Gokak Falls : ಕಿತ್ತು ತಿನ್ನುವ ಬಡತನ ಇದ್ದಾಗಲೂ ಕೊಟ್ಟು ತಿನ್ನುವ ಗುಣ ರೈತನ ರಕ್ತನಾಳಗಳಲ್ಲೇ ಹುದುಗಿದೆ

|

Updated on: Dec 24, 2021 | 6:53 PM

Farmer : ‘ಅಜ್ಜ ಸೇನೆಯಲ್ಲಿರುವಾಗ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅದಾಗಲೇ ಭಾರತ ವಿಜಯ ಸಾಧಿಸಿದ ಸಮಯ. ಆದರೆ ಆ ಗಡಿಯಲ್ಲಿದ್ದ ಭಾರತೀಯ ಸೈನಿಕರಿಗೆ ಸರಿಯಾದ ಊಟ ತಲುಪಿಸಲು ಸಾಧ್ಯವಾಗದ ಸ್ಥಿತಿ. ಆಗ ಹಸಿದ ಸೈನಿಕರಿಬ್ಬರು ಪಾಕಿಸ್ತಾನದ ತೋಟವೊಂದಕ್ಕೆ ಹೋಗಿ ಅಲ್ಲಿನ ಮೆಣಸಿನಕಾಯಿ, ಬದನೆಕಾಯಿಗಳನ್ನು ಕಿತ್ತುಕೊಳ್ಳುತ್ತಿದ್ದರಂತೆ. ಅದನ್ನು ನೋಡಿದ ವಯಸ್ಸಾದ ಆ ಹೊಲದ ಒಡತಿ ತಾನೇ ಸ್ವತಃ ತರಕಾರಿಗಳನ್ನು ಕಿತ್ತು ಕೊಟ್ಟಿದ್ದಳಂತೆ.’ ಸುಷ್ಮಾ ಸವಸುದ್ದಿ

Gokak Falls : ಕಿತ್ತು ತಿನ್ನುವ ಬಡತನ ಇದ್ದಾಗಲೂ ಕೊಟ್ಟು ತಿನ್ನುವ ಗುಣ ರೈತನ ರಕ್ತನಾಳಗಳಲ್ಲೇ ಹುದುಗಿದೆ
Follow us on

ಗೋಕಾಕ ಫಾಲ್ಸ್ – Gokak Falls : ಒಂದು ಸಲ ಬೇಲೂರು, ಹಳೇಬಿಡು ಪ್ರವಾಸ ಮುಗಿಸಿ ಊರಿನತ್ತ ಮರಳುತ್ತಿದ್ದೆವು. ಕಾರಿನ ಕಿಟಕಿ ಇಳಿಸಿ ನೋಡಿದರೆ ರಸ್ತೆ ಉದ್ದಕ್ಕೂ ರೈತರು ಯಾವುದೋ ಬೆಳೆ ರಾಶಿ ಮಾಡುತ್ತಿದ್ದರು. ಕುತೂಹಲದಿಂದ ನೋಡಿದೆ. ನನ್ನ ಅಂಕಲ್ ಅದು ಶುಂಠಿ ಎಂದರು. ಆಂಟಿ ಅದು ‘ಅಲ್ಲಾ’ ಎಂದರು. ವಿವಾದ ಆರಂಭವಾಗಿ, ಕಾರಲ್ಲಿ ಎರಡು ಬಣಗಳೇ ಹುಟ್ಟಿಕೊಂಡವು. ಇವರ ಗಲಾಟೆ ಕೇಳಲಾಗದೆ ಡ್ರೈವರ್ ಕಾರು ನಿಲ್ಲಿಸಿ ಆ ರೈತರನ್ನೇ ವಿಚಾರಿಸಿದ. ಆ ರೈತ ತುಂಬ ಆತ್ಮಿಯವಾಗಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವುದರ ಜೊತೆಗೆ ಆ ಶುಂಠಿಯನ್ನೂ ಕೊಟ್ಟ. ದುಡ್ಡು ಕೊಡಲು ಹೋದಾಗ ನಿರಾಕರಿಸಿದ. ಆ ಶುಂಠಿ ಎಷ್ಟಿತ್ತೆಂದರೆ, ನಮ್ಮ ನಾಲ್ಕೂ ಮನೆಯವರಿಗೂ ಮತ್ತು ಅಕ್ಕಪಕ್ಕದ ಮನೆಯವರಿಗೂ ತಲುಪಿ ತಿಂಗಳ ತನಕ ಕರಗದಷ್ಟಿತ್ತು.
ಸುಷ್ಮಾ ಸವಸುದ್ದಿ

*

(ಹರಿವು 5)

ನಿನ್ನೆಯಷ್ಟೇ ರೈತರ ದಿನ. ಹಾಗೆ ಯೋಚಿಸುತ್ತಲೇ ಮನಸ್ಸು ಹಿಂದೆ ಓಡಿತು. ಲಾಕ್​ಡೌನಿನ ಒಂದು ಬೆಳಗ್ಗೆ ರೈತಾಪಿ ಕುಟುಂಬದ ಅಜ್ಜಿಯೊಬ್ಬಳು ದಿನಸಿ ಅಂಗಡಿಗೆ ಬಂದಿದ್ದಳು. ಸಹಜವಾಗಿಯೇ ಅಂಗಡಿಯಾತನಿಗೆ ಕೇಳಿದಳು- “ಯಾಕಪ್ಪಾ ಎಲ್ಲಾ ಸಾಮಾನು ತುಟ್ಟಿ ಆಗ್ಯಾವು?’’  ಅಂಗಡಿಯಾತನು ಕೊಂಚ ಬೇಸರದಲ್ಲೇ “ಲಾಕ್​ಡೌನ್​ಗಾಗಿ ಎಲ್ಲ ಹೆಚ್ಚಾಗೇತಿ ಅಜ್ಜಿ” ಎಂದಾಗ ಅಲ್ಲಿಯೇ ಗೊಣಗಿದಳು ಅಜ್ಜಿ “ನಾವೇನ್ ಪಾಪಾ ಮಾಡೇವಿ ನಮ್ಮ ಬೆಳೆಗೆ ಯಾಕಪಾ ಬೆಲೆ ಇಲ್ಲ” ಕೇಳಿದ ನನ್ನ ಕಿವಿಗಳು ಸಂಕಟಗೊಂಡವು. ತಿರುಗಿ ಅಜ್ಜಿಯ ಕಣ್ಣುಗಳನ್ನು ನೋಡಲು ಆಕೆಯ ಕಣ್ಣಲ್ಲಿ ಅಸಹಾಯಕತೆ ಇತ್ತು.

