
ರೈತರ ಪಾಲಿನ ಬಿಳಿ ಬಂಗಾರ ಅಂತಾನೇ ಹೆಸರುವಾಸಿಯಾಗಿರುವ ಹತ್ತಿ (Cotton) ದೇಶದ ಲಕ್ಷಾಂತರ ಜನರಜೀವನಕ್ಕೆ ಆಧಾರವೂ ಹೌದು. ಹತ್ತಿಯು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಪಂಚದಾದ್ಯಂತದ ಅನೇಕ ದೇಶಗಳ ಆರ್ಥಿಕತೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಜವಳಿಗಳಿಗೆ ಮಾತ್ರವಲ್ಲದೆ, ವೈದ್ಯಕೀಯ ಕ್ಷೇತ್ರ, ಪಶು ಆಹಾರಗಳು, ಅಡುಗೆ ಎಣ್ಣೆ, ಸೌಂದರ್ಯ ವರ್ಧಕ, ಸಾಬೂನು ತಯಾರಿಕೆ ಸೇರಿದಂತೆ ಹಲವು ಉದ್ಯಮಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ ಇಂದು ಹವಾಮಾನ ಬದಲಾವಣೆ ಸೇರಿದಂತೆ ಹಲವು ಸಮಸ್ಯೆಗಳ ಕಾರಣದಿಂದ ಹತ್ತಿ ಉತ್ಪಾದನೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹತ್ತಿ ಹತ್ತಿ ಕೃಷಿ ಮತ್ತು ಅದರಲ್ಲಿ ತೊಡಗಿರುವ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಎತ್ತಿ ತೋರಿಸಲು, ಹತ್ತಿ ಉತ್ಪಾದನೆಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಹತ್ತಿ ಬೆಳೆಯನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 7 ರಂದು ವಿಶ್ವ ಹತ್ತಿ ದಿನವನ್ನು (World Cotton Day) ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ಹತ್ತಿ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 7 ರಂದು ಆಚರಿಸಲಾಗುತ್ತದೆ, ಬೆನಿನ್, ಬುರ್ಕಿನಾ, ಫಾಸೊ, ಚಾಡ್ ಮತ್ತು ಮಾಲಿ ಈ ನಾಲ್ಕು ದೇಶಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ವಿಶ್ವ ವ್ಯಾಪರ ಸಂಸ್ಥೆ (WTO) ಸಚಿವಾಲಯವು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO), ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (UNCTAD), ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ (ITC) ಮತ್ತು ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ ಕಾರ್ಯದರ್ಶಿಗಳ ಸಹಯೋಗದೊಂದಿಗೆ ವಿಶ್ವ ಹತ್ತಿ ದಿನದ ಆಚರಣೆಯನ್ನು 2019 ರಲ್ಲಿ ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಹತ್ತಿಬೆಳೆಯನ್ನು ಉತ್ತೇಜಿಸುವ ಹಾಗೂ ಹತ್ತಿ ಬೆಳೆಗಾರರಿಗೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಅಕ್ಟೋಬರ್ 07 ರಂದು ವಿಶ್ವದಾದ್ಯಂತ ಹತ್ತಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಗುರಿ ತೋರಿದ ಗುರುಗಳನ್ನು ಮರೆಯದಿರೋಣ; ವಿಶ್ವ ಶಿಕ್ಷಕರ ದಿನದ ಆಚರಣೆಯ ಬಗ್ಗೆ ತಿಳಿಯಿರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Tue, 7 October 25