ಪ್ರೀತಿ | Love : ಅವಳು ಸಾಗಿ ಹೋದ ದಾರಿ, ತೋಯಿಸಿದ ಮಳೆ… ಮುನಿಸಿಕೊಂಡ ಋತುಮಾನ, ಪ್ರೇಮಿಗಳಿಬ್ಬರೂ ಕೂತು ಮಾತಾಡಿದ ಬೆಟ್ಟದ ಮೇಲಿನ ಒಬ್ಬಂಟಿ ಮರ… ಅವರೆಲ್ಲ ಮಾತು ಮೌನ ದುಮ್ಮಾನ ಸುಮ್ಮಾನಗಳನ್ನು ತೆಪ್ಪಗೆ ಆಲಿಸಿದ ಬೆಟ್ಟದ ತಪ್ಪಲು. ಮೊದಲ ಬಾರಿ ಕೂತು ಮಾತಾಡಲು ನೆಪವಾದ ಬೈಟು ಕಾಫೀ… ಹೋಟೆಲಿನ ಮೂಲೆಯ ಆ ಖಾಯಂ ಟೇಬಲ್ಲು. ಕೈ ಕೈ ಬೆರಳು ತಾಗಿ ಮೊದಲ ಸ್ಪರ್ಶಕೆ ಈಡುಮಾಡಿದ ಬಸ್ನ ರಶ್ಶೂ.. ಇಬ್ಬರನೂ ನೋಡಿ ಮುಸಿಮುಸಿ ನಗುತ್ತಿದ್ದ ಕಾಲೇಜಿನ ಕ್ಯಾಂಪಸ್ಸು… ಮಾತಿಲ್ಲ ಕತೆಯಿಲ್ಲ ನನಗೆ ನೀನು ನಿನಗೆ ನಾನು ಹಾಡಿಕೊಂಡ ಮೌನರಾಗ, ಏನೊಂದು ಹೇಳದೆ ಏನೆಂದು ಅರ್ಥವಾಗದೆ ಪರಸ್ಪರ ಇಬ್ಬರನೂ ಪ್ರೀತಿಗೆ ಈಡುಮಾಡಿದ ವಾಟ್ಸಪ್ ನ ಇಮೋಜಿಗಳು. ಆ ತುಂಡು ಮಾತು ಹೇಳಲು ಯಬಡನಂತಾಡಿ ಹೇಗೋ ಕೈಗಿಟ್ಟು ಹೋದ ಗುಲಾಬಿ ಮೊಗ್ಗು. ಎಷ್ಟೋ ರಾತ್ರಿ ನಿದ್ದೆಗೆಟ್ಟು ಬರೆದ ನಾಲ್ಕು ಸಾಲಿನ ಗ್ರೀಟಿಂಗು. ಹೀಗೆ ನೆನಪುಗಳ ತೇರು.
ಲಿಂಗರಾಜ ಸೊಟ್ಟಪ್ಪನವರ, ಕವಿ (Lingaraj Sottappanavar)
*
ಭಾಗ 1
ಪ್ರೇಮಿ ಯಾವತ್ತಿಗೂ ರಾಜಪಥಿಕ. ಅವನು ನೆಲದ ಮೇಲೆ ನಡೆಯುತ್ತಾನಾದರೂ ಅವನು ಯಾವಾಗಲೂ ಚಂದ್ರನಂತೆ ತೇಲುತ್ತಿರುತ್ತಾನೆ. ಅವನಿಗೆ ಮುಗಿಲು ಮೂರೆ ಗೇಣು. ಚಂದಿರನ ಬೆಳದಿಂಗಳನು ಮೊಗೆಮೊಗೆದು ಕುಡಿಯಬೇಕು ಅವನು. ಬೆಳದಿಂಗಳಿಗೆ ಭೂಮಿ ಒಂದಿಡೀ ಹೂವಾಗಿ ಅರಳಬೇಕು. ಅಂಥದ್ದೊಂದು ಆಮೋದ ಸಲ್ಲಾಪ ಸಂಭವಿಸಲೆಂದು ಪ್ರೀತಿ ಸದಾ ಹಂಬಲಿಸುತ್ತದೆ.