ನಂತರ ಅಪ್ಪನೊಟ್ಟಿಗೆ ಈ ವಿಷಯದ ಕುರಿತು ಚರ್ಚಿಸಿದೆ. ಆಗ ಕೆಲವು ವಿಷಯಗಳು ತಿಳಿದವು. ಬೆಳೆದ ಬೆಳೆಗಳಿಗೆ ಲಾಕ್​ಡೌನ್​ನಿಂದಾಗಿ ಮಾರುಕಟ್ಟೆ ಸಿಗುತ್ತಿಲ್ಲ ಮತ್ತು ಸರಿಯಾದ ಬೆಲೆಯೂ ಸಿಗದ ಕಾರಣ ರೈತರ ಬೆಳೆಗಳೆಲ್ಲ ಹೊಲದಲ್ಲೇ ಕೊಳೆತು ಹೋಗಿವೆ. ಇನ್ನು ಹೂವು ಬೆಳೆಗಾರರ ಹೂವೂಗಳಂತೂ ಅವರ ಬದುಕನ್ನೇ ಬಾಡಿಸಿವೆ ಎಂದು ಲಾಕಡೌನ್ ಕಾಲದಲ್ಲಿ ರೈತರ ಸಂಕಟಗಳನ್ನು ಅಪ್ಪ ಹೇಳಿದ್ದರು. ಅವರ ಮಾತನ್ನು ಮಧ್ಯ ತಡೆದು ಇವುಗಳಿಗೆ ಸರಕಾರದದಿಂದ ಪರಿಹಾರ ಸಿಗಲ್ವಾ? ಅಂದೆ. ಅದಕ್ಕೆ ಅಪ್ಪ ನಿಟ್ಟುಸಿರು ಬಿಡುತ್ತ ವಿವರಿಸಿದರು- ಪ್ರತಿಬಾರಿಯೂ ಬೆಳೆದ ಬೆಳೆಗಳ ಕುರಿತು ಅವರ ಉತಾರ ಪತ್ರಿಕೆಯಲ್ಲಿ ನಮೂದಿಸಬೇಕು. ಬೆಳೆ ಸಮೀಕ್ಷೆಯಲ್ಲಿ ಆ ಬೆಳೆಯ ನಮೂದನೆಯಿದ್ದಲ್ಲಿ ಮಾತ್ರ ಪರಿಹಾರ ಸಿಗುವ ಸಾಧ್ಯತೆ ಇರುತ್ತೆ. ಆದರೆ ಬಹುತೇಕ ರೈತರಿಗೆ ಇದರ ಜ್ಞಾನವೇ ಇಲ್ಲ. ಈಗಂತೂ ರಸಗೊಬ್ಬರಗಳ ಬೆಲೆಯೂ ಹೆಚ್ಚಾಗಿದೆ. ಡಿಸೆಲ್ ಬೆಲೆ ಎರಿದ್ದರಿಂದ ಟ್ರ್ಯಾಕ್ಟರ್​ಗಳ  ಬಾಡಿಗೆಯೂ ಹೆಚ್ಚಾಗಿದೆ. ಕೂಲಿಯೂ ಹೆಚ್ಚಾಗಿದೆ.

ಅಪ್ಪನ ಮಾತು ಮುಗಿಯುತ್ತಿದ್ದಂತೆ ನಾ ನೋಡಿದ ಅನೇಕ ರೈತರ ಸಾಮಾನ್ಯ ಚಿತ್ರಗಳು ಕಣ್ಣೆದುರು ಹಾಯ್ದವು. ಅಪ್ಪ ಸ್ವತಃ ರೈತರೇ. ಹೊರಲೋಕಕ್ಕೆ ಹೇಳಬಲ್ಲ ರೈತನೊಬ್ಬನ ಬಾಹ್ಯ ಸಮಸ್ಯೆಗಳಷ್ಟೆ ಅನಿಸಿತು. ಪ್ರತಿ ಅನ್ನದಾತನ ಒಳಹೊಕ್ಕು ನೋಡಿದಾಗ ಇನ್ನೂ ಅದೆಷ್ಟು ಸಂಗತಿಗಳು ಆತನ ಕಾಲುಗಳನ್ನು ಎಳೆದು ಕೆಳದೂಕುತ್ತಿವೆಯೋ..?

