ಕಾಡೇ ಕಾಡತಾವ ಕಾಡ | Kaade Kaadataava Kaada : ಒಂದ್ ಸ್ಟ್ರಾಂಗ್ ಕೇಸ್ ಇನ್ಫರ್ಮೇಷನ್ ಸಿಕ್ಕಿದೆ, ಬಾ ಬಾ. ಇವತ್ತು ಗಾಡಿ ಸಮೇತ ಹಿಡಿಲೇಬೇಕು ಅವ್ರನ್ನು ಅಂದರು. ಸಾ…ಈಷ್ಟೊತ್ಗಾ? ಅನ್ನುತ್ತಾ ರಾಗ ಎಳೆದ ದಿನೇಶ. ಯಾಕೋ? ಏನಾದ್ರು ಫಂಕ್ಷನ್ ಉಂಟೇನೋ? ಇದ್ರೆ ಹೇಳು, ಎಣ್ಣೆ ಊಟ ಅರೇಂಜ್ ಮಾಡು ನಾವೆಲ್ಲಾ ಬರ್ತಿವಿ, ಕೇಸ್ ನಾಳೆ ನೋಡಣ ಅಂದು ನಕ್ಕರು. ದಿನೇಶ, ಒಮ್ಮೆ ಯೋಚಿಸಿದ. ಬೆಳಿಗ್ಗೆ ಜೀಪಿನಲ್ಲಿ ರಮೇಶನ ಮಗಳ ಬರ್ತಡೇ ಪಾರ್ಟಿ ಬಗ್ಗೆ ಮಾತನಾಡಿದ್ದನ್ನು ನೆನೆಸಿಕೊಂಡ. ಊಂಹೂ, ನನ್ ಕೈಲಿ ಆಗಲ್ಲ, ಅಷ್ಟೊಂದ್ ಕಾಸ್ ಎಲ್ಲಿಂದ ತರ್ಲಿ? ಅವ್ರನ್ನೆಲ್ಲಾ ಕರೆದ್ರೆ ಪೂರೈಸಕಾಗಲ್ಲ, ಸುಮ್ನೇ ಯಾಕೆ ರಿಸ್ಕೂ? ಪಾರ್ಟಿ ಏನಿಲ್ಲಾ ಅನ್ನೋಣ ಎಂದು ಮನದಲ್ಲೇ ಡಿಸೈಡ್ ಮಾಡಿ, ಪಾರ್ಟಿ ಏನಿಲ್ಲ ಸಾ, ಹಂಗೇ ಸುಮ್ನೇ… ಅನ್ನುತ್ತಾ ನಕ್ಕ. ಯೋ, ಸುಮ್ನೇ ಬಾ ಮಾರಾಯ, ಅದೇನು ದಿನಾ ಬೇಗ ಮನೆಗೋಯ್ತಿಯಾ? ಅದೇ ಹೆಂಡ್ತಿ, ಅದೇ ಮಗು, ಅದೇ ಅನ್ನ ಸಾರು, ಅದೇ ಮಂಚ, ಅನ್ನುತ್ತಾ ಕಿಚಾಯಿಸಿದರು.
ವಿ. ಕೆ. ವಿನೋದ್ಕುಮಾರ್, (V.K. Vinod Kumar)
*
(ಕಥೆ: 4, ಭಾಗ: 2)
ಇಲ್ಲಾ ಸಾ, ಬೆಳ್ಗೆಯಿಂದ ನಡ್ದೂ ನಡ್ದೂ ಸುಸ್ತಾಗದೆ ಅಂದ. ಮಗ್ನೇ, ಸುಸ್ತು ಗಿಸ್ತು ಅನ್ನಂಗಿಲ್ಲ, ಬೆಳಿಗ್ಗೆಯಿಂದ ನಿನ್ನ ಜೊತೆ ನಾನೂ ನಡ್ದಿಲ್ವಾ? ಸುಮ್ನೇ ಗಾಡಿ ತಗಂಡ್ ಬಾ, ಇಲ್ಲಾ ನೀನೆಲ್ಲಿದಿಯಾ ಹೇಳು, ನಾನೇ ಬರ್ತಿನಿ, ಭಾಳಾ ಇಂಪಾರ್ಟೆಂಟು ಕೇಸು, ಕಳೆದ ಎರಡು ಸಲ ಮಿಸ್ಸಾಗಿದಾನೆ, ಈ ಸಲ ಹಿಡೀಲೇಬೇಕು, ಗೊತ್ತಾಯ್ತಾ? ಮೊದ್ಲು ಡ್ಯೂಟಿ ಮುಖ್ಯ ಅಂದು ಸ್ವಲ್ಪ ಏರುದನಿಯಲ್ಲಿ ಮಾತನಾಡಿದರು.
