Kannada News Lifestyle Year Ender 2024: Top ten searched recipes by indians this year Kannada News
Year Ender 2024: ಈ ವರ್ಷ ಭಾರತೀಯರು ಅತೀ ಹೆಚ್ಚು ಹುಡುಕಾಡಿದ ಟಾಪ್ ರೆಸಿಪಿಗಳು ಇವೇ ನೋಡಿ
2024 ರ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ನಾವೆಲ್ಲರೂ ಇದ್ದೇವೆ. ಈ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ಸಮಯವು ಬಂದೇ ಬಿಟ್ಟಿದೆ. ಇದೀಗ ಗೂಗಲ್ ಈ ವರ್ಷದ ಟ್ರೆಂಡಿಂಗ್ ಹುಡುಕಾಟಗಳ ವಾರ್ಷಿಕ ವರದಿಯಾದ ಇಯರ್ ಇನ್ ಸರ್ಚ್ 2024ರನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಿವಿಧ ರೆಸಿಪಿಗಳಿವೆ. ಹೌದು, ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮಸಾಲೆಯುಕ್ತ ಹಾಗೂ ಹಬ್ಬ ಹರಿದಿನಗಳಲ್ಲಿ ಮಾಡಲಾಗುವ ಟಾಪ್ 10 ರೆಸಿಪಿಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಭಾರತೀಯರು ಆಹಾರ ಪ್ರಿಯರು. ಹೀಗಾಗಿ ಹೊಸ ಹೊಸ ರುಚಿಯನ್ನು ಸವಿಯಲು ಇಷ್ಟ ಪಡುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ಹೊಸದಾದ ರೆಸಿಪಿಗಳನ್ನು ಟ್ರೈ ಮಾಡುತ್ತಿರುತ್ತಾರೆ. ಆದರೆ ಇದೀಗ ಗೂಗಲ್‌ನಲ್ಲಿ ಭಾರತೀಯರು ಅತೀ ಹೆಚ್ಚಾಗಿ ಸರ್ಚ್ ಮಾಡಿರುವ ಟಾಪ್ ರೆಸಿಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾವಿನ ಕಾಯಿ ಉಪ್ಪಿನಕಾಯಿಯಿಂದ ಹಿಡಿದು ಕೇರಳ ಶೈಲಿಯ ಚಟ್ನಿ ರೆಸಿಪಿಯನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದು, ಆ ಹತ್ತು ರೆಸಿಪಿಗಳು ಇಲ್ಲಿದೆ.
ಪೋರ್ನ್ ಸ್ಟಾರ್ ಮಾರ್ಟಿನಿ : ಪ್ಯಾಶನ್ ಹಣ್ಣು, ವೆನಿಲ್ಲಾ ಮತ್ತು ಸ್ಪಾರ್ಕ್ಲಿಂಗ್ ವೈನ್‌ಈ ಮೂರನ್ನು ಸಂಯೋಜಿಸಿ ಮಾಡಲಾದ ಪೋರ್ನ್ ಸ್ಟಾರ್ ಮಾರ್ಟಿನಿ ಖಾದ್ಯವಿದಾಗಿದೆ. ಆಧುನಿಕ ಕ್ಲಾಸಿಕ್ ಕಾಕ್‌ಟೈಲ್ ಆಗಿ ಮಾರ್ಪಟ್ಟಿದ್ದು, ಭಾರತೀಯರು ಈ ವರ್ಷ ಗೂಗಲ್ ಗಳಲ್ಲಿ ಹುಡುಕಾಡಿದ ರೆಸಿಪಿಯಲ್ಲಿ ಮೊದಲ ಸ್ಥಾನದ್ದಲ್ಲಿದೆ.
