ಸಾಂದರ್ಭಿಕ ಚಿತ್ರ
ತನಗೆ ಏನು ಅನಿಸುತ್ತದೆ ಅದನ್ನು ನೇರವಾಗಿ ಹೇಳುವ ಸ್ವಾತಂತ್ರ್ಯವನ್ನು ಹೆಣ್ಣು ಹೊಂದಿದ್ದರೂ, ತನ್ನ ಮೇಲೆ ದೌರ್ಜನ್ಯಗಳಾದಾಗ ಧ್ವನಿ ಎತ್ತುವ ಬದಲು ಸಹಿಸಿಕೊಂಡು ಹೋಗುವವರೇ ಹೆಚ್ಚು. ಕೆಲಸದ ಸ್ಥಳಗಳಲ್ಲಿ, ಪ್ರಯಾಣದ ವೇಳೆಯಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಒಂಟಿ ಹೆಣ್ಣೊಬ್ಬಳು ಸಿಕ್ಕರೆ ಪುಂಡ ಪೋಕರಿ ದುರ್ವತನೆಯನ್ನು ತೋರುತ್ತಾರೆ. ಈ ಸಮಯದಲ್ಲಿ ಸುತ್ತ ಮುತ್ತಲಿನಲ್ಲಿ ಜನರು ಇದ್ದರೆ ಅವರಿಗೆ ಈ ಬಗ್ಗೆ ತಿಳಿಸಬಹುದು. ಇಲ್ಲದೆ ಹೋದರೆ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಎಷ್ಟೇ ಸುರಕ್ಷಿತವಾಗಿದ್ದರೂ ಕೆಲವೊಮ್ಮೆ ಇಂತಹ ಸಂದರ್ಭಗಳು ಎದುರಿಸಬೇಕಾಗಬಹುದು. ಸ್ವಲ್ಪ ಎಚ್ಚರ ತಪ್ಪಿದರೂ ಪರಿಸ್ಥಿತಿಯು ಕೈ ಮೀರಿ ಹೋಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
ಮಹಿಳೆಯರ ಸ್ವರಕ್ಷಣೆಗಾಗಿ ಇಲ್ಲಿದೆ ಸರಳ ಸಲಹೆಗಳು :
- ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಕೆಲ ಗಂಡಸರು ಮೈ ಮೇಲೆ ಬೀಳುವುದೇ ಹೆಚ್ಚು. ಹೀಗಾಗಿ ಬಸ್ಸಿನಲ್ಲಿ ಮಹಿಳೆಯರು ಇರುವ ಕಡೆಯೇ ನಿಂತುಕೊಳ್ಳುವ ಮೂಲಕ ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳಿ.
- ಒಂದು ವೇಳೆ ಪುರುಷರು ಅತಿಯಾಗಿ ವರ್ತಿಸಿದರೆ ಕಂಡಕ್ಟರ್ ಗಮನಕ್ಕೆ ತರುವುದು ಉತ್ತಮ.
- ಗಂಡಸರು ಕೆಟ್ಟದಾಗಿ ವರ್ತಿಸುವುದನ್ನು ಎಲ್ಲರ ಮುಂದೆ ಹೇಳಿಕೊಂಡರೆ ನನ್ನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ ಎನ್ನುವ ಅಳುಕು ಮಹಿಳೆಯರಿಗೆ ಇರುತ್ತದೆ. ಹೀಗಿದ್ದರೆ ಪ್ರಯಾಣಿಸುವಾಗ ಸೇಫ್ಟಿ ಪಿನ್ ಇಟ್ಟುಕೊಳ್ಳಿ, ಈ ವಸ್ತುಗಳು ಕೆಲ ಸಂದರ್ಭದಲ್ಲಿ ಉಪಯೋಗಕ್ಕೆ ಬರಬಹುದು.
- ರಾತ್ರಿಯ ಸಮಯದಲ್ಲಿ ಆಟೋದಲ್ಲಿ ಪ್ರಯಾಣಿಸುವಾಗ ಆಟೋ ಚಾಲಕನ ನಡೆಯ ಬಗ್ಗೆ ಸಂದೇಹ ಬಂದರೆ ನಿಮ್ಮ ಮನೆಯ ಸದಸ್ಯರೊಂದಿಗೆ ಕಾಲ್ ನಲ್ಲಿ ಇರಿ. ಆಟೋ ಹತ್ತುವ ಮೊದಲು ಆಟೋ ಚಾಲಕನ್ನೊಮ್ಮೆ ಗಮನಿಸಿ.
