Gokak Falls: ಸ್ವಾತಂತ್ರ್ಯ ಅಮೃತ ಮಹೋತ್ಸವದ ಗಳಿಗೆಗೆ ಸಜ್ಜಾಗಿರುವ ಭಾರತಕ್ಕೆ ಇದೆಂಥ ಕಳಂಕ?
Youth : ದುರಾದೃಷ್ಟ ಎಂದರೆ, ಈ ಬಣ್ಣಬಣ್ಣದ ಶಾಲು ಹಾಕಿ ಬೀದಿಗೆ ಇಳಿಯುವ ಅನೇಕರಿಗೆ ಸಂವಿಧಾನವು ಗೊತ್ತಿಲ್ಲ, ತಮ್ಮ ತಮ್ಮ ಧರ್ಮದ ಒಳತಿರುಳೂ ಗೊತ್ತಿಲ್ಲ. ಯಾರದ್ದೋ ಸ್ವಾರ್ಥಕ್ಕೆ ರಕ್ತವನ್ನು ಕುದಿಸಿಕೊಳ್ಳುತ್ತ ಸಮಾಜದ ನೆಮ್ಮದಿಗೆಡಿಸುವ ಪಣ ತೊಟ್ಟಂತೆ ಸಾಗುತ್ತಿದ್ದಾರೆ.
ಗೋಕಾಕ ಫಾಲ್ಸ್ | Gokak Falls : ನಮ್ಮ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ನಮ್ಮ ಊರಿಗೆ ಅಂಟಿಕೊಂಡೇ ಇರುವ ಊರುಗಳಲ್ಲಿ ಎಲ್ಲ ಧರ್ಮದವರೂ ಇದ್ದಾರೆ. ಆದರೆ ತೀರಾ ಬೆಟ್ಟದ ಕೆಳಗೆ ಇರುವ ನಮ್ಮ ಚಿಕ್ಕ ಊರಲ್ಲಿ ಹಿಂದೂಗಳ ಹೊರತಾಗಿ ಬೇರೆ ಯಾರೂ ನೆಲೆಸಿಲ್ಲ. ಆದರೆ ಇತರ ಧರ್ಮೀಯರಿಗೂ ನನ್ನೂರು ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತ ಬಂದಿರುವುದನ್ನು ನಾನು ನೋಡುತ್ತಲೇ ಬೆಳೆದಿದ್ದೇನೆ. ಪ್ರತಿ ವರ್ಷ ಶೀಗೆಹುಣ್ಣಿಮೆ ಹಬ್ಬ ಬಂತೆಂದರೆ ಹೊಲದಲ್ಲಿ ಭೂಮಿಪೂಜೆ ಮಾಡೋಕೆ ಬೇಕಾದ ಸಾಮಗ್ರಿಗಳನ್ನೆಲ್ಲ ಮುಸ್ಲಿಮರೇ ಬಂದು ಕೊಟ್ಟು ಹೋಗ್ತಾರೆ. ಕಡ್ಡಾಯವಾಗಿ ಅವರು ತಂದು ಕೊಡುವ ಕುಂಕುಮ, ಅರಿಶಿಣ, ಬಳೆಗಳನ್ನೆಲ್ಲ ಭೂತಾಯಿ ಪೂಜೆಗೆ ಅರ್ಪಿಸಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಅವರಿಗೆ ತಾವು ಬಿತ್ತಿದ ಜೋಳ, ಗೋಧಿ, ಶೇಂಗಾ ಒಂದಿಷ್ಟು ಹಣವನ್ನು ನೀಡುತ್ತಾರೆ. ಶೀಗೆಹುಣ್ಣಿಮೆ ಹತ್ತಿರ ಬರುತ್ತಿದ್ದಂತೆ ಊರ ಹೆಣ್ಣುಮಕ್ಕಳೆಲ್ಲ ಫಾತೀಮಾ ಭಾಭೀ ಯಾಕೆ ಇನ್ನೂ ಬಂದಿಲ್ಲ ಅಂತ ಕಟ್ಟೆ ಮೇಲೆ ಕುಳಿತು ದಾರಿ ಕಾಯ್ತಾರೆ. ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
(ಹರಿವು 13)
