Sydney Diary: ತನ್ನ ಅಪ್ಪ ಸುಳ್ಳುಬುರುಕ ಎಂದುಕೊಳ್ಳಬಾರದು ಆಕೆ, ಸುಳ್ಳು ಹೇಳಿ ಮಗಳೆದುರು ಹೇಡಿಯಾಗಲಾರೆ ನಾನು

Parenting : ‘‘ಇಲ್ಲಪ್ಪಾ ಸ್ಪರ್ಮು ಎಗ್ಗು ಭ್ರೂಣ ಹೊರಗೆ ಬರೋದು, ಕರಳು ಬಳ್ಳಿ ಕತ್ತರಿಸೋದು ಎಲ್ಲಾ ಗೊತ್ತು ಅವಳಿಗೆ. ದೇವರು ಇದ್ದಾನೆ ಅಂತಲೂ ಹೇಳಿಕೊಟ್ಟಿಲ್ಲ ಇಲ್ಲ ಎಂತಲೂ ಹೇಳಿಕೊಟ್ಟಿಲ್ಲ. ಆಕೆ ಮುಂದೆ ತಾನೇ ತಿಳಿದುಕೊಳ್ಳಲಿ’’ ಅಂತ ಹೇಳಿದೆ.’ ಶ್ರೀಹರ್ಷ ಸಾಲಿಮಠ

Sydney Diary: ತನ್ನ ಅಪ್ಪ ಸುಳ್ಳುಬುರುಕ ಎಂದುಕೊಳ್ಳಬಾರದು ಆಕೆ, ಸುಳ್ಳು ಹೇಳಿ ಮಗಳೆದುರು ಹೇಡಿಯಾಗಲಾರೆ ನಾನು
Follow us
ಶ್ರೀದೇವಿ ಕಳಸದ
|

Updated on:Feb 20, 2022 | 1:23 PM

ಸಿಡ್ನಿ ಡೈರಿ | Sydney Diary : ನನ್ನ ಗೆಳೆಯ ಮನೆಗೆ ಬಂದಿದ್ದ. ನನ್ನ ಮಗಳಿಗಾಗಿ ಆಕೆಯ ಇಷ್ಟದ ಚಾಕಲೇಟ್ ಕೊಂಡುಬಂದಿದ್ದ. ಆಕೆಯನ್ನು ಕರೆದು ಕೊಡುವಾಗ ಚಾಕಲೇಟ್ ಇದ್ದ ಕೈಯನ್ನು ಹಿಂದಕ್ಕೆ ತೆಗೆದುಕೊಂಡು ‘‘ಎಲ್ಲಿ ಒಂದು ಮುತ್ತು ಕೊಡು ಪುಟ್ಟಿ..!’’ ಅಂತ ಕೇಳಿದ. ನಾನು ತಕ್ಷಣ ಆತನನ್ನು ತಡೆದೆ. ‘‘ನಿನಗೆ ಮುತ್ತು ಬೇಕೆಂದರೆ ಕೇಳಿ ಪಡೆದುಕೊ ಅಥವಾ ಸುಮ್ಮನೆ ಚಾಕಲೆಟ್ ಕೊಡು. ಚಾಕಲೆಟ್​ಗಾಗಿ ಮುತ್ತು ಅಂತ ಆಫರ್ ಇಡಬೇಡ. ಆಕೆ ಏನನ್ನಾದರೂ ಪಡೆದುಕೊಳ್ಳಲು ತನ್ನ Personal Space ಅನ್ನು Compromise ಮಾಡಿಕೊಳ್ಳಬಹುದು ಎಂಬ ಭಾವನೆ ಬರುವುದು ಬೇಡ. ಮುತ್ತು ಅಥವಾ ಪ್ರೀತಿಯ ಅಭಿವ್ಯಕ್ತಿ ಸಂಬಂಧಗಳ ನಡುವಿನ ಬಿಸಿನೆಸ್ ಆಗಬಾರದು.’’ ಅಂತ ಹೇಳಿದೆ. ಆತ ‘‘ನೀನು ಅತಿ ಅಡುತ್ತೀಯಾ’’ ಅಂದ. ‘‘ನೀನು ಏನಾದರೂ ಅಂದುಕೊ. ಆಕೆ ನಿನಗೆ ಮುತ್ತು ಕೊಡಲು ನನ್ನ ಯಾವ ಆಕ್ಷೇಪಣೆಯೂ ಇಲ್ಲ. ಆದರೆ ಚಾಕಲೆಟ್ ಬದಲಾಗಿ ಮುತ್ತು ಬೇಕು ಅಂತ ಕೇಳುವುದು ತಪ್ಪು. ಸ್ವತಃ ನಾನೆ ತಂದೆಯಾಗಿ ಮುತ್ತು ಬೇಕೆಂದರೆ ವಿನಂತಿಸಿ ಪಡೆದುಕೊಳ್ಳುತ್ತೇನೆ. ಅಷ್ಟೇ ಏಕೆ ಆಕೆಯ ತಾಯಿಯೂ ಅಷ್ಟೇ.’’ ಶ್ರೀಹರ್ಷ ಸಾಲಿಮಠ, ಲೇಖಕ, (Shriharsha Salimat)

