ಪುಸ್ತಕವೊಂದು ಓದುಗರ ಕೈಗೆ ತಲುಪುವ ತನಕ ತನ್ನನ್ನು ತಾ ಹಲವಾರು ಪ್ರಕ್ರಿಯೆಗಳಿಗೆ ಒಡ್ಡಿಕೊಂಡಿರುತ್ತದೆ. ಒಂದೊಂದು ಒಡ್ಡಿಕೊಳ್ಳುವಿಕೆಯ ಹಿಂದೆಯೂ ಅನೇಕ ಕಲಾತ್ಮಕ ಅಂಶಗಳನ್ನು ಒಳಗೊಂಡಿರುತ್ತದೆ. ಹಿರಿಯ ಕಥೆಗಾರ ವಿವೇಕ ಶಾನಭಾಗ ಅವರ ‘ಸಕೀನಾಳ ಮುತ್ತು’ ಕಾದಂಬರಿಗೆ ರಚಿಸಿದ ಮುಖಪುಟದ ಬಗ್ಗೆ ಕುತೂಹಲ ಮೂಡಿದಾಗ, ಅದನ್ನು ರಚಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ರವಿಕುಮಾರ ಕಾಶಿ ಅವರನ್ನು ಕೇಳಲಾಯಿತು. ಮುಖಪುಟದ ಮೇಲೆ ಪವಡಿಸಿರುವ Installation ಕಲಾಕೃತಿಗಳು ಬರುವ ಸೆಪ್ಟೆಂಬರ್ಗೆ ತೈವಾನ್ನಲ್ಲಿ ನಡೆಯಲಿರುವ ‘ಕಾಗದದಲ್ಲಿ ತಯಾರಿಸಿದ ಕಲಾಕೃತಿಗಳ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ (International Biennial for Paper and Fibre Art) ಪಾಲ್ಗೊಳ್ಳಲು ಪ್ರಯಾಣ ಬೆಳೆಸಲಿವೆ ಎಂಬ ವಿಷಯ ತಿಳಿಯಿತು. ಈ Installation ನ ಹಿಂದೆ ಸುಮಾರು ಹನ್ನೆರಡು ವರ್ಷಗಳ ಸೃಜನಶೀಲ ಒದ್ದಾಟವಿದ್ದು ಮತ್ತಿದು ‘ಸಕೀನಾಳ ಮುತ್ತು’ ಕಾದಂಬರಿಯ ವಸ್ತುವಿನೊಂದಿಗೆ ಹೇಗೆ ಅನುಸಂಧಾನಗೊಂಡಿತು ಎನ್ನುವುದನ್ನೂ ನೀವಿಲ್ಲಿ ಓದಬಹುದು.
ನಾನು ಹೆಚ್ಚಿನ ಪುಸ್ತಕಗಳಿಗೆ ಮುಖಪುಟವನ್ನೇನೂ ರಚಿಸಿಲ್ಲ. ಅದರಲ್ಲಿ ನನ್ನ ಪರಿಣತಿಯೂ ಇಲ್ಲ. ವಿವೇಕ ಶಾನಭಾಗರೊಂದಿಗೆ ಹೀಗೇ ಮಾತನಾಡುವಾಗ ಹೊಸ ಕಾದಂಬರಿಯ ಪುಖಪುಟಕ್ಕೆ ‘ನನ್ನಿಂದ ಏನಾದರೂ ಹೊಳೆದೀತೆ’ ಎಂದು ಅವರೊಂದಿಗೆ ಮಾತಾಗಿ ಕಾದಂಬರಿ ಓದಿದೆ. ಮೊದಲ ಐಡಿಯಾ ಕಾದಂಬರಿಯಲ್ಲಿರುವ ಕೆಲವು ವಿವರಗಳನ್ನು ದೃಶ್ಯವಾಗಿ ಮಾರ್ಪಡಿಸುವ ಪ್ರಯತ್ನ. ಆದರೆ ಅದರಿಂದ ಕಥನದ ಆಂತರ್ಯವನ್ನು ಹಿಡಿದಂತೆ ಆಗುವುದಿಲ್ಲ ಅನ್ನಿಸಿ ಅದನ್ನು ಕೈಬಿಟ್ಟೆ. ಚಂದದ ಮುಖಪುಟ ಮಾಡದೆ ಹೊಳಹೊಂದನ್ನು ನೀಡುವ ಯತ್ನ ಮಾಡಬಹುದೇ ಮತ್ತು ಒಂದು ಮಾಧ್ಯಮದಲ್ಲಿ ದಕ್ಕಿದ ಅನುಭವವನ್ನು ಇನ್ನೊಂದರಲ್ಲಿ ಶಕ್ತವಾಗಿ ಅನುವಾದಿಸಬಹುದೇ ಎಂಬ ಪ್ರಶ್ನೆ ನನ್ನ ಮುಂದಿತ್ತು.
