Autobiography : ಅಭಿಜ್ಞಾನ ; ‘ನನ್ನಜ್ಜಿ ಹಾಲಿಲ್ಲದ ಮೊಲೆಗಳನ್ನು ಬಾಯಲ್ಲಿಟ್ಟು ಸಮಾಧಾನಿಸುತ್ತಿದ್ದಳು’

|

Updated on: Dec 13, 2021 | 10:04 AM

Nomad : ‘ನಮ್ಮ ಸಮುದಾಯದಲ್ಲಿ ಇತ್ತೀಚಿನವರೆಗೆ ಗರ್ಭಿಣಿಯರನ್ನು ಹೆರಿಗೆಗೆ ತೌರುಮನೆಗೆ ಕಳುಹಿಸುವ ಪದ್ಧತಿ ಇರಲಿಲ್ಲ. ಬಹುಶಃ ಅಲೆಮಾರಿಗಳಾಗಿದ್ದ ಕಾಲದಲ್ಲಿ ತೌರುಮನೆಯವರನ್ನು ಎಲ್ಲಿದ್ದಾರೆಂದು ಪತ್ತೆ ಮಾಡುವುದೇ ದೊಡ್ಡ ಸಮಸ್ಯೆಯಿತ್ತು. ಮೂಲದಲ್ಲಿ ಮದುವೆ ಆಯಿತೆಂದರೆ ಅನೇಕ ಹೆಣ್ಣುಗಳಿಗೆ ಮರಣದ ಪರ್ಯಂತ ತೌರುಮನೆಯ ದರ್ಶನವಾಗದೇ ಇದ್ದ ಸಂದರ್ಭಗಳೂ ಇದ್ದವಂತೆ.’ ಪ್ರೊ. ಸಣ್ಣರಾಮ

Autobiography : ಅಭಿಜ್ಞಾನ ; ‘ನನ್ನಜ್ಜಿ ಹಾಲಿಲ್ಲದ ಮೊಲೆಗಳನ್ನು ಬಾಯಲ್ಲಿಟ್ಟು ಸಮಾಧಾನಿಸುತ್ತಿದ್ದಳು’
ಪ್ರೊ. ಸಣ್ಣರಾಮ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

‘ನಾನೆಂಬುದು ನಾನಲ್ಲ’ ಪ್ರೊ. ಸಣ್ಣರಾಮ ಅವರ ಆತ್ಮಕಥನದಿಂದ

*

ನಾನು ನನ್ನ ಅಪ್ಪ ಅಮ್ಮಂದಿರಿಗಿಂತ ನಮ್ಮಜ್ಜಿಯನ್ನೇ ಆಶ್ರಯಿಸಿ ಬೆಳೆದೆ. ಅದಕ್ಕೆ ಕಾರಣವನ್ನು ನಮ್ಮ ತಾಯಿ ತುಂಬಾ ಸ್ವಾರಸ್ಯಕರವಾಗಿ ವರ್ಣಿಸುತ್ತಿದ್ದಳು. ನಾನು ಹುಟ್ಟಿದ ಮೂರೇ ತಿಂಗಳಿಗೆ ಮತ್ತೆ ನಮ್ಮ ತಾಯಿ ಗರ್ಭಿಣಿಯಾದಳಂತೆ. ನಮ್ಮ ಸಮುದಾಯದಲ್ಲಿ ಇತ್ತೀಚಿನವರೆಗೆ ಗರ್ಭಿಣಿಯರನ್ನು ಹೆರಿಗೆಗೆ ತೌರುಮನೆಗೆ ಕಳುಹಿಸುವ ಪದ್ಧತಿ ಇರಲಿಲ್ಲ. ಬಹುಶಃ ಅಲೆಮಾರಿಗಳಾಗಿದ್ದ ಕಾಲದಲ್ಲಿ ತೌರುಮನೆಯವರನ್ನು ಎಲ್ಲಿದ್ದಾರೆಂದು ಪತ್ತೆ ಮಾಡುವುದೇ ದೊಡ್ಡ ಸಮಸ್ಯೆಯಿತ್ತು. ಮೂಲದಲ್ಲಿ ಮದುವೆ ಆಯಿತೆಂದರೆ ಅನೇಕ ಹೆಣ್ಣುಗಳಿಗೆ ಮರಣದ ಪರ್ಯಂತ ತೌರುಮನೆಯ ದರ್ಶನವಾಗದೇ ಇದ್ದ ಸಂದರ್ಭಗಳೂ ಇದ್ದವಂತೆ. ಭಾರತದ ಮೂಲೆಮೂಲೆಗೆ ಗುಂಪುಗುಂಪಾಗಿ ಅಲೆಯುತ್ತ ವ್ಯಾಪಾರ ಮಾಡುತ್ತಿದ್ದ ಈ ಜನರು ಒಮ್ಮೆ ಸೇರಿದ ಗುಂಪುಗಳು ಮತ್ತೆ ಸೇರಲು ಹತ್ತಾರು ವರ್ಷಗಳೇ ಹಿಡಿಯುತ್ತಿತ್ತಂತೆ. ಇದು ಒಂದು ಕಾರಣವಾದರೆ ಮತ್ತೊಂದು ಗಂಡು ಮಗು ಹುಟ್ಟಿದರೆ ತುಂಬಾ ಸಂಭ್ರಮದ ಆಚರಣೆಗಳಿವೆ. ಅದು ಗಂಡನ ಮನೆಯಲ್ಲಿಯೇ ನಡೆಯಬೇಕು. ಆ ಕಾರಣದಿಂದಲೂ ಜನನಕ್ಕೆ ತೌರುಮನೆಗೆ ಕಳುಹಿಸುವ ಪದ್ಧತಿ ಇಲ್ಲವೆಂದು ತೋರುತ್ತದೆ.

