Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ

Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಮತ್ತು ಎಸ್. ಗಂಗಾಧರಯ್ಯ

Story : ಹನ್ನೆರಡಕ್ಕೆಲ್ಲಾ ಬಿಸಿಲು ತದುಕ ಹತ್ತಿತು. ಹತ್ತಿರದಲ್ಲಿ ಯಾವ ನಗರವೂ ಇಲ್ಲದ ನಿಲ್ದಾಣವೊಂದರಲ್ಲಿ ನೀರು ತುಂಬಿಸಿಕೊಳ್ಳಲೆಂದು ಹತ್ತು ನಿಮಿಷಗಳ ಕಾಲ ರೈಲು ನಿಂತಿತು. ಹೊರಗೆ ತೋಟಗಳ ನಿಗೂಢ ಮೌನದೊಳಗೆ ಪರಿಶುದ್ಧ ಕಾಣುತ್ತಿದ್ದ ನೆರಳುಗಳು.

ಶ್ರೀದೇವಿ ಕಳಸದ | Shridevi Kalasad

|

Mar 06, 2022 | 1:43 PM

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014): ಅದುರುವ ಮರಳುಗಲ್ಲುಗಳ ಸುರಂಗದಿಂದ ಆಚೆ ಬಂದ ರೈಲು ಕೊನೆಯಿಲ್ಲದ ಒಂದೇ ಥರದ ಬಾಳೆಯ ತೋಟಗಳನ್ನು ತಟಾಯ್ದು ಓಡತೊಡಗಿದಂತೆ ಗಾಳಿ ತಂಪಿಗೆ ತಿರುಗಿ, ಅವರಿಗೆ ಕಡಲ ತಡಿಯ ಮೆಲುಗಾಳಿಯ ಸ್ಪರ್ಶವನ್ನು ಮರೆಸಿತು. ರೈಲಿನ ಬೋಗಿಯ ಕಿಟಕಿಯಿಂದ ಉಸಿರು ಕಟ್ಟಿಸುವಂಥ ಹೊಗೆಯ ಕೆಟ್ಟಗಾಳಿ ನುಗ್ಗಿತು. ರೈಲು ದಾರಿಯ ಪಕ್ಕದಲ್ಲಿ ಅದರಂತೇ ಹರಿದಿದ್ದ ಕಚ್ಚಾದಾರಿಯಲ್ಲಿ ಬಾಳೆಯ ಹಸಿರು ಗೊನೆಗಳಿಂದ ಕಿಕ್ಕಿರಿದಿದ್ದ ಎತ್ತಿನ ಗಾಡಿಗಳಿದ್ದವು. ಅದರಾಚೆಗೆ ಪಾಳು ಬಿದ್ದಿದ್ದ ಕಡೆಗಳಲ್ಲಿ ವಿದ್ಯುತ್ ಫ್ಯಾನ್‌ಗಳಿದ್ದ ಕಚೇರಿಗಳು, ಕೆಂಪು ಇಟ್ಟಿಗೆಯ ಕಟ್ಟಡಗಳು ಹಾಗೂ ಧೂಳು ತುಂಬಿದ ತಾಳೆಯ ಮರ ಮತ್ತು ಗುಲಾಬಿ ಪೊದೆಗಳ ನಡುವೆ ವಾಸದ ಮನೆಗಳಿದ್ದು, ಅವುಗಳ ಮಾಡಿನ ಮೇಲೆ ಕುರ್ಚಿಗಳು, ಪುಟ್ಟ ಪುಟ್ಟ ಬಿಳಿಯ ಟೇಬಲ್ಲುಗಳಿದ್ದವು. ಅದು ಬೆಳಿಗ್ಗೆ ಹನ್ನೊಂದರ, ಇನ್ನೂ ಶುರುವಾಗಿರದಿದ್ದ ಮಾಮೇರಿ ಸೆಖೆಯ ಸಮಯ.

ಕಥೆ : ಗೋರಿಯ ದಾರಿಯಲ್ಲಿ | ಮೂಲ : ಗೇಬ್ರಿಯಲ್​ ಗಾರ್ಸಿಯಾ ಮಾರ್ಕ್ವೆಝ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ

(ಭಾಗ 1)

‘ಕಿಟಕಿ ಮುಚ್ಚೋದು ಒಳ್ಳೇದು, ಇಲ್ಲಾಂದ್ರೆ ಆ ಮಸಿ ಹೊಗೆ ನಿನ್ನ ತಲೆ ತುಂಬಾ ಕವುಕಂಡು ಬಿಡುತ್ತೆ,’ ಅಂದಳು ಹೆಂಗಸು.

ಹುಡುಗಿ ತುಕ್ಕು ಹಿಡಿದಿದ್ದ ಕಿಟಕಿಯ ಬಾಗಿಲನ್ನು ಮುಚ್ಚಲು ಯತ್ನಿಸಿದಳು, ಆದರದು ಜಪ್ಪಯ್ಯ ಅನ್ನಲಿಲ್ಲ.

