ಹಾದಿಯೇ ತೋರಿದ ಹಾದಿ | Haadiye Torida Haadi : ಒಮ್ಮೆ ಸೌಮ್ಯಾರನ್ನು ಸೆಕ್ಸ್ ವರ್ಕ್ಗೆಂದು ಯಾರೋ ಒಬ್ಬರು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ದಾರಿಮಧ್ಯೆ ಅಲ್ಲಲ್ಲಿ ನಾಲ್ಕೈದು ಮಂದಿ ಗೂಂಡಾಗಳನ್ನೂ ಅವರು ಹತ್ತಿಸಿಕೊಂಡರು. ಗೊತ್ತಿಲ್ಲದ ದೂರದೂರಿಗೆ ಕರೆದುಕೊಂಡು ಹೋದರು. ಹಾಕಿಕೊಂಡಿದ್ದ ಚೂಡಿದಾರ್ ಕಿತ್ತೆಸೆದು ಬೇಕಾದಂತೆಲ್ಲ ಮುಕ್ಕಿದರು. ಅವತ್ತು ಸೌಮ್ಯಾರನ್ನು ಮುಗಿಸಿಬಿಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ಸೌಮ್ಯಾ ಎಲ್ಲಾ ದೇವರನ್ನೂ ಪ್ರಾರ್ಥಿಸಿ ತನ್ನ ಜೀವನ ಇಲ್ಲಿಗೇ ಮುಗಿಯಿತು ಎಂದುಕೊಂಡರು. ಆದರೂ ಅವರಿಂದ ತಪ್ಪಿಸಿಕೊಂಡು ಸುಮಾರು ಎರಡೂವರೆ ಕಿಲೋಮೀಟರ್ ತನಕ ಓಡೋಡಿ ಬಂದು ಜೀವ ಉಳಿಸಿಕೊಂಡರು. ದುಪ್ಪಟ್ಟ ಬಿಟ್ಟರೆ ಬೇರೇನೂ ಮೈಮೇಲೆ ಬಟ್ಟೆಗಳಿರಲಿಲ್ಲ. ‘ಲಿಂಗ ಬದಲಾವಣೆ ಮಾಡಿಕೊಳ್ಳಬೇಕು ಅಂತ ಬಯಸಿದ್ದೆ, ಆದರೆ ಅದಾದ ಮೇಲೆ ಏನು ಮಾಡಬೇಕು ಎಂಬ ಬಗ್ಗೆ ಖಚಿತತೆ ಇರಲಿಲ್ಲ. ಅಪ್ಪ, ಅಮ್ಮ, ಅಕ್ಕ, ಅಣ್ಣ ಎಲ್ಲರೂ ನೆನಪಾಗಿ ಆ ದಿನ ಬಹಳ ಅತ್ತುಬಿಟ್ಟೆ. ಆಗ ಬದುಕಿದ್ದು ನನ್ನ ಪುನರ್ಜನ್ಮವೇ ಸರಿ’ ಆ ಘಟನೆಯನ್ನು ನೆನಪಿಸಿಕೊಂಡು ಕಣ್ಣೀರಾದರು 41 ವರ್ಷ ಸೌಮ್ಯಾ.
ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್ (Jyothi S)
(ಹಾದಿ 9, ಭಾಗ 3)
ಸೆಕ್ಸ್ ವರ್ಕ್ ಸುಲಭದ ಕೆಲಸವಲ್ಲ. ಒಮ್ಮೆ ಮನೆಯಿಂದ ಆಚೆ ಹೋದರೆ, ಮತ್ತೆ ಜೀವಂತ ಬರುತ್ತೇವೆ ಎನ್ನುವ ಯಾವ ನಂಬಿಕೆಯೂ ಇರುವುದಿಲ್ಲ. ಜೀವವೇ ಹೋದಂತಾಗುತ್ತದೆ ಯಾರಿಗೆ ಯಾವ ಕಾಯಿಲೆ ಇರತ್ತೋ ಗೊತ್ತಿಲ್ಲ. ಅನಿವಾರ್ಯವಾಗಿ ಸೆರಗು ಹಾಸಬೇಕು ಅಷ್ಟೆ. ಅಲ್ಲದೆ, ಕೆಲವರು ಫ್ರೀ ಸೆಕ್ಸ್ ಮಾಡುವುದು, ಗುಂಡಾಗಳು ಬಲವಂತವಾಗಿ ಎಳೆದುಕೊಂಡು ಹೋಗಿಬಿಡುವುದು, ಆಗಾಗ ಪೊಲೀಸಿನವರ ಹೊಡೆತ… ಜೀವಂತಿಕೆಯೇ ಇಲ್ಲದಂತೆ ವಸ್ತುವಿಗಿಂತ ಕನಿಷ್ಟವಾಗಿ ಬದುಕುತ್ತಿದ್ದೇವೆ. ಕೆಲವರು ನಮ್ಮನ್ನ ಹೇಗೆ ಬೇಕಿದ್ದರೂ ಬಳಸಿಕೊಳ್ಳಬಹುದು ಅಂತ ಬರುತ್ತಾರೆ, ಕೆಲವರು ಐಡೆಂಟಿಟಿ ಗೊತ್ತಾಗದೆ ಬರುತ್ತಾರೆ. ಕೆಲವರು ಒಳ್ಳೆಯವರು ಇರುತ್ತಾರೆ. ಇಲ್ಲದಿದ್ದರೆ ನಮ್ಮ ಸಮುದಾಯದ ಜನರು ಇಷ್ಟು ವರ್ಷ ಹೇಗೆ ಬದುಕೋಕೆ ಇನ್ನೂ ಕಷ್ಟವಾಗುತ್ತಿತ್ತು.
