Kannada Play : ‘ಹೇ ಕಾಳಿದಾಸ, ಅಗ್ನಿಮಿತ್ರನ ಮೇಲೆ ನಿನಗದ್ಯಾವ ಅವ್ಯಕ್ತ ಅಸಹನೆ ಇತ್ತೋ?’

|

Updated on: Oct 06, 2021 | 3:22 PM

Malavikagnimitram : ‘ಮಾಳವಿಕಾಗ್ನಿಮಿತ್ರ ನಾಟಕದ ಕನ್ನಡ ಅನುವಾದದ ಪ್ರತಿಯನ್ನು ಹುಡುಕಿ, ಸುಸ್ತಾಗಿ ಕೈಚೆಲ್ಲಬೇಕು ಅನ್ನುವಷ್ಟರಲ್ಲಿ ನಮಗೆ ಇದರ ಒಂದು ಹಳೆಯ ಪ್ರತಿ ಸಿಕ್ಕಿದ್ದು ಮಿಥಿಕ್ ಸೊಸೈಟಿ ಗ್ರಂಥಾಲಯದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ನಾಟಕದ ರೂಪಾಂತರದ ಪಯಣ ನಮ್ಮನ್ನು ಉತ್ತರ ಭಾರತವನ್ನು ಸುತ್ತುವಂತೆ ಮಾಡಿತು.’ ಆಸೀಫ್ ಕ್ಷತ್ರಿಯ

Kannada Play : ‘ಹೇ ಕಾಳಿದಾಸ, ಅಗ್ನಿಮಿತ್ರನ ಮೇಲೆ ನಿನಗದ್ಯಾವ ಅವ್ಯಕ್ತ ಅಸಹನೆ ಇತ್ತೋ?’
ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ದ ಪರಿಷ್ಕೃತ ರೂಪದ ದೃಶ್ಯ
Follow us on

Rangaratha IPAC : ಪ್ರೇಮಕಥಾನಕಗಳು ರಾಜಕೀಯ ಅಂಶಗಳಿಂದ ಪ್ರೇರಣೆ ಪಡೆದುಕೊಂಡಿರುತ್ತವೆ ಎನ್ನುವುದು ನನ್ನ ವೈಯಕ್ತಿಕ ನಂಬಿಕೆ. ಕಾಳಿದಾಸನ ಮಾಲವಿಕಾಗ್ನಿಮಿತ್ರ (Malavikagnimitram) ನಾಟಕವನ್ನು ಕೈಗೆತ್ತಿಕೊಂಡಾಗ, ಆ ಛಾಯೆ ಅಷ್ಟೊಂದು ನಿಚ್ಚಳವಾಗಿ ಕಂಡುಬರಲಿಲ್ಲ. ಆದ್ದರಿಂದಲೇ  ಲೋಪವಾದ ಕೊಂಡಿಯನ್ನು ಹುಡುಕುತ್ತ ನಮ್ಮ ತಂಡದೊಂದಿಗೆ ಸಂಶೋಧನೆಗಿಳಿದೆ. ನಂತರ ಮೂಲ ಕಥಾಹಂದರವನ್ನು ಸಮಾಜೋ ರಾಜಕೀಯದ ಒಳಪದರಗಳಿಂದ ಪೋಷಿಸಿ ಇಡೀ ನಾಟಕವನ್ನೇ ಪುನಾರಚಿಸಿದೆ. ನಮಗೆ ಸಿಕ್ಕ ಐತಿಹಾಸಿಕ ದಾಖಲೆಗಳ ಪ್ರಕಾರ, ಅಗ್ನಿಮಿತ್ರ ರಾಜಕೀಯವಾಗಿ ದಕ್ಷತೆ ಪಡೆದುಕೊಂಡ ರಾಜನಾಗಿದ್ದ. ಕಲೆ ಮತ್ತು ಸಂಸ್ಕೃತಿಯ ಉನ್ನತಿಗಾಗಿ ಶ್ರಮಿಸಿದವನಾಗಿದ್ದ, ನಿಷ್ಠಾವಂತನೂ, ಸಬಲನೂ ಆಗಿದ್ದ. ಪ್ರತೀ ಪಾತ್ರದಲ್ಲಿ ಹುದುಗಿದ್ದ ಕಾಳಿದಾಸನನ್ನು ಹೆಕ್ಕಿ ಹೊರತೆಗೆದು ಒಂದು ಜೀವಂತ ಪಾತ್ರ ‘ಕಾಳಿ’ಯಾಗಿ ಕೂಡ ಸೃಷ್ಟಿಸಿದೆ. ಒಟ್ಟಾರೆಯಾಗಿ ಪ್ರಸ್ತುತ ರಾಜಕೀಯ ಧುರೀಣರನ್ನೂ ಗಮನದಲ್ಲಿಟ್ಟುಕೊಂಡು ಪುನಾರೂಪಿಸಿದಂಥ ನಾಟಕವಿದು.
ಆಸಿಫ್ ಕ್ಷತ್ರಿಯ, ಸಂಸ್ಥಾಪಕ ನಿರ್ದೇಶಕರು
ರಂಗರಥ- ಭಾರತೀಯ ಪ್ರದರ್ಶನ ಕಲಾ ಸಂಸ್ಥೆ