*

(ಕಂತು : 12)

ನನ್ನ ಗೆಳೆಯ ಊಟ ಮುಗಿಸಿ ಮನೆಗೆ ಹೊರಟ. ವಾಪಸು ಆತನನ್ನು ನನ್ನ ಕಾರಿನಲ್ಲಿ ಡ್ರಾಪ್ ಮಾಡುವುದಾಗಿ ಹೇಳಿದೆ. ನಾನು ಹೊರಡುತ್ತಿದ್ದಂತೆ ನನ್ನ ಮಗಳೂ ಎಂದಿನಂತೆ ಜೊತೆಗೆ ಬರುವುದಾಗಿ ಹಠ ಹಿಡಿದಳು. ಅದು ಆಕೆ ಮಲಗುವ ಹೊತ್ತು. ಹೋಗಿ ಬರಲು ಅರ್ಧ ಗಂಟೆಯಾದರೂ ಆಗುತ್ತದೆ. ಆಕೆಯ ನಿದ್ದೆ ಮುಂದೂಡಿದರೆ ಡ್ರೈವಿಂಗ್ ಸಮಯದಲ್ಲಿ ಕಿರಿಕಿರಿ ಶುರುಮಾಡುತ್ತಾಳೆ. ಆಕೆಗೆ ನೀನು ಬರತಕ್ಕದ್ದಲ್ಲ ಅಂತ ಎಷ್ಟು ಹೇಳಿದರೂ ಕೇಳದೆ ಹಠ ಮಾಡತೊಡಗಿದಳು. ಅಷ್ಟರಲ್ಲಿ ನನ್ನ ಗೆಳೆಯ ‘‘ಒಂದು ಉಪಾಯ ಮಾಡ್ತೀನಿ ತಡಿ’’ ಅಂತ ಹೇಳಿ ಆಕೆಯನ್ನು ಕುರಿತು ‘‘ಪುಟ್ಟಿ, ನಾವು ಕಾಯ್ತಿರ್ತಿವಿ ನೀನು ಬೇಗ ಸೂಸು ಹೋಗಿ ಬಾ. ಇಲ್ಲ ಅಂದರೆ ಕಾರಲ್ಲಿ ಸುಸು ಬಂದರೆ ಕಷ್ಟ’’ ಅಂತ ಹೇಳಿದ. ಆಕೆ ಅದಕ್ಕೆ ತಕ್ಷಣ ಒಪ್ಪಿ ಬಚ್ಚಲ ಕಡೆ ಓಡಿದಳು. ಆಕೆ ಮರೆಯಾದ ತಕ್ಷಣ ನನ್ನ ಗೆಳೆಯ ‘‘ಬಾ ಆಕೆ ಬರೋದರೊಳಗೆ ಹೋಗಿಬಿಡೋಣ’’ ಅಂದ. ನಾನು ಅಲ್ಲಾಡಲಿಲ್ಲ!