ಮೂರನೇ ದರ್ಜೆಯ ಆ ಇಡೀ ಒಂಟಿ ಬೋಗಿಯಲ್ಲಿ ಅವರಿಬ್ಬರೇ ಇದ್ದರು. ಕಿಟಕಿಯ ಮೂಲಕ ಇನ್ನೂ ನುಗ್ಗುತ್ತಿದ್ದ ಆ ಕೆಟ್ಟ ಗಾಳಿಯಿಂದಾಗಿ ಹುಡುಗಿ ತಾನು ಕೂತಲ್ಲಿಂದ ಎದ್ದು, ಅವರು ತಮ್ಮೊಂದಿಗೆ ಒಯ್ಯುತ್ತಿದ್ದ ತಿಂಡಿಯ ತಿನಿಸುಗಳಿದ್ದ ಪ್ಲಾಸ್ಟಿಕ್ ಚೀಲ ಮತ್ತು ಪತ್ರಿಕೆಯೊಂದಕ್ಕೆ ಸುತ್ತಿದ್ದ ಹೂಗುಚ್ಛಗಳನ್ನು ಎತ್ತಿ ಬೇರೆಡೆ ಇಟ್ಟು, ಆ ಕಿಟಕಿಯಿಂದ ಕೊಂಚ ದೂರದ ಎದುರಿನ ಸೀಟಿನಲ್ಲಿ ತನ್ನ ತಾಯಿಯತ್ತ ಮುಖ ಮಾಡಿ ಕೂತಳು. ಅವರಿಬ್ಬರೂ ಶೋಕ ಸೂಚಕದ ತುಂಬಾ ಹಳೆಯ ದಿರಿಸಿನಲ್ಲಿದ್ದರು.

ಹುಡುಗಿ ಹನ್ನೆರಡು ವರ್ಷದವಳು, ಅಲ್ಲದೆ ಅವಳು ರೈಲಿನಲ್ಲಿ ಹೋಗುತ್ತಿದ್ದುದು ಅದೇ ಮೊದಲು. ಕಣ್ಣ ರೆಪ್ಪೆಗಳಲ್ಲಿ ಎದ್ದು ಕಾಣುತ್ತಿದ್ದ ನೀಲಿ ನರಗಳು, ಕುಳ್ಳಗಿನ, ಪಿಸುಗಲು, ಹೇಗೆಂದರೆ ಹಾಗೆ ಹರಡಿಕೊಂಡಿದ್ದ ದೇಹದಿಂದಾಗಿ ಹಾಗೂ ಪಾದ್ರಿಗಳ ನಿಲುವಂಗಿಯಂತಿದ್ದ ಅವಳು ತೊಟ್ಟಿದ್ದ ಬಟ್ಟೆಯಿಂದಾಗಿ, ಅವಳ ತಾಯಿ ಅನಿಸಿಕೊಂಡವಳಿಗಿಂತ ಹೆಚ್ಚು ವಯಸ್ಸಾದವಳಂತೆ ಕಾಣುತ್ತಿದ್ದಳು. ಬೆನ್ನು ಹುರಿಯನ್ನು ನಿಡಿದಾಗಿಸಿಕೊಂಡು ಸೀಟಿನ ಹಿಂಭಾಗಕ್ಕೆ ಅಂಟಿ ಕೂತಿದ್ದ ಅವಳ ತೊಡೆಯ ಮೇಲೊಂದು ತಾತಾ ತೂತಾ ಆಗಿದ್ದ ಚರ್ಮದ ಚೀಲವೊಂದಿದ್ದು, ಅದನ್ನವಳು ಎರಡೂ ಕೈಗಳಿಂದ ಹಿಡಿದುಕೊಂಡಿದ್ದಳು. ಬಡತನವನ್ನೇ ಹಾಸಿ ಉಂಡ ಪ್ರಾಮಾಣಿಕ ಪ್ರಸನ್ನತೆಯೊಂದು ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ : Gabriel Garcia Marquez’s Birth Anniversary: ‘ವಾಸ್ತವದ ಆಧಾರವಿಲ್ಲದ ಒಂದು ಸಾಲೂ ನನ್ನ ಕಾದಂಬರಿಗಳಲ್ಲಿಲ್ಲ’