ಒಂದು ಹಂತದಲ್ಲಿ ನನಗೆ ಒಬ್ಬರ ಜೊತೆಗೆ ಪ್ರೀತಿ ಕೂಡ ಆಗಿ ಬಹಳ ಕಾಲ ಉಳಿಯದೆ ಮೂರು ವರ್ಷಗಳಲ್ಲಿ ಮುಗಿದು ಹೋಯ್ತು. ನಂತರ ಕೆಲವು NGOಗಳ ನಂಟು ಬೆಳೆಯಿತು. ಆಗ SSW ಸಂಸ್ಥೆಯಿಂದ ಸುಮಾರು ಜನರು HIV ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆಗ ನಮಗೂ ಒಂದು ಆಫೀಸ್ ಇದೆ ಎನ್ನುವುದು ಗೊತ್ತಾಯಿತು. 1999ರಲ್ಲಿ Sexuality Violence Committee – ‘ಸಂಗಮ’ ಸಂಸ್ಥೆಯ ಪರಿಚಯವಾಯ್ತು. ನಮ್ಮ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆ ಎಂದು ಗೊತ್ತಾದ ಮೇಲೆ ಅದರೊಂದಿಗೆ ಒಡನಾಟ ಇಟ್ಟುಕೊಂಡೆ.
ಭಾಗ 1 : Transgender: ಹಾದಿಯೇ ತೋರಿದ ಹಾದಿ; ‘ನಾಲ್ಕನೇ ತರಗತಿಗೇ ನಾನು ಗಂಡು ಅಲ್ಲ ಎನ್ನಿಸಿತು’
ಅದಾದ ನಂತರ 2005ರ ಹೊತ್ತಿಗೆ ನಾನು ಸ್ವಲ್ಪಸ್ವಲ್ಪವೇ ಮಾಹಿತಿ ತಿಳಿದುಕೊಂಡು ಅಲ್ಲೇ ಕೆಲಸಕ್ಕೆ ಸೇರಿಕೊಂಡೆ. ಕೆಲಸಕ್ಕೆ ಸೇರಿದ ಮೇಲೆ NGO ಹೇಗೆ ನಡೆಯುತ್ತದೆ. ಕಮ್ಯೂನಿಟಿ ಎಂದರೇನು? ಸಂಘಟನೆ ಯಾಕೆ ಬೇಕು? ಸೊಸೈಟಿ, ಹೀಗೆ ಎಲ್ಲದರ ಬಗ್ಗೆ ತರಬೇತಿಗಳನ್ನು ಪಡೆದುಕೊಂಡೆ. ಪ್ರತೀ ವಾರವೂ ನಮ್ಮ ಸಮುದಾಯದ ಮೇಲೆ ನಡೆದ ಹಿಂಸಾಪ್ರಕರಣಗಳ ಬಗ್ಗೆ ಮತ್ತಿತರ ವಿಷಯಗಳ ಬಗ್ಗೆ ಮಾಡುತ್ತಿದ್ದೆವು.
ಆಗ ನಮ್ಮದೇ ಸಮುದಾಯದ ಒಂದಷ್ಟು ಜನರನ್ನು ಸೇರಿಸಿ 2005ರ ಮೇ ತಿಂಗಳಲ್ಲಿ ‘ಸಮರ’ ಎಂಬ ಸಂಘಟನೆ ಕಟ್ಟಿ ರಿಜಿಸ್ಟರ್ ಮಾಡಿಸಿದೆ. ಅದಕ್ಕೆ ಸೆಕ್ರೆಟರಿ ಆಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಹೋರಾಟಗಾರ್ತಿಯಾಗಿ, ಸಮಾಜ ಬದಲಾವಣೆಯ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸಿದೆ. ಹಾಗಾಗಿ ಅದೇ ವರ್ಷ “ಸೂರ್ಯ ಪ್ರಶಸ್ತಿ” ಬಂತು. ಆಗ ಉಮಾಶ್ರೀಯವರು ಶಾಸಕಿಯಾಗಿದ್ದರು. ಅವರು ನನಗೆ ಈ ಪ್ರಶಸ್ತಿ ನೀಡಿದ ವರದಿ ಉದಯ ಟಿವಿಯಲ್ಲಿ ಪ್ರಸಾರವಾಗಿದ್ದನ್ನು ನೋಡಿ ನಮ್ಮ ಮನೆಯವರೆಲ್ಲ ನನ್ನನ್ನು ಹುಡುಕಿಕೊಂಡು ಬಂದು ಗಲಾಟೆ ಮಾಡಿ, ಒಂದು ತಿಂಗಳೊಳಗೆ ಮರಳಿ ಮನೆಗೆ ಬರುವಂತೆ ಎಚ್ಚರಿಕೆ ನೀಡಿ ಹೋದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 2 : Transgender: ಹಾದಿಯೇ ತೋರಿದ ಹಾದಿ; ‘ಮೊದಲ ಸಲ ಹಮಾಮ್ಗೆ ಹೋದೆ’
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 1:28 pm, Thu, 10 March 22