Television Presenter : ನಾ. ಸೋಮೇಶ್ವರರು ಇಂದಿಗೂ ಜೋಪಾನವಾಗಿಟ್ಟುಕೊಂಡ ಆ ಪುಸ್ತಕ? ಥಟ್ ಅಂತ ಹೇಳಿ!

|

Updated on: Dec 15, 2021 | 10:24 AM

N Someshwar : ಮೆಡಿಕಲ್ ಕಾಲೇಜಿಗೆ ಹಣ ಕಟ್ಟಲು ಸೋಮೇಶ್ವರ ಅವರಿಗೆ ಹಣ ಜೋಡಿಸುವುದು ಸ್ವಲ್ಪ ತೊಡಕಾಯಿತಂತೆ. ಹಣ ಕಟ್ಟಲು ವಾಯಿದೆ ಮುಗಿಯುವ ದಿನದ ಹೊತ್ತಿಗೆ ಹಾಗೂ ಹೀಗೂ ಹಣ ಹೊಂದಿಸಿದರೂ ಕಟ್ಟಬೇಕಾದ ಮೊತ್ತಕ್ಕಿಂತ 350 ರೂಪಾಯಿ ಕಡಿಮೆ ಬಿದ್ದಿತಂತೆ. ಆ ಕಾಲಕ್ಕೆ ಕೆಳಮಧ್ಯಮ ವರ್ಗದವರಿಗೆ ಅದು ದೊಡ್ಡ ಮೊತ್ತವೇ.

Television Presenter : ನಾ. ಸೋಮೇಶ್ವರರು ಇಂದಿಗೂ ಜೋಪಾನವಾಗಿಟ್ಟುಕೊಂಡ ಆ ಪುಸ್ತಕ? ಥಟ್ ಅಂತ ಹೇಳಿ!
ಲೇಖಕ, ಅನುವಾದಕ, ಕ್ವಿಝ್ ಮಾಸ್ಟರ್ ನಾ. ಸೋಮೇಶ್ವರ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ರಂಗಭೂಮಿ, ಸಿನೆಮಾ ಕಲಾವಿದೆ ಭಾರ್ಗವಿ ನಾರಾಯಣ ಅವರ ‘ನಾ ಕಂಡ ನಮ್ಮವರು’ ಕೃತಿಯಿಂದ.

*

ಈಗ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಯಶಸ್ವೀ “ಥಟ್ಟಂತ ಹೇಳಿ” ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಡಾ. ಸೋಮೇಶ್ವರ ಅವರೂ ಅದೇ ವಠಾರದಲ್ಲಿ ಇದ್ದವರು. ಪುರುಷೋತ್ತಮನಿಗೆ ಬಾಲ್ಯದ ಗೆಳೆಯ. ಇಬ್ಬರೂ ಒಂದೇ ಜೊತೆಯವರು. ಆಗಿನ ಮಲ್ಲೇಶ್ವರದಲ್ಲಿ ಇದ್ದ ಸೊಬಗನ್ನೂ ಸೋಮೇಶ್ವರರು  ವರ್ಣಿಸುವಾಗ ಬೇರೆಯದೇ ಲೋಕಕ್ಕೆ ಜಿಗಿಯತ್ತಾರೆ.

ಆ ವಠಾರದ ಪಕ್ಕದಲ್ಲಿಯೇ ಒಂದು ಕೆರೆ. ಅದನ್ನು ಚಿಕ್ಕಕೆರೆ ಎಂದು ಕರೆಯುತ್ತಿದ್ದರು. ಒಂದು ನೂರು-ಇನ್ನೂರು ಅಡಿಗಳ ದೂರದಲ್ಲಿ ಶಾಲೆ. ಸೋಮೇಶ್ವರ ಅವರು ಸರ್ಕಾರಿ ಶಾಲೆಗೆ ಹೋಗುತ್ತಿದ್ದರಂತೆ. ಪುರುಷೋತ್ತಮ ಅವರು ಪಕ್ಕದಲ್ಲೇ ಇದ್ದ “ಮಧುರವಾಣಿ” ಶಿಶುವಿಹಾರಕ್ಕೆ ಹೋಗುತ್ತಿದ್ದರಂತೆ. ಹತ್ತಿರದಲ್ಲೇ ಅನೇಕ ದೇವಸ್ಥಾನಗಳು, ಗಣೇಶ, ವೆಂಕಟೇಶ್ವರ, ಅಮ್ಮನವರು ಹೀಗೆ ಹತ್ತಾರು ದೇವಸ್ಥಾನಗಳು-ದೊಡ್ಡಮರಗಳು, ಹಳದಿ ಬಣ್ಣದ ಹೂವಿನ ಗುಲ್ಮೊಹರ್ ಮರಗಳು-ಬೆಳಗಿನ ಹೊತ್ತು ಕಣ್ಣು ಬಿಟ್ಟು ರಸ್ತೆಗೆ ಬಂದರೆ, ರಸ್ತೆಯೇ ಕಾಣದಂತೆ ಬಿದ್ದಿರುವ ಹಳದಿ ಹೂವುಗಳು-ರಸ್ತೆಯ ಮೇಲೆ ಚಿನ್ನದ ರತ್ನಗಂಬಳಿ ಹಾಸಿದಂತೆ ಭಾಸವಾಗಿ, ಮನಸ್ಸನ್ನು ಮುದಗೊಳಿಸುತ್ತಿತ್ತು ಎನ್ನುತ್ತಾರೆ ಡಾಕ್ಟರ್.

ಗೋವಿಂದರಾಜ್ ಅವರ ಪುಸ್ತಕಗಳ ಸಂಗ್ರಹದಲ್ಲೇ ಬಹಳಷ್ಟು ಪುಸ್ತಕಗಳನ್ನು ಓದುತ್ತಿದ್ದ ಈ ಗೆಳೆಯರಿಗೆ ಆಗಿನಿಂದಲೇ ಪುಸ್ತಕಗಳ ಬಗ್ಗೆ ಆಸಕ್ತಿ. ಈ ಇಬ್ಬರೂ ಸಾಹಿತ್ಯದ ವಿದ್ಯಾರ್ಥಿಗಳಲ್ಲದಿದ್ದರೂ ಸಾಹಿತ್ಯದಲ್ಲಿ ಅಪಾರ ಪ್ರೀತಿ, ಶ್ರದ್ಧೆ ಮೂಡಲು ಕಾರಣ ಪುರುಷೋತ್ತಮ ಅವರ ತಂದೆಯ ಪುಸ್ತಕಗಳ ಸಂಗ್ರಹ. ಆಮೇಲೆ ಈ ಪುಸ್ತಕಗಳ ಸಂಗ್ರಹವನ್ನು ಜೋಪಾನ ಮಾಡಲು ಕಷ್ಟವೆನಿಸಿದಾಗ, ಪುರುಷೋತ್ತಮನ ತಾಯಿ ಆ ಪುಸ್ತಕಗಳನ್ನೆಲ್ಲಾ, ಬೀದಿಯಲ್ಲಿ ಪುಸ್ತಕ ಮಾರಾಟ ಮಾಡುವವರಿಗೆ ಮಾರಿಬಿಟ್ಟರಂತೆ. ಆ ಪುಸ್ತಕಗಳ ಪೈಕಿ Thomas Alva Edison ಹಾಗೂ Madame Curie ಅವರ ಆತ್ಮಚರಿತ್ರೆಯನ್ನು ಇಂದಿಗೂ ಸೋಮೇಶ್ವರ ಅವರು ಜೋಪಾನದಿಂದ ಇಟ್ಟುಕೊಂಡಿದ್ದಾರೆ.

