National Energy Conservation Day 2023: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಏಕೆ? ಇದರ ಇತಿಹಾಸ, ಮಹತ್ವ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 14, 2023 | 10:47 AM

ಇಂಧನ ಸಂರಕ್ಷಣೆಯ ಮಹತ್ವದ ಕುರಿತು ಸಂದೇಶವನ್ನು ಹರಡಲು ಮತ್ತು ಇಂಧನ ದಕ್ಷತೆ ಹಾಗೂ ಇಂಧನ ಸಂರಕ್ಷಣೆಯಲ್ಲಿ ರಾಷ್ಟ್ರದ ಜನರ ಸಾಧನೆಗಳನ್ನು ಗೌರವಿಸಲು ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ (National Energy Conservation Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

National Energy Conservation Day 2023: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಏಕೆ? ಇದರ ಇತಿಹಾಸ, ಮಹತ್ವ
ಸಾಂದರ್ಭಿಕ ಚಿತ್ರ
Follow us on

ಪ್ರತಿನಿತ್ಯ ನಾವೆಲ್ಲರೂ ಹಲವಾರು ಉದ್ದೇಶಗಳಿಗಾಗಿ ವಿದ್ಯುತ್, ಪೆಟ್ರೋಲ್, ಗ್ಯಾಸ್ ಅನಿಲ ಇತ್ಯಾದಿ ಇಂಧನಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಬಳಕೆ ಮಾಡುತ್ತೇವೆ. ಇಂಧನವು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಇದರ ಅತಿಯಾದ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೆ, ಮಿತಿಮೀರಿದ ಇಂಧನ ಬಳಕೆಯಿಂದ ಭವಿಷ್ಯದಲ್ಲಿ ಇಂಧನಗಳು ಸಿಗುವುದೇ ಕಷ್ಟಸಾಧ್ಯವಾಗಬಹುದು. ಇಂದು ಮಾನವನ ಸ್ವಾರ್ಥದ ಕಾರಣದಿಂದ ನೈಸರ್ಗಿಕ ಶಕ್ತಿ ಮೂಲಗಳಾದ ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ನೈಸರ್ಗಿಕ ಅನಿಲಗಳು ಭೂಮಿಯಲ್ಲಿ ಖಾಲಿಯಾಗುತ್ತಿವೆ. ಹಾಗಾಗಿ ಸುಸ್ಥಿರ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆಗಾಗಿ ಇಂಧನ ಉಳಿತಾಯ ಮಾಡುವುದು ಮತ್ತು ಇಂಧನಗಳನ್ನು ವಿವೇಚನೆಯಿಂದ ಬಳಸುವುದು ಅವಶ್ಯಕವಾಗಿದೆ. ಅದರಲ್ಲೂ ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆಯಿಂದ ಜಾಗತಿಕ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಮತ್ತು ಈ ಇಂಧನಗಳು ಬಹಳಷ್ಟು ಇಂಗಾಲದ ಡೈ ಆಕ್ಸೈಡ್ಗಳನ್ನು ಹೊರಸೂಸುತ್ತವೆ. ಇದರಿಂದಾಗಿ ಹಸಿರುಮನೆ ಪರಿಣಾಮವು ಸಹ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರವನ್ನು ಸಂರಕ್ಷಿಸುವ ಜೊತೆಗೆ ಇಂಧನ ಸಂರಕ್ಷಣೆಯ ಮಹತ್ವದ ಬಗ್ಗೆ ಸಂದೇಶವನ್ನು ಹರಡಲು ಮತ್ತು ದಕ್ಷ ರೀತಿಯಲ್ಲಿ ಇಂಧನವನ್ನು ಬಳಸಲು ಜನರನ್ನು ಪ್ರೇರೇಪಿಸಲು ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಇತಿಹಾಸ:

ಇಂಧನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತದಲ್ಲಿ ಮೊದಲ ಬಾರಿಗೆ 1991 ರಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲಾಯಿತು. ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ರೂಪುಗೊಂಡ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ-BEE 1991 ರಲ್ಲಿ ಇಂಧನ ಸಂರಕ್ಷಣಾ ದಿನವನ್ನು ಆಚರಿಸುವ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರದ ಅಧೀನದಲ್ಲಿರುವ ಈ ಒಂದು ಸಾಂವಿಧಾನಿಕ ಸಂಸ್ಥೆ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ಹಲವಾರು ಕಾರ್ಯತಂತ್ರಗಳು ಮತ್ತು ನೀತಿಗಳನ್ನು ಜಾರಿಗೆ ತಂದಿದೆ. ಅಲ್ಲದೆ ಈ ಸಮಿತಿ ಇಂಧನ ಸಂರಕ್ಷಣೆಗಾಗಿ 2001 ರಲ್ಲಿ ʼಶಕ್ತಿ ಸಂರಕ್ಷಣಾ ಕಾಯ್ದೆʼಯನ್ನು ಸಹ ಜಾರಿಗೆ ತಂದಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಮಹತ್ವ:

ಜನರಿಗೆ ಶಕ್ತಿಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಇಂಧನಗಳನ್ನು ಕಡಿಮೆ ಬಳಕೆ ಮಾಡುವ ಮೂಲಕ ಇಂಧನವನ್ನು ಹೇಗೆ ಸಂರಕ್ಷಿಸಬಹುದು ಎಂಬ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಡಿಮೆಯಾಯ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ; ಎಲ್ಲಿಂದ ಬರುತ್ತಿದೆ ಹೆಚ್ಚಿನ ವಿದ್ಯುತ್?

ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆ, ಕೃಷಿ, ಮನೆ, ಸಾರಿಗೆ ಸೇರಿದಂತೆ ಎಲ್ಲಾ ಕೇತ್ರದಲ್ಲೂ ಶಕ್ತಿಯನ್ನು ಮಿತವಾಗಿ ಬಳಸಲು ಜಾಗೃತಿಯನ್ನು ಮೂಡಿಸಲಾಗುತ್ತದೆ. ಹಾಗೂ ಶಕ್ತಿಯ ಮಿತ ಬಳಕೆಗೆ ಸಂಬಂಧಿಸಿದಂತೆ ಸೆಮಿನಾರ್, ಕಾರ್ಯಾಗಾರಗಳು ಮತ್ತು ಇಂಧನ ಉಳಿತಾಯ ಅಭಿಯಾನಗಳು ಸೇರಿದಂತೆ ಈ ದಿನ ಹಲವಾರು ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಅಲ್ಲದೆ ಈ ದಿನ ಶಕ್ತಿ ಸಂರಕ್ಷಣಾ ಪ್ರಯತ್ನದಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳು, ಕೈಗಾರಿಕೆ ಮತ್ತು ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಯನ್ನು ಸಹ ನೀಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: