Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ತಿನ್ನಲು ಕೂಳಿಲ್ಲದವರ ಬಳಿ ಏನನ್ನೂ ಕದಿಯಬೇಡ

Story : ಹುಡುಗಿಯ ತಾಯಿಯನ್ನೇ ದಿಟ್ಟಿಸುತ್ತಾ ಮರದ ಕಟಾಂಜನದ ಮೇಲಿದ್ದ, ಅದೇ ತಾನೆ ಬರೆದು ಮುಗಿಸಿದ್ದ, ತೆರೆದ ನೋಟ್​ಬುಕ್ಕಿನ ಮೇಲಿಟ್ಟು, ಅದರ ಪುಟದಲ್ಲಿ ತೋರು ಬೆರಳಿನಿಂದ ತೋರಿಸುತ್ತಾ, ‘ಇಗಾ ಇಲ್ಲಿ ಸಹಿ ಮಾಡು’, ಅಂದ.

Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ತಿನ್ನಲು ಕೂಳಿಲ್ಲದವರ ಬಳಿ ಏನನ್ನೂ ಕದಿಯಬೇಡ
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಮತ್ತು ಎಸ್. ಗಂಗಾಧರಯ್ಯ
Follow us
ಶ್ರೀದೇವಿ ಕಳಸದ
|

Updated on: Mar 06, 2022 | 3:02 PM

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014): ಅದೆಲ್ಲಾ ಶುರುವಾಗಿದ್ದು ಕಳೆದ ಸೋಮವಾರ ಬೆಳಗಿನ ಜಾವದ ಮೂರು ಗಂಟೆಗೆ, ಅಲ್ಲಿಂದ ಕೆಲವೇ ಕೆಲವು ಮನೆಗಳಾಚೆಯಲ್ಲಿ. ಮನೆಯಲ್ಲಿ ಅಷ್ಟೋ ಇಷ್ಟೋ ಇಟ್ಟುಕೊಂಡಿದ್ದ ರೆಬೆಕ್ಕಾ ಎಂಬ ವಿಧವೆಗೆ ಆ ಹೊತ್ತಲ್ಲಿ ಜಿಡಿಮಳೆಯ ಸದ್ದಿನ ನಡುವೆಯೂ, ತನ್ನ ಮನೆಯ ಮುಂಬಾಗಿಲನ್ನು ಹೊರಗಿನಿಂದ ಯಾರೋ ಬೇಕಂತಲೇ ಒಡೆಯಲು ಯತ್ನಿಸುತ್ತಿದ್ದುದು ಕೇಳಿಸಿತ್ತು. ಆಗ ಮೆಲೆದ್ದ ಅವಳು ಕರ್ನಲ್ ಅರೆಲಿಯಾನೋ ಬುಯೆಂದಿಯಾ ಕಾಲದಿಂದ ಯಾರೊಬ್ಬರೂ ಅದರ ತಂಟೆಗೇ ಹೋಗದ, ಕೈ ಕೋವಿಯನ್ನು ಕತ್ತಲೆಯಲ್ಲೇ ತಡವಿ ಎತ್ತಿಕೊಂಡು, ದೀಪಗಳನ್ನೂ ಹಚ್ಚದೆ, ನಡುಮನೆಗೆ ನಡೆದಿದ್ದಳು. ಬಾಗಿಲ ಬೀಗದತ್ತ ಆಗುತ್ತಿದ್ದ ಸದ್ದಿಗಿಂತ ಹೆಚ್ಚಾಗಿ, ಕಳೆದ ಇಪ್ಪತ್ತೆಂಟು ವರ್ಷಗಳ ಒಂಟಿತನ ಬೆಳೆಸಿದ್ದ ಭಯದಲ್ಲೇ, ಬಾಗಿಲು ಯಾವ ಕಡೆಯಿದೆ ಎಂಬುದಷ್ಟೇ ಅಲ್ಲದೆ, ಅದರ ಬೀಗ ಕೂಡಾ ಇಷ್ಟೇ ಎತ್ತರದಲ್ಲಿದೆ ಎಂಬುದನ್ನೂ ಊಹಿಸಿಕೊಂಡೇ ಅತ್ತ ನಡೆದಿದ್ದಳು.