ನನ್ನ ಕೃತಿಗಳಲ್ಲಿ ವಿವೇಕರ ಕಾದಂಬರಿಗೆ ಸಮಾನವಾದ ಅನೇಕ ಧ್ವನಿಗಳಿರುವುದು ಗಮನಕ್ಕೆ ಬಂತು. ಹಾಗಾಗಿ ಮುಖಪುಟಕ್ಕೆಂದೇ ಹೊಸದಾಗಿ ಏನನ್ನಾದರೂ ರಚಿಸುವುದಕ್ಕಿಂತ ನನ್ನದೇ ಯಾವುದಾದರೂ ಕೃತಿಯ ಬಿಂಬವನ್ನು ಬಳಸಬಹುದೇ ಎಂಬ ಜಾಡು ಹಿಡಿದು ಹೊರಟೆ. ಡ್ರಾಯರ್ ತೆಗೆದಾಗ ಹೊರಬಿದ್ದ ಸಿಕ್ಕುಸಿಕ್ಕಾದ ಎಳೆಗಳ ಚಿತ್ರ, ‘ಚೆಸ್ಟ್ ಆಫ್ ಸೀಕ್ರೆಟ್ಸ್’ ಕೃತಿಯಿಂದ, ತಿಂಗಳ ಕಾಲ ರೋಜಾ ಹೂಗಳು ಬಾಡುತ್ತಾ ಹೋಗುವಾಗ ದಾಖಲಿಸಿದ ಛಾಯಾಚಿತ್ರಗಳನ್ನು ಬಳಸಿದ ‘ಮೆಮೊಂಟೊ ಮೋರಿ’ ಕೃತಿ, ಹೀಗೆ ಹಲವು ದಿನಗಳ ಹುಡುಕಾಟದ ನಂತರ ಕೊನೆಗೆ ದೊರಕಿದ್ದು ಮುಖಪುಟಕ್ಕೆ ಒಳಗೊಂಡಿರುವ ನನ್ನ ಕೃತಿ ‘ಉಸ್ಟೋಪಿಕ್ ಬಾಡಿಸ್’. ಇದು ಇದೇ ಸೆಪ್ಟೆಂಬರ್‌ನಲ್ಲಿ ತೈವಾನ್ ದೇಶದಲ್ಲಿ ನಡೆಯಲಿರುವ ಕಾಗದದಲ್ಲಿ ತಯಾರಿಸಿದ ಕೃತಿಗಳ ಬಿನಾಲೆ ಅಂತಾರಾಷ್ಟ್ರೀಯ ಪ್ರದರ್ಶನಕ್ಕೆಂದು ರಚಿಸಿದ ಕೃತಿ. ಇದರಲ್ಲಿ ಬಾಳೆ ದಿಂಡು, ಕತ್ತಾಳೆ, ಹುಲ್ಲು, ಹತ್ತಿ ಹೀಗೆ ಅನೇಕ ಸಸ್ಯ ಜನ್ಯ ನಾರಿನಿಂದ ತಯಾರಿಸಿದ ಮುಂಡಗಳಿದ್ದಾವೆ. ಅದರ ಮೇಲೆ ಆಕ್ರಿಲಿಕ್ ಬಣ್ಣದಲ್ಲಿ ಮಾಡಿದ ವಿವರಗಳಿವೆ.