ಇದೇ ಶುಕ್ರವಾರ ಬೆಂಗಳೂರಿನ ರಂಗಶಂಕರದಲ್ಲಿ ‘ಮಾಳವಿಕಾಗ್ನಿಮಿತ್ರ’ ನಾಟಕದ 31ನೇ ಪ್ರದರ್ಶನ ಏರ್ಪಟ್ಟಿದೆ. ನಿರ್ದೇಶಕ ಆಸಿಫ್ ಕ್ಷತ್ರಿಯ, ಈ ನಾಟಕದ ಪುನಾರಚನೆಯ ಪ್ರಯಾಣವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*

(ಈ ನಾಟಕದ ಕೆಲ ಸಂಭಾಷಣೆಗಳು)

ಅಗ್ನಿಮಿತ್ರ:
ಮಾಳವಿಕೆಯನ್ನು ಮನಸೂರೆಗೊಳ್ಳುವ ಹಾಗೆ ಸಿಂಗರಿಸಿ ತರಲು ಹೇಳಬೇಕು. ಸ್ಪರ್ಧೆಯಲ್ಲಿ ಅವಳನ್ನು ನೋಡಿದಾಕ್ಷಣ ನನ್ನ ಕಣ್ಣುಗಳಲ್ಲಿ ಸಾವಿರ ಜ್ಯೋತಿ ಬೆಳಗಬೇಕು. ಮನಸ್ಸಿನಲ್ಲಿ ಶೃಂಗಾರದ ಝೇಂಕಾರ ಮೊಳಗಬೇಕು. ನನ್ನ ಹೃದಯಾಂತರಾಳದಲ್ಲಿ ಇಳಿದು ಆಕೆ ನರ್ತಿಸಬೇಕು.

ಕೌಶಿಕಿ:
ಈ ಜಗತ್ತಿನಲ್ಲಿ ಯಾವ ಹೆಣ್ಣೂ ತನ್ನ ಪತಿಯನ್ನು ಮತ್ತೊಬ್ಬ ಹೆಣ್ಣಿನ ಜೊತೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ಈ ಗಂಡಸರೋ ಸ್ವಭಾವತಃ ಬಹುಪತ್ನಿತ್ವದ ಆಕಾಂಕ್ಷಿಗಳಾಗಿರುತ್ತಾರೆ. ಧಾರಿಣೀದೇವಿಯವರು ರಾಜ ಅಗ್ನಿಮಿತ್ರನ ಮಡದಿಯಾಗಿರುವುದರ ಜೊತೆಗೆ ಪಟ್ಟದರಾಣಿಯೂ ಆಗಿದ್ದಾರೆ. ಅವರಿಗೆ ರಾಜ್ಯದ ಕ್ಷೇಮ ಮುಖ್ಯ. ರಾಜನು ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂದರೆ ನೆರೆಯ ರಾಜ್ಯಗಳನ್ನು ಗೆದ್ದರೆ ಸಾಲದು ಅಲ್ಲಿಯ ರಾಜಮನೆತನಗಳೊಂದಿಗೆ ಸಂಬಂಧವನ್ನು ಬೆಳೆಸಬೇಕಾಗುತ್ತದೆ.

