World Expensive Salt: ವಿಶ್ವದ ದುಬಾರಿ ಉಪ್ಪು ಇದು, ಕೇವಲ 250 ಗ್ರಾಂಗೆ 7500 ರೂ ಅಂತೆ, ಏನಿದರ ವಿಶೇಷತೆ ಗೊತ್ತಾ?
ಅಗ್ಗವಾಗಿ ಸಿಗುವ ಸಾಮಗ್ರಿಗಳಲ್ಲಿ ಉಪ್ಪು ಕೂಡ ಒಂದು. ಎಲ್ಲರಿಗೂ ಕೂಡ ತಿಳಿದಿರುವಂತೆ ಆಹಾರದ ರುಚಿ ಹೆಚ್ಚಿಸುವ ಉಪ್ಪಿಗೆ ಹೆಚ್ಚೆಂದರೆ ಮೂವತ್ತು ರೂಪಾಯಿಯಿರುತ್ತದೆ. ಕೈಗೆಟುಕುವ ದರದಲ್ಲಿ ಸಿಗುವ ಈ ಉಪ್ಪು ವಿಶೇಷತೆಗಳಿಂದ ಕೆಲವು ದೇಶಗಳಲ್ಲಿ ದುಬಾರಿಯಾಗಿದೆ. ಹೌದು, ಕೊರಿಯನ್ ಬಿದಿರು ಉಪ್ಪಿನ ಬೆಲೆ 250 ಗ್ರಾಂಗೆ 7500 ರೂಪಾಯಿಯಂತೆ, ಇದನ್ನು ನೇರಳೆ ಬಿದಿರು ಉಪ್ಪು ಅಥವಾ ಜುಕಿಯೊಮ್ ಎಂದೂ ಕರೆಯಲಾಗುತ್ತದೆ. ಹಾಗಾದ್ರೆ ಈ ಉಪ್ಪಿನ ವಿಶೇಷತೆಗಳೇನು? ಈ ಉಪ್ಪು ಅಷ್ಟೊಂದು ದುಬಾರಿ ಯಾಕೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದೇ ಅಡುಗೆಯೇ ಇರಲಿ ಉಪ್ಪಿಯಿಲ್ಲದೇ ರುಚಿಸುವುದೇ ಇಲ್ಲ. ಉಪ್ಪು ಇಲ್ಲದೆ ಆಹಾರ ತಿನ್ನುವುದು ತುಂಬಾನೇ ಕಷ್ಟ. ಹೀಗಾಗಿ ಉಪ್ಪು ಆಹಾರದ ಪ್ರಮುಖ ಭಾಗ ಎನ್ನಬಹುದು. ಪ್ರತಿದಿನ ಹೆಚ್ಚು ಉಪ್ಪನ್ನು ಸೇವಿಸಿದರೆ ಅದು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಉಪ್ಪು ಸೇವನೆ ಮಾಡುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ನಾವು ಕೊಂಡುಕೊಳ್ಳುವ ಉಪ್ಪಿನ ಬೆಲೆ ಹೆಚ್ಚೆಂದರೆ 20 ರಿಂದ 25 ರೂಪಾಯಿಯಿರಬಹುದು. ಆದರೆ ವಿಶ್ವದ ಅತ್ಯಂತ ದುಬಾರಿ ಉಪ್ಪೊಂದಿದ್ದು, ಅದುವೇ ಕೊರಿಯನ್ ಬಿದಿರು ಉಪ್ಪಂತೆ. ಇದರ ಬೆಲೆ 250 ಗ್ರಾಂಗೆ 7,500 ರೂಪಾಯಿಯಾಗಿದೆಯಂತೆ. ಶ್ರಮದಾಯಕ ತಯಾರಿಕೆಯೂ ಉಪ್ಪಿನ ಸತ್ವವನ್ನು ಹೆಚ್ಚಿಸುವುದರೊಂದಿಗೆ ಚಿಕಿತ್ಸಕ ಗುಣಗಳನ್ನು ನೀಡುತ್ತದೆ. ಈ ಉಪ್ಪು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಈ ಎಲ್ಲಾ ಗುಣಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಈ ಉಪ್ಪಿಗೆ ಬಹುಬೇಡಿಕೆಯಿದೆ.
