Forest Stories: ಕಾಡೇ ಕಾಡತಾವ ಕಾಡ; ತಪ್ಪಿದ ಕೇಸು, ಗಾಯವಾದ ತಲೆ, ಮನೆಕಡೆ ಹೆಜ್ಜೆ

|

Updated on: Feb 26, 2022 | 1:32 PM

Story : ರೂಮಿನೊಳಗೆ ಹೋಗುತ್ತಿದ್ದಂತೇ, ಟೀವಿ ಟೇಬಲ್ ಮೇಲೆ ಇರಿಸಲಾಗಿದ್ದ ಅರ್ಧ ಕತ್ತರಿಸಿದ್ದ ಸಣ್ಣ ಕೇಕು, ಪಕ್ಕದ ದೇವರ ದೀಪ, 3 ಅಂಕೆಯ ಅರ್ಧ ಉರಿದ ಕ್ಯಾಂಡಲ್...

Forest Stories: ಕಾಡೇ ಕಾಡತಾವ ಕಾಡ; ತಪ್ಪಿದ ಕೇಸು, ಗಾಯವಾದ ತಲೆ, ಮನೆಕಡೆ ಹೆಜ್ಜೆ
ಫೋಟೋ : ವಿ. ಕೆ. ವಿನೋದ್​ಕುಮಾರ್
Follow us on

ಕಾಡೇ ಕಾಡತಾವ ಕಾಡ | Kaade Kaadataava Kaada : ಒಮ್ಮೆಗೇ ಗಾಡಿ ಸೈಡಿಗೆಳೆದ ಸತೀಶ, ಜೀಪಿನ ಚಕ್ರ ರಸ್ತೆ ಬದಿಯ ಮೋರಿಗೆ ಬಡಿದು ಜೀಪು ರಸ್ತೆ ಬದಿಗೆ ಮಗುಚಿ ಬಿತ್ತು. ಅಮ್ಮಾ ಅನ್ನುತ್ತಾ ಕಿರುಚಿಕೊಂಡ ದಿನೇಶ, ಜೀಪಿಂದ ಹೊರಚಿಮ್ಮಿ ಮೋರಿ ಪಕ್ಕದ ಗುಂಡಿಗೆ ಬಿದ್ದ. ಫಾರೆಸ್ಟರ್ ಕೂಡಾ ಜೀಪಿನ ಬಾಗಿಲಿನಿಂದ ಅರ್ಧ ಹೊರಗೆ ಅರ್ಧ ಒಳಗೆ ಇರುವಂತೇ ಬಿದ್ದುಕೊಂಡು ನರಳಿದರು. ಸತೀಶನ ಒಂದು ಕೈ ಸ್ಟಿಯರಿಂಗ್ ಚಕ್ರದೊಳಗೆ ಸಿಲುಕಿ ನೋವಿಗೆ ನರಳಾಡಿದ. ಅತ್ತ ಮುಖ್ಯ ರಸ್ತೆಯಲ್ಲಿ ಇವರ ಹಿಂದೆಯೇ ಬಂದ ಲಾರಿ, ಮೋರಿಯ ಪಕ್ಕ ಬಂದಂತೇ ಸ್ಲೋ ಮಾಡಿ, ರಸ್ತೆಯ ಬಲಭಾಗದಲ್ಲಿದ್ದ ಸಣ್ಣ ಖಾಲಿ ಸೈಟಿನ ಕಡೆಗೆ ತಿರುಗಿತು, ರಸ್ತೆ ಖಾಲಿಯಾದಂತೆ ದುರ್ಗಾಂಬ ಬಸ್ ಕೂಡಾ ದಾಟಿತು. ಬಲಭಾಗದ ಸೈಟಿಗೆ ತಿರುಗಿದ ಲಾರಿಯ ಹಿಂದೆ ಆ ಕಡೆಯಿಂದ ಅಟ್ಟಿಸಿಕೊಂಡು ಬರುತ್ತಿದ್ದ ಮತ್ತಿಬ್ಬರು ಸಿಬ್ಬಂದಿ ಮಗುಚಿಕೊಂಡ ಜೀಪಿನ ಬಳಿ ಜೀಪನ್ನು ಎತ್ತಲು ಬಂದರು. ಹಿಂದಿನಿಂದ ನರಳಾಡುತ್ತಾ ದಿನೇಶ ಓಡಿ ಬಂದ.
ವಿ.ಕೆ. ವಿನೋದ್​ಕುಮಾರ್ (V. K. Vinod Kumar)

*

(ಕಥೆ: 4, ಭಾಗ: 5)