ಕೌಶಿಕಿ:
ಇಲ್ಲಿ ಪ್ರಶ್ನೆ ಮಾಳವಿಕೆಯದ್ದಲ್ಲ, ನಿಮ್ಮ ಮೇಲಿರುವ ಮಹಾರಾಜರ ಅನುಗ್ರಹದ್ದು. ಈ ಅಶೋಕ ಪುಷ್ಪಾಭಿಷೇಕವು ನಿಮ್ಮಿಬ್ಬರನ್ನು ಮತ್ತಷ್ಟು ಗಾಢವಾಗಿ ಬೆಸೆಯುತ್ತದೆ.

*

‘ಮಾಳವಿಕಾಗ್ನಿಮಿತ್ರ’, ಕಾಳಿದಾಸನ ಮೊಟ್ಟಮೊದಲ ನಾಟಕ. ಇದರ ನಂತರ ರಚನೆಗೊಂಡ ಶಾಕುಂತಲಾ ನಾಟಕಂ ಇರಲಿ, ಮೇಘದೂತವಿರಲಿ, ಋತುಸಂಹಾರವಿರಲಿ, ಇಂದಿಗೂ ಅದ್ಭುತ ದೃಶ್ಯಕಾವ್ಯಗಳಾಗಿ ರಂಗದ ಮೇಲೆ ವಿಜೃಂಭಿಸುತ್ತಿವೆ. ಆದರೆ, ಮೊದಲ ನಾಟಕವನ್ನು ಅವಲೋಕಿಸಿದಾಗ ಸ್ವಲ್ಪ ಮಟ್ಟಿಗೆ ನಿರಾಸೆ ಆಗುವುದು ಖಂಡಿತ. ಕಾರಣ ಇಷ್ಟೇ… ಈ ನಾಟಕದಲ್ಲಿರುವ ದೃಶ್ಯ ಜೋಡಣೆ, ಸಂಗತಿಗಳ ಗತಿ ಮತ್ತು ವಿವರಣೆಗಳು ಕೊಂಚ ಕ್ಲೀಷೆ ಎನಿಸುತ್ತವೆ. ಬಹುಶಃ ಇದು ಕಾಳಿದಾಸನ ಮೊದಲ ನಾಟಕವಾದ್ದರಿಂದ, ಆತನಿಗೆ, ನಾಟಕ ರಚನೆಯ ಅನುಭವದ ಕೊರತೆ ಇದ್ದಿರಬಹುದೇನೋ.

ಸಾಮಾನ್ಯವಾಗಿ, ಭಾರತೀಯ ಸಾಹಿತ್ಯದಲ್ಲಿರುವ ಕೆಲವು ಮೇರು ಕೃತಿಗಳನ್ನು ರಂಗಕ್ಕೆ ಅಳವಡಿಸಿ ಅಥವಾ ಹೊಸದೃಷ್ಟಿಕೋನದೊಂದಿಗೆ ಒಂದು ನವೀನ ರಂಗಪಠ್ಯ ರೂಪಿಸಿ, ರಂಗದ ಮೇಲೆ ಪ್ರದರ್ಶಿಸುವುದು, ‘ರಂಗರಥ- ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಪರಿಪಾಠ. ಈ ನಿಟ್ಟಿನಲ್ಲಿ ರಂಗರಥ ತಂಡ, ಮಾಳವಿಕಾಗ್ನಿಮಿತ್ರ ನಾಟಕವನ್ನು ಸಾಕಷ್ಟು ಸಂಶೋಧನೆಗಳ ಆಧಾರದ ಮೇಲೆ ಪುನಾರಚಿಸಿ, ಹೊಸ ರಂಗಪಠ್ಯವನ್ನು ನೀಡುತ್ತಿದೆ. ಇದಕ್ಕೆ ಹಲವಾರು ಪ್ರಶಸ್ತಿಗಳು ಸಂದಿದ್ದು, ಅನೇಕ ವಿದ್ವಾಂಸರುಗಳ ವಿಮರ್ಶಾತ್ಮಕ ಪ್ರಶಂಸೆಯನ್ನೂ ಗಳಿಸುತ್ತಿದೆಯಲ್ಲದೇ, ಅಸಂಖ್ಯಾತ ಪ್ರೇಕ್ಷಕರ ಮನಸೂರೆಗೊಂಡಿದೆ. ಇದರ ಪರಿಣಾಮವೇ ಈ ಒಂದು ಅನುಭವದ ಕಥಾನಕ.

