Gabriel Garcia Marquez’s Birth Anniversary: ಆ ಊರಿನ ಜನರೆಲ್ಲ ಇದ್ದಕ್ಕಿದ್ದಂತೆ ನಿದ್ದೆ ಬಾರದ ರೋಗಕ್ಕೆ ಈಡಾಗುತ್ತಾರೆ

Gabriel Garcia Marquez’s Birth Anniversary: ಆ ಊರಿನ ಜನರೆಲ್ಲ ಇದ್ದಕ್ಕಿದ್ದಂತೆ ನಿದ್ದೆ ಬಾರದ ರೋಗಕ್ಕೆ ಈಡಾಗುತ್ತಾರೆ
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಮತ್ತು ಎಸ್. ಗಂಗಾಧರಯ್ಯ

Childhood of Marquez : ಮಾರ್ಕ್ವೆಝ್​ನನ್ನು ಅನೇಕ ವಿಸ್ಮಯಗಳಿಗೆ ಮುಖಾಮುಖಿಯಾಗಿಸುತ್ತಿದ್ದವನು, ಅವನಜ್ಜ. ತನ್ನ ಊರಿಗೆ ಬರುತ್ತಿದ್ದ ಸರ್ಕಸ್ಸಿಗೆ ಕರೆದೊಯ್ದು, ಅಲ್ಲಿನ ಜಿಪ್ಸಿಗಳ ಬಗ್ಗೆ, ದೊಂಬರಾಟದ ಕಲಾವಿದರ ಬಗ್ಗೆ, ಸವಾರಿ ಒಂಟೆಗಳ ಬಗ್ಗೆ ಹೇಳುತ್ತಿದ್ದ.

ಶ್ರೀದೇವಿ ಕಳಸದ | Shridevi Kalasad

|

Mar 06, 2022 | 1:08 PM

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014) : ಮಾರ್ಕ್ವೆಝ್  ಹದಿಮೂರು ವರ್ಷ ವಯಸ್ಸಿನವನಾಗಿದ್ದಾಗ ಅವನನ್ನು ಹುಟ್ಟಿದ ಊರು ಅರಕಾಟಕಾದಿಂದ ಬೊಗಾಟಾ ಎಂಬ ಊರಿಗೆ ಓದುವ ಸಲುವಾಗಿ ಕಳಿಸಲಾಗುತ್ತದೆ. ಕಡಲತಡಿಯಿಂದ ಬಂದ ಈ ಹದಿಮೂರರ ಪೊರನಿಗೆ ಇದ್ದಕ್ಕಿದ್ದಂತೆ ತನ್ನ ಲೊಕಕ್ಕಿಂತ ಭಿನ್ನವಾದ ಲೋಕವೊಂದಕ್ಕೆ ಬದುಕಲು ಬಲವಂತಪಡಿಸುವುದಕ್ಕಿಂತಲೂ ಕಠೋರವಾದದ್ದು ಹಾಗೂ ಗಲಿಬಿಲಿಗೊಳಿಸುವಂಥಾದ್ದು ಬೇರೊಂದಿರಲಿಲ್ಲ. ಆಗ ಅವನನ್ನು ಸಂತೈಸಲು ನೆರವಿಗೆ ಬಂದದ್ದೇ ಓದುವ ಅಭ್ಯಾಸ. ಹೀಗೆ ಓದುವಾಗ ಇವನನ್ನು ಕಾದಂಬರಿಯ ಲೊಕಕ್ಕೆ ಆಕರ್ಷಿಸಿದ್ದು ಹಾಗೂ ಕಾದಂಬರಿಕಾರನಾಗುವಂತೆ ಮಾಡಿದ್ದು ಕಾಫ್ಕಾನ ‘ಮೆಟಾಮಾರ್ಫಸಿಸ್’ ಅನ್ನುವ ಕಾದಂಬರಿ. ಆ ಕಾದಂಬರಿಯ ಮೊದಲ ಸಾಲುಗಳಾದ ‘ಒಂದು ದಿನ ಬೆಳಿಗ್ಗೆ ಗ್ರೆಗೋರ್ ಸಂಸ ಆತಂಕದ ಕನಸುಗಳಿಂದ ಎಚ್ಚರಗೊಂಡಾಗ, ತಾನೊಂದು ದೈತ್ಯ ಕೀಟವಾಗಿ ಪರಿವರ್ತನೆಗೊಂಡು ಬಿಟ್ಟಿರುತ್ತಾನೆ,’ ಅನ್ನುವ ಸಾಲುಗಳನ್ನು ಓದಿ ಮಾರ್ಕ್ವೆಝ್ ನಡುಗುತ್ತಾ ಪುಸ್ತಕವನ್ನು ಮುಚ್ಚಿಟ್ಟು ಬಿಡುತ್ತಾನೆ. ಅದಾದ ಮರುದಿನವೇ ತನ್ನ ಮೊಟ್ಟ ಮೊದಲ ಕಥೆ ಬರೆಯುತ್ತಾನೆ. ಎಸ್. ಗಂಗಾಧರಯ್ಯ, ಕಥೆಗಾರ, ಅನುವಾದಕ

