Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ಸೂರ್ಯ ತಣ್ಣಗಾಗೋವರೆಗೂ ತಡೀರಿ
Story : ಅವರು ಸ್ಮಶಾನದಿಂದ ತಿರುಗಿ ಬಂದಾಗ ಮತ್ತೆ ಬಾಗಿಲನ್ನು ಬಡಿಯುವ ಅಗತ್ಯವಿಲ್ಲವೆಂದೂ, ಬೀಗದ ಕೈಯ್ಯನ್ನು ಬಾಗಿಲ ಕೆಳಗಿನ ತೂತಿನಲ್ಲಿ ತೂರಿಸಬೇಕೆಂದೂ ತಿಳಿಸಿದ್ದಲ್ಲದೆ, ಸಾಧ್ಯವಾದಲ್ಲಿ ಚರ್ಚಿಗೆ ಕಾಣಿಕೆಯನ್ನು ನೀಡುವಂತೆ ಹೇಳಿದ.
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014): ‘ಹಂಗಾಗೇ ಅವನ ಹಲ್ಲುಗಳನ್ನೆಲ್ಲಾ ಕೀಳಿಸ ಬೇಕಾಯ್ತು’, ಹುಡುಗಿ ಮಧ್ಯೆ ಬಾಯಿ ಹಾಕಿ ಅಂದಳು. ‘ಅದು ನಿಜ. ಆ ದಿನಗಳಲ್ಲಿ ನಾವು ತಿನ್ನುತ್ತಿದ್ದ ಒಂದೊಂದು ತುತ್ತೂ ಕೂಡಾ ನನ್ನ ಕಂದ ಶನಿವಾರದ ರಾತ್ರಿಗಳಲ್ಲಿ ತಿನ್ನುತ್ತಿದ್ದ ಹೊಡೆತಗಳ ಪ್ರತಿಫಲವಾಗಿರುತ್ತಿತ್ತು’, ಮಗಳ ಮಾತಿಗೆ ಮಾತು ಸೇರಿಸಿದಳು ತಾಯಿ. ‘ಬಲ್ಲವರಾರು ದೈವಿಚ್ಛೆಯನು’, ಅಂದ ಪಾದ್ರಿ. ಆದರದೊಂದು ಸುಮ್ಮನೆ ಆಡಿದ ಮಾತಾಗಿತ್ತು. ಅಂಥ ಮಾಮೂಲಿ ಮಾತಿಗೆ ಅವನ ಅನುಭವ ಅವನನ್ನು ಕೊಂಚ ಅನುಮಾನದ ಪ್ರಾಣಿಯನ್ನಾಗಿಸಿದ್ದುದು ಒಂದು ಕಡೆಗಿದ್ದರೆ, ಬಿಸಿಲಿನ ಝಳ ಮತ್ತೊಂದು ಕಡೆಗಿತ್ತು. ಸೂರ್ಯನ ಹೊಡೆತದಿಂದ ಪಾರಾಗಲು ತಲೆಯ ಮೇಲೆ ಏನನ್ನಾದರೂ ಹಾಕಿಕೊಂಡು ಹೋಗುವಂತೆ ಅವರಿಗೆ ಸೂಚಿಸಿದ. ಜೊತೆಗೆ ಹೆಚ್ಚೂ ಕಡಿಮೆ ನಿದ್ದೆಗೆ ಬಿದ್ದವನಂತೆ ಆಕಳಿಸುತ್ತಾ, ಕಾರ್ಲೋಸ್ ಸೆಂತೇನೊ ಗೋರಿಯನ್ನು ಹುಡುಕುವ ಬಗೆಯ ಬಗ್ಗೆ ಸೂಚನೆಗಳನ್ನು ಕೊಟ್ಟ.
