ಅಮಾರೈಟ್ | Amaright : ಹಾಗಂತ ಉನ್ಮಾದದ ಪ್ರೀತಿ ಪ್ರೀತಿಯೇ ಅಲ್ಲ ಅಂತ ಹೇಳುವುದಕ್ಕಾಗುತ್ತದಾ? ಆದರೆ ಉನ್ಮಾದ ಅನ್ನುವುದು ಸನ್ನಿವೇಶದ ಸ್ಥಿತಿ, ಪ್ರೀತಿ ಅನ್ನುವುದು ಮನಸ್ಥಿತಿ. ಮನಸ್ಥಿತಿಯೇ ತಾನೇ ಯಾವಾಗಲೂ ಮುಖ್ಯವಾಗುವುದು. ಭಾವನೆ-ಕಾಮನೆಗಳ ಆಚೀಚೆಗೆ ಪ್ರೀತಿ ಆಗಾಗ ಬದ್ನಾಮ್ ಆಗಿ ಅಲೆಯುವುದನ್ನು ನೋಡಿ ಮರ್ಯಾದಸ್ಥರಂತೆ ನಿಂತುಬಿಡುವವರ ಕಣ್ಣೊಳಗೂ ಹೂವನ್ನು ನೋಡಿ ನಗುವ, ಮಳೆಬಂದಾಗ ಮಗುವಾಗುವ, ಕಷ್ಟಕ್ಕೆ ಮರುಗುವ, ಆಗಾಗ ಕಣ್ಣೀರಾಗುವ ಮನಸ್ಸಂತೂ ಇದ್ದೇ ಇರುತ್ತದಲ್ಲ. ಆ ಎಲ್ಲದರ ಪರಿಭಾಷೆಯನ್ನೂ ಪ್ರೀತಿ ಅಂತಲೇ ಕರೆಯಲಾಗುತ್ತದೆ ಅಂತ ಕೂತು ವಿವರಿಸುವುದಾದರೂ ಎಲ್ಲಿ? ಒಂದು ಪ್ರೀತಿಯ ಕತೆಯಲ್ಲಿ ಯಾವಾಗಲೂ ಅವನು ಮತ್ತು ಅವಳು ಇದ್ದೇ ಇರುತ್ತಾರೆ. ಅವರಿಬ್ಬರೂ ಇರುವಲ್ಲಿ ಪ್ರೀತಿ ಇದ್ದೇ ಇರುತ್ತದೆ, ಹೌದು. ಆದರೆ ಅವರಿಬ್ಬರಿಲ್ಲದಿದ್ದರೂ ಅಲ್ಲೊಂದು ಪ್ರೀತಿಯ ಕತೆ ಇರಲು ಸಾಧ್ಯವಿದ್ದೇ ಇದೆ.
ಭವ್ಯಾ ನವೀನ, ಕವಿ, ಲೇಖಕಿ, (Bhavya Naveen)
*
(ಬಿಲ್ಲೆ – 3)
ಇನ್ನೂ ಆರದ ಮಾಗಿಕಾಲ, ಆಗಲೇ ಒಳಗೊಳಗೆ ಧಗೆ ಶುರುವಾಗಿದೆ. ಈಗೀಗ ಗ್ರೀಷ್ಮ, ವಸಂತ, ಚೈತ್ರ ಸಿಕ್ಕಾಪಟ್ಟೆ ಬೆರೆತುಹೋಗಿದ್ದಾರೆ, ಯಾರ್ಯಾರು ಅಂತ ಗುರುತೇ ಸಿಗುತ್ತಿಲ್ಲ. ಒಬ್ಬರೊಳಗೊಬ್ಬರು ಕಳೆದು ಹೋಗುತ್ತಿರುತ್ತಾರೆ, ನಾವು ಹುಡುಕಿದರೆ ಕಾಣುವುದೂ ಇಲ್ಲ. ಯಾರ ಹಂಗಿಲ್ಲದ ಈ ಎಲ್ಲಾ ಕಾಲಮಾನಗಳು ಎಗ್ಗಿಲ್ಲದೇ ನಮ್ಮನ್ನು ಆಳುತ್ತಿರುವ ಕಾಲದಲ್ಲೂ ನಾವು ಮಳೆಯನ್ನು ಒಲಿಸಿಕೊಂಡು – ಬಿಸಿಲು ಅರಗಿಸಿಕೊಂಡು ಹೂವು