿದೆ. ಈ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಆಂಟಿ ರೇಬಿಸ್ ಕ್ಲಿನಿಕ್‌ಗಳಲ್ಲಿ ಉಚಿತವಾಗಿ ಲಭ್ಯವಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