ನಜರ್ ಯೇ ಹಮಾರೀ ನ ಲಗ್ ಜಾಯೇ ತುಮ್ ಕೋ
ಯೇ ಸೋಚಕರ್ ತುಮ್ ಕೋ ಕಮ್ ದೇಖತೇ ಹೈ
ಪ್ರೇಮಿಯ ಪಾಲಿಗೆ ಅವಳು ಯಾವತ್ತಿದ್ದರೂ ಅಪ್ಸರೆ. ಚಿರಯೌವನೆ. ಅವನ ಉದ್ಧಾರಕ್ಕಾಗಿ ಜಾರಿ ಬಿದ್ದ ಉಲ್ಕೆ. ಕೆಟ್ಟ ಕಾಲಮಾನದಲ್ಲಿ ಒದಗಿ ಬಂದ ವಸಂತ. ಅವಳು ಅವನ ಪಾಲಿನ ನಸೀಬು. ಮತ್ತೆ ಅವನು ಅವಳ ಪಾಲಿನ ನಸೀಬು ಆಗಲು ಬಯಸುತ್ತಾನೆ.
ಮಿಲೆ ಹೋ ತುಮ್ ಹಮ್ಕೋ ಬಡೀ ನಸೀಬೋಂ ಸೇ
ಚುರಾಯಾ ಹೈ ಮೈನೇ ಕಿಸಮತ್ ಕೀ ಲಖೀರೋಂ ಸೇ
ಪ್ರೇಮಿಯ ಬಯಕೆಯೆಂಬುದು ಅದೆಷ್ಟು ಬೆಚ್ಚನೆಯ ಗೂಡು. ಅಲ್ಲ್ಯಾವ ಪರಿತಾಪಗಳಿಲ್ಲ ಬವಣೆಗಳಿಲ್ಲ. ಎಲ್ಲ ನಡುಮಧ್ಯಾಹ್ನಗಳು ಎಷ್ಟು ಸಲೀಸು ಇಳಿಸಂಜೆಯಾಗಿಬಿಡುತ್ತವೆ. ಪ್ರೇಮಿಯ ಒಂದಿಡಿ ಬದುಕು ಹೀಗೆ ಸವೆಯುತ್ತದೆ.
ಆನೇ ಸೇ ಉಸಕೀ ಆಯೇ ಬಹಾರ್
ಜಾನೇ ಸೇ ಉಸಕೀ ಜಾಯೇ ಬಹಾರ್
ಅವಳಿಲ್ಲದೆ ಯಾವ ಹೂವು ಅರಳವು… ಎಂಬ ಅಪಾರ ನಂಬುಗೆ ಎಷ್ಟು ಅಗ್ನಿಕುಂಡಗಳನ್ನು ಹಾಯ್ದು ಬಂದರೂ ನಿಗಿ ನಿಗಿ ಹೊಳೆಯುತ್ತದೆ. ಪ್ರೇಮಿಯ ಎದೆ ಹಸಿರನ್ನು ಯಾವ ಬರಗಾಲವೂ ಕಸಿಯಲಾರದು. ಅವಳ ಹೊರತಾದ ಯಾವ ಸಡಗರ ಸಂಭ್ರಮವೂ ಅವನದ್ದಲ್ಲ.