ನಮ್ಮ ಕಾಲ ಅತಿ ಸಂದಿಗ್ಧದ ಕಾಲ. ದೇಶದಲ್ಲಿ ಅನೇಕ ರೀತಿಯ ಬಿರುಕುಗಳು ಎದ್ದಿವೆ. ಆದರೆ ಈ ಬಿರುಕುಗಳು ಹೊರಗಡೆಗೆ ಸೀಮಿತವಾಗದೆ ವಿಭಿನ್ನ ಮಾಧ್ಯಮದ ಮೂಲಕ ಮನೆಯನ್ನು ಪ್ರವೇಶಿಸಿವೆ. ವ್ಯಕ್ತಿಯಲ್ಲಿ, ಸಂಬಂಧಗಳಲ್ಲಿ ಇದರ ಹೊಯ್ದಾಟವನ್ನು ಕಾಣಬಹುದು ಇದು ನನ್ನ ಕೃತಿಯ ಹಿಂದಿನ ಅಲೋಚನೆ. ಆದರೆ ಆ ಕೃತಿಯು ಒಮ್ಮೆಲೇ ಆ ರೂಪವನ್ನು ತಾಳಲಿಲ್ಲ. 2008ರಲ್ಲಿ ಒಂದು ದೊಡ್ಡ ಇನ್ಸ್ಟಾಲೇಷನ್ ಮಾಡುತ್ತೇನೆ ಎಂಬ ಮಹದಾಸೆಯಲ್ಲಿ 24 ಮುಂಡಗಳನ್ನು ಬೇರೆ ಬೇರೆ ನಾರುಗಳನ್ನು ಬಳಸಿ ಅಚ್ಚು ಹಾಕಿದೆ. ಆದರೆ ಕೃತಿಯನ್ನು ಮಾಡಲು ಕುಳಿತಾಗ ಹೊಳೆದ ಐಡಿಯಾ ಸರಿ ಕಾಣಲಿಲ್ಲ. ಹಾಗಾಗಿ ಅದನ್ನು ಕೈಬಿಟ್ಟೆ.
2009ರಲ್ಲಿ ಅದರಲ್ಲಿ ಕೆಲವನ್ನು ಬಳಸಿ ‘ಮೆಮರಿ ಸ್ಲಿಪ್ಸ್’ ಎಂಬ ಕೃತಿ ಮಾಡಿದೆ. ಅದು ಕೊರಿಯಾದಲ್ಲಿ ಪ್ರದರ್ಶನವಾಯಿತು. ಉಳಿದ ಮುಂಡಗಳು ನನ್ನ ಸ್ಟುಡಿಯೋದ ಮೂಲೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕುಳಿತವು. ಆಗಾಗ್ಗೆ ಅವನ್ನು ಹೊರತೆಗೆದು ಹಾಗೆ ಮಾಡುತ್ತೇನೆ/ಹೀಗೆ ಮಾಡುತ್ತೇನೆ ಎಂದು ಯೋಚಿಸುವುದು, ಸರಿ ಕಾಣದೆ ಒಳತೆಗೆದಿಡುವುದು ಮಾಡುತ್ತ ಕೊನೆಗೊಮ್ಮೆ ಅದು ಅಲ್ಲಿಯೇ ನಿಂತುಹೋಗಿತ್ತು. ಆದರೆ ನನ್ನ ಜರ್ನಲ್‌ಗಳಲ್ಲಿ ಏನೆಲ್ಲ ಹೊಳಹುಗಳು ಬಂದವೋ ಅದನ್ನೆಲ್ಲ ಬರೆದು ಇಟ್ಟಿದ್ದೇನೆ. ಕಲಾಕೃತಿಯ ಸೃಷ್ಟಿಯು ನೇರ ಗೆರೆಯಲ್ಲಿ ಸಾಗುವ ಕಥೆಯಲ್ಲ. ಸುತ್ತಿ ಬಳಸಿ ಏನನ್ನೋ ಮಾಡಲು ಹೋಗಿ ಇನ್ನೇನೋ ದಕ್ಕುವುದೇ ಜಾಸ್ತಿ. ಇಲ್ಲೂ ಅದೇ ಆಗಿದ್ದು. ಈಗ್ಗೆ ಕೆಲ ಕಾಲದಿಂದ ನನ್ನ ಸುತ್ತ ಆವರಿಸಿರುವ ಬಿರುಕುಗಳಿಗೆ ಏನಾದರೂ ರೂಪು ಕೊಡಬೇಕು ಎಂಬ ಭಾವ ಈ ಕೃತಿಯ ಹಿಂದಿದೆ. ನನ್ನ ಕಾಲದ ತಹತಹವನ್ನು ವೈಯುಕ್ತಿಕ ಮಟ್ಟ ಮೀರಿದ ಅನುಭವಾಗಿಸುವುದು