- ಈ ಹಿಂದೆ ಕಹಿ ಅನುಭವವಾಗಿದ್ದರೆ ರಾತ್ರಿಯ ವೇಳೆ ಒಂಟಿಯಾಗಿ ಆಟೋ ಹಾಗೂ ಕ್ಯಾಬ್ ನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ.
- ಕೆಲಸದ ಸ್ಥಳಗಳಲ್ಲಿ ಕೆಲ ಗಂಡಸರು ಅನುಚಿತವಾಗಿ ವರ್ತಿಸುವ ಸಾಧ್ಯತೆಯು ಹೆಚ್ಚಿರುತ್ತದೆ. ನಿಮ್ಮ ಕೆಲವೊಮ್ಮೆ ನಿಮ್ಮ ಸೂಕ್ಷ್ಮವಾದ ಮಾತುಗಳಿಂದಲೂ ಅವರಿಗೆ ಉತ್ತರ ನೀಡಬಹುದು.
- ಅತಿರೇಕಕ್ಕೆ ಹೋಗುತ್ತಿದ್ದರೆ ಅಂತಹ ಗಂಡಸರಿಂದ ಅಂತರವನ್ನು ಕಾಯ್ದುಕೊಳ್ಳಿ.
- ನೆಪ ಹೇಳಿಕೊಂಡು ಪದೇ ಪದೇ ಮಾತನಾಡಿಸಿಕೊಂಡು ಬಂದರೆ ನಿಮ್ಮ ಸುರಕ್ಷತೆಗಾಗಿ ಖಾರವಾಗಿ ಪ್ರತಿಕ್ರಿಯಿಸಿ.
- ಮೈ ಕೈ ಮುಟ್ಟಲು ಬಂದರೆ ನೇರವಾಗಿ ಬೇಡ ಹೇಳಿ, ಸನ್ನಿವೇಶವು ಕೈ ಮೀರಿ ಹೋಗುತ್ತಿದೆ ಎಂದಾದರೆ ನಿಮ್ಮ ಬಾಸ್ ಗಮನಕ್ಕೆ ತನ್ನಿ.
- ನಿರ್ಜನ ಪ್ರದೇಶದಲ್ಲಿ ನಿಮ್ಮನ್ನು ಎಳೆದಾಡುವುದು, ಸ್ಪ್ರೇ ಹಾಕಲು ಪ್ರಯತ್ನಿಸುವುದು ಮಾಡಿದರೆ ಅಲ್ಲೇ ಇರುವ ವಸ್ತುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಮುಂದಾಗಿ.
- ರಾತ್ರಿಯ ಸಮಯದಲ್ಲಿ ಒಂಟಿಯಾಗಿ ಹೋಗಬೇಕಾದಾಗ ಸುರಕ್ಷತೆಗಾಗಿ ಖಾರದ ಪುಡಿ, ಉಪ್ಪು ಹೀಗೆ ಕೆಲ ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿರಲಿ.
- ಸಾರ್ವಜನಿಕ ಪ್ರದೇಶಗಳಲ್ಲಿ ಕೆಟ್ಟ ವರ್ತನೆಯನ್ನು ತೋರುವ ಗಂಡಸರಿದ್ದರೆ, ಮಹಿಳೆಯರು ಇರುವ ಗುಂಪಿನಲ್ಲಿಯೇ ಹೋಗಿ. ಇಲ್ಲದಿದ್ದರೆ ನಿಮ್ಮ ಸುತ್ತ ಮುತ್ತಲಿನಲ್ಲಿರುವರಿಗೆ ಈ ಬಗ್ಗೆ ತಿಳಿಸಿ.
- ಕೆಟ್ಟ ಸನ್ನಿವೇಶಗಳಲ್ಲಿ ಎಂದಿಗೂ ಭಯಪಡಬೇಡಿ, ಸನ್ನಿವೇಶವನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಯಿರಿ.
- ಪುಂಡ ಪೋಕರಿಗಳು ಎಲ್ಲಿರುತ್ತಾರೆ ಎಂದು ಹೇಳಲು ಆಗುವುದಿಲ್ಲ, ಹೀಗಾಗಿ ಸ್ವ ರಕ್ಷಣೆಗಾಗಿ ಕರಾಟೆ ಸೇರಿದಂತೆ ಇನ್ನಿತ್ತರ ಕೌಶಲ್ಯಗಳು ಕಲಿತುಕೊಳ್ಳಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