ಈ ಜನಾಂಗದಲ್ಲಿ ಬಾಣಂತಿಯ ಆರೈಕೆ ಒಂದು ತಿಂಗಳು ಮಾತ್ರ. ಒಂದು ತಿಂಗಳು ಎಂದರೆ 5 ವಾರಗಳು ಯಾವ ದಿನ ಹೆರಿಗೆಯಾಗಿರುತ್ತದೆಯೋ ಆ ದಿನದಿಂದ ಮುಂದಿನ 5ನೇ ವಾರದ ಆ ದಿನ ಅವಳು ಬಾಣಂತಿಯ ಆರೈಕೆ ಮುಗಿಯುತ್ತದೆ. ಕಡು ಬಡವರಾದರೆ ಒಂದು ತಿಂಗಳ ಹಸುಗೂಸನ್ನು ಬಿಟ್ಟು ಸೌದೆ ಮಾರಲು, ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಕೆಲವೊಮ್ಮೆ ಗರ್ಭಿಣಿಯರು ಹೆರಿಗೆ ನೋವು ಕಾಣಿಸಿಕೊಳ್ಳುವವರೆಗೆ ಸೌದೆ ಮಾರಲು, ಕೂಲಿ ಕೆಲಸಕ್ಕೂ ಹೋಗುತ್ತಿದ್ದುದುಂಟು. ಈಗಲೂ ನನಗೆ ಒಂದು ಪ್ರಸಂಗ ನೆನಪಿನಲ್ಲಿದೆ. ನಮ್ಮ ಮನೆಯ ಮುಂದಿನ ಮನೆಯಲ್ಲಿ ಮಿಮ್ಮಿಬಾಯಿ ಎಂಬುವಳಿದ್ದಾಳೆ. ಅತ್ಯಂತ ಕಡು ಬಡವರು. ಗಂಡ-ಹೆಂಡತಿ ಇಬ್ಬರೂ ದಿನವೂ ಕಾಡಿನಿಂದ ತಲೆಯ ಮೇಲೆ ಸೌದೆ ಹೊತ್ತು ಮಾರಿಯೇ ಜೀವನ ಮಾಡಬೇಕಾಗಿತ್ತು. ತುಂಬು ಗರ್ಭಿಣಿಯಾದ ಮಿಮ್ಮಿಬಾಯಿ ಸೌದೆ ತರಲು ಕಾಡಿಗೆ ಹೋದವಳು ಸೌದೆಯನ್ನು ಒಟ್ಟು ಮಾಡಿ ಇನ್ನೇನು ಹೊರಡಬೇಕು ಅನ್ನುವಾಗ ಅವಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತಂತೆ. ಕಾಡು, ಒಬ್ಬಂಟಿ, ಅವಳೇ ಮಗುವನ್ನು ಹೆತ್ತು ಒಂದು ಮಗ್ಗುಲಲ್ಲಿ ಮಗುವನ್ನು ತಲೆಯ ಮೇಲೆ ಸೌದೆಯನ್ನು ಹೆಗಲ ಮೇಲೆ ಕೊಡ್ಲಿಯನ್ನು ಹೊತ್ತು ಮನೆಗೆ ಬಂದಳು. ಅವಳ ಧೈರ್ಯವನ್ನು ಕಂಡು ತಾಂಡಾದ ಜನರೆಲ್ಲ ದಿಗ್ಭ್ರಮೆಯಾಗಿದ್ದುಂಟು.