ಅರಳಿಸುತ್ತಿದ್ದೇವೆ. ದಾರಿ ತುಂಬಾ ಹಾದುಹೋಗುವ ಅಪರಿಚಿತ ಸಪ್ಪಳಗಳನ್ನೂ ಕರೆದು ಮಾತಾಡಿಸಿ, ಕೂತು ಹರಟೆಯಾಗಿ, ತಿರುವಲ್ಲಿ ಬಿಟ್ಟು ಬರುತ್ತೇವೆ. ಒಮ್ಮೊಮ್ಮೆ ನೆನಪಿಸಿಕೊಂಡು ಕೆಲವೊಮ್ಮೆ ಮರೆತೇ ಬಿಟ್ಟಿರುತ್ತೇವೆ. ಆದರೂ ನಾವಿದನ್ನೆಲ್ಲಾ ಮಾಡುತ್ತೇವೆ, ಮಾಡುತ್ತಲೇ ಇರುತ್ತೇವೆ. ‘ಪ್ರೀತಿ’ ಎನ್ನುವ ಮಾಯೆಯ ಮಾಯೆ ನಮ್ಮನ್ನು ಹೀಗೆ ಮಾಡುವಂತೆ ಪ್ರೇರೇಪಿಸುತ್ತದೆ. ‘ಪ್ರೀತಿ ಎನ್ನುವ ಮಾಯೆ’!
ಇದು ವ್ಯಾಲೆಂಟೈನ್ ಮಂಥ್ ಅನ್ನುವುದು ಒಂದು ನೆಪವೇ ಆದರೂ ಪ್ರೀತಿಯ ಬಗ್ಗೆ ಮಾತಾಡುವುದಕ್ಕೆ ವರ್ಷಪೂರ್ತಿ ಕಾರಣಗಳು ಸಿಕ್ಕೇಸಿಗುತ್ತವೆ. ಪ್ರೀತಿ ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾಗಿಯೂ ಅತ್ಯಂತ ಖಾಸಗಿ. ಹಾಗಾಗಿಯೇ ಅಂತಹ ಮಾಯಕದ ಸಂಗತಿಯನ್ನು ಬರೆಯುವಾಗ ಪದಗಳು ತಂತಾನೇ ಕಾವ್ಯಾತ್ಮಕವಾಗುತ್ತವೆ. ಹಾಗಂತ ಅವು ಅಪ್ರಯತ್ನಪೂರ್ವಕವಾಗಿ ಹಾಗಾಗುತ್ತವೆ ಅಂದುಕೊಂಡರೆ ಅದು ಅರ್ಧಸತ್ಯ. ಪ್ರೀತಿಯನ್ನು ವಿವರಿಸುವಾಗ ಬಹುತೇಕರಿಗೆ ಅನಿವಾರ್ಯವಾಗಿ ಕವಿಯಾಗುವ ಅವಶ್ಯಕತೆ ಬೀಳುತ್ತದೆ ಎಂದರೆ ಅದಕ್ಕೆ ಕಾರಣ ಪ್ರೀತಿ ಅಷ್ಟು ಸುಲಭಕ್ಕೆ ವಿವರಿಸಿದರೆ ಮುಗಿಯುವುದಿಲ್ಲ ಅನ್ನುವುದು ಒಂದಾದರೆ… ಪ್ರೀತಿಯನ್ನು ಸುಂದರವಾಗಿ ಮತ್ತು ಗೌರವಯುತವಾಗಿ ಗ್ರಹಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಅನ್ನುವುದು ಎರಡನೇ ಕಾರಣ. ವಿಚಾರಗಳನ್ನು ಗೌರವದಿಂದ ನಡೆಸಿಕೊಳ್ಳಸಿದ್ದರೆ ಹೇಗೆ ಅಪಚಾರವಾಗುತ್ತದೋ, ಪ್ರೀತಿಯನ್ನು ಗೌರವದಿಂದ ಅರ್ಥೈಸಿಕೊಳ್ಳದಿದ್ದರೂ ಹಾಗೆಯೇ.