ಸಾಮಾನ್ಯವಾಗಿ ರೈತನೆಂದರೆ ನಮ್ಮೆಲ್ಲರ ಮನಪಟಲದಲ್ಲಿ ಮೂಡುವ ಚಿತ್ರ- “ಬೆಳ್ಳಿ ಚುಕ್ಕಿ ಮೂಡುತ್ತಿದ್ದಂತೆ ನಿದ್ದೆಯಿಂದೆದ್ದು, ನೇಗಿಲಿಗೆ ಕೈಮುಗಿದು, ಜೋಡೆತ್ತುಗಳೊಡನೆ “ಕಾಯಕವೇ ತನ್ನ ಕೈಲಾಸ” ಎನ್ನುತ್ತ ತನ್ನ ಹೊಲಗಳಿಗೆ ಹೋಗಿ ಬಿಸಿಲು ಮಳೆ ಎನ್ನದೇ ತನ್ನ ಹಸಿವನ್ನೂ ಲೆಕ್ಕಿಸದೇ ಜಗದ ಹಸಿವನ್ನು ತಣಿಸಲು ಹೊಲದಲ್ಲಿ ಕೆಲಸ ಮಾಡುತ್ತಿರುವ ಸಾಮಾನ್ಯ ಲುಂಗಿಧಾರಿ ಮನುಷ್ಯ, ಇತ್ತ ಸೀರೆ ಉಟ್ಟು ತಲೆ ಮೇಲೆ ಬುಟ್ಟಿ ಹೊತ್ತು ಬರುವ ಮಹಿಳೆ. ನೋಡಿದರೆ ಕೈಯೆತ್ತಿ ಮುಗಿಯಬೇಕೆನ್ನುವ ಭಾವ. ಆದರೆ ಈಗ ನಮ್ಮ ಆಧುನಿಕತೆ, ತಂತ್ರಜ್ಞಾನದ ಗಾಳಿ ಹಳ್ಳಿಗಳನ್ನು ಆವರಿಸಿದ್ದರಿಂದ ಈ ಚಿತ್ರ ನೋಡಲು ಸಿಗುವುದು ತೀರ ಅಪರೂಪವೇ. ಆದರೆ ನನ್ನ ಅಜ್ಜನ ನೆನಪಿನ ಕಥೆಗಳಲ್ಲಿ ನಾನು ಈ ಚಿತ್ರ ಕಲ್ಪಿಸಿಕೊಂಡಿದ್ದೇನೆ.

ಈ ತುಟ್ಟಿ ಕಾಲಕ್ಕೆ ಬೇಸತ್ತ ಅಜ್ಜ ಆಗಾಗ ಆ ದಿನಗಳನ್ನು ಹಂಚಿಕೊಳ್ಳುತ್ತಿದ್ದರು. ಬಸವ ಜಯಂತಿ ಬಂದರೆ ಸಾಕು ಹೆಣ್ಣು ಮಕ್ಕಳೆಲ್ಲ ಶೇಂಗಾ (ಕಡ್ಲೆಬೀಜ) ಒಡೆಯೋಕೆ ಶುರು ಮಾಡಿದರೆ, ಗಂಡು ಮಕ್ಕಳಿಗೆಲ್ಲ ಗಳೆ ಹೊಡೆಯೋ ಸಂಭ್ರಮದಲ್ಲಿರುತ್ತಿದ್ದರಂತೆ. ಬೀಜಗಳಿಗಾಗಿ ಯಾವ ಅಂಗಡಿಯನ್ನೂ ಅವಲಂಬಿಸದೇ ಇದ್ದ ಅವರು, ಬೀಜಗಳನ್ನೆಲ್ಲ ಮಡಿಕೆಗಳಲ್ಲಿ ಬೂದಿ ಸೇರಿಸಿ ಇಡುತ್ತಿದ್ದರಂತೆ. ಅವುಗಳಿಗೆ ಪ್ರತ್ಯೆಕ ಸ್ಥಳವೊಂದು ಮೀಸಲಿರುತ್ತಿತ್ತಂತೆ. ಇನ್ನು ಅವರು ಸಾಕುತ್ತಿದ್ದ ಹಸು-ಕರ, ಮೇಕೆ, ಎತ್ತುಗಳು ಅವರಿಗೆ ಹಾಲು ನೀಡುವ, ಬಿತ್ತಲು ನೇಗಿಲಿಗೆ ಹೆಗಲು ನೀಡುವ, ಹೊಲಕ್ಕೆ ಗೊಬ್ಬರ ನೀಡುವ ಜೊತೆಗೆ ಅವರ ಸ್ನೇಹಿತನಾಗಿ ಅವರ ಜೀವನದ ಅವಿಭಾಜ್ಯವೇ ಆಗಿದ್ದವು.

