Salaga Movie Promotional Song : ‘ಜೀವದ್ ಮೇಲೆ ಭಯಾ ಬಂದು ಸುತ್ತಾ ಹುಡುಗರ್ನ ಹಾಕ್ಕೊಂಡ್ ಓಡಾಡ್ತಿದೀಯಲ್ಲೋ ಜುಟ್ಟು’ ರಗಡ್ ಸ್ಟೈಲ್ನಲ್ಲಿ ಎಂಟ್ರಿ ಕೊಡುವ ದುನಿಯಾ ವಿಜಯ್ ಬೆನ್ನಲ್ಲೇ ‘ಬೆಂಗಳೂರ ಸಾವಕಾರ ಮಾಲಿಕ ಮುಝೆ ಅಂದರ್ ಬುಲಾಯಾ ದರ್ವಾಜಾ ಲಗಾಯಾ. ಟಿಣಿಂಗ್ ಮಿಣಿಂಗ್ ಟಿಷ್ಯಾ, ಅರೆಅರೆ ಟಿಷ್ಯಾ!’ ವಿಶಿಷ್ಟ ದನಿಬನಿಯಲ್ಲಿ ಹಾಡುತ್ತ, ಮೈಚಳಿಬಿಟ್ಟು ನರ್ತಿಸುವ ಕಲಾವಿದೆಯೊಬ್ಬರು ತೆರೆಯನ್ನಾವರಿಸುವ ಹಾಡಿನ ದೃಶ್ಯ ನೋಡುಗರ ಮನಸ್ಸಿನಲ್ಲಿ ಈಗಾಗಲೇ ಲಯ ಊರಿಬಿಟ್ಟಿದೆ. ಅರೆ, ಇವರನ್ನೇನು ಆಫ್ರಿಕಾದಿಂದ ಕರೆಸಿದ್ದಾರಾ ಏನು? ಸಾಕಷ್ಟು ಜನರಿಗೆ ಹೀಗೆ ಕುತೂಹಲವನ್ನೂ ಹುಟ್ಟಿಸಿದೆ. ಆದರೆ ಈ ಊಹೆ ಖಂಡಿತ ತಪ್ಪು. ರಂಗಕಲಾವಿದೆ, ಗಾಯಕಿ ಗಿರಿಜಾ ಸಿದ್ಧಿ ನಮ್ಮವರೇ, ನಮ್ಮ ಉತ್ತರ ಕನ್ನಡದವರೇ. ಇವರೊಂದಿಗೆ ಈ ಸಿನೆಮಾದಲ್ಲಿ ಹೆಜ್ಜೆ ಹಾಕಿದ ಕಲಾವಿದರೆಲ್ಲರೂ ಅವರ ಸಂಬಂಧಿಕರೇ. ಕಾಡುಕುಸುಮ ಗಿರಿಜಾ ಬೆಂಗಳೂರು ತಲುಪಿ, ದುನಿಯಾ ವಿಜಯ್ (Duniya Vijay) ಅವರ ಚೊಚ್ಚಲ ನಿರ್ದೇಶನದ ‘ಸಲಗ’ವನ್ನು ಸಮೀಪಿಸಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಇದು ಎರಡು ಕಂತುಗಳಲ್ಲಿ ಪ್ರಕಟವಾಗಲಿದೆ.
ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಮಂಚೀಕೆರೆಯಿಂದ ಮೂರು ಕಿ.ಮೀ. ಅಣಲೇಸರದಲ್ಲಿ ಸಿದ್ಧಿ ಜನಾಂಗ ವಾಸವಾಗಿರುವುದು. ದಟ್ಟ ಕಾಡು, ಎರಡು ಕಿಲೋಮೀಟರಿಗೊಂದೊಂದು ಮನೆ, ಅಡಿಕೆ ತೋಟ, ಗದ್ದೆಗಳು, ಸುತ್ತುವರಿದ ಪ್ರಾಣಿ ಪಕ್ಷಿಗಳ ಸಂಕುಲ, ಅಲ್ಲಲ್ಲಿ ನೀರಿನ ಝರಿ. ಅಜ್ಜ, ಅಜ್ಜಿ, ಒಂಬತ್ತು ಜನ ಚಿಕ್ಕಮ್ಮಂದಿರು ಮತ್ತವರ ಸಂಸಾರದೊಳಗೆ ಒಬ್ಬಳಾಗಿ ಬೆಳೆದವರು ಗಿರಿಜಾ. ಮುಂದಿನದು ಅವರ ಮಾತಿನಲ್ಲೇ.