ನಿಮಗೆ ಗೊತ್ತಿರಲಿ ಅಂತ ಹೇಳುತ್ತೇನೆ, ಕೆಲವೊಂದು ವಿಚಾರಗಳನ್ನು ಬರೆಯುವಾಗ ಗದ್ಯವೂ ಪದ್ಯದ ಸೋಗು ಹಾಕಿಕೊಳ್ಳುತ್ತಿದೆಯಾದರೆ, ಅಲ್ಲಿ ಬಹಳಷ್ಟು ಸಾರ್ತಿ ನೇರವಾಗಿ ಹೇಳಲು ಬಿಡದಂತೆ ಏನೋ ಒಂದು ಸಂಗತಿ ನಮ್ಮನ್ನು ಹಿಡಿದಿಟ್ಟಿರುತ್ತದೆ ಅಂತಲೇ ಅರ್ಥ. ಹಾಗಂದುಕೊಂಡಿರುವುದು ಶುದ್ಧ ನನ್ನ ಅಭಿಪ್ರಾಯವೇ ಆಗಿರುವುದರಿಂದ ನಾನದನ್ನು ಬೇರೆಯವರ ಮೇಲೆ ಹೇರುವುದಿಲ್ಲ. ನಿಜ ಹೇಳಬೇಕೆಂದರೆ, ನಾನು ಬರೆಯಲು ಶುರುಮಾಡಿದ ಕಾಲಕ್ಕೆ ಪ್ರೀತಿಯಷ್ಟು ಕಾಂಪ್ಲಿಕೇಟೆಡ್ ಸಬ್ಜೆಕ್ಟ್ ಮತ್ತೊಂದು ಇರಲೇ ಇಲ್ಲವೇನೋ ಅಂದುಕೊಂಡಿದ್ದೆ. ಎಲ್ಲೆಲ್ಲೂ ಪ್ರೀತಿಯೇ ಇದ್ದಾಗ್ಯೂ, ಆಗೆಲ್ಲಾ ನಾನು ಅಪ್ಪಿತಪ್ಪಿಯೂ ಪದ್ಯದ ನಡುವೆ ‘ಪ್ರೀತಿ’ಯನ್ನು ತಂದ ಉದಾಹರಣೆಗಳಿಲ್ಲ. ಅಪ್ಪಾಮ್ಮನ ಮೇಲಿನ ಪ್ರೀತಿ, ಒಡಹುಟ್ಟಿದವರ ಮೇಲೆ, ಸ್ನೇಹಿತರ ಮೇಲೆ ಮತ್ತು ದೇಶ-ಭಾಷೆಯ ಮೇಲಿನ ಪ್ರೀತಿ, ಪ್ರಕೃತಿಯ ಮೇಲಿನ ಪ್ರೀತಿ ಅಂತ ಬಿಡಿಸಿ ಬಿಡಿಸಿ ಬರೆಯಬೇಕಾದ ದರ್ದಿಗಿಂತ ಪ್ರೀತಿರಹಿತ ಸಂಗತಿಗಳ ಮೇಲೆ ಬರೆಯುವುದು ಹೆಚ್ಚು ಹಿತ ಮತ್ತು ಸುಲಭ ಅನ್ನಿಸುತ್ತಿತ್ತು. ಬಹುಶಃ, ಬಹುತೇಕರಿಗೂ ಈ ಸಮಸ್ಯೆ ಇರುವುದರಿಂದಲೇ ಕಾವ್ಯದಲ್ಲಿ ಪ್ರೀತಿಗಿಂತ ನೋವೇ ಬಹಳ ಮುಖ್ಯವಾಗಿ ಬರೆಯಲ್ಪಡುತ್ತದೆ. ಈಗಂತೂ ನಮ್ಮಲ್ಲಿ ನೋವಿಲ್ಲದ ಕಾವ್ಯಗಳು ಗೆಲ್ಲುವುದೇ ಕಡಿಮೆ.
