Dr H. Girijamma : ಡಾ. ಎಚ್. ಗಿರಿಜಮ್ಮನವರನ್ನು ಒಬ್ಬ ವೈದ್ಯೆಯಾಗಿ ಒಬ್ಬ ಲೇಖಕಿಯಾಗಿ ಒಬ್ಬ ಆತ್ಮೀಯ ಸ್ನೇಹಿತೆಯಾಗಿ ಸೋದರಿಯಾಗಷ್ಟೇ ಕಂಡಿದ್ದೆ, ಅವರು ‘ಕಾಡುತಾವು ನೆನಪುಗಳು’ ಆತ್ಮಕಥೆಯನ್ನು ಪ್ರಕಟಣಾ ಪೂರ್ವ ಓದಿಗಾಗಿ ಕೈಗೆತ್ತಿಕೊಳ್ಳುವ ಮೊದಲು; ‘ಅಬ್ಬಾ’! ಬಡತನದ ಬೇಗೆ, ತುಂಬು ಕುಟುಂಬ, ಬಾಲ್ಯದಲ್ಲಿ ಕಂಡ ಅರ್ಥವಾಗದ ಕಹಿ ಘಟನೆಗಳು, ಶಾಲಾ ಕಾಲೇಜಿಗೆ ಸೇರಿದಾಗಿನ ಹಲವು ಅನಿರೀಕ್ಷಿತ ಸಂದರ್ಭಗಳು, ಎಲ್ಲವನ್ನೂ ಮೀರಿ ನಿಂತು ಕುಟುಂಬ, ಸಮಾಜ ಎಲ್ಲವನ್ನೂ ಎದುರಿಸುವ ಹೆಣ್ಣು ಮಗಳಾಗಿ, ಮನೆಯಿಂದ ಮನೆಯವರಿಂದ ದೂರವೇ ಉಳಿದು ಓದಿ, ಬದುಕನ್ನು ಕಟ್ಟಿಕೊಂಡು ತಲೆ ಎತ್ತಿ ನಿಲ್ಲುವ ಒಬ್ಬ ದಿಟ್ಟೆಯಾಗಿ ಕಂಡರು. ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಳ್ಳಲು ಯತ್ನಿಸುವ ಸನ್ನಿವೇಶಗಳು, ಕೌಟುಂಬಿಕವಾಗಿ ವೈಯಕ್ತಿಕ ಜೀವನದಲ್ಲಿ ಕಂಡ ಅನೇಕ ಏರಿಳಿತಗಳು, ಅಪವಾದಗಳು, ಅವಮಾನಗಳನ್ನೆಲ್ಲ ಮೆಟ್ಟಿ ನಿಲ್ಲುವ ಗಿರಿಜಮ್ಮನವರು ಹಲವು ಕಡೆ ಓದುಗರ ಕಣ್ಣನ್ನು ಒದ್ದೆಯಾಗುವಂತೆ ಈ ಕೃತಿಯಲ್ಲಿ ಮಾಡಿದ್ದಾರೆ. ‘ಅವ್ವ’ನ ಪ್ರೀತಿಗಾಗಿ ಹಂಬಲಿಸುವುದು ಮನಕಲುಕುವಂತಿದೆ.
ನಿಡಸಾಲೆ ಪುಟ್ಟಸ್ವಾಮಯ್ಯ, ಲೇಖಕರು, ಸಿನೆಮಾ ನಿರ್ಮಾಪಕರು
*
(‘ಕಾಡತಾವ ನೆನಪುಗಳು’ ಆತ್ಮಕಥನದ ಆಯ್ದ ಭಾಗ)
ನಾನು ನಾಲ್ಕನೇ ತರಗತಿಯಲ್ಲಿ ಪಾಸಾಗಿ ಐದನೇ ತರಗತಿಗೆ ಹೊರಟು ನಿಂತಾಗ ಅತ್ಯಂತ ಸಂಭ್ರಮಪಟ್ಟಿದ್ದೆ. ಯಾವುದೋ ದೊಡ್ಡಕಾರ್ಯ ಮಾಡಿದವಳಂತೆ ಹೆಮ್ಮೆಯಿಂದ ಬೀಗಿದ್ದೆ. ನಾನು ಇನ್ನು ಮೇಲೆ ಗಂಭೀರವಾಗಿ ದೊಡ್ಡವಂತೆ ಇರಬೇಕೆಂದು ತೀರ್ಮಾನಿಸಿದ್ದೆ. ಸಂಜೆ ಶಾಲೆಯಿಂದ ಬರುವಾಗ ಹೂಗಿಡಗಳು ತುಂಬ ಮನೆ, ದೇವಸ್ಥಾನಗಳು ಕಂಡರೆ ಅಲ್ಲಿನ ಹೂಗಳು, ಅರಳುತ್ತಿರುವ ಮೊಗ್ಗುಗಳನ್ನು ಕಿತ್ತು ತರುತ್ತಿದ್ದೆ. ದೊಡ್ಡ ಪಾತ್ರೆಯೊಂದರಲ್ಲಿ ನೀರು ತುಂಬಿಸಿಟ್ಟು ಅದರೊಳಗೆ ತಂದಿದ್ದ ಮೊಗ್ಗುಗಳನ್ನು, ಹೂಗಳನ್ನು ಹಾಕುತ್ತಿದ್ದೆ. ಬೆಳಗ್ಗೆ ನೋಡಿದಾಗ ಎಲ್ಲಾ ಮೊಗ್ಗುಗಳ ಹೂವಾಗಿ ಅರಳಿ ಪಾತ್ರೆಯಲ್ಲಿದ್ದ ನೀರು ಕಾಣದ ಹಾಗೆ ತುಂಬಿರುತ್ತಿದ್ದವು. ಎಲ್ಲಾ ಹೂಗಳನ್ನು ಕಟ್ಟಿ ಮಾಲೆ ಮಾಡಿ, ನನ್ನ ಗುಂಗುರು ಕೂದಲಿನ ಎರಡು ಮೋಟು ಜಡೆಗಳ ಮೇಲೆ ಸುತ್ತಿಕೊಳ್ಳುತ್ತಿದ್ದೆ. ನಾನೂ ಕೂಡ ಆ ಆ ಹೂಗಳಂತೆ ಸುಂದರವಾಗಿ ಕಾಣುತ್ತಿದ್ದೇನೆಂಬ ಭ್ರಮೆಯಲ್ಲಿ!
ಹೀಗೆ ಅಲಂಕರಿಸಿಕೊಂಡು ಶಾಲೆಗೆ ಬರುತ್ತಿದ್ದರೆ ಸೀನಿಯರ್ ವಿದ್ಯಾರ್ಥಿನಿಯರು, ‘ನೋಡು ತೇರು ಬಂತು’ ಎಂದು ನನ್ನನ್ನು ಕಂಡು ಛೇಡಿಸುತ್ತಿದ್ದರು. ನಾನು ಕಿವಿಗೆಹ ಆಕಿಕೊಂಡರೂ ಮನಸಿಗೆ ತಂದುಕೊಳ್ಳುತ್ತಿರಲಿಲ್ಲ.
ನಾನು ಓದುತ್ತಿದ್ದುದು ಸರ್ಕಾರಿ ಹೆಣ್ಣುಮಕ್ಕಳ ಶಾಲೆ. ಅಲ್ಲಿಗೆ ಬರುತ್ತಿದ್ದವರಲ್ಲಿ ಕೆಳಮಧ್ಯಮ ವರ್ಗ, ನಮ್ಮಂತಹ ಬಡವರೂ ಅಲ್ಲದೆ ಶ್ರೀಮಂತರ ಮಕ್ಕಳೂ ಬರುತ್ತಿದ್ದರು. ಯೂನಿಫಾರಂ ಹಾಕುವಂತಿರಲಿಲ್ಲ. ಅಂತಹ ಶಾಲೆಗಳು ಆಗ ಅಷ್ಟಾಗಿರಲಿಲ್ಲ. ಹಾಗಿದ್ದಿದ್ದರೆ, ಶ್ರೀಮಂತರು, ಬಡವರು ಅಂತ ಬಟ್ಟೆಯಿಂದ ಅಳೆಯಲಾಗುತ್ತಿರಲಿಲ್ಲ. ನನ್ನ ಸಹಪಾಠಿಗಳು ನಮ್ಮನ್ನು ನೋಡಿ ನಗುತ್ತಿರಲಿಲ್ಲ.
ಯಾಕ್ ನೀ ಲಂಗದೊಳಗ ಪೆಟ್ಟಿಕೋಟ್ ಹಾಕ್ಹಂಗಿಲ್ಲೇನು?’ ಸಹಪಾಠಿಯೊಬ್ಬಳು ಅಂದು ಕೇಳಿದ್ದಳು.
‘ಅದ್ಯಾಕ್ ಬೇಕು? ಈ ಲಂಗಾನೇ ಸಾಕಲ್ವಾ?’ ನಾನು ಸ್ವಾಭಾವಿಕವೆಂಬಂತೆ ಕೇಳಿದ್ದೆ.