ಮಳೆ?
ಮಳೆ ಎಂದರೆ ಮತ್ತಿಮರದ ಎಲೆಗಳನ್ನು ಛತ್ರಿ ಮಾಡಿಕೊಂಡು ಕಾಡುತುಂಬ ಓಡಾಡುತ್ತಲೇ ಇರುವುದು.
ಶಾಲೆ?
ಚಪ್ಪಲಿ ಇಲ್ಲದೆ ಗೆಳತಿಯರ ಗುಂಪಿನೊಂದಿಗೆ ದಿನವೂ ಅತ್ತ ನಾಲ್ಕು ಇತ್ತ ನಾಲ್ಕು ಒಂದೇ ಸಮ ಎಂಟು ಕಿ.ಮೀ. ಓಡುತ್ತಲೇ ಇರುವುದು.
ಬದುಕು?
ಮರಗಳನ್ನು ಹತ್ತುವುದು ಇಳಿಯುವುದು ಇಳಿಯುವುದು ಏರುವುದು.
ಶಾಲೆಗೆ ಹೋಗುವಾಗ ನನ್ನೊಂದಿಗೆ ಹವ್ಯಕ, ಶೆರುಗಾರ, ಮಡಿವಾಳ ಹೀಗೆ ಬೇರೆ ಬೇರೆ ಜಾತಿಯ ಗೆಳತಿಯರೂ ಇರುತ್ತಿದ್ದರು. ಒಂದು ಜಾಗವನ್ನು ಗುರುತು ಮಾಡಿಟ್ಟುಕೊಂಡು, ದಿನವೂ ಬೆಳಗ್ಗೆ ಏಳೂವರೆಗೆ ಅಲ್ಲಿ ಸೇರುತ್ತಿದ್ದೆವು. ಎಲ್ಲರೂ ಸೇರಿ ಓಡಲು ಶುರು ಮಾಡಿದರೆ ನಿಲ್ಲುತ್ತಿದ್ದುದು ಶಾಲೆಗೇ. ನನಗೆ ಸ್ವಲ್ಪ ಭಯವಾಗುತ್ತಿತ್ತು ನಾನೊಬ್ಬಳೇ ಸಿದ್ಧಿ ಹುಡುಗಿ. ಹವ್ಯಕ ಬ್ರಾಹ್ಮಣರ ನಡುವೆಯೇ ಬೆಳೆಯಬೇಕಾದ ಸಂದರ್ಭ. ಆದರೂ ಅವರೊಂದಿಗಿನ ಒಡನಾಟದಿಂದ ವಿದ್ಯೆಯ ಸಂಸ್ಕಾರ ಅಲ್ಪಸ್ವಲ್ಪ ಆಗುತ್ತಿತ್ತು. ನಾಲ್ಕನೇ ಕ್ಲಾಸಿನಲ್ಲಿದ್ದಾಗ ಒಮ್ಮೆ ಶ್ಲೋಕ ಸ್ಪರ್ಧೆಯನ್ನು ಏರ್ಪಡಿಸಿದ್ದರು. ನಮ್ಮ ಕ್ಲಾಸ್ ಟೀಚರ್ ಉಮಾದೇವಿಯವರು ನನಗೂ ಹಾಡಲು ಅವಕಾಶ ಕೊಟ್ಟರು. ಸಿದ್ದಿ ಹುಡುಗಿ ಏನು ಹಾಡುತ್ತಾಳೆ ಎಂಬ ಭಾವನೆಯಲ್ಲೇ ಎಲ್ಲರೂ ನನ್ನನ್ನು ನೋಡುತ್ತಿದ್ದರು. ಆದರೆ, ಉಮಾದೇವಿ ಟೀಚರ್, ದಿನವೂ ನನಗೆ ಸಂಸ್ಕೃತದ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ನನ್ನ ಮಟ್ಟಿಗೆ ಅದು ದೊಡ್ಡ ಸ್ಪರ್ಧೆ. ಅಷ್ಟು ಜನರ ಮುಂದೆ ಶ್ಲೋಕಗಳನ್ನು ಹಾಡುವುದು ಹೇಗೆ ಎನ್ನುವ ಆತಂಕಕ್ಕಿಂತ ನನ್ನ ಮೈಬಣ್ಣ, ಕೂದಲು ಎಂಬ ಹೊರವೇಷವನ್ನು ಜನ ಹೇಗೆ ಸ್ವೀಕರಿಸಿಯಾರು ಎಂಬ ಭಯವಿತ್ತು. ಆದರೆ ಭಗವದ್ಗೀತೆಯ 21ನೇ ಅಧ್ಯಾಯದ ಶ್ಲೋಕಗಳನ್ನು ಹಾಡಿ ತೋರಿಸಿದಾಗ ನನಗೇ ಮೊದಲ ಬಹುಮಾನ ಬಂದುಬಿಟ್ಟಿತು. ಆ ಆತ್ಮವಿಶ್ವಾಸ, ಖುಷಿ ಬಹಳ ದೊಡ್ಡದು ಆಗ.