*
ಇದನ್ನೂ ಓದಿ : Hopscotch : ಅಮಾರೈಟ್? : ಅಗಾ ಬಿಲ್ಲೆ ಎಸೆದಾಯ್ತು! ಇಂದಿನಿಂದ ಭವ್ಯಾ ನವೀನ ಅಂಕಣ ಆರಂಭ
ಈ ಮಧ್ಯೆ ಪ್ರೀತಿ ಕಾಡುವುದಿಲ್ಲ ಅಂತ ಹೇಳಿದರೆ ಸುಳ್ಳಾಗುತ್ತದೆ. ಆದರೆ ಪ್ರೀತಿಯ ಸೋ ಕಾಲ್ಡ್ ವ್ಯಾಖ್ಯಾನ ಮತ್ತು ಊಹೆಗಳು ಪ್ರೀತಿಯನ್ನು ಬೇರೆ ಬೇರೆಯದೇ ಆದ ರೀತಿಯಲ್ಲಿ ಗ್ರಹಿಸಲ್ಪಟ್ಟು ಸೀದಾ ಬರಹಗಾರನಿಗೇ ಆರೋಪಿಸಲ್ಪಡುತ್ತವೆ ಆದ್ದರಿಂದ ಪ್ರೀತಿಯ ಬಗ್ಗೆ ಬರೆಯಲಿಲ್ಲ. ಆದರೆ ಬರೆದಿದ್ದೆಲ್ಲವೂ ಪ್ರೀತಿಯೇ ಬರೆಸಿದ್ದು. ಪ್ರೀತಿಯನ್ನು ಆರೋಪಿಸಿದರೆ ತಪ್ಪೇನು? ಅಂದುಕೊಳ್ಳುತ್ತೀರೇನೋ.. ಅದು ಸರಿಯೂ ಹೌದು. ಪ್ರೀತಿ ಬದುಕಿನ ಜೀವದ್ರವ್ಯ. ಹಾಗಿರುವಾಗ ಅದೆಷ್ಟಿದ್ದರೂ ಸಾಲುವುದಿಲ್ಲ. ಯಾರು ಕೊಟ್ಟಿದ್ದಾದರೂ, ಚೆಲ್ಲಿದ್ದಾದರೂ, ಹೇರಿದ್ದಾದರೂ ಸರಿ ಪ್ರೀತಿ ಸಿಕ್ಕರೆ ಭರ್ತಿ ತುಂಬಿಟ್ಟುಕೊಳ್ಳಬೇಕು ಎನ್ನುವುದನ್ನು ನಾನೂ ನಂಬುವವಳೇ. ಆದರೆ ಪ್ರೀತಿ ಅಂದರೇನು ಅನ್ನುವುದರ ಬಗ್ಗೆ ಅಸ್ತಿತ್ವದಲ್ಲಿರುವ ಕಲ್ಪನೆಗಳಿಗೂ, ನಿಜವಾಗಿಯೂ ಪ್ರೀತಿ ಅಸ್ತಿತ್ವದಲ್ಲಿರುವುದಕ್ಕೂ ನಡುವೆ ಸಾಮ್ಯತೆಗಳಿಗಿಂತ ಜಾಸ್ತಿ ಅರ್ಥವ್ಯತ್ಯಾಸಗಳೇ ಇರುವಾಗ ಪ್ರೀತಿಯ ಬಗ್ಗೆ ಬರೆಯುವುದಕ್ಕೆ ಬಹುತೇಕರಿಗೆ ಭಯ. ಪ್ರೀತಿಯ ಹೆಸರಿನಲ್ಲಿ ಎಲ್ಲವನ್ನೂ ಸೀದಾ ಸೀದಾ ಕಟಕಟೆಗೇರಿಸಿ ವಾದಕ್ಕಿಳಿಯುವ ಜಗತ್ತಿನಲ್ಲಿ ‘ಪ್ರೀತಿ’ ಕೇವಲ ಹರೆಯದ ‘ಉನ್ಮಾದ’ವಷ್ಟೇ ಆಗಿ ಹೆಚ್ಚೆಚ್ಚು ಕೇಳಿಸುತ್ತಿರುವಾಗ ಇನ್ನೇನು ಮಾಡಬಹುದು?
