
ಪ್ರಕೃತಿ ಜೀವವೈವಿಧ್ಯತೆಯ (Biodiversity) ತಾಣವಾಗಿದೆ. ಇಲ್ಲಿ ಚಿಕ್ಕ ಚಿಕ್ಕ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮ ಜೀವಿಗಳಿಂದ ಹಿಡಿದು ದೊಡ್ಡ ತಿಮಿಂಗಿಲಗಳವರೆಗೆ ಅನೇಕಾರು ಜೀವಿಗಳಿವೆ ಹಾಗೂ ಸಸ್ಯರಾಶಿಗಳಿವೆ. ಈ ಜೀವವೈವಿಧ್ಯ ಪರಿಸರ ವ್ಯವಸ್ಥೆಯನ್ನು ಸಮತೋಲದಲ್ಲಿಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಆದರೆ ಇಂದು ಅರಣ್ಯ ನಾಶ, ನಗರೀಕರಣ, ಹವಾಮಾನ ಬದಲಾವಣೆ ಸೇರಿದಂತೆ ಮಾನವನ ಸ್ವಾರ್ಥದಿಂದಾಗಿ ಜೀವವೈವಿಧ್ಯ ಅಪಾಯದಲ್ಲಿದೆ. ಅದೆಷ್ಟೋ ಪ್ರಾಣಿ-ಪಕ್ಷಿಗಳು, ಜೀವಿಗಳು, ಮರಗಿಡಗಳು ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಜೀವವೈವಿಧ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಶ್ವ ಜೀವವೈವಿಧ್ಯ (World Biodiversity Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಭೂ ಶೃಂಗಸಭೆಯಲ್ಲಿ ಜೀವವೈವಿಧ್ಯತೆಯ ದಿನವನ್ನು ಆಚರಿಸಲುವ ಪರಿಕಲ್ಪನೆಯನ್ನು ತರಲಾಯಿತು. 1993 ಮೊದಲ ಬಾರಿಗೆ ಈ ದಿನವನ್ನು ಡಿಸೆಂಬರ್ 29 ರಂದು ಆಚರಿಸಲಾಯಿತು. ನಂತರ 2000 ನೇ ಇಸವಿಯಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಮೇ 22 ರಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಜೀವವೈವಿಧ್ಯ ದಿನವನ್ನು ಮೇ 22 ರಂದು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಚಹಾ ದಿನ; ಈ ದಿನದ ಆಚರಣೆಯ ಉದ್ದೇಶವನ್ನು ತಿಳಿಯಿರಿ
ಸೂಕ್ಷ್ಮ ಜೀವಿಗಳು, ಪ್ರಾನಿಪಕ್ಷಿಗಳು, ಸಸ್ಯರಾಶಿಗಳು ಪರಿಸರ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ ಇಂದು ಮಾನವನ ಸ್ವಾರ್ಥದಿಂದ ಅದೆಷ್ಟೋ ಜೀವರಾಶಿಗಳು ಅಳಿವಿನಂಚಿಗೆ ತಲುಪಿವೆ. ಇವುಗಳ ಸಂರಕ್ಷಣೆಯ ಉದ್ದೇಶವನ್ನಿಟ್ಟುಕೊಂಡು ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜೀವವೈವಿಧ್ಯತೆಯ ದಿನವು ಈ ಭೂಮಿಯಲ್ಲಿರುವ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡುವ ಮಹತ್ವದ ಜ್ಞಾಪನೆಯಾಗಿದೆ. ಈ ದಿನ ಜೀವವೈವಿಧ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ಒಂದು ಅವಕಾಶವಾಗಿದೆ ಅಂತಾನೇ ಹೇಳಬಹುದು.
ಈ ದಿನದಂದು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಅವುಗಳ ಮೂಲಕ ಜನರಿಗೆ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದಲ್ಲದೆ ಮಾಂಸ ಮತ್ತು ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡುವ ಮೂಲಕ, ಅರಣ್ಯನಾಶವನ್ನು ನಿಲ್ಲಿಸುವ ಮೂಲಕ, ಮಾಲಿನ್ಯಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಮರುಬಳಕೆಯ ಉತ್ಪನ್ನಗಳನ್ನು ಬಳಸುವ ಮೂಲಕ ನಾವು ಜೀವವೈವಿಧ್ಯತೆಯ ರಕ್ಷಣೆಗೆ ಸಣ್ಣದಾದ ಕೊಡುಗೆಯನ್ನು ನೀಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