ಅಂದು ಹಾಲು, ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆಗಳೆಲ್ಲ ದಿನನಿತ್ಯ ಆಹಾರಗಳಾಗಿದ್ದವು ಅಲ್ಲದೇ ಪಕ್ಕದ ಮನೆಯವರಿಗೆ, ಸಂಬಂಧಿಕರೊಡನೆ ಹಂಚಿ ತಿನ್ನುವ ಪ್ರೀತಿಯ ಸಂಕೇತಗಳಾಗಿದ್ದವು. ಆದರೆ ಇಂದು ಅವೆಲ್ಲ ಕೇವಲ ಆದಾಯ ನೀಡಲು ತಿರುವು ಪಡೆದುಕೊಂಡಿವೆ. ಟ್ರ‍್ಯಾಕ್ಟ, ಯಂತ್ರಗಳ ಪರಿಚಯದಿಂದ ಉಳುಮೆಗೆ ಎತ್ತುಗಳ ಅವಶ್ಯಕತೆ ಈಗಿಲ್ಲ. ರಾಸಾಯನಿಕ ಗೊಬ್ಬರಗಳ ಬಳಕೆ ಅತೀ ಪ್ರಾಮುಖ್ಯ ಪಡೆದ ಈ ಕಾಲದಲ್ಲಿ ಸಾವಯುವ ಗೊಬ್ಬರಕ್ಕೆಂದು ಪ್ರಾಣಿಗಳನ್ನು ಸಾಕುವುದಂತೂ ದೂರದ ಮಾತು. ಇನ್ನೂ ನಮ್ಮವರ ಜೊತೆಗೆ ಮುಖಕೊಟ್ಟು ಮಾತನಾಡಲಾಗದ ಈ ಜಂಜಾಟದ ಬದುಕಲ್ಲಿ ಆ ಮೂಕ ಜೀವಿಗಳೊಡನೆ ಸ್ನೇಹ, ಆತ್ಮಿಯತೆ ಎನ್ನುವುದು ಎಟುಕಲಾಗದ ಸಂಗತಿ.

ರೈತ ಸಮುದಾಯ ಅಂದರೆ ಅದು ಸದಾ ಆತ್ಮೀಯತೆಯ ಸ್ವರೂಪವನ್ನು ಮೂಡಿಸುವ ವರ್ಣಿಸಲಾಗದ ಭಾವ. ಅದು ಜಾತಿ, ದೇಶ, ಲಿಂಗಗಳ ಮಿತಿ ಮೀರಿ ಬೆಳೆದದ್ದು. ಅಜ್ಜ ಸೇನೆಯಲ್ಲಿರುವಾಗ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅದಾಗಲೇ ಭಾರತ ವಿಜಯ ಸಾಧಿಸಿದ ಸಮಯ. ಆದರೆ ಆ ಗಡಿಯಲ್ಲಿದ್ದ ಭಾರತೀಯ ಸೈನಿಕರಿಗೆ ಸರಿಯಾದ ಊಟ ತಲುಪಿಸಲು ಸಾಧ್ಯವಾಗದ ಸ್ಥಿತಿ. ಆಗ ಹಸಿದ ಸೈನಿಕರಿಬ್ಬರು ಪಾಕಿಸ್ತಾನದ ತೋಟವೊಂದಕ್ಕೆ ಹೋಗಿ ಅಲ್ಲಿನ ಮೆಣಸಿನಕಾಯಿ, ಬದನೆಕಾಯಿಗಳನ್ನು ಕಿತ್ತುಕೊಳ್ಳುತ್ತಿದ್ದರಂತೆ. ಅದನ್ನು ನೋಡಿದ ವಯಸ್ಸಾದ ಆ ಹೊಲದ ಒಡತಿ ತಾನೇ ಸ್ವತಃ ತರಕಾರಿಗಳನ್ನು ಕಿತ್ತು ಕೊಟ್ಟಿದ್ದಳಂತೆ. ಈ ಸಂಗತಿ ಆಗಾಗ ನೆನಪಾಗಿ ನನ್ನಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಹಸಿದವರು ಶತೃಗಳೇಯಾದರೂ ಸರಿ, ಅವರ ಹೊಟ್ಟೆ ತುಂಬಿಸುವುದು ತಮ್ಮ ಧರ್ಮ ಎಂಬುದು ರೈತರ ರಕ್ತದಲ್ಲೆ ಬೆರತು ಹೋದಂತಿದೆ. ಅದಕ್ಕೆ ಯಾವ ದೇಶ, ಭಾಷೆ, ಜಾತಿಯ ಮಿತಿಯಿಲ್ಲ.