ಹಾಗಂತ ಉನ್ಮಾದದ ಪ್ರೀತಿ ಪ್ರೀತಿಯೇ ಅಲ್ಲ ಅಂತ ಹೇಳುವುದಕ್ಕಾಗುತ್ತದಾ? ಆದರೆ ಉನ್ಮಾದ ಅನ್ನುವುದು ಸನ್ನಿವೇಶದ ಸ್ಥಿತಿ, ಪ್ರೀತಿ ಅನ್ನುವುದು ಮನಸ್ಥಿತಿ. ಮನಸ್ಥಿತಿಯೇ ತಾನೇ ಯಾವಾಗಲೂ ಮುಖ್ಯವಾಗುವುದು. ಭಾವನೆ-ಕಾಮನೆಗಳ ಆಚೀಚೆಗೆ ಪ್ರೀತಿ ಆಗಾಗ ಬದ್ನಾಮ್ ಆಗಿ ಅಲೆಯುವುದನ್ನು ನೋಡಿ ಮರ್ಯಾದಸ್ಥರಂತೆ ನಿಂತುಬಿಡುವವರ ಕಣ್ಣೊಳಗೂ ಹೂವನ್ನು ನೋಡಿ ನಗುವ, ಮಳೆಬಂದಾಗ ಮಗುವಾಗುವ, ಕಷ್ಟಕ್ಕೆ ಮರುಗುವ, ಆಗಾಗ ಕಣ್ಣೀರಾಗುವ ಮನಸ್ಸಂತೂ ಇದ್ದೇ ಇರುತ್ತದಲ್ಲ. ಆ ಎಲ್ಲದರ ಪರಿಭಾಷೆಯನ್ನೂ ಪ್ರೀತಿ ಅಂತಲೇ ಕರೆಯಲಾಗುತ್ತದೆ ಅಂತ ಕೂತು ವಿವರಿಸುವುದಾದರೂ ಎಲ್ಲಿ? ಒಂದು ಪ್ರೀತಿಯ ಕತೆಯಲ್ಲಿ ಯಾವಾಗಲೂ ಅವನು ಮತ್ತು ಅವಳು ಇದ್ದೇ ಇರುತ್ತಾರೆ. ಅವರಿಬ್ಬರೂ ಇರುವಲ್ಲಿ ಪ್ರೀತಿ ಇದ್ದೇ ಇರುತ್ತದೆ, ಹೌದು. ಆದರೆ ಅವರಿಬ್ಬರಿಲ್ಲದಿದ್ದರೂ ಅಲ್ಲೊಂದು ಪ್ರೀತಿಯ ಕತೆ ಇರಲು ಸಾಧ್ಯವಿದ್ದೇ ಇದೆ.
*
ಇದನ್ನೂ ಓದಿ : Hopscotch : ಅಮಾರೈಟ್ ; ಮಾತನಾಡಬೇಕಾ ಅಂಟು ಬಿಟ್ಟಿರುವ ‘ಸೋಲ್‘ ಮತ್ತು ಡಿಸೈನರ್ ದೇಹವನ್ನು ಅಂಟಿಸುವ ಬಗ್ಗೆ
ನಿಮಗೆರಡು ಕತೆ ಹೇಳುತ್ತೇನೆ ಕೇಳಿ.
