World Children’s Day 2024: ಇಂದು ವಿಶ್ವ ಮಕ್ಕಳ ದಿನಾಚರಣೆ, ಈ ಆಚರಣೆಯ ಹಿಂದಿನ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸುವಂತೆ ಮಕ್ಕಳ ಶಿಕ್ಷಣ, ಹಕ್ಕುಗಳು ಮತ್ತು ಉತ್ತಮ ಭವಿಷ್ಯದ ಬಗ್ಗೆ ವಿಶ್ವದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮಟ್ಟದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವಿಶ್ವ ಮಕ್ಕಳ ದಿನಾಚರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿದೆ. ಹೌದು ಮಕ್ಕಳೇ ರಾಷ್ಟ್ರ ನಿರ್ಮಾಣದ ನಿಜವಾದ ಶಕ್ತಿ, ಸಮಾಜದ ಅಡಿಪಾಯ ಮತ್ತು ದೇಶದ ಭವಿಷ್ಯ. ಸಮಾಜವು ಧನಾತ್ಮಕವಾಗಿ ಬದಲಾಗಬೇಕಾದರೆ, ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳನ್ನು ಸಶಕ್ತಗೊಳಿಸುವುದು ತುಂಬಾನೆ ಮುಖ್ಯ. ಹೀಗಾಗಿ ಮಕ್ಕಳು ಆರೋಗ್ಯವಂತ, ವಿದ್ಯಾವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು ಎಂಬ ಕಾರಣಕ್ಕಾಗಿ ವಿಶ್ವಾದ್ಯಂತ ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮುದ್ದು ಮಕ್ಕಳಿಗಾಗಿ ಮೀಸಲಿರುವ ಈ ವಿಶೇಷ ದಿನಾಚರಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೊಣ.
ವಿಶ್ವ ಮಕ್ಕಳ ದಿನ 2024: ಇತಿಹಾಸ:
ವಿಶ್ವ ಮಕ್ಕಳ ದಿನದ ಪರಿಕಲ್ಪನೆಯನ್ನು ಮೊದಲು 1925 ರಲ್ಲಿ ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಪ್ರಸ್ತಾಪಿಸಿತು. ಬಲವಂತವಾಗಿ ದುಡಿತಕ್ಕೆ ಒಳಗಾಗುವ ಮತ್ತು ಶಿಕ್ಷಣವನ್ನು ಪಡೆಯಲು ಆಗದಿರುವ ಮಕ್ಕಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ಇದಾದ ನಂತರ 1954 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಮಕ್ಕಳ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು.
1990 ರಿಂದ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮಕ್ಕಳ ಹಕ್ಕುಗಳ ಘೋಷಣೆ ಮಾಡಿದ ಮತ್ತು ಮಕ್ಕಳ ಹಕ್ಕುಗಳ ಸಮಾವೇಶ ಈ ಎರಡನ್ನೂ ಅಂಗೀಕರಿಸಿದ ದಿನದ ನೆನಪಿಗಾಗಿ ನವೆಂಬರ್ 20 ರಂದೇ ವಿಶ್ವ ಮಕ್ಕಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಮಕ್ಕಳ ದಿನದ ಉದ್ದೇಶ
ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಅವರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವುದು ಮತ್ತು ಅವರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮಕ್ಕಳ ದಿನಾಚರಣೆಯಂದು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಬಾಲ ಕಾರ್ಮಿಕ ವ್ಯವಸ್ಥೆ, ಶಿಕ್ಷಣದ ಕೊರತೆಯಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನವು ಮಕ್ಕಳ ಸಂತೋಷವನ್ನು ಸಂಕೇತಿಸುತ್ತದೆ ಮತ್ತು ಅವರ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜವಾಬ್ದಾರಿಯನ್ನು ಉತ್ತೇಜಿಸುತ್ತದೆ. ಅಷ್ಟೇ ಅಲ್ಲದೆ ಇದು ಮಕ್ಕಳ ಕಲ್ಯಾಣ ಮತ್ತು ದುರ್ಬಲ ಹಾಗೂ ಶೋಷಣೆಗೊಳಗಾಗುತ್ತಿರುವ ಮಕ್ಕಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಗುರಿಯನ್ನು ಹೊಂದಿದೆ. ಈ ವಿಶೇಷ ದಿನವು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸಲು, ಉತ್ತೇಜಿಸಲು ಮತ್ತು ಆಚರಿಸಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ.
ಇದನ್ನೂ ಓದಿ: ಗರಿ ಗರಿ ದೋಸೆ ಸಿಗುವ ಬೆಂಗಳೂರಿನ ಟಾಪ್ 10 ಹೋಟೆಲ್‌ಗಳಿವು
ವಿಶ್ವ ಮಕ್ಕಳ ದಿನಾಚರಣೆ 2024 ಥೀಮ್
2024 ರ ವಿಶ್ವ ಮಕ್ಕಳ ದಿನಾಚರಣೆಯ ಥೀಮ್ “ಭವಿಷ್ಯವನ್ನು ಆಲಿಸಿ” (Listen to the Future) ಮಕ್ಕಳ ಮಾತುಗಳನ್ನು ಕೇಳುವ ಮೂಲಕ ನಾವು ಅವರ ಸ್ವಯಂ ಅಭಿವ್ಯಕ್ತಿಯನ್ನು ಪೂರೈಸಬಹುದು. ಅಂದರೆ ಮಕ್ಕಳು ತಾವು ಬದುಕಲು ಬಯಸುವ ಪ್ರಪಂಚದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಧಿಕಾರ ನೀಡಬೇಕು. ಇದು ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಯಲು ಸಹಾಯ ಮಾಡುತ್ತದೆ. ಮತ್ತು ಇದು ಮಕ್ಕಳ ಹಕ್ಕುಗಳನ್ನು ಗೌರವಿಸಲು, ಅವರ ಅಗತ್ಯಗಳು, ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್ಚು ಪರಿಣಾಮಕಾರಿ ಕಾನೂನುಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಮಕ್ಕಳ ಮಾತುಗಳನ್ನು ಆಲಿಸುವುದು ಮತ್ತು ಬೆಂಬಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