ಅತ್ತ ಲಾರಿ ಬಂದ ದಾರಿ ಕಡೆಗೇ ವೇಗವಾಗಿ ವಾಪಾಸ್ ಹೊರಟಿತು. ಎಲ್ಲರೂ ಸೇರಿ ಕಷ್ಟಪಟ್ಟು ಜೀಪನ್ನು ಎತ್ತಿದರು
ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿದ್ದ ದಿನೇಶ ಕೈ ನೋವಿನಿಂದ, ಫಾರೆಸ್ಟರು ನರಳಾಡುತ್ತ ರಸ್ತೆಬದಿಯಲ್ಲೇ ಕುಳಿತುಬಿಟ್ಟರು. ಆಮೇಲೆ ಫಾರೆಸ್ಟರ್ ಫೋನ್ ಹುಡುಕತೊಡಗಿದರು. ಬುಡಿ ಸಾ, ಅದು ನೀರಿಗೆ ಹೋಮ ಆದಂಗೇ ಅಂದ ಸತೀಶ. ಛೆ, ಈ ಸಲನೂ ಮಿಸ್ ಆದನಲ್ಲ ಅನ್ನುತ್ತಾ ಕೈ ಹಿಸುಕಿಕೊಂಡರು ಫಾರೆಸ್ಟರು. ಹೋಗ್ಲಿ ಬುಡಿ ಸಾ, ನೆಕ್ಸ್ಟ್ ನೋಡಣಾ ಅನ್ನುತ್ತಾ ಎದ್ದು ನಿಂತ ದಿನೇಶ.

ಸರಿ, ನೀವ್ ಹೊರಡಿ ಸಾ, ಡಾಕ್ಟರ್ ಹತ್ರ ತೋರ್ಸಿ, ಗಾಡಿ ನಾವ್ ನೋಡ್ಕತಿವಿ ಅಂದರು ಬಾಕಿ ಇಬ್ಬರು. ಅವರ ಬೈಕಿನಲ್ಲಿಯೇ ಸತೀಶ, ಫಾರೆಸ್ಟರ್ ಮತ್ತು ದಿನೇಶ ಹೊರಟರು. ಡಾಕ್ಟರ್ ಹತ್ರ ಬೇಡ ಮನೆಗೋಗಣಾಂದ ದಿನೇಶ. ಮನೆಗೋಗಿ ಮಲಗು ನಾಳೆ ನೋಡಣ, ನೋವಿದ್ರೆ ಹೇಳು ಡಾಕ್ಟರ್ ಹತ್ರ ಹೋಗಣ ಅಂದರು ಫಾರೆಸ್ಟರ್.

ಇದನ್ನೂ ಓದಿ : Sydney Diary: ತನ್ನ ಅಪ್ಪ ಸುಳ್ಳುಬುರುಕ ಎಂದುಕೊಳ್ಳಬಾರದು ಆಕೆ, ಸುಳ್ಳು ಹೇಳಿ ಮಗಳೆದುರು ಹೇಡಿಯಾಗಲಾರೆ ನಾನು

ಬಿದ್ದು ಗಾಯವಾಗಿದ್ದ ತಲೆಯ ನೋವು, ಕೇಸು ತಪ್ಪಿ ಹೋದ ಬೇಸರ ಜೊತೆಗೆ ಸರಿಯಾದ ಸಮಯಕ್ಕೆ ಮನೆಗೆ ಹೋಗಲಾಗದ ಚಿಂತೆ ಎಲ್ಲಾ ಸೇರಿಕೊಂಡು ಭಾರವಾದ ಮನಸ್ಸಿನಿಂದ ಮನೆ ಕಡೆ ಹೊರಟ ದಿನೇಶ.

ಬಾಗಿಲು ಬಡಿದೂ ಬಡಿದೂ ಇಟ್ಟ. ಹತ್ತು ನಿಮಿಷದ ನಂತರ ಹೆಂಡತಿ ಬಂದು ಬಾಗಿಲು ತೆಗೆದಳು, ಇವನ ಕಡೆಗೊಮ್ಮೆ ತಿರಸ್ಕಾರದ, ನೋವಿನ, ಕೋಪದ ನೋಟ ಬೀರಿ ದಢಾರನೆ ಬಾಗಿಲು ಹಾಕಿಕೊಂಡಳು. ರೂಮಿನೊಳಗೆ ಹೋಗುತ್ತಿದ್ದಂತೇ, ಟೀವಿ ಟೇಬಲ್ ಮೇಲೆ ಇರಿಸಲಾಗಿದ್ದ ಅರ್ಧ ಕತ್ತರಿಸಿದ್ದ ಸಣ್ಣ ಕೇಕು, ಪಕ್ಕದ ದೇವರ ದೀಪ, 3 ಅಂಕೆಯ ಅರ್ಧ ಉರಿದ ಕ್ಯಾಂಡಲ್, ಗೋಡೆಗೆ ಅಂಟಿಸಲಾಗಿದ್ದ ಹ್ಯಾಪಿ ಬರ್ತಡೇ ಅಮ್ಮೂ ಅನ್ನುವ ಸ್ಟಿಕ್ಕರ್, ಡೆಕೋರೇಷನ್ ಎಲ್ಲಾ ನೋಡಿ, ಸೋಫಾದ ಮೇಲೆ ಕುಸಿದು ಕುಳಿತ.

(ಮುಗಿಯಿತು) 

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kaade-kaadataava-kaada

Published On - 1:32 pm, Sat, 26 February 22