‘ಇರ್ಬೋದು… ನೀನು ಕಿಟಕಿ ಮೇಲೆ ಹತ್ತಿ ನಿಂತಿದ್ಯಲ್ಲ. ಆಗ ಗಾಳಿ ಬೀಸಿ ಬಂದಾಗ ನಿನ್ನ ಲಂಗ ಹಾರಿ ಮೇಲಕ್ಕೇರಿತ್ತು. ಆಗ ಎಲ್ಲಾ ಕಂಡಿತು ಕಣೆ’ ಕಿಸಕ್ಕನೆ ನಕ್ಕು ಹೇಳಿದ್ದಳು. ನಗು ತಡೆಹಿಡಿಯುವಂತೆ ನನ್ನ ಕೈಯನ್ನು ಬಾಯಿಗೆ ಅಡ್ಡ ಹಿಡಿದು ನಗು ತಡೆಯುವ ಪ್ರಯತ್ನ ಮಾಡಿದ್ದಳು.
ಅಪಮಾನದಿಂದ ನನ್ನ ಮುಖ ಬಣ್ಣ ಕಳೆದುಕೊಂಡಿತ್ತು. ಆದರೂ ಆ ವಯಸ್ಸಿನಲ್ಲೂ ಬಿಡದ ‘ಅಹಂ’ ಮೇಲುಗೈ ಪಡೆದುಕೊಂಡಿತ್ತು.
‘ನೋಡ್ಕೋ ಹೋಗೆ’ ಎಂದು ಉಡಾಫೆ ಮಾಡಿ ನಿರ್ಲಕ್ಷ್ಯ ತೋರಿದ್ದರೂ ಅಪಮಾನ, ಕೀಳರಿಮೆ ಎದೆಯನ್ನು ಸುಡುತ್ತಿತ್ತು. ಇವುಗಳೆಲ್ಲದಕ್ಕಿಂತಲೂ ನನ್ನನ್ನು ಕುಗ್ಗುವಂತೆ ಮಾಡುತ್ತಿದ್ದುದೆಂದರೆ ನನ್ನ ದೇಹಕ್ಕಂಟಿಕೊಂಡೇ ಹುಟ್ಟಿದ ಕಪ್ಪು ಬಣ್ಣ. ದಿನಗಳು ಕಳೆದ ಹಾಗೆ ‘ಸುಂದರ’ ಎಂದು ಕರೆಯಿಸಿಕೊಳ್ಳಲು ‘ಬಿಳಿ ಬಣ್ಣ’ ಎಂದು ತಿಳಿಯಿತು.
‘ಕಪ್ಪು ಬಣ್ಣದವರು ಹುಟ್ಟಲೇಬಾರದು’ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ನಾನಾಗಲೇ ಹುಟ್ಟಿಯಾಗಿತ್ತು. ಇದರಿಂದ ನನ್ನನ್ನು ಕುಗ್ಗುವಂತೆ ದಿನೇದಿನೇ ಮಾಡಲು ಯಶಸ್ವಿಯಾಗುತ್ತಿತ್ತು. ಮನೆಯಲ್ಲೂ ಪಕ್ಷಪಾತ ಮಾಡುತ್ತಿದ್ದರೆಂದೇ ನನಗೆ ಭಾಸವಾಗತೊಡಗಿತ್ತು.
‘ನಿನ್ನ ಬಣ್ಣಕ್ಕೆ ಈ ಬಣ್ಣದ ಫ್ರಾಕ್ಗಳು ಸರಿಯಾಗಿರೋಲ್ಲ. ನಿನ್ನ ಕರಿ ಸೊಣಕಲು ಕಾಲ್ ಎದ್ದು ಕಾಣ್ತೇತೆ. ಕಾಲ್ಗಳು, ಪಾದಗಳವರ್ಗೆ ಈ ಲಂಗಗಳನ್ನು ಹಾಕ್ಕೋ’
ಅಲ್ಲಿಗೆ ಫ್ರಾಕ್ಗಳನ್ನು ತೊಡುವ ನನ್ನ ಕನಸು ಮುರಿದುಬಿದ್ದಿತು.
‘ಅವರಿಲ್ಲ ಎನ್ನುವುದನ್ನು ಹೇಗೆ ಒಪ್ಪಿಕೊಳ್ಳುವುದು?’