ಇದರ ನಂತರ ನನ್ನ ವಿದ್ಯಾರ್ಥಿ ಜೀವನ ಮತ್ತೊಂದು ಹಂತಕ್ಕೆ ತೆರೆದುಕೊಂಡಿತು. ಆಗ ನಮ್ಮ ಬಳಿ ಓಡಾಡಲು ಹಣವಿರುತ್ತಿರಲಿಲ್ಲ. ಬೆನ್ನೆಲುಬಾಗಿ ನಿಂತವರು ಇದೇ ಉಮಾದೇವಿ ಟೀಚರ್. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರಿಲ್ಲದಿದ್ದರೆ ನಾನೀವತ್ತು ಹೀಗೆ ನಿಮ್ಮೊಂದಿಗೆ ಮಾತನಾಡುವ ಸಂದರ್ಭ ಒದಗುತ್ತಿರಲಿಲ್ಲ. ಆಗಾಗ ಬಹಳ ನೆನಪಾಗುತ್ತಾರೆ. ನನ್ನ ಅಪ್ಪ ಏಳನೇ ಕ್ಲಾಸ್ ಓದಿದ್ದರು. ನನ್ನ ಒಂಬತ್ತು ಜನ ಚಿಕ್ಕಮ್ಮಂದಿರು ಮದುವೆ ಹಾಡುಗಳನ್ನು ಹಾಡುತ್ತಿದ್ದರು. ಅವರೊಂದಿಗೆ ಸೇರಿ ನಾನೂ ಹಾಡಲು ಕಲಿತೆ. ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾರ ಮದುವೆ ಏರ್ಪಟ್ಟರೂ ಆ ಮನೆಯವರು ನಾವಿದ್ದಲ್ಲಿಗೆ ಬಂದು, ಎಲೆಯಡಿಕೆ, ತೆಂಗಿನಕಾಯಿ ಕೊಟ್ಟು ನಮ್ಮನ್ನು ಆಹ್ವಾನಿಸಿ ಹೋಗುವುದು ಸಂಪ್ರದಾಯ. ಈಗಲೂ ಈ ಕ್ರಮ ಇದೆ. ಹೀಗೆ ಹಾಡುತ್ತಲೇ ನನಗೆ ಸಂಗೀತದಲ್ಲಿ ಆಸಕ್ತಿ ಹುಟ್ಟಿತು.