ಕಥೆ : ಗೋರಿಯ ದಾರಿಯಲ್ಲಿ | ಮೂಲ : ಗೇಬ್ರಿಯಲ್​ ಗಾರ್ಸಿಯಾ ಮಾರ್ಕ್ವೆಝ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ

(ಭಾಗ 4)

ಕೈ ಕೋವಿಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದು, ಕಣ್ಣುಗಳನ್ನು ಮುಚ್ಚಿ, ಆ ಕೋವಿಯ ಕುದುರೆಯನ್ನು ಮೀಟಿ ಬಿಟ್ಟಿದ್ದಳು. ಅದು ಅವಳ ಜೀವನದಲ್ಲೇ ಹಾರಿಸಿದ್ದ ಮೊದಲ ಗುಂಡಾಗಿತ್ತು. ಅದು ಸಿಡಿದ ಕೆಲವು ಕ್ಷಣಗಳವರೆಗೆ ಅವಳಿಗೆ ಮಾಡಿನ ಮೇಲೆ ಜಿಡಿ ಮಳೆ ಮಾಡುತ್ತಿದ್ದ ಸದ್ದಿನ ಹೊರತು ಮತ್ತೇನೂ ಕೇಳಿಸಿರಲಿಲ್ಲ. ನಂತರ ಅಲ್ಲಿ ಸಿಮೆಂಟಿನ ನೆಲದ ಮೇಲೆ ಏನೋ ದಪ್ಪಂತ ಬಿದ್ದ ಸದ್ದು, ಅದರ ಹಿಂದೆಯೇ ಬಳಲಿದ್ದ, ಆದರೆ ಗೆಲುವಾಗಿದ್ದ ‘ಅಮ್ಮಾ’, ಅಂದ ಸದ್ದು ಕೇಳಿತ್ತು. ಬೆಳಿಗ್ಗೆ ನೋಡಿದರೆ, ಅಲ್ಲೊಬ್ಬ ವ್ಯಕ್ತಿ ಸತ್ತು ಬಿದ್ದಿದ್ದ. ಬಣ್ಣಬಣ್ಣದ ಗೆರೆಯ ಅಂಗಿ ತೊಟ್ಟಿದ್ದ, ಬರಿಗಾಲಿನಲ್ಲೇ ಇದ್ದ, ಹಳೆಯ ಪ್ಯಾಂಟಿಗೆ ಬೆಲ್ಟಿನ ಬದಲು ಹಗ್ಗದ ಹುರಿ ಕಟ್ಟಿದ್ದ, ಛಿದ್ರಗೊಂಡಿದ್ದ ಮೂಗಿನೊಂದಿಗೆ ಅಸು ನೀಗಿದ್ದ. ಅಲ್ಲಿ ಆ ನಗರದಲ್ಲಿ ಅವನ ಗುರುತು ಯಾರೊಬ್ಬರಿಗೂ ಇರಲಿಲ್ಲ.

‘ಅವನ ಹೆಸರು ಕಾರ್ಲೋಸ್ ಸೆಂತೇನೋ ಅಂತ’, ಬರೆಯುವುದ ಮುಗಿಸುತ್ತಾ ಪಾದ್ರಿ ಗೊಣಗಿಕೊಂಡ. ‘ಸೆಂತೇನೋ ಅಯಾಲ ಅಂತ, ನನಗಿದ್ದ ಒಬ್ಬನೇ ಒಬ್ಬ ಮಗ’, ಅಂದಳು ಹುಡುಗಿಯ ತಾಯಿ. ಪಾದ್ರಿ ಮತ್ತೆ ಅಲಮಾರುವಿನತ್ತ ಹೋದ. ಆ ಅಲಮಾರುವಿನ ಒಳ ಭಾಗದಲ್ಲಿ ತುಕ್ಕು ಹಿಡಿದ ಎರಡು ಬೀಗದ ಕೈಗಳನ್ನು ನೇತು ಹಾಕಲಾಗಿತ್ತು. ಕೆಲವೊಮ್ಮೆ ಖುದ್ದು ಪಾದ್ರಿಯೇ ಅಂದುಕೊಂಡಂತೆ, ಚಿಕ್ಕವಳಿದ್ದಾಗ ತನ್ನ ತಾಯಿಯೂ ಅಂದುಕೊಂಡಿದ್ದಂತೆ, ಆ ಬೀಗದ ಕೈಗಳು ಸಂತ ಪೀಟರನವೇ ಆಗಿರಬೇಕು, ಅಂತ ಹುಡುಗಿ ಕಲ್ಪಿಸಿಕೊಂಡಳು. ಪಾದ್ರಿ ಅವುಗಳನ್ನು ತೆಗೆದುಕೊಂಡು, ಹುಡುಗಿಯ ತಾಯಿಯನ್ನೇ ದಿಟ್ಟಿಸುತ್ತಾ ಮರದ ಕಟಾಂಜನದ ಮೇಲಿದ್ದ, ಅದೇ ತಾನೆ ಬರೆದು ಮುಗಿಸಿದ್ದ, ತೆರೆದ ನೋಟ್ ಬುಕ್ಕಿನ ಮೇಲಿಟ್ಟು, ಅದರ ಪುಟದಲ್ಲಿ ತೋರು ಬೆರಳಿನಿಂದ ತೋರಿಸುತ್ತಾ, ‘ಇಗಾ ಇಲ್ಲಿ ಸಹಿ ಮಾಡು’, ಅಂದ.