ಕಾಲೇಜಿಗೆ ಬಂದಾಗ ಗೆಳೆಯರಿಬ್ಬರೂ ಬೇರೆಯಾದರು-ಅಂದರೆ ಪುರುಷೋತ್ತಮ ಕಾಮರ್ಸ್ ತೆಗೆದುಕೊಂಡರೆ ಸೋಮೇಶ್ವರ ವಿಜ್ಞಾನವನ್ನು ಆರಿಸಿಕೊಂಡರು. ಆದರೆ ಗೆಳೆತನ ಹಾಗೇ ಮುಂದುವರೆಯಿತು. ಅಲ್ಲದೆ ಇದ್ದದ್ದೂ ಒಂದೇ ವಠಾರದ ಮನೆಗಳಲ್ಲಿ. ತಂದೆಯಂತೆಯೇ ಮಹಾಸ್ವಾಭಿಮಾನಿ ಯುವಕ ಪುರುಷೋತ್ತಮ, ಅಣ್ಣ ಪದವಿ ಮುಗಿಸಿ ಅಂಗಡಿ ತೆಗೆದು ವ್ಯಾಪಾರ ಮಾಡುತ್ತಿದ್ದನಂತೆ. ಪುರುಷೋತ್ತಮ ಕೂಡ ನ್ಯೂಸ್ ಪೇಪರ್ ಹಾಗೂ ಹಾಲು ವಿತರಣೆಯ ಏಜನ್ಸಿ ಆರಂಭಿಸಿ ತನ್ನ ಖರ್ಚಿನ ಹಣವನ್ನು ಸಂಪಾದಿಸಲು ಶುರುಮಾಡಿಕೊಂಡರು. ಸಂಜೆ ಒಂದಲ್ಲ ಒಂದು ನಾಟಕದ ಪ್ರದರ್ಶನಗಳಿಗೆ ನೇಪಥ್ಯದಲ್ಲಿ ಸಹಾಯ ಮಾಡುತ್ತಿದ್ದರು. ತನ್ನ ಈ ನ್ಯೂಸ್ ಪೇಪರ್ ಮತ್ತು ಹಾಲಿನ ವಿತರಣೆಯ ಜವಾಬ್ದಾರಿ ಹೆಚ್ಚಾದ ಮೇಲೆ ಪುರುಷೋತ್ತಮ ಓದನ್ನು ಅಲ್ಲಿಗೆ ಬಿಟ್ಟು ತನ್ನನ್ನು ಈ ಕೆಲಸದಲ್ಲೇ ತೊಡಗಿಸಿಕೊಂಡರಂತೆ.