ಮಾವಿನಕಾಯಿ ಉಪ್ಪಿನಕಾಯಿ : ಭಾರತದಲ್ಲಿ 2024 ರಲ್ಲಿ ಗೂಗಲ್ ನಲ್ಲಿ ಸರ್ಚ್ ಮಾಡಿದ ಪಾಕ ವಿಧಾನಗಳಲ್ಲಿ ಮಾವಿನ ಕಾಯಿ ರೆಸಿಪಿ ಕೂಡ ಸೇರಿದೆ. ಊಟಕ್ಕೆ ಉಪ್ಪಿನಕಾಯಿ ಇದ್ದು ಬಿಟ್ಟರೆ ಊಟವಂತೂ ಬೊಂಬಾಟ್ ಆಗುತ್ತದೆ. ಗಂಜಿ ಜೊತೆಗೆ ಮಾವಿನಕಾಯಿ ಉಪ್ಪಿನಕಾಯಿ ಸವಿದರೆ ಅದರ ರುಚಿನೇ ಬೇರೆಯಾಗಿದ್ದು ಎಲ್ಲರೂ ಇಷ್ಟ ಪಟ್ಟು ಸವಿಯುತ್ತಾರೆ.
ಧನಿಯಾ ಪಂಜಿರಿ : ಉತ್ತರ ಭಾರತದ ಪ್ರಸಿದ್ಧವಾದ ರೆಸಿಪಿ ಇದಾಗಿದ್ದು, ಈ ವರ್ಷ ಗೂಗಲ್ ನಲ್ಲಿ ಈ ರೆಸಿಪಿ ಮಾಡೋದು ಹೇಗೆ ಎಂದು ಭಾರತೀಯರು ಹುಡುಕಾಡಿದ್ದಾರೆ. ಧನಿಯಾ ಪಂಜಿರಿ ಪ್ರಸಾದ ರೆಸಿಪಿಯಾಗಿದ್ದು, ತಾವರೆ ಬೀಜ, ತೆಂಗಿನಕಾಯಿ, ಬೆಲ್ಲ ಹಾಗೂ ಡ್ರೈ ಫ್ರೂಟ್‌ಗಳಿಂದ ಮಾಡಲಾಗುವುದು. ಹಬ್ಬ, ವ್ರತ ಹಾಗೂ ಉಪವಾಸದ ವೇಳೆಯಲ್ಲಿ ಈ ರೆಸಿಪಿಯನ್ನು ಹೆಚ್ಚಾಗಿ ಮಾಡಲಾಗುತ್ತದೆ.
ಯುಗಾದಿ ಪಚಿಡಿ : ಆಂಧ್ರಪ್ರದೇಶ ಹಾಗೂ ತೆಲಂಗಾಣ ಯುಗಾದಿ ಸಂದರ್ಭದಲ್ಲಿ ಈ ರೆಸಿಪಿ ಫೇಮಸ್. ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮಿಶ್ರಿತವಾದ ಪಚಿಡಿಯು ಸಾಂಪ್ರದಾಯಿಕ ಖಾದ್ಯವಾಗಿದೆ. ಈ ವರ್ಷ ಭಾರತದಲ್ಲಿ ಗೂಗಲ್ ನಲ್ಲಿ ಹೆಚ್ಚಿನ ಜನರು ಯುಗಾದಿ ಪಚಿಡಿ ರೆಸಿಪಿಯ ಕುರಿತಾಗಿ ಸರ್ಚ್ ಮಾಡಿದ್ದಾರೆ.
ಪಂಚಾಮೃತ : ದೇವಸ್ಥಾನಗಳಲ್ಲಿ ಪ್ರಸಾದವಾಗಿ ನೀಡಲಾಗುವ ಪಂಚಾಮೃತ ರೆಸಿಪಿಯ ಬಗ್ಗೆಯು ಗೂಗಲ್ ನಲ್ಲಿ ಸರ್ಚ್ ಮಾಡಲಾಗಿದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆಯ ಮಿಶ್ರಣವಾಗಿದ್ದು ರುಚಿಯು ಅದ್ಭುತವಾಗಿರುತ್ತದೆ.