(ಭಾಗ 2) ಮಗ ಓದುವುದನ್ನು ಬಿಟ್ಟು ಬರವಣಿಗೆಯೆಂಬ ಮರೀಚಿಕೆಯ ಬೆನ್ನು ಹತ್ತಿರುವುದು ತಿಳಿಯುತ್ತಿದ್ದಂತೆಯೇ ಮಾಜಿ ಟೆಲಿಗ್ರಾಫ್ ಆಪರೇಟರ್ ಆಗಿದ್ದ ಮಾರ್ಕ್ವೆಝ್​ನ ಅಪ್ಪನಿಗೆ ಇವನು ದಾರಿತಪ್ಪಿದ ಮಗನಂತೆ ಕಾಣತೊಡಗುತ್ತನೆ. ಅದೇ ರೀತಿ, ಅಸ್ತವ್ಯಸ್ತವಾಗಿ ಬಟ್ಟೆ ತೊಟ್ಟುಕೊಂಡು ಸಿಕ್ಕ ಸಿಕ್ಕ ಪುಸ್ತಕಗಳನ್ನು ಹುಚ್ಚನಂತೆ ಓದುತ್ತಾ ಅಲೆಮಾರಿಯಂತೆ ಅಲೆಯುತ್ತಿದ್ದ ಮಾರ್ಕ್ವೆಝ್​ನನ್ನು ಕಂಡು ಅವನ ಗೆಳೆಯರೂ ಅದೇ ತೀರ್ಮಾನಕ್ಕೆ ಬಂದಿದ್ದರು.

ಹಳ್ಳಿಗಣ್ಣಿನ ಅಸಲಿ ಕಸುಬುದಾರನಾಗಿದ್ದ ಮಾರ್ಕ್ವೆಝ್, ‘ಸಾಮಾನ್ಯವಾಗಿ ಒಬ್ಬ ಲೇಖಕ ಬರೆಯೋದು ಒಂದೇ ಕೃತಿ. ಆದರೆ ಅದು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಬೇರೆ ಬೇರೆ ಸಂಪುಟಗಳಲ್ಲಿ ಕಾಣಿಸಿಕೊಳ್ಳಬಹುದು,’ ಅಂತ ನಂಬಿದ್ದ. ಐದು ವರ್ಷದ ಮಗುವಾಗಿದ್ದಾಗ ಅವನ ಅಜ್ಜಿ ಡೋನಾ ಟ್ರ್ಯಾಂಕ್ವಿಲೀನಾ ಮಾರ್ಕ್ವೆಝ್​ಗೆ ತನ್ನ ಮನೆಯಲ್ಲಿನ್ನೂ ಅಲೆಯುತ್ತಿದ್ದ ಸತ್ತವರ ಕಥೆಗಳನ್ನು ಹೇಳಿ ಇನ್ನಿಲ್ಲದ ಭಯ ಹುಟ್ಟಿಸುತ್ತಿದ್ದಳು. ಆದರೆ ಅಂಥ ಅಜ್ಜಿ ಹೇಳುತ್ತಿದ್ದ ಕಥೆಗಳು ಅವನಿಗೆ ಅನೇಕ ಕೃತಿಗಳ ಮೊದಲ ಸುಳಿವುಗಳನ್ನು ಕೊಟ್ಟಿದ್ದವು. ಅವಳು ಬದುಕುತ್ತಿದ್ದ ಪರಿಸರದ ಪುರಾಣಗಳು, ದಂತಕತೆಗಳು ಹಾಗೂ ನಂಬಿಕೆಗಳು, ಅವಳ ಪ್ರತಿದಿನದ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ಮುಂದೆ ಇವುಗಳನ್ನೆಲ್ಲಾ ತನ್ನ ಬರವಣಿಗೆಯಲ್ಲಿ ಉಪಯೋಗಿಸಿಕೊಳ್ಳುವಾಗ ತಾನು ಹೊಸದೇನನ್ನೂ ಕಂಡುಹಿಡಿಯುತ್ತಿಲ್ಲ, ಅಂತ ಅವನಿಗೆ ಅನಿಸುತ್ತಿತ್ತು.

