ಶ್ರೇಷ್ಠ ವಿಜ್ಞಾನಿ ಹಾಗೂ ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಡಾ. ಎ.ಪಿ.ಜೆ ಅಬ್ದುಲ್ ಕಲಾಂರವರು ಶಿಕ್ಷಕರಾಗಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಇವರು ಬೋಧಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದ ಕಾರಣ ‘ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಇಷ್ಟಪಡುತ್ತೇನೆ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ, ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದವರು. ಹೀಗಾಗಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನದ ಸವಿನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’ವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತ ರತ್ನ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ 2010 ರಲ್ಲಿ, ಕಲಾಂ ಅವರ 79ನೇ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ಸಲುವಾಗಿ ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಈ ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಗತಿಗಾಗಿ ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಮಹಾನ್ ವ್ಯಕ್ತಿಯ ಜೀವನ ಪಾಠವು ಎಲ್ಲರಿಗೂ ಸ್ಪೂರ್ತಿಯಾಗಿದ್ದು, ಅವರ ಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳು, ಸ್ಪರ್ಧೆಗಳು ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ; ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