Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ದಲ್ಲಾಳಿ ಅಂಗಡಿ ಮಾತ್ರ ತೆರೆದಿತ್ತು

Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ದಲ್ಲಾಳಿ ಅಂಗಡಿ ಮಾತ್ರ ತೆರೆದಿತ್ತು
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಮತ್ತು ಎಸ್. ಗಂಗಾಧರಯ್ಯ

Story : ‘ನಿಂಗೆ ಏನಾದ್ರೂ ಮಾಡ್ಕೋಬೇಕು ಅನ್ಸಿದ್ರೆ ಈಗ್ಲೇ ಮಾಡ್ಕೊಂಡು ಬಿಡು, ಆಮೇಲೆ ಬಾಯಾರಿ ಸಾಯಂಗಾದ್ರೂ ಒಂದು ತೊಟ್ಟು ನೀರನ್ನೂ ಕುಡಿಯಕೂಡದು, ಅದ್ಕಿಂತ ಮುಖ್ಯ ಅಂದ್ರೆ, ಅಳಕೂಡದು ತಿಳೀತಾ’, ಅಂದಳು ಹೆಂಗಸು.

ಶ್ರೀದೇವಿ ಕಳಸದ | Shridevi Kalasad

|

Mar 06, 2022 | 3:20 PM

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014): ಹುಡುಗಿ ತಲೆ ಬಾಚಿಕೊಳ್ಳತೊಡಗಿದಂತೆ ರೈಲು ಸಿಳ್ಳೆ ಹಾಕತೊಡಗಿತು. ಹೆಂಗಸು ತನ್ನ ಕೊರಳ ಮೇಲಿನ ಬೆವರನ್ನೂ, ಮುಖದ ಮೇಲಿನ ಎಣ್ಣೆಯ ಜಿಡ್ಡನ್ನೂ ಬೆರಳುಗಳಿಂದ ತೀಡಿಕೊಂಡಳು. ಹುಡುಗಿ ತಲೆ ಬಾಚುವುದನ್ನು ನಿಲ್ಲಿಸುವ ಹೊತ್ತಿಗೆ ರೈಲು ದೊಡ್ಡದಾಗಿದ್ದ ಆದರೆ, ಮುಂಚಿನ ನಗರಗಳಿಗಿಂತ ವಿಷಣ್ಣವಾಗಿದ್ದ ನಗರವೊಂದರ ಹೊರವಲಯದ ಮನೆಗಳನ್ನು ಹಿಂದಿಕ್ಕಿ ಓಡುತ್ತಿತ್ತು. ‘ನಿಂಗೆ ಏನಾದ್ರೂ ಮಾಡ್ಕೋಬೇಕು ಅನ್ಸಿದ್ರೆ ಈಗ್ಲೇ ಮಾಡ್ಕೊಂಡು ಬಿಡು, ಆಮೇಲೆ ಬಾಯಾರಿ ಸಾಯಂಗಾದ್ರೂ ಒಂದು ತೊಟ್ಟು ನೀರನ್ನೂ ಕುಡಿಯಕೂಡದು, ಅದ್ಕಿಂತ ಮುಖ್ಯ ಅಂದ್ರೆ, ಅಳಕೂಡದು ತಿಳೀತಾ’, ಅಂದಳು ಹೆಂಗಸು. ಹುಡುಗಿ ತಲೆಯಾಡಿಸಿದಳು. ರೈಲಿನ ಸಿಳ್ಳೆ ಮತ್ತು ಹಳೆಯ ಬೋಗಿಗಳ ದಡಬಡ ಸದ್ದನ್ನು ಜೊತೆಗಾಕಿಕೊಂಡು ಒಣಗಿದ, ಸುಡುಗಾಳಿ ಕಿಟಕಿಯಿಂದ ನುಗ್ಗಿತು. ಉಳಿಕೆ ತಿಂಡಿಯನ್ನು ಪ್ಲಾಸ್ಟಿಕ್ ಚಿಲಕ್ಕೆ ಹಾಕಿ, ಅದನ್ನು ಕೈಚೀಲದೊಳಕ್ಕೆ ಸೇರಿಸಿದಳು ಹೆಂಗಸು.