ಅದೇರೀತಿ, ಮಾರ್ಕ್ವೆಝ್​ನನ್ನು ಅನೇಕ ವಿಸ್ಮಯಗಳಿಗೆ ಮುಖಾಮುಖಿಯಾಗಿಸುತ್ತಿದ್ದವನು, ಅವನ ಅಜ್ಜ. ಪ್ರತೀ ವರ್ಷವೂ ತನ್ನ ಊರಿಗೆ ಬರುತ್ತಿದ್ದ ಸರ್ಕಸ್ಸಿಗೆ ಮಾರ್ಕ್ವೆಝ್​ನನ್ನು ಕರೆದೊಯ್ದು, ಅಲ್ಲಿನ ಜಿಪ್ಸಿಗಳ ಬಗ್ಗೆ, ದೊಂಬರಾಟದ ಕಲಾವಿದರ ಬಗ್ಗೆ ಹಾಗೂ ಸವಾರಿ ಒಂಟೆಗಳ ಬಗ್ಗೆ ಹೇಳುತ್ತಿದ್ದ. ಒಮ್ಮೆ ಹಿಮಗಟ್ಟಿದ್ದ ಮಿಲೆಟ್ ಮೀನುಗಳ ಪೆಟಾರಿಯೊಂದನ್ನು ತೆರೆದು ಅದರೊಳಕ್ಕೆ ಅವನ ಕೈ ಹಿಡಿಸಿದ್ದ. ನನ್ನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಮೊಳಕೆಯೊಡೆದಿದ್ದೇ ಆ ಕ್ಷಣದಲ್ಲಿ,’ ಅಂತ ಹೇಳಿಕೊಳ್ಳುತ್ತಾನೆ ಮಾರ್ಕ್ವೆಝ್.

ಇದನ್ನೂ ಓದಿ : Gabriel Garcia Marquez’s Birth Anniversary: ಅಚ್ಚಿಗೂ ಮೊದಲು; ಕೇಶವ ಮಳಗಿ ಅನುವಾದಿಸಿದ ‘ಗದ್ಯ ಗಾರುಡಿ’ ಲಭ್ಯ

Gabriel García Marquez Birth Anniversary Special Write up by S Gangadhariah

ಮಾರ್ಕ್ವೆಝ್​ನ ಕೃತಿ

ಬದುಕಿರುವವರೆಗೂ ಪ್ರಗತಿಪರ ಆಲೋಚನೆಗಳಿಗೆ ಬದ್ಧನಾಗಿದ್ದ ಮಾರ್ಕ್ವೆಝ್, ‘ಈ ಲೋಕ ಸಮಾಜವಾದದ ಲೋಕ ಆಗಬೇಕು ಅನ್ನುವ ಆಸೆ ನನ್ನದು. ಒಂದಲ್ಲಾ ಒಂದು ದಿನ ಅದು ಆಗಿಯೇ ಆಗುತ್ತದೆ ಅನ್ನುವ ನಂಬಿಕೆ ನನ್ನದು. ಮನುಕುಲದ ತಕ್ಷಣದ ಭವಿಷ್ಯ ಸಮಾಜವಾದದಲ್ಲಿ ಅಡಗಿದೆ. ಅದೇರೀತಿ, ಕಾದಂಬರಿಗಳು ವಾಸ್ತವದ ಕಾವ್ಯಾತ್ಮಕ ಸ್ಥಳಪಲ್ಲಟವಾಗಿರಬೇಕು.’ ಅನ್ನುತ್ತಿದ್ದ. ಫಿಡೆಲ್ ಕ್ಯಾಸ್ಟ್ರೋನ ಆತ್ಮೀಯ ಗೆಳೆಯನಾಗಿದ್ದರೂ, ಸೋವಿಯತ್ ಸರ್ಕಾರ ಅಥವಾ ಕಮ್ಯುನಿಸ್ಟ್ ಲೋಕವನ್ನು ಆಳುವ ನಿರುತ್ಸಾಹಿ ಅಧಿಕಾರಿಗಳ ಅಭಿಮಾನಿಯಾಗಿರಲಿಲ್ಲ.