ಮಾಳವಿಕಾಗ್ನಿಮಿತ್ರ ನಾಟಕದ ಕನ್ನಡ ಅನುವಾದದ ಪ್ರತಿಯನ್ನು ಹುಡುಕಿ, ಸುಸ್ತಾಗಿ ಕೈಚೆಲ್ಲಬೇಕು ಅನ್ನುವಷ್ಟರಲ್ಲಿ ನಮಗೆ ಇದರ ಒಂದು ಹಳೆಯ ಪ್ರತಿ ಸಿಕ್ಕಿದ್ದು ಮಿಥಿಕ್ ಸೊಸೈಟಿ ಗ್ರಂಥಾಲಯದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ನಾಟಕದ ರೂಪಾಂತರದ ಪಯಣ ನಮ್ಮನ್ನು ಉತ್ತರ ಭಾರತವನ್ನು ಸುತ್ತುವಂತೆ ಮಾಡಿತು.

ಎಸ್.ವಿ. ಪರಮೇಶ್ವರಭಟ್ಟರ ಕನ್ನಡ ಅನುವಾದದ ಸಾಂಪ್ರದಾಯಿಕ ಶೈಲಿಯನ್ನು ಈಗಿನ ಪ್ರೇಕ್ಷಕರಿಗೆ ಸಮರ್ಥವಾಗಿ ಅರ್ಥಮಾಡಿಸಲು ಇಡೀ ನಾಟಕದ ಭಾಷೆ ಮತ್ತು ದೃಶ್ಯ ಜೋಡಣೆಯನ್ನು ಸರಳೀಕರಿಸಲಾಯಿತು. ಇದಾದ ನಂತರ ಕೆಲವು ಪ್ರಶ್ನೆಗಳು ಕಾಡತೊಡಗಿದವು.

ಆಸೀಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್

ಮೊದಲನೆಯದಾಗಿ, ಕಾಳಿದಾಸನು ರಾಜ ಅಗ್ನಿಮಿತ್ರನನ್ನು ಒಬ್ಬ ಸ್ತ್ರೀಲೋಲನ ಹಾಗೆ ಬಿಂಬಿಸಿದ್ದು. ಕ್ರಿಸ್ತ ಪೂರ್ವ 183ರಲ್ಲಿ ಮೌರ್ಯ ಸಾಮ್ರಾಜ್ಯದ ಪತನಕ್ಕೆ ಕಾರಣನಾದ ಪುಷ್ಯಮಿತ್ರನ ಮಗ, ಅಗ್ನಿಮಿತ್ರನೇ ಶುಂಗ ಸಾಮ್ರಾಜ್ಯದ ನಿಜವಾದ ಸಂಸ್ಥಾಪಕ. ಅವನೊಬ್ಬ ದಕ್ಷ ರಾಜನಾಗಿದ್ದ ಎಂದು ಇತಿಹಾಸದ ಪುಟಗಳಲ್ಲಿ ಓದಿದ್ದ ನೆನಪು. ಹೀಗಿದ್ದಾಗ, ಕಾಳಿದಾಸ ಏಕೆ ಅಗ್ನಿಮಿತ್ರನನ್ನು ಕೇವಲ ಸ್ತ್ರೀಲೋಲನಾಗಿ ಬಿಂಬಿಸಿ, ಆತ ಒಬ್ಬ ದಕ್ಷರಾಜನಾಗಿದ್ದ ಎಂದು ಪುಷ್ಟೀಕರಿಸುವ ಯಾವುದೇ ಸಂಗತಿಯನ್ನು ದಾಖಲಿಸಲಿಲ್ಲ? ಕಾಳಿದಾಸನಿಗೆ, ಶುಂಗವಂಶದ ಇತಿಹಾಸ ಸರಿಯಾಗಿ ಗೊತ್ತಿರಲಿಲ್ಲವೇ? ಅಥವಾ ಅಗ್ನಿಮಿತ್ರನ ಮೇಲೆ ಯಾವುದಾದರೂ ಅವ್ಯಕ್ತ ಅಸಹನೆಯಿತ್ತೇ ಎಂಬ ಅನುಮಾನ ಬಾರದೆ ಇರದು.