ಕೊರಿಯನ್ ಬಿದಿರು ಉಪ್ಪನ್ನು ತಯಾರಿಸುವ ವಿಧಾನ
* ಉಪ್ಪನ್ನು ಬಿದಿರಿನಲ್ಲಿ ಸಮುದ್ರದ ಉಪ್ಪಿನಿಂದ ತುಂಬಿಸಿ ಮತ್ತು ಅವುಗಳನ್ನು ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಬೇಯಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು “ಅಮೆಥಿಸ್ಟ್ ಬಿದಿರು ಉಪ್ಪು” ಎನ್ನಲಾಗುತ್ತದೆ.
* ಬಿದಿರು ಟ್ಯೂಬ್‌ಗಳನ್ನು ಸಮುದ್ರದ ಉಪ್ಪಿನಿಂದ ತುಂಬಿಸಿ ಅವುಗಳನ್ನು ನೈಸರ್ಗಿಕ ಜೇಡಿಮಣ್ಣಿನಿಂದ ಮುಚ್ಚಲಾಗುತ್ತದೆ. ಆ ಬಳಿಕ ಟ್ಯೂಬ್‌ಗಳನ್ನು 800 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಕನಿಷ್ಠ ಒಂಬತ್ತು ಬಾರಿ ಪುನರಾವರ್ತಿತವಾಗಿ ಬಿಸಿ ಮಾಡಲಾಗುತ್ತದೆ.
* ಅಂತಿಮವಾಗಿ ಇದರ ಬೇಕಿಂಗ್ 1,000 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ. ಪ್ರತಿ ಬೇಕಿಂಗ್ ಹಂತದಲ್ಲಿಯೂ ಬಿದಿರಿನ ಖನಿಜಗಳು, ಗುಣಲಕ್ಷಣಗಳು ಉಪ್ಪಿನೊಂದಿಗೆ ಸೇರಿಕೊಂಡು ವಿನ್ಯಾಸ ಹಾಗೂ ಬಣ್ಣವನ್ನು ಬದಲಾಯಿಸುತ್ತದೆ.
* ಈ ಸಂಪೂರ್ಣ ಪ್ರಕ್ರಿಯೆಯು ಸುಮಾರು 50 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಉಪ್ಪು ತಯಾರಿಕಾ ಪ್ರಕ್ರಿಯೆಗೆ ಪರಿಣಿತ ಕುಶಲಕರ್ಮಿಗಳು ಮತ್ತು ವಿಶೇಷ ಕುಲುಮೆಗಳು ಅಗತ್ಯವಾಗಿ ಬೇಕು.
ಇದನ್ನೂ ಓದಿ: ನೀವು ನಿಮ್ಮ ಸಂಗಾತಿಗೆ ನಿಷ್ಠವಂತರಾಗಿದ್ದೀರಾ? ನಿಮ್ಮ ಅಂಗೈಯಲ್ಲಿನ ಹೃದಯರೇಖೆ ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ
ಕೊರಿಯನ್ ಬಿದಿರು ಉಪ್ಪು ದುಬಾರಿ ಯಾಕೆ?
ಸಮುದ್ರದಲ್ಲಿ ಸಿಗುವ ಉಪ್ಪನ್ನು ಕೊರಿಯನ್ ಬಿದಿರು ಉಪ್ಪಾಗಿ ಪರಿವರ್ತಿಸಲು ಸರಿಸುಮಾರು 50 ದಿನಗಳು ತಗಲುತ್ತದೆ. ಇದರ ದೀರ್ಘ ಉತ್ಪಾದನಾ ಪ್ರಕ್ರಿಯೆ, ಬಿದಿರು ಕೊಳವೆಗಳ ಬಳಕೆ ಮತ್ತು ಉಪ್ಪನ್ನು ಬೇಯಿಸಲು ಪರಿಣತ ಕುಶಲಕರ್ಮಿಗಳು ಅಗತ್ಯವಿರುವ ಕಾರಣದಿಂದಲೇ ಈ ಉಪ್ಪುಇಷ್ಟೊಂದು ದುಬಾರಿಯಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕೊರಿಯನ್ ಬಿದಿರು ಉಪ್ಪು ದುಬಾರಿ ಬೆಲೆಗೆ ಮಾರಾಟವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