ಆತ್ಮಕಥನ

ಮೂರೇ ತಿಂಗಳಿಗೆ ಮತ್ತೆ ಗರ್ಭಿಣಿಯಾದ ನನ್ನ ತಾಯಿಯ ಮೊಲೆ ಹಾಲು ಕುಡಿದಿದ್ದು ಕೇವಲ ಆರು ತಿಂಗಳು ಮಾತ್ರ. ನಂತರ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾದೀತೆಂದು ನನಗೆ ಮೊಲೆಹಾಲು ಬಿಡಿಸಲು ಶತಪ್ರಯತ್ನ ಮಾಡಿದಳಂತೆ. ಕೊನೆಗೂ ಮೊಲೆಹಾಲು ಬಿಡಲಿಲ್ಲವಂತೆ. ನನ್ನ ತಂಗಿ ಹುಟ್ಟಿದ ಮೇಲೆ ಅಮ್ಮನ ಪಕ್ಕದಲ್ಲಿ ಮಲಗುವ ನೆಪ ಮಾಡಿಕೊಂಡು ಅವಳಿಗೆ ನಿದ್ದೆ ಹತ್ತಿದ ಮೇಲೆ ಮೊಲೆ ಹಾಲನ್ನು ಪೂರ್ತಿ ಕುಡಿದುಬಿಡುತ್ತಿದ್ದೆನಂತೆ. ನನ್ನ ತಂಗಿಗೆ ಹಾಲಿಲ್ಲದಂತಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ತಾಯಿ ನನ್ನನ್ನು ಅಜ್ಜಿಯ ಹತ್ತಿರ ತಳ್ಳಿದಳಂತೆ. ನನ್ನಜ್ಜಿ ಹಾಲಿಲ್ಲದ ಮೊಲೆಗಳನ್ನು ನನ್ನ ಬಾಯಲ್ಲಿಟ್ಟು ನನ್ನ ಸಮಾಧಾನ ಮಾಡುತ್ತಿದ್ದಳಂತೆ. ಅಂದಿನಿಂದ ನನ್ನಜ್ಜಿಗೆ ಅಂಟಿಕೊಂಡ ನಾನು ಅವಳೊಂದಿಗೇ ಊಟ. ಅವಳ ಪಕ್ಕದಲ್ಲೇ ನಿದ್ದೆ. ಅವಳು ತಾಂಡಾದಲ್ಲಿ ಯಾರ ಮನೆಗೆ ಹೋದರೂ ಅಲ್ಲಿ ನನ್ನ ಹಾಜರಿ ಖಾಯಂ. ಒಟ್ಟಿಗೆ ಊಟ ಮಾಡಿ ಕಡೆಯಲ್ಲಿ ತಟ್ಟೆಯಲ್ಲಿ ಉಳಿದಿದ್ದನ್ನು ಗೋರಿ ನನ್ನ ಬಾಯಲ್ಲಿಟ್ಟು ಕೈತೊಳೆಯುತ್ತಿದ್ದಳು. ಆ ಕಡೆಯ ತುತ್ತಿನ ಸ್ವಾದ ವರ್ಣಿಸಲು ಸಾಧ್ಯವಿಲ್ಲ. ಸಾರು, ಮೊಸರು, ತುಪ್ಪ ಬೆರಕೆಯ ದ್ರವರೂಪದ ಆ ಕಡೆಯ ತುತ್ತಿನ ರುಚಿಗೆ ಸಮನಾದುದು ಯಾವುದೂ ಇರಲಿಕ್ಕೆ ಸಾಧ್ಯವಿಲ್ಲ. ಇಂದು ಬಗೆಬಗೆಯ ಖಾದ್ಯಗಳನ್ನು ತಿನ್ನುತ್ತಿದ್ದೇನೆ. ಆದರೆ ಅಜ್ಜಿಯ ಆ ಕಡೆಯ ತುತ್ತಿನ ರುಚಿ ಇನ್ನೂವರೆಗೆ ಸಿಕ್ಕಿಲ್ಲ.

ಸೌಜನ್ಯ : ಅಹರ್ನಿಶಿ, ಶಿವಮೊಗ್ಗ, 9449174662

ಇದನ್ನೂ ಓದಿ : Autobiography : ಅಭಿಜ್ಞಾನ ; ‘ಅವತ್ತು ಎರಡು ಗಂಟೆಯಾದರೂ ಬಾಗಿಲು ತೆರೆಯಲಿಲ್ಲ ಅವನು’

Published On - 10:02 am, Mon, 13 December 21