ಪ್ರತಿ ವರ್ಷ ನಡೆಯುವ ಊರ ರಾಮಸಿದ್ದನ ಜಾತ್ರೇಲಿ ಮಕ್ಕಳು ಆಡುವ ಆಟಿಕೆ ಹಿಡಿದು, ಮುತೈದೆಯರು ಹಾಕುವ ಬಳೆ, ಐಸ್ಕ್ರೀಮ್ ಮಾರುವ ಚಾಚಾನವರೆಗೂ ಮುಸ್ಲಿಮರೇ ಇರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ನಮ್ಮೊಟ್ಟಿಗೆ ಕುಳಿತು ಪ್ರಸಾದ ಸ್ವೀಕರಿಸುತ್ತಾರೆ. ಊರಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಿಗೆ ಅತಿಥಿಗಳಾಗಿಯೋ, ವ್ಯಾಪಾರಸ್ಥರಾಗಿಯೋ ಬರುತ್ತಾರೆ. ಇಲ್ಲಿರುವವರ ಮನೆಗಳಲ್ಲಿ ಊಟ ಮಾಡುತ್ತಾರೆ. ನಮ್ಮ ಊರಿನವರು ತರಕಾರಿಯಿಂದ ಹಿಡಿದು ಬಟ್ಟೆ, ಚಪ್ಪಲಿ, ತಿನಿಸು ಎಲ್ಲವನ್ನೂ ಪಕ್ಕದ ಊರಲ್ಲಿ ಇರುವ ಮುಸ್ಲಿಮರ ಅಂಗಡಿಗಳಲ್ಲೇ ಕೊಳ್ಳುತ್ತಾರೆ. ಪ್ರತಿವರ್ಷ ಮುಸ್ಲಿಂರು ಆಚರಿಸುವ ಉರ್ಸ್, ಅಲಾಬ್ಗೆ ಭಾಗವಹಿಸುವ ಬಹುಪಾಲರಲ್ಲಿ ಹಿಂದೂಗಳೇ ಇರುತ್ತಾರೆ. ಇಂದಿಗೂ ಒಂದು ದಿನಕ್ಕೂ ಯಾವ ಕೋಮು ಗಲಭೆಗಳನ್ನು ನಾನು ಇಲ್ಲಿ ಕೇಳಿಯೇ ಇಲ್ಲ.
ನಮ್ಮ ಹಳ್ಳಿಗಳಲ್ಲಿ ಮಾತ್ರ ಅಲ್ಲ ನಾನು ಬೆಳೆದ ಯಾವ ನಗರದಲ್ಲೂ ಇಂತಹ ಕೋಮುವಾದ ನನ್ನ ಅನುಭವಕ್ಕೆ ಬಂದೇ ಇಲ್ಲ. ಅಂಟಿದ ಗೋಡೆಯ ಮನೆಗಳಲ್ಲಿ ವಾಸಿಸಿದ್ದೇವೆ, ಒಂದೇ ತಟ್ಟೆಯಲ್ಲಿ ಊಟ ಮಾಡುತ್ತೇವೆ, ಪಂಚಮಿಯ ಲಡ್ಡು, ರಮಜಾನ್ ಸುರಖುರ್ಮಾಗಳಿಗೆ ತಪ್ಪದೆ ನಮ್ಮ ಪಾತ್ರೆಗಳು ಅವರ ಮನೆಯನ್ನು ಅವರ ಪಾತ್ರೆಗಳು ನಮ್ಮ ಮನೆಗೆ ಸೇರಿವೆ. ದೀಪಾವಳಿಯ ಲಕ್ಷ್ಮಿ ಪೂಜೆ ಅವರ ಮನೆಗಳಲ್ಲೂ ನಡೆಯುತ್ತೆ, ಶಿವರಾತ್ರಿಗೆ ಉಪವಾಸ ಮಾಡುವ ಮುಸ್ಲಿಂ ಹೊಟ್ಟೆಗಳಿದ್ದಾವೆ. ರೋಜಾ ಆಚರಿಸುವ ಹಿಂದೂ ಹೊಟ್ಟೆಗಳು ಇದ್ದಾವೆ. ಇಂಥ ರಸಮಯ ಬದುಕಿನಲ್ಲಿ ಇದ್ದಕ್ಕಿದ್ದಂತೆ ಬಿಗ್ ಬ್ರೇಕಿಂಗ್ಗಳಲ್ಲಿ ಗಲಭೆಯ ಸುದ್ದಿ ಫ್ಲ್ಯಾಶ್ ಆಗುವುದು ನೋಡಿದಾಗ ದೊಡ್ಡ ದುರಂತ ಅನಿಸುತ್ತದೆ. ಜನಸಾಮಾನ್ಯರ ನಡುವೆ, ಜನಜೀವನದ ನಡುವೆ ಕಾಣದ್ದು ಕೆಲವೊಮ್ಮೆ ದಿಢೀರನೆ ಬುಗಿಲೆದ್ದು ದೇಶವನ್ನೇ ನಡುಗಿಸಿ ಬಿಡುವುದು ಭಾರತಕ್ಕೆ ಹೊಸದಲ್ಲ. ಯಾರದ್ದೋ ಬೇಳೆ ಬೇಯಲು ಆಗಾಗ ಕಿಡಿಕಾರಿ ಬೆಂಕಿ ಹಚ್ಚುವ ಕಾರ್ಯ ನಡೆದೇ ಇರುತ್ತೆ. ಅಲ್ಲೊಬ್ಬ ಅಲ್ಲಾ ಅನ್ನುತ್ತಾ ಕಲ್ಲು ತುರಿದರೆ, ಇಲ್ಲೊಬ್ಬ ಕೇಸರಿ ತೊಟ್ಟು ಶ್ರೀರಾಮನ ಹೆಸರಿನಲ್ಲಿ ಕಲ್ಲಂಗಡಿ ಒಡೆಯುತ್ತಾನೆ. ಯಾರ ಸುಖಕ್ಕೆ ಹಾರಿತು ಆ ಕಲ್ಲು? ಏನನ್ನು ಸಾಧಿಸಲು ಬೀದಿಗೆ ಬಿತ್ತು ಆ ಕಲ್ಲಂಗಡಿ?