ಕಥೆ : ಗೋರಿಯ ದಾರಿಯಲ್ಲಿ | ಮೂಲ : ಗೇಬ್ರಿಯಲ್​ ಗಾರ್ಸಿಯಾ ಮಾರ್ಕ್ವೆಝ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ

(ಭಾಗ 3)

ಅಗಸ್ಟ್ ತಿಂಗಳ ಮಂಗಳವಾರದ ಸುಡು ಬಿಸಿಲಿನಲ್ಲಿ ಆ ನಗರದ ಚಿತ್ರ ಒಂದರೆ ಕ್ಷಣ ಕಿಟಕಿಯಲ್ಲಿ ಬೆಳಗಿತು. ತೊಯ್ದು ತೊಪ್ಪೆಯಾಗಿದ್ದ ದಿನ ಪತ್ರಿಕೆಗಳಿಂದ ಹೂಗಳನ್ನು ಸುತ್ತಿದ ಹುಡುಗಿ, ಕಿಟಕಿಯಿಂದ ಕೊಂಚ ದೂರ ಸರಿದು, ತನ್ನ ತಾಯಿಯನ್ನೇ ದಿಟ್ಟಿಸಿದಳು. ಅದಕ್ಕೆ ಪ್ರತಿಯಾಗಿ ಅವಳ ತಾಯಿಯ ಕಡೆಯಿಂದ ಪ್ರೀತಿ ತುಂಬಿದ ನೋಟ ದಕ್ಕಿತವಳಿಗೆ. ರೈಲು ಸಿಳ್ಳೆ ಹಾಕುತ್ತಾ ವೇಗ ಕುಗ್ಗಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಪೂರಾ ನಿಂತಿತು. ಯಾರಿಲ್ಲದೆ ನಿಲ್ದಾಣ ಬಿಕೋ ಅನ್ನುತ್ತಿತ್ತು. ರಸ್ತೆಯ ಮತ್ತೊಂದು ಬದಿಯಲ್ಲಿ, ಬಾದಾಮಿ ಮರಗಳ ನೆರಳಿನಡಿಯಲ್ಲಿದ್ದ ಕಿರುದಾರಿಯಲ್ಲಿ ದಲ್ಲಾಳಿ ಅಂಗಡಿಯೊಂದು ಮಾತ್ರ ತೆರೆದಿತ್ತು. ಇಡಿ ನಗರ ಬಿಸಿಲಿನ ಝಳದಲ್ಲಿ ತೇಲುತ್ತಿತ್ತು. ರೈಲಿನಿಂದ ಇಳಿದ ಅಮ್ಮ ಮಗಳು ಬಳಸದೇ ಬಿಟ್ಟಿದ್ದ, ಅದರ ನೆಲಕ್ಕೆ ಹಾಸಿದ್ದ ಹೆಂಚುಗಳ ನಡುವೆ ಗರಿಕೆ ಇಣುಕುತ್ತಿದ್ದ, ನಿಲ್ದಾಣವನ್ನು ದಾಟಿ ನೆರಳು ಕವಿದಿದ್ದ ರಸ್ತೆಯತ್ತ ನಡೆದರು.

ಹೆಚ್ಚೂಕಡಿಮೆ ಗಂಟೆ ಎರಡಾಗಿತ್ತು. ಇಡೀ ನಗರವನ್ನು ಹಿಡಿದುಕೊಂಡಿದ್ದ ಜಡತ್ವದ ಭಾರಕ್ಕೆ ಅದು ಮಧ್ಯಾಹ್ನದ ಲಘುನಿದ್ದೆಯಲ್ಲಿ ಮುಳುಗಿ ಹೋಗಿತ್ತು. ಹನ್ನೊಂದಕ್ಕೇ ಮುಚ್ಚಿದ್ದ ಅಂಗಡಿಗಳು, ಕಚೇರಿಗಳು, ಸರ್ಕಾರಿ ಸ್ಕೂಲುಗಳು ನಾಲ್ಕು ಗಂಟೆಗೆ ಕೊಂಚ ಮುಂಚೆ ಅಂದರೆ, ರೈಲು ತಿರುಗಿ ಬರುವ ವೇಳೆಗಿಂತ ಮುಂಚೆ ತೆರೆಯುತ್ತಿರಲಿಲ್ಲ. ನಿಲ್ದಾಣದ ಆಚೆಯಿದ್ದ ಹೋಟೆಲ್, ಅದರ ಬಾರು, ದಲ್ಲಾಳಿ ಅಂಗಡಿ ಮತ್ತು ಟೆಲಿಗ್ರಾಫ್ ಆಫೀಸುಗಳು ಮಾತ್ರ ತೆರೆದಿದ್ದವು. ಬಹಳಷ್ಟು ಮನೆಗಳು ಒಳಗಿನಿಂದ ಬೀಗ ಹಾಕಿಕೊಳ್ಳುವಂಥ, ಪರದೆಗಳನ್ನು ಬಿಟ್ಟುಕೊಳ್ಳುವಂಥ, ಬಾಳೆ ಹಣ್ಣಿನ ಕಂಪನಿಯವರ ಮಾದರಿಯಲ್ಲಿ ಕಟ್ಟಲ್ಪಟ್ಟಿದ್ದವು. ಬಿಸಿಲಿನ ಝಳ ಎಷ್ಟಿತ್ತೆಂದರೆ, ಕೆಲವು ಮನೆಯವರು ತಮ್ಮ ಮನೆಯ ಅಂಗಳಗಳಲ್ಲಿ ಕೂತು ತಿನ್ನುತ್ತಿದ್ದರು. ಮತ್ತೆ ಕೆಲವರು ಬೀದಿಯ ಬಾದಾಮಿ ಮರಗಳ ನೆರಳಿನಲ್ಲಿ ಗೋಡೆಗಳಿಗೆ ಕುರ್ಚಿಗಳನ್ನು ತಾಕಿಸಿಕೊಂಡು, ಅಲ್ಲೇ ಮಧ್ಯಾಹ್ನದ ಜೊಂಪು ಹಾರಿಸುತ್ತಿದ್ದರು.

