
ಅರಣ್ಯ ನಾಶ, ನಗರೀಕರಣ, ಸೇರಿದಂತೆ ಮಾನವನ ಸ್ವಾರ್ಥದ ಕಾರಣದಿಂದ ಇಂದು ಪರಿಸರ ಮಾಲಿನ್ಯದ ಜೊತೆಗೆ ಹವಾಮಾನ ಬದಲಾವಣೆಯಂತ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಹವಾಮಾನ ಬದಲಾವಣೆಯ (climate change) ಕಾರಣದಿಂದ ಮಂಜುಗಡ್ಡೆ ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಬರಗಾಲ, ಭೂಮಿ ಬರಡಾಗುವಂತಹ ಸಮಸ್ಯೆಗಳು ಕೂಡಾ ಉಂಟಾಗಿದೆ. ಈ ಬರಗಾಲ ಪರಿಸ್ಥಿತಿ ಜಗತ್ತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. 2050 ರ ವೇಳೆಗೆ, ಬರಗಾಲವು ವಿಶ್ವದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ಬರಗಾಲ ಮತ್ತು ಮರುಭೂಮೀಕರಣದ ಪರಿಣಾಮಗಳನ್ನು ತಡೆಗಟ್ಟಲು ಪ್ರತಿವರ್ಷ ಜೂನ್ 17 ರಂದು ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ (World Day to Combat Desertification and Drought) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಮರುಭೂಮೀಕರಣ ಮತ್ತು ಬರಗಾಲ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಪರಿಸರ ಅವನತಿ ಮತ್ತು ಮರುಭೂಮೀಕರಣವನ್ನು ಎದುರಿಸಲು ವಿಶ್ವಸಂಸ್ಥೆಯ ಸಮಾವೇಶವನ್ನು (UNCCD) ಅಂಗೀಕರಿಸಿತು. ಆ ದಿನದಂದು ಜೂನ್ 17 ರಂದು ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಈ ದಿನವನ್ನು ಮೊದಲು 1995 ರಲ್ಲಿ ಆಚರಿಸಲಾಯಿತು. ಮತ್ತು ಅಂದಿನಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆ ಜಗತ್ತಿನಲ್ಲಿ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಜೊತೆ ಜೊತೆಗೆ ಬರಗಾಲದ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮರುಭೂಮೀಕರಣ ಮತ್ತು ಬರಗಾಲದಿಂದಾಗಿ ಜಗತ್ತಿನಲ್ಲಿ ಎಷ್ಟು ಸಮಸ್ಯೆಗಳು ಎದುರಾಗುತ್ತಿವೆ ಮತ್ತು ಅವುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಜನರಿಗೆ ಅರ್ಥಮಾಡಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಹಸಿರೇ ಉಸಿರು; ಪ್ರಕೃತಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಬರಗಾಲದ ಸಮಸ್ಯೆಯ ವಿರುದ್ಧ ಹೋರಾಡಲು ಮೊದಲನೆಯದಾಗಿ, ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಸಾಧ್ಯವಾದಷ್ಟು ಮರ ಗಿಡಗಳನ್ನು ನೆಡುವತ್ತ ಗಮನ ಹರಿಸಬೇಕು. ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಶ್ರಮಿಸಬೇಕು, ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸದಂತೆ ರಕ್ಷಿಸಬೇಕು. ಮಳೆ ನೀರನ್ನು ಸಂರಕ್ಷಿಸಬೇಕು, ಭೂಮಿ ಬಂಜರು ಆಗದಂತೆ ರಕ್ಷಿಸಬೇಕು. ಹೀಗೆಲ್ಲಾ ಮಾಡುವ ಮೂಲಕ ಬರಗಾಲ ಮತ್ತು ಮರುಭೂಮೀಕರಣ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