Woman: ಹಾದಿಯೇ ತೋರಿದ ಹಾದಿ; ಕುರಗೋಡಿನ ನಾಗವೇಣಿ ಬೆಂಗಳೂರಿಗೆ ಬಂದಿದ್ದು ಹೀಗೆ
Child Marriage : ‘ಎಂಟುವರ್ಷಕ್ಕೆ ಒಂದು ಕೇಜಿ ಹತ್ತಿ ಬಿಡಿಸಿದರೆ ಎರಡು ರೂಪಾಯಿ. ಹದಿನೈದಕ್ಕೆ ಎರಡನೇ ಹೆಂಡತಿ. ಮೂರು ಮಕ್ಕಳು. ಈಗ ನನಗೆ ಮೂವತ್ತೆರಡು. ಕೈಯಲ್ಲಿ ಗಾಡಿಯಿದೆ, ನಾಲಗೆಯ ಮೇಲೆ ಅಷ್ಟಿಷ್ಟು ಭಾಷೆಗಳಿವೆ.’ ನಾಗವೇಣಿ
ಹಾದಿಯೇ ತೋರಿದ ಹಾದಿ | Haadiye Torida Haadi : ನಾಗವೇಣಿ ಅವರು TVS excel ಓಡಿಸಿಕೊಂಡು ತೆಂಗಿನಕಾಯಿ, ಸೊಪ್ಪು, ನಿಂಬೆಹಣ್ಣು ಮಾರುತ್ತಾ ಎದುರಾದದ್ದು ಬೆಂಗಳೂರಿನ ಜಕ್ಕೂರ್ ಲೇಔಟಿನ ಸಮೀಪ. ಇಲ್ಲಿತನಕ ಗಂಡಸರು ಹೀಗೆ ಗಾಡಿಯಲ್ಲಿ ಸೊಪ್ಪು, ತರಕಾರಿ ವ್ಯಾಪಾರ ಮಾಡಲು ಬರುವುದನ್ನು ನೋಡಿದ ನನಗೆ ಇವರನ್ನು ನೋಡಿ ಅಚ್ಚರಿಯಾಯಿತು. ಮಾತಿಗಿಳಿದಾಗ, ‘ಬಳ್ಳಾರಿಯ ಕುರಗೋಡು ಗ್ರಾಮ ನನ್ನ ಸ್ವಂತ ಊರು. ಈಗ ನನಗೆ ಮೂವತ್ತೆರಡು ವರ್ಷ. ಎರಡು ಗಂಡು ಒಂದು ಹೆಣ್ಣುಮಗು, ಮೂವರೂ ಬಾಗಲೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಜೀವನೋಪಾಯಕ್ಕಾಗಿ ಬಾಗಲೂರಿಗೆ ಬಂದು ಒಂಭತ್ತು ವರ್ಷಗಳಾದವು. ಮಾತೃಭಾಷೆ ತೆಲುಗು. ಬೆಂಗಳೂರಿಗೆ ಬಂದಮೇಲೆ ವ್ಯಾಪಾರ ಮಾಡುವಷ್ಟು ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಮಾತನಾಡುವುದನ್ನು ಕಲಿತಿದ್ದೇನೆ. ಋತುಮತಿಯಾದ ಒಂದು ವರ್ಷಕ್ಕೆ ಅಂದರೆ ನನ್ನ ಹದಿನೈದನೇ ವಯಸ್ಸಿಗೆ ಮದುವೆ ಮಾಡಿದರು. ನಾನು ಎಂಟು ವರ್ಷದವಳಿದ್ದಾಗಲೇ ಅಪ್ಪ ನೆಂಟ್ಕಂಟಯ್ಯ ಟಿಬಿಯಿಂದಾಗಿ ತೀರಿಕೊಂಡರು. ಆಗಿನಿಂದ ಈತನಕವೂ ಕಾಲಿಗೆ ಕಟ್ಟಿದ ಚಕ್ರ ನಿಂತಿಲ್ಲ’ ಎನ್ನುತ್ತಾರೆ. ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್ (Jyothi S)