ತೂ ಆತಾ ಹೈ ಸೀನೆ ಮೇ.. ಜಬ್ ಜಬ್ ಸಾಂಸೇ ಭರತೀ ಹೂಂ
ತೆರಿ ದಿಲ್ ಕೀ ಗಲಿಯೋಂ ಸೇ.. ಮೈ ಹರ್ ರೋಜ್ ಗುಜರತೀ ಹೂಂ
ಅವಳಿಗಂತಲೆ ಇಲ್ಲಿ ಮಳೆ ಸುರಿಯುತ್ತದೆ. ಪ್ರೇಮ ನಿವೇದನೆಗಾಗಿ ಇಲ್ಲಿ ಸಂಜೆ ಹಾಡಾಗುತ್ತದೆ. ಅವನ ಕೊಳಲಿನಲಿ ಅವಳು ಉಸಿರಾಗಿ ಚಲಿಸುತ್ತಾಳೆ. ಅವನ ಪುಪ್ಪಸಗಳಲಿ ಸದಾ ಪಿಸುಗುಟ್ಟುತ್ತಾಳೆ. ಪ್ರೀತಿ ಎದೆಯ ಹಸಿರಾಗುವದು ಹೀಗೆ…
ಮೇರೆ ತೋ ಸಾರೆ ಸವೇರೆ.. ಬಾಹೋಂ ಮೇ ತೇರೆ ಟೆಹರೆ
ಮೇರೆ ತೋ ಸಾರೆ ಶಾಮೇ.. ತೇರಿ ಸಾಥ್ ಹೀ ಡಲ್ಹೇ..
ಅವಳು ಸಾಗಿ ಹೋದ ದಾರಿ, ತೋಯಿಸಿದ ಮಳೆ… ಮುನಿಸಿಕೊಂಡ ಋತುಮಾನ, ಪ್ರೇಮಿಗಳಿಬ್ಬರೂ ಕೂತು ಮಾತಾಟಿದ ಬೆಟ್ಟದ ಮೇಲಿನ ಒಬ್ಬಂಟಿ ಮರ… ಅವರೆಲ್ಲ ಮಾತು ಮೌನ ದುಮ್ಮಾನ ಸುಮ್ಮಾನಗಳನ್ನು ತೆಪ್ಪಗೆ ಆಲಿಸಿದ ಬೆಟ್ಟದ ತಪ್ಪಲು.. .ಮೊದಲ ಬಾರಿ ಕೂತು ಮಾತಾಡಲು ನೆಪವಾದ ಬೈಟು ಕಾಫೀ… ಹೋಟೆಲಿನ ಮೂಲೆಯ ಆ ಖಾಯಂ ಟೇಬಲ್ಲು. ಕೈ ಕೈ ಬೆರಳು ತಾಗಿ ಮೊದಲ ಸ್ಪರ್ಶಕೆ ಈಡುಮಾಡಿದ ಬಸ್ನ ರಶ್ಶೂ.. ಇಬ್ಬರನೂ ನೋಡಿ ಮುಸಿಮುಸಿ ನಗುತ್ತಿದ್ದ ಕಾಲೇಜಿನ ಕ್ಯಾಂಪಸ್ಸು… ಮಾತಿಲ್ಲ ಕತೆಯಿಲ್ಲ ನನಗೆ ನೀನು ನಿನಗೆ ನಾನು ಹಾಡಿಕೊಂಡ ಮೌನರಾಗ, ಏನೊಂದು ಹೇಳದೆ ಏನೆಂದು ಅರ್ಥವಾಗದೆ ಪರಸ್ಪರ ಇಬ್ಬರನೂ ಪ್ರೀತಿಗೆ ಈಡುಮಾಡಿದ ವಾಟ್ಸಪ್ ನ ಇಮೋಜಿಗಳು. ಆ ತುಂಡು ಮಾತು ಹೇಳಲು ಯಬಡನಂತಾಡಿ ಹೇಗೋ ಕೈಗಿಟ್ಟು ಹೋದ ಗುಲಾಬಿ ಮೊಗ್ಗು. ಎಷ್ಟೋ ರಾತ್ರಿ ನಿದ್ದೆಗೆಟ್ಟು ಬರೆದ ನಾಲ್ಕು ಸಾಲಿನ ಗ್ರೀಟಿಂಗು. ಹೀಗೆ ನೆನಪುಗಳ ತೇರು.