ಹೇಗೆ ಎಂಬ ಪ್ರಶ್ನೆಗೆ ನಾನು ಕಂಡುಕೊಂಡ ಒಂದು ಉತ್ತರ ನನ್ನ ಕೃತಿ. ಇನ್ನೂ ಹನ್ನೆರಡು ಮುಂಡಗಳಿದ್ದಾವೆ ಸ್ಟುಡಿಯೋದಲ್ಲಿ, ಅವಕ್ಕೂ ಏನಾದರೂ ಒಂದು ಗತಿ ಕಾಣಿಸಬೇಕು, ಅದು ನಾಳೆಯಾದರೂ ಅದೀತು, ದಶಕವೇ ಹಿಡಿದೀತು.
*
ಪರಿಚಯ : ರವಿಕುಮಾರ ಕಾಶಿ ಸಮಕಾಲೀನ ದೃಶ್ಯ ಕಲಾವಿದರು. ಇವರ ಕೃತಿಗಳು ಚಿತ್ರ, ರೇಖಾಚಿತ್ರಗಳಿಂದ ಹಿಡಿದು ಛಾಯಾಚಿತ್ರಣ, ಕಲಾವಿದರ ಪುಸ್ತಕಗಳು, ಇನ್ಸ್‌ಟಾಲ್ಲೇಷನ್ ತನಕ ಅನೇಕ ಹಾದಿಗಳನ್ನು ತುಳಿದಿವೆ. ಕಳೆದ ಮೂರು ದಶಕಗಳಿಂದ ವೈಯುಕ್ತಿಕ ಹಾಗೂ ಸಾಮೂಹಿಕ ಸಮಕಾಲೀನ ಅನುಭವಕ್ಕೆ ಅವರು ತೀವ್ರವಾಗಿ ಸ್ಪಂದಿಸಿದ್ದಾರೆ. ವಿಭಿನ್ನ ಸಸ್ಯ ಮೂಲದ ನಾರಿನಿಂದ ಕಾಗದವನ್ನು ತಯಾರಿಸಿ ಅದನ್ನು ತಮ್ಮ ಕೃತಿಗಳಲ್ಲಿ ಬಳಸುವುದು ಅವರ ಒಂದು ವಿಶೇಷ. ಕೈಯಿಂದ ಕಾಗದವನ್ನು ತಯಾರಿಸುವ ತಂತ್ರವನ್ನು ಅವರು ಗ್ಲಾಸ್ಗೋ ಮತ್ತು ಕೊರಿಯಾನಲ್ಲಿ ಕಲಿತಿದ್ದಾರೆ. ಅವರ ಕೃತಿಗಳು ಅನೇಕ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ, ಬಿನಾಲೆಗಳಲ್ಲಿ, ಮ್ಯೂಸಿಯಂಗಳಲ್ಲಿ ಪ್ರದರ್ಶನಗೊಂಡಿವೆ ಹಾಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ. ಕನ್ನಡದಲ್ಲಿ ದೃಶ್ಯಕಲೆ ಹಾಗೂ ದೃಶ್ಯ ಸಂಸ್ಕೃತಿಗಳ ಬಗ್ಗೆ ಬರೆಯುತ್ತಾರೆ. ಇವರ ಕಣ್ಣೆಲೆ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರು ಕಲಾಶಿಕ್ಷಣದಲ್ಲೂ ತೊಡಗಿದ್ದಾರೆ. ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು http://www.ravikashi.com ಗೆ ಭೇಟಿ ನೀಡಿ.
ಇದನ್ನೂ ಓದಿ : New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’
Published On - 1:03 pm, Tue, 17 August 21