ನಾನು ಹೈಸ್ಕೂಲಿಗೆ ಬರುತ್ತಿದ್ದಂತೆ ಹಿಂದೂಸ್ತಾನಿ ಸಂಗೀತ, ಕಲಾವಿದರು, ಕಛೇರಿ ಬಗ್ಗೆ ಗಮನ ಹರಿಹಲಾರಂಭಿಸಿತು. ನಮ್ಮೂರಿನಿಂದ ಎರಡು ಕಿ.ಮೀ ದೂರದಲ್ಲಿದ್ದ ಹಾಸಣಗಿಯಲ್ಲಿ ಹಿಂದೂಸ್ತಾನಿ ಸಂಗೀತದ ಹಿರಿಯ ಕಲಾವಿದರಾದ ಗಣಪತಿ ಭಟ್ ಅವರು ಆಗ ಅಮೆರಿಕಾ ಮತ್ತು ಇತರೇ ದೇಶಗಳಿಗೆ ಓಡಾಡಿಕೊಂಡು ಸಂಗೀತ ಕಛೇರಿಗಳನ್ನು ಕೊಡುತ್ತಿದ್ದುದು ಕಿವಿ ಮೇಲೆ ಬೀಳುತ್ತಿತ್ತು. ಮತ್ತು ಪ್ರತೀ ಶನಿವಾರ ಭಾನುವಾರ ಕಿರಿಯ ಕಲಾವಿದರೊಬ್ಬರು ನಮ್ಮ ಶಾಲೆಗೇ ಬಂದು ಸಂಗೀತ ಹೇಳಿಕೊಡುತ್ತಿದ್ದರು. ನಾನೂ ಹೋಗಿ ಕೂರುತ್ತಿದ್ದೆ. ನಿಮ್ಮಂಥವರಿಗೆಲ್ಲ ಈ ವಿದ್ಯೆಯಲ್ಲ, ಇದೆಲ್ಲ ನೀವು ಕಲಿಯೋವಂಥದ್ದೂ ಅಲ್ಲ ಎಂದು ಅವರು ನನ್ನನ್ನು ದೂರವಿಡುತ್ತಿದ್ದರು. ಆದರೆ ಈ ನೋವು, ಅವಮಾನವೇ ನನ್ನನ್ನು ಮತ್ತಷ್ಟು ಸಂಗೀತಕ್ಕೆ ಹತ್ತಿರವಾಗುವ ಬಯಕೆಯನ್ನು ಹೆಚ್ಚಿಸಿತು ಎನ್ನಬಹುದು. ಹತ್ತನೇ ಕ್ಲಾಸಿಗೆ ನನ್ನ ಓದು ನಿಲ್ಲಿಸಿಬಿಟ್ಟೆ.
ಈ ಎಲ್ಲ ಆಗುಹೋಗುಗಳ ಮಧ್ಯೆಯೇ ಎಳವೆಯಲ್ಲಿಯೇ ಬಿತ್ತಿದ ನಾಟಕದ ಬೀಜವೊಂದು ಹಾಗೇ ಇತ್ತು. ನನಗಾಗ ಮೂರು ವರ್ಷ. ಒಮ್ಮೆ ಚಿದಂಬರ ಜಂಬೆಯವರು ನಮ್ಮೆಲ್ಲರನ್ನೂ (ಸಿದ್ದಿ ಜನಾಂಗವನ್ನು) ಒಂದು ತಿಂಗಳತನಕ ನೀನಾಸಂಗೆ ಕರೆಸಿಕೊಂಡು ಕಾಕನಕೋಟೆ ನಾಟಕ ಮಾಡಿಸಿದ್ದರು. ಅಪ್ಪನಿಗೂ ಒಂದು ಪಾತ್ರ ಕೊಟ್ಟಿದ್ದರು. ಇದೆಲ್ಲ ನಡೆದಿದ್ದು 80ರ ದಶಕದಲ್ಲಿ. ನಮ್ಮ ಶಾಲೆಯಲ್ಲಿ ಆಗಾಗ ನೀನಾಸಂ ಏರ್ಪಡಿಸುವ ನಾಟಕ ಪ್ರದರ್ಶನಗಳನ್ನು ನೋಡುತ್ತಿದ್ದೆ ನಿಜ. ಆದರೆ ಹೆಗ್ಗೋಡಿಗೆ ಹೋಗಿ ಡಿಪ್ಲೊಮಾ ಕೋರ್ಸಿಗೆ ಸೇರುವುದು ಹೇಗೆ ಎಂದು ಗೊತ್ತಿರಲಿಲ್ಲ. ಜಾಸ್ತಿ ಓದಿದವರೆಲ್ಲರೂ ಆ ಕೋರ್ಸ್ಗೆ ಸೇರಿಕೊಳ್ಳುತ್ತಾರೆ ಹತ್ತನೇ ಕ್ಲಾಸು ಓದಿದ ನನ್ನನ್ನು ಯಾರು ಸೇರಿಸಿಕೊಳ್ಳುತ್ತಾರೆ ಎಂಬ ಅಳುಕಿತ್ತು.