ರಂಗಭೂಮಿ ಸಿನೆಮಾ ಕಲಾವಿದೆ ಭಾರ್ಗವಿ ನಾರಾಯಣ 

ಡಾ. ಸೋಮೇಶ್ವರ ಅವರಿಗೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿದಾಗ ಸೋಮೇಶ್ವರ ಅವರಷ್ಟೇ ಅಥವಾ ಅವರಿಗಿಂತಲೂ ಹೆಚ್ಚಾಗಿ ಈ ಪುರುಷೋತ್ತಮನಿಗೆ ಹೆಚ್ಚಿನ ಸಡಗರ. ಕಾಲೇಜಿಗೆ ಹಣ ಕಟ್ಟಲು ಸೋಮೇಶ್ವರ ಅವರಿಗೆ ಹಣ ಜೋಡಿಸುವುದು ಸ್ವಲ್ಪ ತೊಡಕಾಯಿತಂತೆ. ಹಣ ಕಟ್ಟಲು ವಾಯಿದೆ ಮುಗಿಯುವ ದಿನದ ಹೊತ್ತಿಗೆ ಹಾಗೂ ಹೀಗೂ ಹಣ ಹೊಂದಿಸಿದರೂ-ಕಟ್ಟಬೇಕಾದ ಮೊತ್ತಕ್ಕಿಂತ 350 ರೂಪಾಯಿ ಕಡಿಮೆ ಬಿದ್ದಿತಂತೆ. ಆ ಕಾಲಕ್ಕೆ ಕೆಳಮಧ್ಯಮ ವರ್ಗದವರಿಗೆ ಅದು ದೊಡ್ಡ ಮೊತ್ತವೇ. ಸೋಮೇಶ್ವರ ಅವರು ಅದನ್ನು ಹೊಂದಿಸಲಾಗದೆ ವೈದ್ಯನಾಗುವ ಹಂಬಲಕ್ಕೆ ತಿಲಾಂಜಲಿ ಕೊಡುವ ನಿರ್ಧಾರ ಮಾಡಿ ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗ-ಆ ವಿಷಯ ಗೆಳೆಯ ಮರುಷೋತ್ತಮನಿಗೆ ತಿಳಿಯಿತು. ಅಷ್ಟು ದೊಡ್ಡ ಮೊತ್ತವನ್ನು ಕೊಡಲು ಆತನಲ್ಲಿಯೂ ಹಣವಿರಲಿಲ್ಲ. ಸ್ನೇಹಿತನ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ” ಎಂಬ ಸಂಕಟ ಪುರುಷೋತ್ತಮನಿಗೆ, ಹೇಗಾದರೂ ಆ ಹಣವನ್ನು ಹೊಂದಿಸಿ ಗೆಳೆಯನಿಗೆ ಕೊಡಬೇಕೆಂಬ ಅದಮ್ಯವಾದ ಆಸೆ.

ತನ್ನ ಹಾಲಿನ ವ್ಯವಹಾರವನ್ನೂ ಅಣ್ಣ 8ನೇ ಕ್ರಾಸಿನಲ್ಲಿ ಇಟ್ಟಿದ ಅಂಗಡಿಯಲ್ಲಿಯೇ ನಡೆಸುತ್ತಿದ್ದ ಪುರುಷೋತ್ತಮ ತಕ್ಷಣ ಅಲ್ಲಿಗೆ ಹೋಗಿ ಅಂದು ಹಾಲಿನ ವ್ಯಾಪಾರದಲ್ಲಿ ಬಂದಿದ್ದ ಅಷ್ಟೂ ಹಣವನ್ನೂ ತಂದು ಆ 350  ರೂಪಾಯಿಯನ್ನು ಸ್ನೇಹಿತನಿಗೆ ಕೊಡುವ ಹೊತ್ತಿಗಾಗಲೇ ಸಂಜೆ 4 ಗಂಟೆ. ಮೆಡಿಕಲ್ ಕಾಲೇಜಿನ ಕಚೇರಿ  ಮುಚ್ಚುವುದು 5 ಗಂಟೆ. ಅಷ್ಟರೊಳಗೆ ಹಣ ಕಟ್ಟಲು ಸೋಮೇಶ್ವರ ಅವರು ಬರಬೇಕಾಗಿತ್ತು. ಮಲ್ಲೇಶ್ವರದಿಂದ ಬಂದು ಅವರು ಹಣ ಕಟ್ಟುವ ಹೊತ್ತಿಗೆ 4-50. ಈ ವಿಷಯವನ್ನು ಸೋಮೇಶ್ವರ ಅವರು ಹೇಳುವಾಗ ತುಂಬ ಭಾವುಕರಾದರು.

*

ಸೌಜನ್ಯ : ಅಂಕಿತ ಪುಸ್ತಕ 

ಇದನ್ನೂ ಓದಿ : Rajeshwari Tejaswi : ರಾಜೇಶ್ವರಿ ಮೇಡಮ್, ಬಂಗಾರವನ್ನು ಪತ್ತೆ ಹಚ್ಚುವುದು ಹೇಗೆಂದು ತೇಜಸ್ವಿಯವರಿಗೆ ಯಾಕೆ ಹೇಳಿಕೊಡಲಿಲ್ಲ?

Published On - 10:21 am, Wed, 15 December 21