ಒಂದು ಸಲ ಬೇಲೂರು, ಹಳೇಬಿಡು ಪ್ರವಾಸ ಮುಗಿಸಿ ಊರಿನತ್ತ ಮರಳುತ್ತಿದ್ದೆವು. ಕಾರಿನ ಕಿಟಕಿ ಇಳಿಸಿ ನೋಡಿದರೆ ರಸ್ತೆ ಉದ್ದಕ್ಕೂ ರೈತರು ಯಾವುದೋ ಬೆಳೆ ರಾಶಿ ಮಾಡುತ್ತಿದ್ದರು. ಕುತೂಹಲದಿಂದ ನೋಡಿದೆ. ನನ್ನ ಅಂಕಲ್ ಅದು ಶುಂಠಿ ಎಂದರು. ಆಂಟಿ ಅದು ‘ಅಲ್ಲಾ’ ಎಂದರು. ವಿವಾದ ಆರಂಭವಾಗಿ, ಕಾರಲ್ಲಿ ಎರಡು ಬಣಗಳೇ ಹುಟ್ಟಿಕೊಂಡವು. ಇವರ ಗಲಾಟೆ ಕೇಳಲಾಗದೆ ಡ್ರೈವರ್ ಕಾರು ನಿಲ್ಲಿಸಿ ಆ ರೈತರನ್ನೇ ವಿಚಾರಿಸಿದ. ಆ ರೈತ ತುಂಬ ಆತ್ಮಿಯವಾಗಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವುದರ ಜೊತೆಗೆ ಆ ಶುಂಠಿಯನ್ನೂ ಕೊಟ್ಟ. ದುಡ್ಡು ಕೊಡಲು ಹೋದಾಗ ನಿರಾಕರಿಸಿದ. ಆ ಶುಂಠಿ ಎಷ್ಟಿತ್ತೆಂದರೆ, ನಮ್ಮ ನಾಲ್ಕೂ ಮನೆಯವರಿಗೂ ಮತ್ತು ಅಕ್ಕಪಕ್ಕದ ಮನೆಯವರಿಗೂ ತಲುಪಿ ತಿಂಗಳ ತನಕ ಕರಗದಷ್ಟಿತ್ತು.

ನನ್ನ ಪಕ್ಕ ಕುಳಿತ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿ ಥಟ್ ಅಂತ ಕೇಳಿದ. ಅವರು ದುಡ್ಡು ಏಕೆ ತೆಗೆದುಕೊಳ್ಳಲಿಲ್ಲ ಡ್ಯಾಡಿ? ಅವರು ಲಾಯರ್, ಇಂಜಿನಿಯರ್ ಅಲ್ವಲ್ಲಪ್ಪ ಅದಕ್ಕೆ ಅಂದರು. ಆತನಿಗೆ ದೊರಕಬೇಕಾದದ್ದು ಯಾವುದೂ ದೊರಕುತ್ತಿಲ್ಲ ಎಂಬ ಸತ್ಯವೇ ವಿಷಾದಕರ. ಜಗತ್ತಿನ ಅನ್ನ ಹಾಕುವ ಆ ಸ್ವಾಭಿಮಾನಿಗೆ ಸಾಲ ಮನ್ನಾಗಳಂತಹ ರಾಜಕೀಯ ಷಡ್ಯಂತ್ರಗಳೇಕೆ? ಆತನ ಶ್ರಮದ ಫಲ ಮಧ್ಯವರ್ತಿಗಳ ಬಾಗಿಲಿಗೇಕೆ? ಮಾಲ್​, ರೆಸ್ಟೊರೆಂಟಗಳಲ್ಲಿ ಸುಮ್ಮನಿರುವ ನಮ್ಮ ಚೌಕಾಶಿ ಬುದ್ಧಿ ಸೊಪ್ಪು ಮಾರುವ ಅಜ್ಜಿ ಮುಂದೆ ತೆರೆದುಕೊಳ್ಳುವುದೇಕೆ? ಸೆಲೆಬ್ರಿಟಿಗೆ ಮಗುವಾದಾಗ ಸಂಭ್ರಮಿಸುವ ಮಾಧ್ಯಮ, ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ರೈತನ ಮನೆಯವರ ಸಾಂತ್ವನಕ್ಕೆ ಮುಂದಾಗುವುದಿಲ್ಲವೇಕೆ?