ಇದರ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲೋಸುಗ ನಾನು ಮತ್ತು ನಮ್ಮ ರಂಗರಥ ತಂಡದ ಮತ್ತೋರ್ವ ಸಂಸ್ಥಾಪಕ ನಿರ್ದೇಶಕಿಯಾದ ಶ್ವೇತಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಶಾಸನ ಶಾಸ್ತ್ರದ ಡಿಪ್ಲೊಮಾ ತರಗತಿಗಳಿಗೆ ಸೇರಿಕೊಂಡು ಒಂದು ವರ್ಷದ ಅವಧಿಯಲ್ಲಿ ಶಾಸನಗಳನ್ನು ಓದುವುದನ್ನು ಕಲಿತುಕೊಂಡೆವು. ಬ್ರಾಹ್ಮಿ ಲಿಪಿಯಲ್ಲಿರುವ ಕ್ರಿಸ್ತಪೂರ್ವದ ಶಾಸನಗಳನ್ನು ಓದಲು ತಕ್ಕಮಟ್ಟಿಗೆ ಶಕ್ತರಾದೆವು. ಆದರೆ ಅವುಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಪ್ರಾಕೃತ ಭಾಷೆಯ ಜ್ಞಾನ ಅವಶ್ಯಕವಾಗಿತ್ತು ಅದಕ್ಕಾಗಿಯೇ ಪ್ರಾಕೃತ ಭಾಷೆಯಲ್ಲಿ ಮತ್ತೊಂದು ‘ಡಿಪ್ಲೊಮಾ ಕೋರ್ಸ್’ಗೆ ಸೇರಿಕೊಂಡು ಹಲವಾರು ತಿಂಗಳುಗಳು ಅಧ್ಯಯನ ಮಾಡಿದೆವು.

ಇವೆರಡರ ಸಹಾಯದಿಂದ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ಕೆಲವು ಭಾಗಗಳಲ್ಲಿ ಶುಂಗವಂಶದ ಶಾಸನಗಳ ಪತ್ತೆ ಮತ್ತು ಅಧ್ಯಯನದಲ್ಲಿ ನಿರತರಾದೆವು. ವಿದಿಶೆಯಲ್ಲಿರುವ (ಅಂದಿನ ಬೆಸ್ನಗರ) ಕಂಭಶಾಸನ ಅಥವಾ ಇನ್ನೂ ಹಲವು ಶಾಸನಗಳಲ್ಲಿ ನಮಗೆ ಅಲ್ಲಲ್ಲಿ ಕಾಣಸಿಕ್ಕಿದ್ದು, ಅಗ್ನಿಮಿತ್ರ ಒಬ್ಬ ಒಳ್ಳೆಯ ರಾಜನಾಗಿದ್ದ ಎಂಬ ಅಂಶ ಹಾಗೂ ಮುಖ್ಯವಾಗಿ, ಕಲೆ ಮತ್ತು ಸಂಸ್ಕೃತಿಯ ಉನ್ನತಿಗೆ ಶ್ರಮಿಸಿದ್ದ ಎಂದು. ಜೊತೆಗೆ ರಾಜಕೀಯವಾಗಿ ದಕ್ಷ, ನಿಷ್ಠಾವಂತ ಮತ್ತು ಸಬಲನಾಗಿದ್ದ. ಈ ಅಂಶಗಳನ್ನೇ ನಾವು ಮಾಳವಿಕಾಗ್ನಿಮಿತ್ರ ನಾಟಕದ ಹೊಸ ಪಠ್ಯದಲ್ಲಿ ಅಳವಡಿಸಿದ್ದೇವೆ.