(ಹಾದಿ 10, ಭಾಗ 1)
ಅಪ್ಪ ತೀರಿಕೊಂಡ ಮೇಲೆ ನನ್ನ ಅಮ್ಮ ಸುಜಾತಾಳಿಗೆ ಸಂಸಾರ ನಡೆಸುವುದು ತುಂಬಾ ಕಷ್ಟವಾಯಿತು. ಒಟ್ಟು ನಾವು ಮೂರು ಜನ ಮಕ್ಕಳು, ನಾನು ನನ್ನ ತಂಗಿ ಮತ್ತು ಚಿಕ್ಕವನು ತಮ್ಮ. ಆಗ ನಮ್ಮಮ್ಮನೇ ದುಡಿದು ನಮ್ಮನ್ನೆಲ್ಲ ಸಾಕಬೇಕು. ಜೊತೆಗೆ ಅಪ್ಪನನ್ನು ಆಸ್ಪತ್ರೆಗೆ ತೋರಿಸಲು ಸಾಲ. ಎಷ್ಟು ದುಡಿದರೂ ಸಾಲ ತೀರಿ, ಹತ್ತೋ ಇಪ್ಪತ್ತೋ ರೂಪಾಯಿ ಕೈಗೆ ಬರುತ್ತಿತ್ತು. ಅಮ್ಮನ ಕಷ್ಟಕ್ಕೆ ಜೊತೆಯಾಗಿ ತೋಟದ ಕೆಲಸಕ್ಕೆ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಳು. ಅಮ್ಮನಿಗೆ ಇಪ್ಪತ್ತು ರೂಪಾಯಿ ಕೂಲಿ ಕೊಟ್ಟರೆ ನನಗೆ ಹದಿನೈದು ರೂಪಾಯಿ ಕೊಡುತ್ತಿದ್ದರು. ಹೊಲಗಳಲ್ಲಿ ನೆಲ್ಲು ಕೊಯ್ಯುವುದು, ನಾಟಿ ನೆಡುವುದು, ಹಣ್ಣು ಮೆಣಸಿನಕಾಯಿ ಕೀಳುವುದು ಹೀಗೆಲ್ಲ ಹನ್ನೊಂದು ವರ್ಷಕ್ಕೆ ಹೊಲದ ಕೆಲಸಗಳಿಗೆ ಹತ್ತಿಕೊಂಡೆ.
ನಂತರ ಆಂಧ್ರದ ವಿಜಯವಾಡ, ಗುಂಟೂರಿಗೆ ಹತ್ತಿ ಬಿಡಿಸುವ ಕೆಲಸಕ್ಕೆ ಹೋದೆವು. ಅಲ್ಲಿ ಒಂದು ಕೇಜಿ ಹತ್ತಿ ಬಿಡಿಸಿದರೆ ಎರಡು ರೂಪಾಯಿ ಕೊಡುತ್ತಿದ್ದರು. ದಿನವೊಂದಕ್ಕೆ ಹಗಲಿನಿಂದ ಸಂಜೆವರೆಗೆ ಕೆಲಸ ಮಾಡಿದರೂ ಹದಿನೆಂಟರಿಂದ ಇಪ್ಪತ್ತು ಕೇಜಿ ಹತ್ತಿ ಬಿಡಿಸುತ್ತಿದ್ದೆವು. ಬೆಳಗ್ಗೆನೇ ಹೋಗಿ ಸಾಯಂಕಾಲದವರೆಗೂ ಕೆಲಸ ಮಾಡಿದರೆ ಮೂವತ್ತು ಕೇಜಿ ಬಿಡಿಸುತ್ತಿದ್ದೆವು. ಆ ದಿನ ನಮಗೆ ತುಂಬಾ ಖುಷಿ. ಅದೇ ದೊಡ್ಡ ದುಡಿಮೆ ನಮಗೆ.