ಭಾಗ 2 : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ದಲ್ಲಾಳಿ ಅಂಗಡಿ ಮಾತ್ರ ತೆರೆದಿತ್ತು

ಹುಡುಗಿಯ ತಾಯಿ ತನ್ನ ಕೈಲ್ಲಿದ್ದ ಕೈ ಚೀಲವನ್ನು ಕಂಕುಳಲ್ಲಿ ಇರುಕಿಕೊಂಡು, ಪಾದ್ರಿ ತೋರಿಸಿದಲ್ಲಿ ತನ್ನ ಹೆಸರನ್ನು ಗೀಚಿದಳು. ಹೂಗಳನ್ನು ಎತ್ತಿಕೊಂಡು, ತಿರುವು ಹೆಜ್ಜೆಗಳನ್ನು ಹಾಕಿಕೊಂಡು, ಕಾಟಾಂಜನದ ಹತ್ತಿರಕ್ಕೆ ಬಂದ ಹುಡುಗಿ, ಕುತೂಹಲದಿಂದ ತನ್ನ ತಾಯಿಯನ್ನೇ ದಿಟ್ಟಿಸಿದಳು. ಪಾದ್ರಿ ನಿಟ್ಟುಸಿರುಬಿಟ್ಟ.

‘ಅಲ್ಲ ಅವನಿಗೊಂಚೂರು ಬುದ್ಧಿ ಹೇಳಿ ತಿದ್ದಿ ಸರಿಯಾದ ದಾರಿಗೆ ತರಲು ನೀನು ಎಂದಾದರೂ ಪ್ರಯತ್ನಿಸಿದ್ದೆಯಾ?’

‘ಅವನು ತುಂಬಾ ಸಾಧು ಪ್ರಾಣಿಯಾಗಿದ್ದ’, ಅಂದಳು ಹುಡುಗಿಯ ತಾಯಿ ಸಹಿ ಹಾಕಿ ಮುಗಿಸಿ. ಪಾದ್ರಿ ಮೊದಲು ಹುಡುಗಿಯ ತಾಯಿಯನ್ನೂ ನಂತರ ಹುಡುಗಿಯನ್ನೂ ದಿಟ್ಟಿಸಿ, ಅವರಿಗಿನ್ನೂ ಬಾರದಿದ್ದ ಅಳುವನ್ನು ಕಂಡು, ಸಾತ್ವಿಕ ಅಚ್ಚರಿಯೊಂದು ಅವನಿಗೆ ಮನವರಿಕೆಯಾಯ್ತು. ಹುಡುಗಿಯ ತಾಯಿ ಹಿಂದಿನ ಅದೇ ದನಿಯಲ್ಲಿ ಮುಂದುವರೆಸಿದಳು:

‘ನಾನವನಿಗೆ ಹೇಳಿದ್ದೆ, ತಿನ್ನಲು ಕೂಳಿಲ್ಲದವರ ಬಳಿ ಎಂದೂ ಯಾವತ್ತೂ ಏನನ್ನೂ ಕದಿಯಬೇಡ, ಅಂತ. ಅದಕ್ಕವನು ಒಪ್ಪಿಕೊಂಡೂ ಇದ್ದ. ಮತ್ತೊಂದು ಸಂಗತಿ ಅಂದ್ರೆ, ಅವನು ಬಾಕ್ಸಿಂಗ್‌ಗೆ ಹೋಗುತ್ತಿದ್ದಾಗ ಅವನಿಗೆ ಬೀಳುತ್ತಿದ್ದ ಹೊಡೆತಗಳು ಹೆಂಗಿರುತ್ತಿದ್ದವು ಅಂದ್ರೆ, ಆಗ ಅವನು ಬರೋಬ್ಬರಿ ಮೂರು ದಿನ ಹಾಸಿಗೆ ಬಿಟ್ಟು ಏಳ್ತಾನೇ ಇರಲಿಲ್ಲ.’

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 3 : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಸ್ಮಶಾನದ ಬೀಗದಕೈ ಬೇಕಾಗಿತ್ತು