ಕಥೆ : ಗೋರಿಯ ದಾರಿಯಲ್ಲಿ | ಮೂಲ : ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ
(ಭಾಗ 5)
ಅಲ್ಲದೆ ಅವರು ಸ್ಮಶಾನದಿಂದ ತಿರುಗಿ ಬಂದಾಗ ಮತ್ತೆ ಬಾಗಿಲನ್ನು ಬಡಿಯುವ ಅಗತ್ಯವಿಲ್ಲವೆಂದೂ, ಬೀಗದ ಕೈಯ್ಯನ್ನು ಬಾಗಿಲ ಕೆಳಗಿನ ತೂತಿನಲ್ಲಿ ತೂರಿಸಬೇಕೆಂದೂ ತಿಳಿಸಿದ್ದಲ್ಲದೆ, ಸಾಧ್ಯವಾದಲ್ಲಿ ಚರ್ಚಿಗೆ ಕಾಣಿಕೆಯನ್ನು ನೀಡುವಂತೆ ಹೇಳಿದ. ಪಾದ್ರಿ ಹೇಳಿದ್ದನ್ನೆಲ್ಲಾ ಹುಡುಗಿಯ ತಾಯಿ ಅಪಾರ ಆಸಕ್ತಿಯಿಂದ ಆಲಿಸಿದಳು. ಅವನಿಗೆ ವಂದಿಸಿದಾಗ ಅವಳ ಮುಖದಲ್ಲಿ ಯಾವ ನಗುವೂ ಇರಲಿಲ್ಲ.
ಅವರು ರಸ್ತೆಗೆ ಹೋಗುವ ಬಾಗಿಲನ್ನು ತೆರೆಯುವುದಕ್ಕೂ ಮುನ್ನ, ಅಲ್ಲಿ ಲೋಹದ ಕಿಂಡಿಯಲ್ಲಿ ಆ ಕಿಂಡಿಗೆ ಮೂಗನ್ನು ಆನಿಸಿಕೊಂಡು ಯಾರೋ ಒಳಗಡೆ ನೋಡುತ್ತಿರುವುದು ಪಾದ್ರಿಯ ಗಮನಕ್ಕೆ ಬಂತು. ಹೊರಗೆ ಮಕ್ಕಳ ಗುಂಪಿತ್ತು. ಬಾಗಿಲು ತೆರೆದ ತಕ್ಷಣ ಆ ಗುಂಪು ಚಕ್ಕನೆ ಚದುರಿತು. ಬಹುಮಟ್ಟಿಗೆ ಆ ಹೊತ್ತಿನಲ್ಲಿ ಆ ರಸ್ತೆಯಲ್ಲಿ ಯಾರೂ ಇರುತ್ತಿರಲಿಲ್ಲ. ಹಾಗೆ ನೋಡಿದರೆ ಈಗ ಅಲ್ಲಿ ಮಕ್ಕಳಷ್ಟೇ ಇರಲಿಲ್ಲ, ಬಾದಾಮಿ ಮರಗಳ ಕೆಳಗೆ ಜನರ ಗುಂಪುಗಳೇ ಇದ್ದವು. ಬಿಸಿಲ ಝಳದಲ್ಲಿ ಮೀಯುತ್ತಿದ್ದ ರಸ್ತೆಯನ್ನು ಪಾದ್ರಿ ಸೂಕ್ಷ್ಮವಾಗಿ ಗಮನಿಸಿದ. ಅವನಿಗೆಲ್ಲಾ ತಿಳಿದು ಹೋಯ್ತು. ನಂತರ ಅವನು ಮೆಲ್ಲಗೆ ಮತ್ತೆ ಬಾಗಿಲು ಮುಚ್ಚಿದ.
‘ಒಂದು ನಿಮಿಷ ತಾಳಿ’, ಹುಡುಗಿಯ ತಾಯಿಯತ್ತ ನೋಡದೆಯೇ ಅವನು ಅಂದ.