ಮೊದಲೇ ಸೂಕ್ಷ್ಮ ಮನಸ್ಸಿನ, ವಿಪರೀತ ಭಯದ ಮನುಷ್ಯ ದಿನೇಶ, ಫಾರೆಸ್ಟರ್ ಮಾತಿಗೆ ಏನು ಹೇಳಬೇಕು ಅನ್ನುತ್ತಾ ಯೋಚಿಸಿ ಗಾಬರಿಯಾದ. ಕರೆಯುವ ಹಾಗೂ ಇಲ್ಲ, ಹೋಗದ ಹಾಗೂ ಇಲ್ಲ. ಅಷ್ಟರಲ್ಲಾಗಲೇ ಜೀಪು ಅವನಿದ್ದ ಕಡೆಗೇ ಬಂತು. ನಾನೇನ್ ಮಾಡ್ಬೇಕು ಹೇಳಿ, ನೀವ್ ಮುಂದಿದ್ರೆ ಸಾಕು, ಅದೇನ್ ಕೇಸಾದ್ರೂ ಸರಿ ನಾನ್ ರೆಡಿ ಅಂದ. ಯೆಸ್, ಇದು ಮಾತಂದ್ರೆ ಅನ್ನುತ್ತಾ ಡ್ರೈವರ್ಗೆ ಜೀಪು ಚಲಾಯಿಸಲು ಹೇಳಿದರು.
ಇದನ್ನೂ ಓದಿ : ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು
ಈ ಸಲ ಬಿಡೋದೇ ಬೇಡ ಎಂದ ಡ್ರೈವರ್ ಸತೀಶ ಪ್ಲ್ಯಾನ್ ಹೆಂಗೆ ಸಾ ಎಂದ. ಕಳೆದ ಸಲದ್ದೇ ಪ್ಲ್ಯಾನು. ಆದರೆ ಈ ಸಲ ಬ್ಯಾಕಪ್ಗೆ ಇಬ್ಬರನ್ನು ಹೊಸೂರಿನ ಸರ್ಕಲ್ನಿಂದ ಸಿಟಿ ಕಡೆಗೆ ಹೋಗೋ ದಾರೀಲಿ ನಿಲ್ಸಣ, ಅಕಸ್ಮಾತ್ ನಮ್ ಕೈಯಿಂದ ತಪ್ಪಿಸ್ಕಂಡ್ರೇ ಆ ಕಡೆ ಹೋಗ್ತಿದ್ದಂಗೇ ಅವ್ರ್ ಅಡ್ಡಾಕ್ಬೇಕು, ಹಿಡೀಬೇಕು, ಅಂದರು.
ಒಳ್ಳೇ ಪ್ಲ್ಯಾನ್ ಸರ್, ಆದ್ರೆ ಅಲ್ಲಿ ನಿಲ್ಸೋರಿಗೆ ಗನ್ನಿರ್ಬೇಕು ಸಾರ್, ಇಲ್ಲಾಂದ್ರೆ ಹೆದರ್ಸಕ್ಕಾಗಲ್ಲ ಅಂದ ಡ್ರೈವರ್ ಸತೀಶ. ಆಯ್ತ್ ಬುಡು, ಅವ್ರಿಗೂ ಗನ್ ಕೊಡಣಾ, ನಮ್ಮತ್ರ ಎರಡ್ ಉಂಟಲ್ಲಾ, ಒಂದ್ ನಾವು ಇಟ್ಕಳಣಾ, ಓಕೆ ನಾ? ಅಂದರು ಫಾರೆಸ್ಟರ್. ಮಾತನಾಡುತ್ತಾ ಹೊಸೂರು ಸರ್ಕಲ್ ಬಳಿ ತಲುಪಿದರು.
ಎಲ್ಲರೂ, ಅಲ್ಲೇ ಪಕ್ಕದ ಕ್ಯಾಂಟೀನ್ ನಲ್ಲಿ ಟೀ ಕುಡಿದು ಮುಗಿಸಿ ಬೀಡಾ ಅಗಿಯುವಷ್ಟರಲ್ಲಿ ಗಂಟೆ 8 ಅಯ್ತು. ಸರಿ ಹೊರಡೋಣಾ, ನಾವು ಅ ಕಡೆ ರಸ್ತೆಲಿರ್ತೀವಿ, ನೀವಿಬ್ರೂ ಸಿಟಿ ರಸ್ತೇಲಿರಿ ಅನ್ನುತ್ತಾ ಮತ್ತೊಬ್ಬ ಗಾರ್ಡು ಮತ್ತು ವಾಚರ್ಗೆ ಹೇಳಿ, ಫಾರೆಸ್ಟರ್ ಡ್ರೈವರ್ ಮತ್ತು ದಿನೇಶನೊಂದಿಗೆ ಮುಖ್ಯ ರಸ್ತೆಯ ಪಕ್ಕದ ಹಳ್ಳಿ ಕಡೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಜೀಪು ನಿಲ್ಲಿಸಿ ಮೂವರೂ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಸಣ್ಣ ಮೋರಿಯ ಕೆಳಗಿಳಿದು, ಮುಖ್ಯ ರಸ್ತೆಗೆ ಕಾಣದಂತೆ ಕುಳಿತರು. ಮೋರಿಯ ಪಕ್ಕ ಸಣ್ಣ ಗುಂಡಿಯಿತ್ತು, ಆದರಲ್ಲಿ ತುಂಬಾ ದಿನದಿಂದ ನಿಂತಿದ್ದ ನೀರು ಗಬ್ಬು ವಾಸನೆಯಿಂದ ಕೂಡಿತ್ತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : Forest Stories: ಕಾಡೇ ಕಾಡತಾವ ಕಾಡ; ‘ನಿಮ್ಮ ಕೆಲಸ ಈ ಥರಾ ಅಂತ ಗೊತ್ತಿದ್ರೆ ಮದುವೆಗೇ ಒಪ್ಕೋತಿರಲಿಲ್ಲ’