ಡಾ. ಎಚ್. ಗಿರಿಜಮ್ಮನವರ ಎಲ್ಲ ಅನುಭವಗಳೂ ಕಥೆಗಳಾಗಿ, ಕಾದಂಬರಿಗಳಾಗಿ ಅರಳುತ್ತ ಹೋದಂತೆ, ಅನುಪಮಾ ನಿರಂಜನರ ನಂತರ ವೈದ್ಯಕೀಯ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ಕೊಟ್ಟವರೆಂದರೆ ಇವರೇ. ಪ್ರೀತಿ, ಕರುಣೆ, ಮಾನವೀಯತೆಯ ಸಮುದ್ರ. ನನ್ನೊಂದಿಗೆ ಅವರದು ಸುಮಾರು 35 ವರ್ಷಗಳ ಒಡನಾಟ. ಈಗವರು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಬಹಳೇ ನೋವಾಗುತ್ತಿದೆ. ಹಿಂದೊಮ್ಮೆ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಅವರ ಕಥೆಯನ್ನು ಓದಿ ಸಂಪರ್ಕಿಸಿ ಪರಿಚಯಿಸಿಕೊಂಡಿದ್ದೆ. ಇಬ್ಬರಿಗೂ ಸಾಹಿತ್ಯದ ಅಭಿರುಚಿ ಇದ್ದುದರಿಂದ ಸಾಹಿತ್ಯ ಅಕಾಡೆಮಿ, ಸಿನೆಮಾ ಪ್ರಶಸ್ತಿ ಆಯ್ಕೆ ಸಮಿತಿ, ಸಾಕ್ಷ್ಯಚಿತ್ರಗಳು… ಹೀಗೆ ಒಟ್ಟಿಗೇ ಕೆಲಸ ಮಾಡಿದೆವು. ಅವರು ಪ್ರೀತಿಯನ್ನೇ ಉಸಿರಾಡುತ್ತ ಬದುಕಿದವರು. ಅದರಿಂದಲೇ ನೋವನ್ನೂ ಅನುಭವಿಸಿದವರು. ಅವರೊಂದಿಗೆ ಒಡನಾಡಿದ ಎಲ್ಲರೂ, ಎಲ್ಲ ಸಂಬಂಧಿಕರೂ ವೈಯಕ್ತಿಕ ನೆಲೆಯಲ್ಲಿ ಅವರಿಗೆ ಒಂದಿಲ್ಲಾ ಒಂದು ರೀತಿಯಿಂದ ವಂಚಿಸುತ್ತಲೇ ಬಂದರು.
ಮದುವೆಯಾಗು ಎಂದು ಬಹಳ ಒತ್ತಾಯ ಮಾಡಿ ನನಗೋಸ್ಕರ ಹೆಣ್ಣು ಹುಡುಕಲು ಓಡಾಡಿ ಕೊನೆಗೆ ನನ್ನ ಮದುವೆ ಮಾಡಿಸುವಲ್ಲಿ ಯಶಸ್ವಿಯಾದರು. ನನ್ನ ಮೊದಲ ಮಗಳು ವೈದ್ಯಕೀಯ ನಿರ್ಲಕ್ಷ್ಯದಿಂದ ತೀರಿಕೊಂಡಾಗ ಎಲ್ಲ ರೀತಿಯಿಂದಲೂ ನಮಗೆ ಬೆನ್ನೆಲುಬಾಗಿ ನಿಂತರು. ಎರಡನೇ ಮಗುವಾಗುವ ತನಕವೂ ನನ್ನ ಹೆಂಡತಿಯನ್ನು ಬಹಳ ಜತನದಿಂದ ನೋಡಿಕೊಂಡರು. ಇತ್ತೀಚೆಗೆ, ನನಗೊಂದು ಜಮೀನು ನೋಡು. ಎಲ್ಲವನ್ನೂ ಬಿಟ್ಟು ಅಲ್ಲಿಯೇ ವಾಸಿಸಬೇಕು ಎನ್ನಿಸುತ್ತಿದೆ ಎನ್ನುತ್ತಿದ್ದರು. ಅವರೊಂದಿಗೆ ಮಾತನಾಡಿದ್ದು ಅದೇ ಕೊನೆ. ಅವರ ಸಂಬಂಧಿಕರು, ಅವರಿಂದ ಪ್ರೀತಿ ಪಡೆದವರು ಅವರನ್ನು ಬಹಳ ಸುಲಭವಾಗಿ ವಂಚಿಸುತ್ತ ಬರುವುದು ಅವರಿಗೆ ಕ್ರಮೇಣ ಗೊತ್ತಾಗುತ್ತ ಹೋದಂತೆ ಬಹಳೇ ನೊಂದುಕೊಂಡರು. ಬಹಳ ಸಂಕಟವಾಗುತ್ತದೆ. ಸಾಕಷ್ಟು ನೆನಪುಗಳು ಗಂಟಲಿನಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಿವೆ.
ಕೃಷ್ಣ ಮಾಸಡಿ, ಸಿನೆಮಾ ನಿರ್ದೇಶಕರು
ಇದನ್ನೂ ಓದಿ : Obituary : ‘ಆತ್ಮಕಥನದ ಮುಖಪುಟದಲ್ಲಿ ನನ್ನ ಫೋಟೋ ಮಸುಕಾಗಿಯೇ ಇರಲಿ’
Published On - 8:26 pm, Tue, 17 August 21