ಆದರೂ ನಾನು ತಂಗಿ ಗೀತಾ ಒಮ್ಮೆ ಅಲ್ಲಿಯ ಶಿಬಿರವನ್ನು ಸೇರಿದೆವು. ಕೊಲ್ಕತ್ತಾದಿಂದ ಬಂದ ರುಸ್ತುಂ ಬೊರೊಚಾ ಎಂಬ ನಾಟಕಕಾರರು ಅಲ್ಲಿದ್ದರು. ಬರೂಚಾ ಅವರು ಜಂಬೆಯವರ ಬಳಿ ಮಾತನಾಡಿದರು. ಹತ್ತನೇ ಕ್ಲಾಸ್ ಓದಿದರೆ ಏನಾಯಿತು? ಒಂದು ಅವಕಾಶ ಕೊಡಿ ಎಂದು ನನ್ನ ಪರವಾಗಿ ಜಂಬೆಯವರಲ್ಲಿ ಕೇಳಿದರು. ಹೀಗೆ ನೀನಾಸಂ ಗೆ ಅರ್ಜಿ ಹಾಕಿ ಸಂದರ್ಶನಕ್ಕೆ ಹಾಜರಾದೆ. ಅಲ್ಲಿ ಹೋಗುವ ತನಕ ಒಂದು, ಹೋದ ಮೇಲೆ ಇನ್ನೊಂದು. ನಾನೊಬ್ಬಳೇ ಕಡಿಮೆ ಓದಿದವಳು. ಉಳಿದವರೆಲ್ಲ ಪದವಿ, ಸ್ನಾತಕೋತ್ತರ ಪದವಿ. ಆಫ್ರಿಕಾದಿಂದ ಬಂದು ಕನ್ನಡ ಕಲಿತಿದ್ದಾಳೆ ಎಂದೆಲ್ಲ ಅಲ್ಲಿಯ ಜನ ಅಚ್ಚರಿಯಿಂದ ನನ್ನನ್ನು ನೋಡಲಾರಂಭಿಸಿದರು. ಆದರೂ ಧೈರ್ಯ ಮಾಡಿ ಸಂದರ್ಶನದಲ್ಲಿ ಪಾಲ್ಗೊಂಡೆ. ಕೊಂಕಣಿ ಹಾಡುಗಳನ್ನು ಹಾಡಿದೆ. ಹಳೆಗನ್ನಡ ಓದಲು ಕೊಟ್ಟರು, ಓದಿದೆ. ಈ ಸಂದರ್ಶನಕ್ಕೆ ಮಂಚೀಕೆರೆಯಿಂದ ಇಬ್ಬರು ಹೋಗಿದ್ದೆವು. ಒಬ್ಬ ಹವ್ಯಕ ಹುಡುಗ ಮತ್ತು ನಾನು. ಹವ್ಯಕ ಹುಡುಗನನ್ನು ಸೇರಿಸಿಕೊಳ್ಳಬೇಕೆಂದು ಯಾರೋ ಪ್ರಭಾವಿಗಳು ಒತ್ತಾಯಿಸುತ್ತಿದ್ದಾರೆ ಎಂಬ ವಿಷಯ ತಿಳಿದಾಗಲಂತೂ ಬಹಳ ಆಘಾತವಾಯಿತು. ಆ ವಯಸ್ಸಿಗೆ ನನಗಿದು ದೊಡ್ಡ ನೋವು. ಆದರೆ, ಕೊನೆಗೂ ಪ್ರವೇಶ ಸಿಕ್ಕಿದ್ದು ನನಗೇ. ಆ ಸಂತೋಷಕ್ಕೆ ಅಪ್ಪನೆಂಬ ದೊಡ್ಡ ಕಲ್ಲೊಂದು ಅಪ್ಪಳಿಸಿಯೇ ಬಿಟ್ಟಿತು. ‘ನಾಟಕ ಮಾಡಿದರೆ ಯಾರು ಮದುವೆಯಾಗುತ್ತಾರೆ ನಿನ್ನನ್ನು?’ ಪೂರ್ತಿ ಕುಸಿದುಹೋದೆ.