ಇದನ್ನೂ ಓದಿ : ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು
ಜಿಂದಗಿ ಔರ್ ಕುಚ್ ಬೀ ನಹೀ
ತೇರಿ ಮೇರಿ ಕಹಾನಿ ಹೈ
ಹಾಡಿಕೊಳ್ಳಲು ನನಗೆ ಎಂತಹ ಅದ್ಭುತ ರಾಗ ದಕ್ಕಿತ್ತು. ಇಂತದ್ದೊಂದು ಲಹರಿಗೆ ಈಡಾದ ನಾನು ಯಾವ ಸೆಳವಿಗೂ ಸಿಗಲು ತಯಾರಾಗಿದ್ದೆ. ಪ್ರೀತಿ ಅದೆಂತಹ ಬದುಕಿನ ಖಾತರಿ. ಒಂದು ನೋಟಕ್ಕೆ ಅಷ್ಟೊಂದು ಪುಳಕ. ಆ ಆಳಕ್ಕೆ ಇಳಿದು ಹೋಗಿದ್ದೆ.. ಮುಳುಗಿದಷ್ಟು ಆಳ ಅವಳು.
ಹಮೇ ಜೋ ತುಮ್ಹಾರಿ ಸಹಾರಾ ನ ಮಿಲ್ತಾ
ಭಂವರ್ ಮೇ ಹೀ ರೆಹತೇ ಕಿನಾರಾ ನಾ ಮಿಲ್ತಾ
ಅವಳಿದ್ದಾಳೆ ಎಂಬುದು ಅದೆಂಥ ಭರವಸೆ. ಪ್ರೀತಿಸುತ್ತಿದ್ದೇನೆ ಎಂಬ ಭಾವವೇ ನಿತ್ಯ ಸುಖ ಹೆತ್ತು ಕೊಡುತ್ತದೆ. ಅವಳಿಲ್ಲದ ಕಾಲ ಕುಂಟು. ಅವಳಿಲ್ಲ ಋತು ಬರಡು. ಅವಳಿಲ್ಲದ ಲೋಕ ಕುರುಡು.ಪ್ರೀತಿಯಿಲ್ಲದೆ ಯಾವ ಬದುಕು ಹಸನು ಹೇಳಿ
ಇಷ್ಕ್ ಜುನೂನ್ ಜಬ್ ಹದ್ ಸೇ ಬಡ್ ಜಾಯೇ
ಹಂಸ್ತೇ ಹಂಸ್ತೇ ಆಶಿಕ್ ಸೂಲಿ ಚಡ್ ಜಾಯೇ
ಪ್ರೀತಿಯನ್ನು ದೈವತ್ವಕ್ಕೇರಿಸಿದವರಿದ್ದಾರೆ. ಯಾತನೆಯ ಕೊಳದಲ್ಲಿ ಮಿಂದೆದ್ದು ಆ ಧ್ಯಾನದ ಹಂಗಿನಲ್ಲೆ ಉಸಿರು ಹೊರಚೆಲ್ಲಿ ಹೋದವರಿದ್ದಾರೆ. ಎಷ್ಟೋ ಯಾಮಾರಿದರೂ ಮತ್ತೆ ಮತ್ತೆ ಪ್ರೀತಿಯೆಡೆ ಕೈ ಚಾಚಿದ್ದಾರೆ. ಪ್ರೀತಿ ಕಡುಪಾಪಿ ಎಂದವರಿದ್ದಾರೆ. ಹಾಗೇ ಅದು ಅಮೃತದ ಬಟ್ಟಲು ಕೂಡ.
ತೇರೆ ಬಿನಾ ಜಿಂದಗಿ ಬೀ.. ಲೇಕಿನ್
ಜಿಂದಗಿ ತೋ ನಹೀಂ
*
ಲಿಂಗರಾಜ ಬರೆದ ಕವಿತೆಗಳು : Poetry: ಅವಿತಕವಿತೆ; ಸೂರ್ಯ ಸುಟ್ಟು ಉಳಿದ ಪಾಡುಗಳ ಹಾಡಾಗಿಸಲು ಚಂದಿರನ ಕರೆತರಬೇಕಿದೆ