ಇದನ್ನೂ ಓದಿ : Gabriel Garcia Marquez’s Birth Anniversary: ಆ ಊರಿನ ಜನರೆಲ್ಲ ಇದ್ದಕ್ಕಿದ್ದಂತೆ ನಿದ್ದೆ ಬಾರದ ರೋಗಕ್ಕೆ ಈಡಾಗುತ್ತಾರೆ

ಅಂಥವರ ಲಘುನಿದ್ದೆಗೆ ಭಂಗ ಬಾರದ ರೀತಿಯಲ್ಲಿ ಅಮ್ಮ ಮಗಳಿಬ್ಬರೂ ನಗರವನ್ನು ಹೊಕ್ಕು ಸೀದಾ ಪಾದ್ರಿಯ ಮನೆಯನ್ನು ತಲುಪಿದರು. ಬೆರಳ ಉಗುರಿನಿಂದ ಆ ಮನೆಯ ಬಾಗಿಲ ಲೋಹದ ಕಿಂಡಿಯನ್ನು ಕೆರೆದ ಹೆಂಗಸು, ಕೊಂಚ ಹೊತ್ತು ಕಾದು ಮತ್ತೆ ಕೆರೆದಳು. ಒಳಗೆ ಫ್ಯಾನ್ ತಿರುಗುವ ಸದ್ದು ಕೇಳಿಸುತ್ತಿತ್ತು. ಹೆಜ್ಜೆಯ ಸದ್ದುಗಳು ಕೇಳಿಸಲಿಲ್ಲ. ಬಾಗಿಲು ಕಿರುಗುಟ್ಟಿದ್ದು ಮತ್ತು ಮುಂಜಾಗ್ರತೆಯ ದನಿಯೊಂದು ಲೋಹದ ಕಿಂಡಿಯಾಚೆಯಿಂದ,

‘ಯಾರದು?’ ಅಂದದ್ದನ್ನು ಅವರಿಬ್ಬರೂ ಪ್ರಯಾಸದಿಂದ ಕೇಳಿಸಿಕೊಂಡರು. ಹೆಂಗಸು ಆ ಕಿಂಡಿಯಿಂದ ಇಣುಕುತ್ತಲೇ ‘ಪಾದ್ರಿಗಳು ಬೇಕಾಗಿತ್ತು’, ಅಂದಳು.

‘ಅವರೀಗ ನಿದ್ದೆ ಮಾಡ್ತಿದಾರೆ’.

‘ತುಂಬಾ ತುರ್ತಾಗಿ ನೋಡ್ಬೇಕು’, ಹೆಂಗಸು ಆಗ್ರಹಿಸಿದಳು.

ಅವಳ ದನಿಯಲ್ಲಿ ದೃಢ ನಿರ್ದಾರವಿತ್ತು.

ಸದ್ದು ಮಾಡದೆ ಬಾಗಿಲು ಕೊಂಚ ತೆರೆದುಕೊಂಡಿತು. ಬಿಳಿಚಿದ ಚರ್ಮದ, ಕಬ್ಬಿಣದ ಬಣ್ಣದ ಕೂದಲಿನ, ಧಡೂತಿ ಮುದಿಹೆಂಗಸೊಬ್ಬಳು ಕಾಣಿಸಿಕೊಂಡಳು. ಅವಳು ಹಾಕಿದ್ದ ದಪ್ಪನೆಯ ಸೋಡಾಗ್ಲಾಸಿನ ಕನ್ನಡಕದ ಹಿಂದೆ ಅವಳ ಕಣ್ಣುಗಳು ಪುಟ್ಟದಾಗಿ ಕಾಣುತ್ತಿದ್ದವು.

‘ಒಳಗೆ ಬನ್ನಿ’, ಅಂದ ಅವಳು ಬಾಗಿಲನ್ನು ಪೂರಾ ತೆರೆದಳು.

*

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ

Follow us on

Related Stories

Most Read Stories

Click on your DTH Provider to Add TV9 Kannada