ದೂರದ ಬಾಗಿಲಿನಲ್ಲಿ ತನ್ನ ರಾತ್ರಿ ಧಿರಿಸಿನ ಮೇಲೆ ಕಪ್ಪು ಮೇಲಂಗಿಯನ್ನು ತೊಟ್ಟಿದ್ದ, ತಲೆ ಕೂದಲನ್ನು ಭುಜದವರೆಗೂ ಇಳಿ ಬಿಟ್ಟಿದ್ದ, ಪಾದ್ರಿಯ ಸಹೋದರಿ ಕಾಣಿಸಿಕೊಂಡಳು. ಅಲ್ಲದೆ ಮಾತಿಲ್ಲದೆ ಅವಳು ಪಾದ್ರಿಯನ್ನೇ ದಿಟ್ಟಿಸಿದಳು.
ಭಾಗ 4 : Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ತಿನ್ನಲು ಕೂಳಿಲ್ಲದವರ ಬಳಿ ಏನನ್ನೂ ಕದಿಯಬೇಡ
‘ಏನದು?’ ಪಾದ್ರಿ ಕೇಳಿದ.
‘ಜನ ನೋಡಿ ಬಿಟ್ಟಿದ್ದಾರೆ’, ಅವಳು ಗೊಣಗಿದಳು.
‘ನೀವೀಗ ಹಿಂದಿನ ಬಾಗಿಲಿನಿಂದ ಹೋಗೋದು ಒಳ್ಳೆಯದು’, ಅಂದ ಪಾದ್ರಿ.
‘ಅಯ್ಯೊ ಅಲ್ಲೂ ಇದಾರೆ, ಎಲ್ಲಾ ಕಿಟಕಿಗಳಿಗೆ ಕಣ್ಣಿಕ್ಕಿಕೊಂಡು ಕೂತಿದಾರೆ’.
ಅಲ್ಲಿಯವರೆಗೂ ಹುಡುಗಿಯ ತಾಯಿಗೆ ಯಾವುದೂ ಅರ್ಥವಾದಂತೆ ಕಂಡಿರಲಿಲ್ಲ. ಹಾಗಾಗಿ ಅವಳು ಆ ತೂತು ಕಿಂಡಿಯಿಂದ ರಸ್ತೆಯನ್ನು ನೋಡಲು ಯತ್ನಿಸಿದಳು. ನಂತರ ಅವಳು ಮಗಳ ಕೈಯ್ಯಲ್ಲಿದ್ದ ಹೂಗುಚ್ಚವನ್ನು ಎತ್ತಿಕೊಂಡು ಬಾಗಿಲಿನತ್ತ ನಡೆಯತೊಡಗಿದಳು. ಹುಡುಗಿ ಅವಳನ್ನು ಹಿಂಬಾಲಿಸಿದಳು.
‘ಸೂರ್ಯ ತಣ್ಣಗಾಗೋವರೆಗೂ ತಡೀರಿ’, ಅಂದ ಪಾದ್ರಿ.
‘ಈಗ ನೀವು ಹೋದ್ರಿ ಅಂದ್ರೆ, ಹಂಗೇ ಜಿನುಗಿ ಹೋಗಿ ಬಿಡ್ತೀರಿ, ಸ್ವಲ್ಪ ತಡೀರಿ ಒಂದು ಛತ್ರಿನಾದ್ರೂ ಕೊಡ್ತಿನಿ’, ರೂಮಿನ ಹಿಂಬದಿಯಿಂದ ನಿಂತಲ್ಲೇ ಅಂದಳು ಪಾದ್ರಿಯ ಸಹೋದರಿ.
‘ನಿಮ್ಮ ಕಾಳಜಿಗೆ ವಂದನೆಗಳು. ನಮಗೆಲ್ಲಾ ರೂಢಿಯಿದೆ, ಹಿಂಗೇ ಹೋದ್ರೂನೂ ನಮಗೇನೂ ಆಗೊಲ್ಲ’, ಅಂದಳು ಹುಡುಗಿಯ ತಾಯಿ.
ನಂತರ ಅವಳು ಮಗಳ ಕೈಹಿಡಿದು ರಸ್ತೆಗಿಳಿದಳು.
(ಮುಗಿಯಿತು)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/gabriel-garcia-marquez-birth-anniversary
Published On - 3:18 pm, Sun, 6 March 22