‘ಏಕಾಂತ’ ಮಾರ್ಕ್ವೆಝ್​ನ ಬಹುತೇಕ ಕೃತಿಗಳಲ್ಲಿ ವಿಭಿನ್ನ ನೆಲೆಗಳಲ್ಲಿ ಪ್ರಕಟಗೊಳ್ಳುತ್ತದೆ. ಅದರ ಬೇರುಗಳು ಅವನ ಸ್ವಂತ ಅನುಭವದ ಆಳದಲ್ಲಿ ಅಡಗಿವೆ. ಅರಕಾಟಕದ ಅಜ್ಜಅಜ್ಜಿಯರ ಬಲುದೊಡ್ಡ ಮನೆಯಲ್ಲಿ ಪುಟ್ಟ ಒಂಟಿ ಹುಡುಗನಾಗಿ, ಬೊಗಾಟಾ ಟ್ರ್ಯಾಮ್​ ಗಾಡಿಯಲ್ಲಿ ಭಾನುವಾರದ ಮಧ್ಯಾಹ್ನದ ದುಃಖಗಳನ್ನು ಕಾವ್ಯದೊಳಗೆ ಮುಳುಗಿಸಿಬಿಡುತ್ತಿದ್ದ, ಕೈಯ್ಯಲ್ಲಿ ಬಿಡಿಗಾಸೂ ಇಲ್ಲದ ಹುಡುಗನಾಗಿ ಹಾಗೂ ಬರಾಂಕಿಲ್ಲಾದ ವೇಶ್ಯಾಗೃಹದಲ್ಲಿ ಬದುಕುತ್ತಿದ್ದ ಯುವ ಲೇಖಕನಾಗಿ-ಏಕಾಂತದ ಭೀತಿ ಅವನನ್ನು ಸದಾ ಬೇಟೆಯಾಡಿದೆ.

‘ಒನ್ ಹಂಡ್ರೆಡ್ ಇಯಸ್ ಆಫ್ ಸಾಲಿಟ್ಯೂಡ್,’ ನಡೆಯುವ ಮಕಾಂಡೋ ಅನ್ನುವ ಊರಿನ ಜನರಿಗೆ ಇದ್ದಕ್ಕಿದ್ದಂತೆ ‘ನಿದ್ದೆ ಬಾರದ’ ರೋಗ ಬಂದುಬಿಡುತ್ತದೆ. ನಂತರ ಅದು ‘ನೆನಪು ಮಾಸಿಬಿಡುವ’ ರೋಗಕ್ಕೆ ತಿರುಗಿಬಿಡುತ್ತದೆ. ಆಗ ಅಲ್ಲಿಗೆ ಬರುವ ಮೆಲ್‌ಕಿಯಾದೆಸ್ ಎಂಬ ಜಿಪ್ಸಿ ಮುದುಕ ಈ ಕಾಯಿಲೆಗಳಿಗೆ ತೆಳುಬಣ್ಣದ ನೀರೊಂದನ್ನು ಕುಡಿಯಲು ಕೊಟ್ಟು ಅಲ್ಲಿನ ಜನರನ್ನು ಆ ರೋಗಗಳಿಂದ ಮುಕ್ತಿಗೊಳಿಸುತ್ತಾನೆ.

ಈ ಮೆಲ್‌ಕಿಯಾದೆಸ್ ಮಾರ್ಕ್ವೆಝ್​ನ ನಿಜ ಜೀವನಕ್ಕೂ ನಡೆದು ಬಂದು, ಅವನ ಕಾಯಿಲೆಗೆ ಮದ್ದು ಕೊಟ್ಟು, ತನ್ನೊಳಗಿನ ಕಥೆಗಳನ್ನೆಲ್ಲಾ ಹೇಳುವ ಸಲುವಾಗಿಯೇ ಬದುಕಿದ್ದ ಮಾರ್ಕ್ವೆಝ್​ನನ್ನು ಮತ್ತೊಂದಿಷ್ಟು ದಿನ ನಮ್ಮ ನಡುವೆ ಬದುಕುವಂತೆ ಮಾಡಿದ್ದರೆ…

(ನಿರೀಕ್ಷಿಸಿ: ಮಾರ್ಕ್ವೆಝ್​ನ ಕಥೆ ‘ಗೋರಿಯ ದಾರಿಯಲ್ಲಿ’)

ಭಾಗ 1 : Gabriel Garcia Marquez’s Birth Anniversary: ‘ವಾಸ್ತವದ ಆಧಾರವಿಲ್ಲದ ಒಂದು ಸಾಲೂ ನನ್ನ ಕಾದಂಬರಿಗಳಲ್ಲಿಲ್ಲ’

Follow us on

Most Read Stories

Click on your DTH Provider to Add TV9 Kannada