ಆದರೆ ಅಷ್ಟಕ್ಕೇ ಸುಮ್ಮನಾಗದೆ ಹಟ ಹಿಡಿದು ಹೆಗ್ಗೋಡಿಗೆ ಹೋದೆ. ಭಯ ಇತ್ತು ಎಲ್ಲಿ ವಾಪಾಸು ಬಂದುಬಿಡುತ್ತೇನೋ ಎಂದು. ಪಾಶ್ಚಾತ್ಯ ರಂಗಭೂಮಿಗಳ ಬಗ್ಗೆ ಪಾಠ ಮಾಡುವಾಗ ನನಗೊಂದೂ ಅರ್ಥವಾಗುತ್ತಿರಲಿಲ್ಲ. ಆದರೂ ಅಲ್ಲಿಯ ಮೇಷ್ಟ್ರುಗಳೆಲ್ಲ ಬಹಳ ಪ್ರೋತ್ಸಾಹಿಸುತ್ತಿದ್ದರು. ಹೀಗೆ ಸಿದ್ದಿ ಜನಾಂಗದಿಂದ ನೀನಾಸಂಗೆ ಹೋದ ಮೊದಲ ವಿದ್ಯಾರ್ಥಿನಿ ನಾನಾದೆ. ಆದರೆ ನಾನಾಗ ಮಹಾಜಗಳಗಂಟಿ! ಒರಟು ಬೇರೆ. ನೀನು ಕಪ್ಪಗಿದ್ದೀಯಾ ನಿನ್ನ ಕೂದಲು ಯಾಕೆ ಹೀಗೆ ಎಂದು ಸಹಪಾಠಿಗಳು ಕೇಳಿದಾಗ ಕೋಪಬಂದು ಅವರನ್ನು ಹೊಡೆದೇ ಬಿಡುತ್ತಿದ್ದೆ. ಆದರೆ ಅಲ್ಲಿರುವ ಮೇಷ್ಟ್ರುಗಳು ನನ್ನ ಪರವಾಗಿಯೇ ಇರುತ್ತಿದ್ದರು. ನಾನಿಲ್ಲಿ ಬಂದಿರುವುದು ಕಲಿಯಲು, ಆ ಕಡೆಗೆ ಮಾತ್ರ ಗಮನ ಕೊಡಬೇಕು ಎನ್ನುವುದು ಕ್ರಮೇಣ ಅರ್ಥವಾಗಿ ಶಾಂತವಾಗುತ್ತ ಬಂದೆ. ನನ್ನಗನ್ನಿಸಿದ್ದನ್ನು ನೇರವಾಗಿ ಹೇಳುವ ನನ್ನ ಸ್ವಭಾವವನ್ನು ಎಲ್ಲರೂ ಇಷ್ಟಪಡತೊಡಗಿದರು.
‘ಆಷಾಢದ ಒಂದು ದಿನ’ ನನ್ನ ಮೊದಲ ನಾಟಕ. ಮುಖ್ಯಪಾತ್ರಧಾರಿ ಮಲ್ಲಿಕಾಳ ಪಾತ್ರ. ವಯಸ್ಸಾದವರನ್ನು ನಾಯಕಿ ಪ್ರೀತಿಸುತ್ತಿರುತ್ತಾಳೆ. ತನ್ನ ಅಮ್ಮನನ್ನು ತಬ್ಬಿಕೊಂಡು ಈ ವಿಷಯ ತಿಳಿಸುವ ದೃಶ್ಯ. ನಾನಾಗ ಪೂರ್ತಿ ಒದ್ದೆಯಾಗಿದ್ದೆ. ಆದರೆ ನನಗೆ ನೀಳಕೂದಲು, ಸಂಪಿಗೆ ಮೂಗು, ಗುಲಾಬಿ ಕೆನ್ನೆಗಳು ಇರಲಿಲ್ಲ. ಮತ್ತವು ಪ್ರಮೀಳಾನುರ್ಜನೀಯಮ್, ‘ಸಿಂಗಾರೆವ್ವ ಮತ್ತು ಅರಮನೆ’ ಮುಂತಾದ ನಾಟಕಗಳಲ್ಲೂ. ಮೇಷ್ಟ್ರುಗಳು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನೇ ಕೊಡುತ್ತ ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಾ ಹೋದರು. ಆದರೆ ಸಂಗೀತ ಕಲಿಯುವ ಆಸೆ ಹಾಗೇ ಇತ್ತಲ್ಲ? ಹೆಗ್ಗೋಡಿನ ರಂಗಸಂಗೀತ ನಿರ್ದೇಶಕ ಶ್ರೀಧರ (ಭಿನ್ನಷಡ್ಜ) ಅವರಲ್ಲಿ, ಕಲಿಸಿಕೊಡಿ ಎಂದು ಕೇಳಿಕೊಂಡೆ. ಹೀಗೆ ಹಿಂದೂಸ್ತಾನಿಯ ಸಂಗೀತದ ಪ್ರಾಥಮಿಕ ಅಭ್ಯಾಸ ಶುರುವಾಯಿತು. ಹಾರ್ಮೋನಿಯಂ ನುಡಿಸಲು ಕಲಿತೆ. ರಂಗಗೀತೆ ಹಾಡುವುದನ್ನು ಕಲಿತೆ.