ಮಾಲವಿಕಾಗ್ನಿಮಿತ್ರದಲ್ಲಿ ಶ್ವೇತಾ ಶ್ರೀನಿವಾಸ, ಸಹನಾ ಮಯ್ಯ ಮತ್ತು ಲಕ್ಷ್ಮೀ

ಮತ್ತೊಂದು ಗಮನಾರ್ಹ ವಿಷಯವೆಂದರೆ, ಕಾಳಿದಾಸನು, ಅಗ್ನಿಮಿತ್ರನ ಆಪ್ತಮಿತ್ರ ಗೌತಮನನ್ನು ಒಬ್ಬ ವಿದೂಷಕನನ್ನಾಗಿ ಚಿತ್ರಿಸಿ, ಆತನನ್ನು ಕೋಡಂಗಿಯ ಹಾಗೆ ಕಾಣುವಂತೆ ಮಾಡಿದ್ದಾನೆ ಎಂದು ಹಲವರಿಗೆ ಭಾಸವಾಗುತ್ತದೆ. ಹಾಗೆ ನೋಡಿದರೆ, ನಾಟ್ಯಶಾಸ್ತ್ರದಲ್ಲಿ ‘ವಿದೂಷಕ’ ಪಾತ್ರದಲ್ಲಿ ಸುಮಾರು 7 ವಿಭಿನ್ನ ಪ್ರಕಾರಗಳಿವೆ. ಅದರಲ್ಲಿ ಕೋಡಂಗಿಯದ್ದೂ ಒಂದು. ನಾವು ನಮ್ಮ ರಂಗಪಠ್ಯದಲ್ಲಿ ಗೌತಮನನ್ನು ಒಬ್ಬ ಗಂಭೀರ ಮತ್ತು ಅಗಾಧ ಸಮಯಪ್ರಜ್ಞೆಯುಳ್ಳ ವ್ಯಕ್ತಿಯನ್ನಾಗಿ ಬಿಂಬಿಸಿದ್ದೇವೆ. ಜೊತೆಗೆ, ಪ್ರತೀ ಪಾತ್ರದಲ್ಲಿ ಹುದುಗಿದ್ದ ಕಾಳಿದಾಸನನ್ನು ಹೆಕ್ಕಿ ಹೊರತೆಗೆದು ಒಂದು ಜೀವಂತ ಪಾತ್ರ ‘ಕಾಳಿ’ಯಾಗಿ ಕೂಡ ಸೃಷ್ಟಿಸಿದ್ದೇವೆ.

ಇವಿಷ್ಟಲ್ಲದೇ ಇನ್ನೂ ಅನೇಕ ಇಂತಹ ಸೂಕ್ಷ್ಮಗಳನ್ನು ಒಳಗೊಂಡ, ಮೂಲ ಕಥಾಹಂದರಕ್ಕೆ ಚ್ಯುತಿ ಇಲ್ಲದೇ ಪುನರಚನೆಗೊಂಡ ನಮ್ಮ ನವೀನ ‘ಮಾಳವಿಕಾಗ್ನಿಮಿತ್ರ’ ನಾಟಕದ ಬಗ್ಗೆ ಸಂಸ್ಕೃತ ವಿದ್ವಾಂಸರು, ಸಾಹಿತಿಗಳು, ಬರಹಗಾರರು, ‘ಕಾಳಿದಾಸನ ಮಾಳವಿಕಾಗ್ನಿಮಿತ್ರ’ ನಾಟಕವನ್ನು ನೋಡುವ ಹಾಗೂ ಗ್ರಹಿಸುವ ಪರಿಯನ್ನು ಗಮನಾರ್ಹವಾಗಿ ಬದಲಾಯಿಸಿದೆ ಎಂದಿದ್ದಾರೆ.

ಇಲ್ಲಿಯವರೆಗೂ 30 ಪ್ರದರ್ಶನಗಳನ್ನು ದಾಟಿ ಮುನ್ನಡೆಯುತ್ತಿರುವ ‘ರಂಗರಥದ ಮಾಳವಿಕಾಗ್ನಿಮಿತ್ರ’ ನಾಟಕವು ಪ್ರೇಕ್ಷಕರನ್ನು ಮತ್ತೆ ಮತ್ತೆ ರಂಗಮಂದಿರಕ್ಕೆ ಸೆಳೆಯುತ್ತಿದೆ.

ಮುಂದಿನ ಪ್ರದರ್ಶನ ಇದೇ ಶುಕ್ರವಾರ, 8ನೇ ತಾರೀಖು, ಸಂಜೆ 7 ಗಂಟೆಗೆ, ರಂಗಶಂಕರದಲ್ಲಿ.

ಟಿಕೆಟ್ : https://in.bookmyshow.com/plays/malavikagnimithra/ET00315586

ಇದನ್ನೂ ಓದಿ : Art With Heart : ಆನ್​ಲೈನ್​ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ’

Published On - 3:01 pm, Wed, 6 October 21