*
ಮೊದಲ ಕತೆಯಲ್ಲಿ ಅವರಿಬ್ಬರು ಇದ್ದೇ ಇದ್ದಾರೆ. ಅದೇ, ಅವಳು ಮತ್ತು ಅವನು. ಅವರಿಬ್ಬರ ಮಧ್ಯದಲ್ಲಿ ಹರಿಯುವ ನದಿಯೊಂದಿದೆ. ಪ್ರತಿದಿನ ಅವರಿಬ್ಬರೂ ಅವರವರ ತೀರದಲ್ಲಿ ನದಿಯಂಚಿಗೆ ಅಂಟಿಕೊಂಡಂತೆ ನಡೆಯುತ್ತ ಹನಿಗಳನ್ನು ಮುಟ್ಟುತ್ತಾರೆ. ಮತ್ತು ಆಗ ಪರಸ್ಪರ ಮುಟ್ಟಿಕೊಂಡಷ್ಟೇ ಸಂಭ್ರಮಿಸುತ್ತಾರೆ. ಅವಳು, ಅವನು ಮತ್ತು ನಿರಂತರ ಹರಿಯುತ್ತಲೇ ಇರುವ ನದಿ. ಇಲ್ಲಿ ಪ್ರೀತಿ ಅಂದರೆ ಏನು? ಯಾರು? ಅದರ ಉದ್ದೇಶವೇನು? ಅನ್ನುವುದನ್ನು ತಿಳಿಯುವುದಕ್ಕೆ ಶತಮಾನಗಳೇ ಮುಗಿದಿವೆ. ತಮಾಶೆಯ ವಿಚಾರವೆಂದರೆ ನಡು-ನಡುವೆ ಎಷ್ಟೋ ಸಲ ನದಿ ಬತ್ತಿದ್ದಿದೆ. ಖಾಲಿ ದಡವೇ ಇರುವಾಗಲೂ ಅವರು ಇಲ್ಲದ ನದಿಯ ಅಂಚಿನಲ್ಲಿ ಎಂದಿನಂತೆ ಅಲೆದರೆ ವಿನಃ ಅವಳು ಮತ್ತು ಅವನು ಪರಸ್ಪರ ಬರಡು ನದಿಯನ್ನು ದಾಟಲೇ ಇಲ್ಲ.
‘ಇದೇನ್ ಮಾರಾಯ್ತಿ ಅರ್ಥ ಆಗ್ದೆ ಇರೋ ತರ ಬರಿತಿಯಾ’ ಅನ್ನುವ ಕಂಪ್ಲೇಟ್ ತೆಗೆದುಕೊಳ್ಳುವುದಕ್ಕೆ ತಯಾರಾಗಿಯೇ ಈ ಕಾಂಪ್ಲಿಕೇಟೆಡ್ ಕತೆ ಹೇಳಿದ್ದೇನೆ. ‘ಅವನು’ ಎನ್ನುವವನು ಜಗತ್ತು ಹೇಳುವ ಪ್ರೀತಿಯಾಗಿದ್ದಿದ್ದರೆ, ಅವಳು ಹೇಗಾದರೂ ನದಿ ದಾಟಿ ಅವನಲ್ಲಿಗೆ ಬರುತ್ತಿದ್ದಳು. ‘ಅವಳು’ ಅನ್ನುವವಳು ಪ್ರೀತಿಯಾಗಿದ್ದರೂ ಅವನು ಈಜಿ ಇವಳಲ್ಲಿಗೆ ಬರುತ್ತಿದ್ದ. ಇನ್ನು ‘ನದಿ’ ಪ್ರೀತಿಯಾಗಿದ್ದಿದ್ದರೆ, ನದಿ ಬತ್ತಿದ ದಿನ ಅವರಿಬ್ಬರೂ ಮುಗಿದು ಹೋಗುತ್ತಿದ್ದರು. ಆದರೆ ಹೀಗಾಗುವುದಿಲ್ಲ. ಅವರವರ ಬದುಕು ಬದಲಾಗದೆ ಹಾಗೆಯೇ ನಡೆದುಕೊಂಡು ಹೋಗುತ್ತಿರುತ್ತದೆ.