ಹನ್ನೆರಡಕ್ಕೆಲ್ಲಾ ಬಿಸಿಲು ತದುಕ ಹತ್ತಿತು. ಹತ್ತಿರದಲ್ಲಿ ಯಾವ ನಗರವೂ ಇಲ್ಲದ ನಿಲ್ದಾಣವೊಂದರಲ್ಲಿ ನೀರು ತುಂಬಿಸಿಕೊಳ್ಳಲೆಂದು ಹತ್ತು ನಿಮಿಷಗಳ ಕಾಲ ರೈಲು ನಿಂತಿತು. ಹೊರಗೆ ತೋಟಗಳ ನಿಗೂಢ ಮೌನದೊಳಗೆ ಪರಿಶುದ್ಧ ಕಾಣುತ್ತಿದ್ದ ನೆರಳುಗಳು. ಆದರೆ ಹದಮಾಡದ ಚರ್ಮದ ವಾಸನೆ ಬೋಗಿಯೊಳಗಿನ ನಿಂತ ಗಾಳಿಯಲ್ಲಿತ್ತು. ರೈಲು ವೇಗ ಹೆಚ್ಚಿಸಿಕೊಳ್ಳದೆ ಮೆಲ್ಲಗೆ ಚಲಿಸತೊಡಗಿತು. ನಿದ್ದೆಯ ಭಾರಕ್ಕೆ ಗೋಣು ಚೆಲ್ಲಿದ್ದ ಹೆಂಗಸು ಕಡೆಗೆ ನಿದ್ದೆಯಲ್ಲಿ ಪೂರಾ ಕಳೆದು ಹೋದಳು. ಶೂಗಳನ್ನು ಬಿಚ್ಚಿದ ಹುಡುಗಿ ಎದ್ದು ಹೂಗುಚ್ಛವನ್ನು ನೀರಿನಲ್ಲಿ ನೆನೆಸಲೆಂದು ಶೌಚಾಲಯದತ್ತ ಹೋದಳು.

ಅವಳು ತಿರುಗಿ ಬರುವ ಹೊತ್ತಿಗೆ ಅವಳ ಅಮ್ಮ ಊಟ ಮಾಡಲು ಅವಳಿಗಾಗಿ ಕಾಯುತ್ತಿದ್ದಳು. ಒಂದರ್ಧ ರೊಟ್ಟಿ, ಅದರ ಮೇಲೊಂಚೂರು ಬೆಣ್ಣೆ ಹಾಕಿ, ಜೊತೆಗೆ ಒಂದು ಸಿಹಿ ರೊಟ್ಟಿಯನ್ನು ಮಗಳಿಗೆ ಕೊಟ್ಟು, ತಾನೂ ಅಷ್ಟನ್ನೇ ತೆಗೆದುಕೊಂಡಳು. ಅವರದನ್ನು ತಿನ್ನುತ್ತಿರುವಾಗ ರೈಲು ಕಬ್ಬಿಣದ ಸೇತುವೆಯೊಂದರ ಮೇಲೆ ಮೆಲ್ಲಗೆ ಚಲಿಸಿ, ಹಿಂದೆ ಸಿಕ್ಕಿದ್ದ ನಗರದಂಥದ್ದೇ ಆದರೂ, ಅಲ್ಲಿಗಿಂತ ಹೆಚ್ಚು ಜನ ಜಂಗುಳಿಯಿಂದ ಕೂಡಿದ್ದ ನಗರವನ್ನು ದಾಟಿತು. ಉರಿ ಬಿಸಿಲು ಉಗುಳುತ್ತಿದ್ದ ಸೂರ್ಯನ ಕೆಳಗೆ ವಾದ್ಯ ಮೇಳವೊಂದು ಚಂದದ ರಾಗ ನುಡಿಸುತ್ತಿತ್ತು. ನಗರದ ಮತ್ತೊಂದು ಬದಿಯಲ್ಲಿ ಬಾಳೆ ತೋಟಗಳಿದ್ದು,ಅದರಾಚೆಗೆ ಬಂಜರು ಬಯಲಿತ್ತು.

ಹೆಂಗಸು ತಿನ್ನುವುದ ನಿಲ್ಲಿಸಿ, ‘ಶೂ ಹಾಕಿಕೊ’, ಅಂದಳು ಮಗಳಿಗೆ. ಹುಡುಗಿ ಆಚೆ ನೋಡಿದಳು. ರೈಲಿನ ವೇಗ ಹೆಚ್ಚುತ್ತಿತ್ತು. ಅಲ್ಲಿ ಅವಳಿಗೆ ಬಟಾ ಬಯಲನ್ನು ಬಿಟ್ಟರೆ ಮತ್ತೇನೂ ಕಾಣಲಿಲ್ಲ. ಕೈಯ್ಯಲ್ಲಿದ್ದ ರೊಟ್ಟಿಯ ಚೂರನ್ನು ಚೀಲದೊಳಕ್ಕೆ ಹಾಕಿ, ಅವಸರದಿಂದ ಶೂ ಹಾಕಿಕೊಂಡಳು. ಹೆಂಗಸು ಅವಳಿಗೊಂದು ಬಾಚಣಿಗೆಯನ್ನು ಕೊಡುತ್ತಾ, ‘ತಲೆ ಬಾಚಿಕೊ’, ಅಂದಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ: Gabriel Garcia Marquez’s Birth Anniversary: ಆ ಊರಿನ ಜನರೆಲ್ಲ ಇದ್ದಕ್ಕಿದ್ದಂತೆ ನಿದ್ದೆ ಬಾರದ ರೋಗಕ್ಕೆ ಈಡಾಗುತ್ತಾರೆ

Follow us on

Most Read Stories

Click on your DTH Provider to Add TV9 Kannada