ಬೇಡ ನಿಮ್ಮ ಗೌರವ, ಸಾಲಮನ್ನಾ, ದುಡ್ಡು, ಸಾಂತ್ವನ ಯಾವುದೂ ಅವನಿಗೆ ಬೇಕಾಗಿಲ್ಲ. ಅವನು ಬಯಸುವುದು ಆತನ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಮಾತ್ರ. ಆತನ ಬೆವರಿಗಾದರೂ ಒಂದು ಬೆಲೆಯಿರಲಿ. ಕೆಲವು ಕಾರ್ಖಾನೆಗಳು ರೈತರ ಮೇಲೆ ಸರ್ವಾಧಿಕಾರ ನಡೆಸುತ್ತಿವೆ. ಕಬ್ಬು ಬೆಳೆಗಾರರ ಸ್ಥಿತಿ ಅತಂತ್ರವೇ ಆಗಿದೆ. ನಿಯಮದ ಪ್ರಕಾರ ಕಬ್ಬು ಕಳುಹಿಸಿದ 14 ದಿನಗಳಲ್ಲಿ ಹಣ ಪಾವತಿಯಾಗಬೇಕು ಆದರೆ ವಾಸ್ತವದಲ್ಲಿ ಹಣ ರೈತನ ಕೈಗೆ ಹೋಗಿ ಮುಟ್ಟುವಷ್ಟರಲ್ಲಿ ವರ್ಷಗಳೇ ಕಳೆದಿರುತ್ತವೆ. ಒಂದೂವರೆ ವರ್ಷದ ನಂತರ ಕಬ್ಬಿನ ಹಣ ಪಾವತಿಯಾದದ್ದನ್ನು ನಾನು ಸ್ವತಃ ನೋಡಿದ್ದೇನೆ. ಈ ಕುರಿತು ಅಧಿಕಾರಿಗಳಿಂದ ಹಿಡಿದು ಮುಖ್ಯಮಂತಿಯವರೆಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ. ಇದರಲ್ಲಿ ಬಹುತೇಕ ಕಾರ್ಖಾನೆಗಳು ಶಾಸಕರ, ಸಚಿವರ ಒಡೆತನದಲ್ಲಿರುವಾಗ ಸರಕಾರ ಹೇಗೆ ಕ್ರಮ ತೆಗೆದುಕೊಳ್ಳಲು ಮುಂದೆ ಬಂದೀತು ಹೇಳಿ? ನಿಜವಾಗಿಯೂ ರೈತರ ಪರ ನಿಲ್ಲಬೇಕೆಂಬ ಉದ್ದೇಶ ಇವರದ್ದಾಗಿದ್ದರೆ ಒಂದು ವರ್ಷಗಳ ಕಾಲ ಬೀದಿಗಿಳಿದು ಹೋರಾಡುವ ಪಾಡು ರೈತರಿಗೆ ಬರುತ್ತಿರಲಿಲ್ಲವೇನೊ. ಶ್ರಮ ಮತ್ತು ಆತ್ಮಗೌರವವನ್ನು ಬಯಸುವವರು ಹೀಗೆ ನಡುಬೀದಿಗೇ ಬರಬೇಕೆ?

ಹಿಂದಿನ ಹರಿವು : Gokak Falls : ‘ನೋಡಾ… ಸತ್ತ ಹೋದಾಕಿ ಎಲ್ಲವ್ವನ ದಯಾದಿಂದ ಈವತ್ತ ಇಲೆಕ್ಸನ್ ಗೆದ್ಲ!’ 

Published On - 6:32 pm, Fri, 24 December 21