ಇದನ್ನೂ ಓದಿ : ನಿಮ್ಮ ಟೈಮ್ಲೈನ್: ನಿರ್ಲಕ್ಷ್ಯಕ್ಕೊಳಗಾಗಿರುವ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಶಿವನಸಮುದ್ರ
ಇದೆಲ್ಲದರ ಹಿಂದೊಂದು ವ್ಯವಸ್ಥಿತವಾದ ಬಲವಿದೆ, ಅದು ಸರಿಯಾದ ಸಮಯ ನೋಡಿ ತನ್ನ ಕೆನ್ನಾಲಗೆಯನ್ನು ಆಗಾಗ ಚಾಚುತ್ತಿರುತ್ತದೆ. ಹಿಂಬದಿಯಲ್ಲಿ ಕುಳಿತು ಬಣ್ಣಬಣ್ಣದ ಆಟವಾಡಿಸುತ್ತದೆ. ಕೇಸರಿ, ಕಪ್ಪು, ನೀಲಿ… ಹೀಗೆ ನಾನಾ ಬಣ್ಣಗಳು… ಅವರ ಈ ಆಟದ ದಾಳಗಳಾಗಿ ಉರುಳುವವರಲ್ಲಿ ಕೆಲವರು ಮುಗ್ಧರು, ಕೆಲವರು ಮೂರ್ಖರು, ದುರಾದೃಷ್ಟಕ್ಕೆ ನಮ್ಮ ಸುಶಿಕ್ಷಿತ ಯುವಕರು ಇದ್ದಾರೆ. ಎಡವೋ, ಬಲವೋ, ಇನ್ಯಾವುದೋ ದಳವೋ… ತಮ್ಮ ಸ್ವಾರ್ಥ ಸಾಧನೆಗೆ, ಪಟ್ಟಬದ್ದ ಹಿತಾಸಕ್ತಿಗಳ ರಕ್ಷಣೆಗೆ ಹೂಡುವ ಸುವ್ಯವಸ್ಥಿತ ಹುನ್ನಾರಗಳಲ್ಲದೆ ಬೇರೇನೂ ಅಲ್ಲ. ವರ್ತಮಾನದ ಕೋಮುಗಲಭೆಗಳಿಗೆ ನಿಮ್ಮ ಈ ನೆಲದಲ್ಲೇ ಹುಟ್ಟಿ ಈ ಮಣ್ಣನ್ನೇ ನಂಬಿ ಬದುಕು ಸಾಗಿಸುತ್ತಿರುವವರಿಗೆ ನಿಮಗೆ ನಿಮ್ಮ ಧರ್ಮದ ಪಾಲನೆ ಮುಖ್ಯವಾದಲ್ಲಿ ದೇಶ ಬಿಟ್ಟು ತೊಲಗಿ ಎಂದು ನುಡಿದ ಜನ ಪ್ರತಿನಿಧಿ, ಇನ್ನೊಂದು ಕೋಮಿನ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುತ್ತೇವೆ ಎಂದ ಸಂನ್ಯಾಸಿ ಇವರೆಲ್ಲ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ? ಇವರ ಉದ್ದೇಶವಾದರೂ ಏನು? ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ನೈತಿಕತೆಯ ಹೊಣೆ ಹೊತ್ತವರು ಆಡುವ ಮಾತುಗಳೇ ಇವು? ಇಂತ ಮೂರ್ಖ, ನಿರ್ಲಜ್ಯ ಮಾತುಗಳಿಗೆ ಬೆಂಬಲ ಕೊಟ್ಟು ಕಲ್ಲು, ಕೋವಿ ಹಿಡಿಯುವ ಶತಮೂರ್ಖರಿಗೆ ಇನ್ನೂ ಯಾವ ಪದದಿಂದ ವರ್ಣಿಸಲಿ? ಎಲ್ಲ ಗೊತ್ತಿದ್ದರೂ ಸುಮ್ಮನಿರುವ ನಾವೆಷ್ಟು ಮೂರ್ಖರು?!