ಅಲ್ಲಿ ಮೇಷ್ಟ್ರಾಗಿದ್ದ, ರಂಗನಿರ್ದೇಶಕ ಚನ್ನಕೇಶವ ಅವರನ್ನು, ಏಳನೇ ಕ್ಲಾಸಿನಲ್ಲಿದ್ದಾಗ ನಮ್ಮ ಶಾಲೆಗೆ ನಾಟಕ ಮಾಡಿಸಲು ಬಂದಾಗ ನೋಡಿ ಗೊತ್ತಿತ್ತಷ್ಟೇ. ವಿದ್ಯಾರ್ಥಿ ಜೀವನ ಮುಗಿದು ತಿರುಗಾಟ ಶುರುವಾದಾಗಲೇ ಅವರು ಆಪ್ತರಾಗಿದ್ದು. ಒಂದು ದಿನ ನಿನಗೊಂದು ಮಾತು ಹೇಳಬೇಕಿದೆ, ತಿಪಟೂರಿಗೆ ಹೋಗಿ ಎರಡು ಗಂಟೆಗೆ ಫೋನ್ ಮಾಡುತ್ತೇನೆ ಎಂದರು. ‘ಫ್ರೋತಿಯೋ’ ಟೀಮ್ ಕಟ್ಟಿಕೊಂಡಿದ್ದರು ಆಗ. ನೀನಾಸಂ ಕಚೇರಿಯ ಲ್ಯಾಂಡ್ಲೈನ್ ಬಳಿ ಹೋಗಿ ನಿಂತೆ. ಇನ್ನೇನು ಒಂದು ತಿಂಗಳೊಳಗೆ ಕೋರ್ಸ್ ಮುಗಿಯುವುದಿತ್ತು. ಎರಡು ಗಂಟೆಗೆ ಫೋನ್ ರಿಂಗ್ ಆಯಿತು. ನಿನ್ನನ್ನು ಮದುವೆಯಾಗಬೇಕು ಎಂದುಕೊಂಡಿದ್ದೇನೆ, ನಿನ್ನ ಅಭಿಪ್ರಾಯವೇನು ಎಂದರು. ಆತನಕ ಅವರು ನನಗೆ ಕೇವಲ ಸರ್ ಆಗಿದ್ದರು. ಖುಷಿಯ ಜೊತೆ ದುಃಖವೂ ಆಯಿತು. ಅವರು ದೊಡ್ಡ ಹೆಸರು ಮಾಡಿದವರು, ಅಗಾಧ ಪ್ರತಿಭೆಯುಳ್ಳವರು, ಇಂಥವರನ್ನು ನಾನು ಮದುವೆಯಾಗುವುದಾ ಎಂದು. ನನ್ನನ್ನು ಕರೆದೊಯ್ದು ಬೇರೆ ರೀತಿಯಲ್ಲಿ ‘ಬಳಸಿಕೊಂಡರೆ?’ ಎಂಬ ಆತಂಕ ಕಾಡಿದ್ದೂ ಸುಳ್ಳಲ್ಲ. ನನಗಾಗ ಇಪ್ಪತ್ತು ವರ್ಷ. ಅವರಿಗೂ ನನಗೂ 13 ವರ್ಷಗಳ ಅಂತರ. ಮನೆಯಲ್ಲಿ ಕೇಳಿ ತಿಳಿಸುತ್ತೇನೆ, ಅವರು ಒಪ್ಪಿದರೆ ಮುಂದುವರೆಯಬಹುದು ಇಲ್ಲವಾದರೆ ಇಲ್ಲ. ನೀವೇನಾದರೂ ನಮ್ಮ ಮನೆಗೆ ಹೋಗಿ ಮಾತನಾಡುವುದಾದರೆ ಮಾತನಾಡಬಹುದು ಎಂದೆ. ಅದಕ್ಕೆ ಅವರು, ನಾನು ಮಾತನಾಡುತ್ತೇನೆ ಎಂದರು. ಆದರೆ, ನಮ್ಮ ಮನೆಯವರು ಒಪ್ಪದಿದ್ದರೆ? ಎಂದು ಆನಂತರದ ದಿನಗಳಲ್ಲಿ ಅವರಿಂದ ದೂರವೇ ಇರುತ್ತಿದ್ದೆ.
