World Pulses Day 2025: ವಿಶ್ವ ದ್ವಿದಳ ಧಾನ್ಯ ದಿನದ ಆಚರಣೆ ಹಿಂದಿನ ಇತಿಹಾಸ ಹಾಗೂ ಮಹತ್ವವೇನು?
ಮಾಂಸಹಾರಿಗಳಿಗಿಂತ ಈ ಸಸ್ಯಹಾರಿಗಳೇ ಬೇಳೆಕಾಳುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದೊಂದು ಸೂಪರ್ ಫುಡ್ ಎನ್ನಬಹುದು. ಈ ದ್ವಿದಳ ಧಾನ್ಯಗಳಿಗೂ ಒಂದು ದಿನ ಮೀಸಲಿಡಾಗಿದ್ದು ಅದುವೇ ಫೆಬ್ರವರಿ 10. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ಬೇಳೆ ಕಾಳುಗಳನ್ನು ಹೆಚ್ಚಾಗಿ ಬಳಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಇತಿಹಾಸ ಹಾಗೂ ಮಹತ್ವವೇನು? ಎನ್ನುವ ಮಾಹಿತಿ ಇಲ್ಲಿದೆ.

ದಿನನಿತ್ಯದ ಆಹಾರಗಳಲ್ಲಿ ಬಳಸಲಾಗುವ ಈ ಬೇಳೆ ಕಾಳುಗಳ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೀಗಾಗಿ ಈ ದ್ವಿದಳ ಧಾನ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಲಾಗುತ್ತಿದೆ. ಆರೋಗ್ಯ ವೃದ್ಧಿಯಲ್ಲಿ ಈ ಬೇಳೆಕಾಳುಗಳಲ್ಲಿ ಪಾತ್ರವು ಅಗಾಧವಾದದ್ದು, ಇದರಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿದೆ. ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ದಿನನಿತ್ಯ ಸೇವಿಸುವುದರಿಂದ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಇದರಲ್ಲಿದೆ.
ವಿಶ್ವ ದ್ವಿದಳ ಧಾನ್ಯಗಳ ದಿನದ ಇತಿಹಾಸ
68ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ 2016 ರಲ್ಲಿ “ಅಂತರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ”ವನ್ನಾಗಿ ಆಚರಿಸಲಾಯಿತು. ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶವಾಗಿತ್ತು. ಅದಲ್ಲದೇ, ವಿಶ್ವಸಂಸ್ಥೆಯ ಸಹ ಸಂಸ್ಥೆಯಾದ ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ ಈ ವರ್ಷಾಚರಣೆಯ ಮುಂದಾಳತ್ವ ವಹಿಸಿತು. ಹೀಗಾಗಿ ಪ್ರತಿ ವರ್ಷ ಫೆಬ್ರವರಿ 10ನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ದಿನವಾಗಿ ಆಚರಿಸಲಾಗುತ್ತಿದೆ. 2019ರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ದ್ವಿದಳ ಧಾನ್ಯ ದಿನದ ಮಹತ್ವ
ವಿಶ್ವ ದ್ವಿದಳ ಧಾನ್ಯ ದಿನವು ದ್ವಿದಳ ಧಾನ್ಯಗಳಲ್ಲಿನ ಪೌಷ್ಠಿಕಾಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಮುಖೇನವಾಗಿ ಜನರು ದಿನನಿತ್ಯ ಬಳಸುವ ಆಹಾರದಲ್ಲಿ ದ್ವಿದಳ ಧಾನ್ಯಗಳ ಬಳಕೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಕೃಷಿಯಲ್ಲಿ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿ ಹೇಳುವ ಮೂಲಕ ದ್ವಿಧಾನ್ಯಗಳನ್ನು ಬೆಳೆಯುವ ಕೃಷಿಕರಿಗೆ ಬೆಂಬಲ ನೀಡಲಾಗುತ್ತದೆ, ಈ ಎಲ್ಲಾ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಜಾಗೃತಿ ಅಭಿಯಾನಗಳು, ಸೆಮಿನಾರ್ ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ:
ಬೇಳೆಕಾಳುಗಳ ಆರೋಗ್ಯ ಪ್ರಯೋಜನಗಳು
- ಮಧುಮೇಹ ಇರುವವರಿಗೆ ಅಧಿಕ ನಾರಿನ ಅಂಶ ಮತ್ತು ಕಡಿಮೆ ಕಾರ್ಬೊಹೈಡ್ರೇಟ್ ಅಂಶವಿರುವ ಬೇಳೆಕಾಳುಗಳು ಸೇವನೆಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಆರೋಗ್ಯಕರ ರಕ್ತದ ಸಕ್ಕರೆ ಮಟ್ಟ ಮತ್ತು ಇನ್‍ಸುಲಿನ್ ಮಟ್ಟ ಕಾಪಾಡಲು ಸಹಕಾರಿಯಾಗಿದೆ.
- ಬೇಳೆಕಾಳುಗಳಲ್ಲಿ ಪೈಥೊಸ್ಟ್ರೊಷನ್ ಹೇರಳವಾಗಿದ್ದು, ಇದು ಹಾರ್ಮೋನ್ ಸಂಬಂಧಿ ಕ್ಯಾನ್ಸರ್‍ಗಳಾದ ಸ್ತನ ಕ್ಯಾನ್ಸರ್ ಮತ್ತು ಜನನೇಂದ್ರಿಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
- ಬೇಳೆ ಕಾಳುಗಳು ಕಡಿಮೆ ಕ್ಯಾಲೋರಿ ಹೊಂದಿದ್ದು ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರವಾಗಿದೆ. ಇದರಲ್ಲಿರುವ ಕಬ್ಬಿಣ ಅಂಶವು ದೇಹಕ್ಕೆ ಆಮ್ಲಜನಕವನ್ನು ಸಾಗಿಸಲು, ದೇಹದ ಚಯಾಪಚಯ ಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡುತ್ತದೆ.
- ಬೇಳೆಕಾಳಿನಲ್ಲಿರುವ ಅಧಿಕ ನಾರಿನ ಅಂಶವು ಜೀರ್ಣಸಂಬಂಧಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಇದು ರಕ್ತದ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