ಯಾಕೆಂದರೆ ಅಲ್ಲಿ ಅವನು, ಅವಳು, ನದಿ ಆ ಮೂವರ ಆಚೆಗೂ ಒಂದು ವಾತಾವರಣವಿತ್ತು. ಬತ್ತಿದ ನದಿಯ ಒಡಲಲ್ಲಿದ್ದ ಜಾರುಕಲ್ಲುಗಳು-ಬಂಡೆಗಳು, ಮುಳುಗಡೆಯಾದ ಮನೆಯೊಂದರ ಅಡಿಪಾಯ ಅವೆಲ್ಲದರ ಮೇಲೆ ಅವನಿಗೆ ಅದೆಂಥದೋ ಸೆಳೆತ. ಈ ಕಡೆ, ನದಿ ತೀರದ ಮಾಮರದಲ್ಲಿ ಹಾಡಿಕೊಳ್ಳುವ ಕೋಗಿಲೆ ಮೇಲೆ ಅವಳಿಗೆ ಮಮತೆ ಉಕ್ಕಿರುವ ಸಾಧ್ಯತೆಯನ್ನು ಯಾರು ಇಲ್ಲ ಅನ್ನಬಹುದು. ಪ್ರೀತಿಯ ಕತೆ ಹೀಗೆ. ಒಂದು ಆಸೆ ಮತ್ತು ಆಕರ್ಷಣೆ, ಒಂದು ನಂಬಿಕೆ ಮತ್ತು ನಿರೀಕ್ಷೆ. ಒಂದು ಅಂತರ ಮತ್ತೊಂದು ವಿರಹ. ಒಂದು ಕನಸು ಮತ್ತೊಂದು ನೆನಪು, ಒಮ್ಮೆ ವಿಸ್ತಾರವಾಗಿ ಹರಡಿಕೊಳ್ಳುವ ಪುರುಷತ್ವ, ಮತ್ತೊಮ್ಮೆ ನಿರಂತರ ಒಸರುತ್ತಲೇ ಇರುವ ತಾಯ್ತನ. ಇಲ್ಲಿ ಹೇಗಂತ ಪ್ರೀತಿಯನ್ನು ವ್ಯಾಖ್ಯಾನಿಸುವುದು?
*
ಇದನ್ನೂ ಓದಿ : Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’
ಎರಡನೇ ಕತೆ ಇನ್ನೊಂದು ತರಹದ್ದು,
ನಮ್ಮೂರಿನ ನಟ್ಟನಡುವೆ ವರ್ಷಾನುವರ್ಷಗಳಿಂದ ಒಂದು ದೇವಸ್ಥಾನವಿತ್ತು. ದಾರಿ ಹೋಕರೆಲ್ಲಾ ನಿಂತೋ, ನಡೆಯುತ್ತಲೋ, ಓಡುತ್ತಲೋ ಹೇಗೋ ಕಣ್ಣಲ್ಲೇ ವಿನೀತವಾಗಿ ರೆಪ್ಪೆ ತಗ್ಗಿಸಿ ಮುಂದಕ್ಕೆ ಹೋಗುತ್ತಿದ್ದ ಜಾಗ ಅದು. ಆದರೆ ಒಂದು ದಿನ ಊರು ದೊಡ್ಡದಾಯಿತು. ಜನ ದೊಡ್ಡವರಾದರು. ಈಗ ಅವರಿಗೆ ಈ ರಸ್ತೆ ಸಾಲುತ್ತಿಲ್ಲ ಅನ್ನಿಸಿತು. ರಸ್ತೆ ದೊಡ್ಡದು ಮಾಡುವುದಕ್ಕೆ ದೇವಸ್ಥಾನ ಅನ್ಯಾಯವಾಗಿ ಅಡ್ಡ ಬಂತು. ತುಂಬಾ ಚರ್ಚೆಯ ನಂತರ ಅಂದು ದೇವಸ್ಥಾನ ಒಡೆಯಲೇಬೇಕೆಂಬ ತೀರ್ಮಾನವಾಯಿತು.