ಕೊನೆಯ ಪರೀಕ್ಷೆ ಬರೆದೆ. ಕೋರ್ಸ್ ಮುಗಿದು ವೈವಾ ಮುಗಿಸಿ ನಮ್ಮ ಕಾಡಿಗೆ ಹಿಂದಿರುಗಿದೆ. ಎರಡು ತಿಂಗಳ ರಜೆಯ ನಂತರ ತಿರುಗಾಟಕ್ಕೆ ಪತ್ರ ಬಂದಿತು. ಅಪ್ಪ ಕಳಿಸುವುದಿಲ್ಲ ಎಂದು ಪಟ್ಟು ಹಿಡಿದರು. ನಾನು ಜಂಬೆ ಸರ್ಗೆ ಫೋನ್ ಮಾಡಿ ಈ ವಿಷಯ ತಿಳಿಸಿದೆ. ಅವರು ಚನ್ನಕೇಶವರೊಂದಿಗೆ ಒಂದು ದಿನ ನಮ್ಮ ಮನೆಗೆ ಬಂದರು. ಯಾರನ್ನಾದರೂ ಸಂಪರ್ಕಿಸಬೇಕೆಂದರೆ ನಮ್ಮ ಮನೆಯಿಂದ ಒಂದು ಕೀ.ಮೀ ದೂರದಲ್ಲಿರುವ ಶಂಕರ ಭಟ್ಟರ ಮನೆಯೇ ಗತಿ. ನನ್ನ ಅಮ್ಮ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಯಾರಾದರೂ ಫೋನ್ ಮಾಡಿದರೆ, ಅವರು ನಮ್ಮ ಮನೆತನಕ ಬಂದು ಹೇಳಿಹೋಗುತ್ತಿದ್ದರು. ಫೋನ್ ಮಾಡಿದವರಿಗೆ ಇಷ್ಟು ಗಂಟೆಗೆ ಫೋನ್ ಮಾಡಿ ಎಂದೂ ಹೇಳಿರುತ್ತಿದ್ದರು. ನಾವು ಅಲ್ಲಿಗೆ ಹೋಗಿ ಕಾಯುತ್ತಿದ್ದೆವು.
ಜಂಬೆ ಸರ್ ಮತ್ತು ಚನ್ನಕೇಶವ ಅಪ್ಪನ ಬಳಿ ಮಾತನಾಡಿದರು. ಕರ್ನಾಟಕದ ತುಂಬಾ ನಿಮ್ಮ ಮಗಳು ನಾಟಕದ ಮೂಲಕ ತಿರುಗಾಡಲಿ. ಹೊರಜಗತ್ತಿಗೆ ನೀವು, ನಿಮ್ಮ ಜನಾಂಗದವರು ಪರಿಚಯವಾಗಲು ಒಂದು ಅವಕಾಶ ಎಂದರು. ನಮ್ಮ ಅಮ್ಮ ಬಹಳ ಗಟ್ಟಿಗಿತ್ತಿ, ನನ್ನನ್ನು ಕಳಿಸುವ ಮನಸ್ಸು ಮಾಡಿದರು. ಅಪ್ಪ ಬೇಜಾರಲ್ಲೇ ಇದ್ದು, ನಮಗೆ ಆ ದುನಿಯಾನೇ ಬೇಡ. ಬೇರೆ ಏನಾದರೂ ಓದು, ಮಾಡು ಆದರೆ ನಾಟಕದ ಸಹವಾಸ ಮಾತ್ರ ಬೇಡವೇ ಬೇಡ ಎಂದುಬಿಟ್ಟರು. ಜಂಬೆ ಸರ್ ಉಪಾಯಗಾಣದೆ ವಾಪಾಸು ಹೋದರು. ಆದರೆ ಚನ್ನಕೇಶವ ನಮ್ಮ ಮನೆಯಲ್ಲೇ ಉಳಿದರು.
(ಮುಂದಿನ ಭಾಗ ನಾಳೆ ನಿರೀಕ್ಷಿಸಿ)
ಇದನ್ನೂ ಓದಿ : Obituary : ಕನ್ನಡ ರಂಗಭೂಮಿಯ ಕ್ರಿಯಾಶೀಲ ನಿರ್ದೇಶಕ ಜಿ. ಚನ್ನಕೇಶವ ಇನ್ನಿಲ್ಲ
Published On - 6:10 pm, Tue, 10 August 21