
ತಂದೆ-ತಾಯಿಯಂತೆ ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು (teachers) ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇವರು ವಿದ್ಯಾರ್ಥಿಗಳಿಗೆ ಪಠ್ಯದ ವಿಷಯಗಳನ್ನು ಬೋಧನೆ ಮಾಡುವುದು ಮಾತ್ರವಲ್ಲದೆ ಒಂದು ಕಲ್ಲನ್ನು ಶಿಲೆಯಾಗಿ ರೂಪಿಸುವಂತೆ ಸರಿಯಾದ ಮಾರ್ಗದರ್ಶನ, ಪ್ರೇರಣೆ, ಉತ್ತಮ ಮೌಲ್ಯಗಳನ್ನು ನೀಡಿ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಒಬ್ಬ ಉನ್ನತ ವ್ಯಕ್ತಿಯನ್ನಾಗಿ ಬದುಕುವಂತೆ ಪ್ರೇರಣೆ ನೀಡುತ್ತಾರೆ. ಶಿಕ್ಷಕರನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಶಿಕ್ಷಕರ ಸಾಧನೆಗಳು, ಸಮಾಜವನ್ನು ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆಗಳನ್ನು ಗೌರವಿಸಲು ಮತ್ತು ಶಿಕ್ಷಕರ ಪರಿಸ್ಥಿತಿಗಳನ್ನು ಸುಧಾರಿಸುವ ಸಲುವಾಗಿ ಅಕ್ಟೋಬರ್ 5 ರಂದು ವಿಶ್ವ ಮಟ್ಟದಲ್ಲಿ ಶಿಕ್ಷಕರ (World Teachers’ Day) ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಶಿಕ್ಷಕರ ದಿನಾಚರಣೆ ಹೇಗೆ ಪ್ರಾರಂಭವಾಯಿತು, ಅದರ ಉದ್ದೇಶವೇನು ಎಂಬುದನ್ನು ತಿಳಿಯಿರಿ.
1966 ರಲ್ಲಿ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಮತ್ತು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಪ್ಯಾರಿಸ್‌ನಲ್ಲಿ ಶಿಕ್ಷಕರ ಸ್ಥಾನಮಾನದ ಕುರಿತು ಒಂದು ಅಂತರ್ ಸರ್ಕಾರಿ ಸಮ್ಮೇಳನವನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಶಿಕ್ಷಕರ ಹಕ್ಕುಗಳು, ಜವಬ್ದಾರಿಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ UNESCO/ILO ಶಿಫಾರಸನ್ನು ಪ್ರಸ್ತಾವನೆ ಮಾಡಲಾಯಿತು. 1966 ರಲ್ಲಿ ನಡೆದ ಈ ಸಮ್ಮೇಳನದ 30 ನೇ ವಾರ್ಷಿಕೋತ್ಸವದ ನೆನಪಿಗಾಗಿ 1994 ರಲ್ಲಿ ಮೊದಲ ಬಾರಿಗೆ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 5 ರಂದು ಸಮಾಜಕ್ಕೆ ಶಿಕ್ಷಕರ ಗಮನಾರ್ಹ ಕೊಡುಗೆಗಳನ್ನು ಗುರುತಿಸುವ ಮತ್ತು ಗೌರವಿಸಲು ಸಲುವಾಗಿ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವಕ್ಕೆ ಶಾಂತಿ, ಅಹಿಂಸೆಯ ತತ್ವ ಸಾರಿದ ಹರಿಕಾರ ಗಾಂಧಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