ಸದ್ಯ! ಯಾರೋ ಪುಣ್ಯಾತ್ಮರು ಅಲ್ಲೇ ಹಿಂದೆ ದೇವರಿಗೆ ಜಾಗ ಮಾಡಿಕೊಟ್ಟರು. ಮುಂದಿದ್ದ ದೇವರಿಗೆ ಹಿಂದೆ ಒಂದು ಜಾಗ ಗೊತ್ತು ಮಾಡಿ ಸುಂದರ ದೇವಾಲಯ ಕಟ್ಟಲು ಯೋಜನೆಯಾಯಿತು. ತಾತ್ಕಾಲಿಕ ವ್ಯವಸ್ಥೆಯಲ್ಲಿ, ಅಲ್ಲಿದ್ದ ದೇವರನ್ನು ದಾರಿಹೋಕ ಭಕ್ತರಿಗೆ ಗೊತ್ತಿಲ್ಲದ ಜಾಗಕ್ಕೆ ಸ್ಥಳಾಂತರಿಸಲಾಯಿತು. ದಿನಗಳುರುಳಿದವು. ವರ್ಷವೇ ಆಗಿದೆ ಅಂದುಕೊಳ್ಳಿ. ನಮ್ಮ ದೇವರ ಅರಮನೆ ಇನ್ನೂ ಮುಗಿದಿಲ್ಲ, ಹಾಗಾಗಿ ದೇವರಿನ್ನೂ ಬಂದಿಲ್ಲ. ಆದರೂ ಆ ಜಾಗದಲ್ಲಿ, ಆ ತಿರುವಿನಲ್ಲಿ ಅವರೆಲ್ಲರ ರೆಪ್ಪೆಗಳು ತಂತಾನೇ ತಗ್ಗುತ್ತವೆ. ನಡೆದುಕೊಂಡು ಹೋಗುವವರ ಕೈಗಳು ಹಾಗೇ ಜೋಡಿಸಿಕೊಳ್ಳುತ್ತವೆ. ಅದ್ಯಾವುದೋ ವಿಚಿತ್ರ ಸೆಳೆತ, ನಂಬಿಕೆಗೆ ಅಲ್ಲಿಂದ ಮಾನಸಿಕವಾಗಿ ದೇವರನ್ನು ಇಲ್ಲವಾಗಿಸಲು ಸಾಧ್ಯವಾಗಿಲ್ಲ.
ಅಂತಹದ್ದೊಂದು ಸೆಳೆತ, ಭಕ್ತಿ ಮತ್ತು ನಂಬಿಕೆಯೂ ಪ್ರೀತಿಯೇ ತಾನೇ. ಇಲ್ಲ ಅನ್ನುವ ಸೊಲ್ಲೇ ಇಲ್ಲದೆ ಸುಮ್ಮನೆ ಕಾಯುವುದು, ಕಾಯುವುದು ಮತ್ತು ಕಾಣುವುದು. ಸಿಂಗರಿಸಿಕೊಳ್ಳುತ್ತಾ, ಬಣ್ಣದ ಗೆರೆ ಎಳೆಸಿಕೊಂಡು ಚಂದದ ಬಾಗಿಲು ಸಿಕ್ಕಿಸಿಕೊಳ್ಳುತ್ತಿರುವ ಗರ್ಭಗುಡಿಗೇ ದೇವರು ಬರುತ್ತಾನೇನೋ, ಬಹುಶಃ. ಆದರೆ ದೇವರು ಹೊರಗಿದ್ದಾಗಲೂ, ಒಳಗಿದ್ದಾಗಲೂ, ಎಲ್ಲಿದ್ದಾಗಲೂ ದೇವರೇ, ಪ್ರೀತಿಯ ಹಾಗೆ.
ಅಥವಾ ಹೀಗೆ ಹೇಳಬಹುದೇನೋ.. ಪ್ರೀತಿ ಹೇಗಿದ್ದರೂ, ಯಾರದ್ದಾಗಿದ್ದರೂ.. ಪ್ರೀತಿ ಪ್ರೀತಿಯೇ, ದೇವರ ಹಾಗೆ.
(ಮುಂದಿನ ಬಿಲ್ಲೆ : 22.2.2022)
ಹಿಂದಿನ ಬಿಲ್ಲೆ : Hopscotch : ಅಮಾರೈಟ್ ; ‘;ಯಾರೋ ಚಂದಗೆ ಖಾರಹಚ್ಚಿದ ಚಾಕುವಿನಿಂದ ಬೆರಳ ತುದಿಗೆ ಗೀರಿದಂತೆ!’
Published On - 4:47 pm, Tue, 8 February 22