ಅಂಬೇಡ್ಕರ್ ಬದುಕು ಬವಣೆ ಬಗ್ಗೆ ಗಂಟಗಟ್ಟಲೆ ಸುಂದರವಾಗಿ ಉಪನ್ಯಾಸ ನೀಡಿದ ನಾಡಿನ ಗೌರವಾನ್ವಿತ ವ್ಯಕ್ತಿ ಒಬ್ಬರಿಗೆ, ವರ್ತಮಾನದ ಕುರುಡುತನಕ್ಕೆ ಏನೆಂದು ಉತ್ತರಿಸುತ್ತಿರಿ? ಎಂದು ಕೇಳಿದೆ. ಒಂದೇ ಮಾತಿನಲ್ಲಿ ಅವರು, “ಎಲ್ಲರೂ ಸಂವಿಧಾನವನ್ನು ಪಾಲಿಸಿ” ಎಂದರು. ಆದರೆ ಈವತ್ತು ನಡೆಯುತ್ತಿರುವುದೇನು? ಸ್ವಹಿತಾಸಕ್ತಿಗಳೇ ಮುಖ್ಯವೆಂದುಕೊಂಡವರು ಹಿಟ್ಲರನ ದಾರಿಗೆ ಅನುವು ಮಾಡಿಕೊಡುತ್ತ ಹೋಗುತ್ತಿದ್ದಾರೆ.
ದುರಾದೃಷ್ಟ ಎಂದರೆ ಈ ಬಣ್ಣಬಣ್ಣದ ಶಾಲು ಹಾಕಿ ಬೀದಿಗೆ ಇಳಿಯುವ ಅನೇಕರಿಗೆ ಸಂವಿಧಾನವು ಗೊತ್ತಿಲ್ಲ, ತಮ್ಮ ತಮ್ಮ ಧರ್ಮದ ಒಳತಿರುಳು ಗೊತ್ತಿಲ್ಲ. ಯಾರದ್ದೋ ಉದ್ವೇಗದ ಮಾತಿಗೆ ರಕ್ತವನ್ನು ಕುದಿಸುತ್ತ ಸಮಾಜದ ನೆಮ್ಮದಿಗೆಡಿಸುವ ಪಣ ತೊಟ್ಟಂತೆ ಸಾಗುತ್ತಿದ್ದಾರೆ. ಯಾವ ಧರ್ಮವೂ ಮತ್ತೊಬ್ಬರಿಗೆ ಹಿಂಸೆ ನೀಡುವ ಉಪದೇಶ ಮಾಡಲಾರದು. ಮತ್ತೊಬ್ಬರ ಹೊಟ್ಟೆಗೆ ಕಲ್ಲು ಹಾಕೆಂದು ಹೇಳಲಾರದು. ಅವುಗಳು ಬೋಧಿಸಿದ್ದು ಅಹಿಂಸೆ, ದಯೆ, ಸೌಹಾರ್ದವನ್ನೇ ಅಲ್ಲವೇ?
ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ತತ್ವಗಳನ್ನು ಹೊತ್ತ ಭಾರತ ಎತ್ತ ಸಾಗುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಗಳಿಗೆಗೆ ಸಜ್ಜಾಗಿ ನಿಂತ ಭಾರತಕ್ಕೆ ಇದೆಂಥ ಕಳಂಕ..?
ಮುಂದಿನ ಹರಿವು : 4.5.2022
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/gokak-falls