ಎಮಾ ದಟ್ಶಿ : ಎಮಾ ದಟ್ಶಿವು ಭೂತಾನ್‌ನಲ್ಲಿ ಅತೀ ಹೆಚ್ಚು ಫೇಮಸ್ ಆಗಿರುವ ಖಾದ್ಯವಾಗಿದೆ. ಅದಲ್ಲದೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೂ ಇದು ತುಂಬಾನೇ ಇಷ್ಟವಂತೆ. ಅನ್ನದ ಜೊತೆ ಸವಿಯಲು ಎಮಾ ದಟ್ಶಿ ಬಲು ರುಚಿಕರವಾಗಿದ್ದು, ಹಸಿರು ಮೆಣಸಿನಕಾಯಿ, ಟೊಮೆಟೊ, ಬೆಳ್ಳುಳ್ಳಿ, ಎಣ್ಣೆ, ಚೀಸ್ ನಿಂದ ಮಾಡುವ ಈ ಖಾದ್ಯದ ಕುರಿತು ಈ ವರ್ಷ ಭಾರತೀಯರು ಹೆಚ್ಚು ಹುಡುಕಾಡಿದ್ದಾರೆ.
ಫ್ಲಾಟ್ ವೈಟ್ : ಫ್ಲಾಟ್ ವೈಟ್ ಎಂಬುದು ಎಸ್ಪ್ರೆಸೊ ಮತ್ತು ಕುದಿಸಿದ ಹಾಲನ್ನು ಒಳಗೊಂಡಿರುವ ವಿಭಿನ್ನವಾದ ಕಾಫಿ ಪಾನೀಯವಾಗಿದೆ. ಈ ರೆಸಿಪಿಯ ಕುರಿತು ಭಾರತೀಯರು ಈ ವರ್ಷ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.
ಕಾಂಜಿ : ಕಾಂಜಿಯು ನೀರು, ಕ್ಯಾರೆಟ್, ಬೀಟ್ರೂಟ್, ಸಾಸಿವೆ ಮತ್ತು ಇಂಗು ಬಳಸಿ ತಯಾರಿಸಿದ ಸಾಂಪ್ರದಾಯಿಕ ಉತ್ತರ ಭಾರತದ ಪಾನೀಯವಾಗಿದೆ. ಬೇಸಿಗೆ ಸೇರಿದಂತೆ ಎಲ್ಲಾ ಋತುಗಳಲ್ಲಿ ದೇಹವನ್ನು ತೇವಾಂಶದಿಂದ ಇಡಲು ಇದು ಸಹಾಯಕವಾಗಿದೆ.
ಶಂಕರಪಾಲಿ : ಶಂಕರಪಾಲಿ ಮಹಾರಾಷ್ಟ್ರದಲ್ಲಿ ದೀಪಾವಳಿಗೆ ಮನೆಯಲ್ಲಿ ತಯಾರಿಸುವ ವಿಶೇಷ ಭಕ್ಷ್ಯವಾಗಿದೆ. ಮೈದಾ ಅಥವಾ ಗೋಧಿಹಿಟ್ಟಿನಿಂದ ತಯಾರಿಸುವ ಈ ತಿನಿಸು ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಇದು 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ರೆಸಿಪಿಗಳಲ್ಲಿ ಇದು ಕೂಡ ಒಂದು.
ಚಮ್ಮಂತಿ : ಇದು ಕೇರಳ ಶೈಲಿಯ ಮಾಡುವ ಚಟ್ನಿಯಾಗಿದ್ದು, ಒಣ ಮೆಣಸಿನಕಾಯಿ, ತೆಂಗಿನಕಾಯಿ, ಹುಣಸೆಹಣ್ಣು, ಶುಂಠಿ, ಈರುಳ್ಳಿ ಮತ್ತು ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗುತ್ತದೆ. 2024 ರಲ್ಲಿ ಚಮ್ಮಂತಿ ರೆಸಿಪಿಯನ್ನು ಭಾರತೀಯರು ಗೂಗಲ್ ನಲ್ಲಿ ಹೆಚ್ಚು ಹುಡುಕಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