ಇದನ್ನೂ ಓದಿ : Transgender: ಹಾದಿಯೇ ತೋರಿದ ಹಾದಿ; ಆ ದಿನ ಸೆಕ್ಸ್ ವರ್ಕ್ಗೆ ಹೊರಟಾಗ
ನಂತರ ನಮ್ಮೂರಿಗೆ ಬಂದೆವು. ಅಲ್ಲಿ ಇಲ್ಲಿ ತೋಟದ ಕೆಲಸ, ಮನೆಗೆಲಸ ಮಾಡುತ್ತಿದ್ದೆವು. ಅಮ್ಮನಿಗೆ ಮನೆಗೆಲಸ ಮಾಡುವುದು ಕಷ್ಟವಾಗಿ ಹಣ್ಣು ಮಾರಲು ಹೋದಳು. ನಾನು ಮನೆಗೆಲಸ ಮಾಡುತ್ತಲೇ ಉಚಿತ ಟೈಲರಿಂಗ್ ಯೋಜನೆಯಡಿ ಟೈಲರಿಂಗ್ ಕಲಿಯುವ ಹೊತ್ತಿಗೆ ಋತುಮತಿಯಾದೆ. ಆಗ ಟೈಲರಿಂಗ್ ಕಲಿಕೆಯನ್ನು ಬಿಡಿಸಿದ ಅಮ್ಮ ತೋಟದ ಕೆಲಸಕ್ಕೆ ಕಳಿಸಿದರು.
ಹೀಗಿರುವಾಗಲೇ ಒಂದು ಗಂಡನ್ನೂ ನೋಡಿದರು. ಆದರೆ ಅವನಿಗೆ ಮೊದಲೇ ಮದುವೆಯಾಗಿತ್ತು. ಮೂರು ತಿಂಗಳಿಗೆ ಹೆಂಡತಿ ಬಿಟ್ಟುಹೋಗಿದ್ದಳು. ಚಿಕ್ಕವಯಸ್ಸಿನಿಂದಲೂ ನಿಮ್ಮ ಹುಡುಗಿಯನ್ನು ನೋಡಿದ್ದೇವೆ, ಚೆನ್ನಾಗಿ ಕೆಲಸ ಮಾಡುತ್ತಾಳೆ. ಒಂದು ಎಕರೆ ಜಮೀನು ಅವಳ ಹೆಸರಿಗೆ ಬರೆದುಕೊಡುತ್ತೇವೆ ಎಂದು ಹೇಳಿ ಮದುವೆ ಮಾಡಿಕೊಂಡರು. ಮೊದಲ ಹೆಂಡತಿ ತಾನಾಗಿಯೇ ಹೋಗಿದ್ದು, ಇವರಾಗಿಯೇ ಕಳಿಸಿದ್ದಲ್ಲವಲ್ಲ ಎಂದು ಅಮ್ಮ ಈ ಮದುವೆಗೆ ಒಪ್ಪಿಕೊಂಡರು. ಒಡವೆ, ವರದಕ್ಷಿಣೆಯ ಗೊಡವೆಯೂ ಇಲ್ಲ. ಮೇಲಾಗಿ ಅಪ್ಪನ ಅನಾರೋಗ್ಯಕ್ಕೆ ಮಾಡಿದ ಸಾಲದ ಹೊರೆ. ಹಾಗಾಗಿ ಅಮ್ಮ ಹೆಚ್ಚು ಯೋಚಿಸಲಿಲ್ಲ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಹಿಂದಿನ ಹಾದಿ : Transgender: ಹಾದಿಯೇ ತೋರಿದ ಹಾದಿ; ‘ನಾಲ್ಕನೇ ತರಗತಿಗೇ ನಾನು ಗಂಡು ಅಲ್ಲ ಎನ್ನಿಸಿತು’
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 9:08 am, Thu, 17 March 22