‘‘ಒಂದೋ ಆಕೆಯನ್ನು ಕರೆದುಕೊಂಡು ಹೋಗುತ್ತೇನೆ. ಇಲ್ಲವೆ ಬಿಟ್ಟು ಹೋಗುವುದಾದರೆ ಆಕೆಗೆ ಬಿಟ್ಟುಹೋಗುವುದಾಗಿ ಹೇಳಿಯೇ ಹೋಗುತ್ತೇನೆ. ಸುಳ್ಳು ಹೇಳಿ ತಲೆ ತಪ್ಪಿಸಿಕೊಂಡು ಹೋಗುವುದಿಲ್ಲ. ಆಕೆಗೆ ತನ್ನ ಅಪ್ಪ ಒಬ್ಬ ಸುಳ್ಳುಬುರುಕ ಅನ್ನಿಸಬಾರದು. ಮತ್ತೊಮ್ಮೆ ಆಕೆ ನನ್ನನ್ನು ನಂಬುವುದಿಲ್ಲ. ನಾನು ಮಗಳ ಮುಂದೆ ಹೇಡಿಯಾಗಲಾರೆ’’ ಅಂದೆ. ಆತ ಮತ್ತೆ ಮುನಿಸಿಕೊಂಡು, ‘‘ಇದು ಇನ್ನೂ ಓವರ್ ನಿಂದು’’ ಅಂತ ಹೇಳಿದ.

ಒಬ್ಬರ ಮನೆಗೆ ಪಾರ್ಟಿಗೆ ಹೋಗಿದ್ದೆವು. ಅಲ್ಲಿ ನನ್ನ ಗೆಳೆಯ ಟ್ರೈಪಾಡ್ ಅನ್ನು ನಿಲ್ಲಿಸಿಕೊಂಡು ಕ್ಯಾಮೆರಾ ಅದಕ್ಕೆ ಸಿಗಿಸುವಲ್ಲಿ ಮಗ್ನನಾಗಿದ್ದ. ನಾನು ಆತನಿಗೆ ಸಹಾಯ ಮಾಡುತ್ತಿದ್ದೆ. ಜೊತೆಗೆ ಆಡುತ್ತಿದ್ದ ನನ್ನ ಮಗಳು ಮತ್ತು ಆಕೆಯ ಗೆಳತಿ ಓಡಿ ಬಂದು ಟ್ರೈಪಾಡನ್ನು ಮುಟ್ಟಿನೋಡುತ್ತಾ ಇದು ಏನು ಅಂತ ಕುತೂಹಲದಿಂದ ಕೇಳತೊಡಗಿದರು. ಆತ ‘‘ಏ ನಡಿರಿ ನಡಿರಿ… ಇದು ಮುಟ್ಟಬಾರದು ಮಕ್ಕಳಿಗಲ್ಲ ದೊಡ್ಡವರಿಗಷ್ಟೇ!’’ ಅಂತ ಗದರಿದ. ನನ್ನ ಮಗಳ ಗೆಳತಿ ‘‘ಓಹ್.. ನಾವು ದೊಡ್ಡವರಾದ ಮೇಲೆ ಇದು ಏನು ಅಂತ ಗೊತ್ತಾಗುತ್ತದಲ್ವಾ?’’ ಅಂತ ಹೇಳಿ ಹೊರಡಲನುವಾದಳು. ನಾನು ಆಕೆಯನ್ನೂ ನನ್ನ ಮಗಳನ್ನೂ ನನ್ನ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಂಡು ‘‘ನೋಡಿ ಇದಕ್ಕೆ ಟ್ರೈಪಾಡ್ ಅಂತಾರೆ. ಟ್ರೈ ಅಂದರೆ ಮೂರು, ಪಾಡ್ ಅಂದರೆ ಕಾಲು. ಇದಕ್ಕೆ ಮೂರು ಕಾಲುಗಳು ಇದಾವೆ. ಅದಕ್ಕೆ ಟ್ರೈ-ಪಾಡ್. ಇದರ ಮೇಲೆ ಕ್ಯಾಮೆರಾ ಇಟ್ಟು ಫೋಟೊ ತೆಗಿತಾರೆ’’ ಅಂತ ವಿವರಿಸಿದೆ. ಮಕ್ಕಳು ಖುಷಿಯಾಗಿ ಮುಖ ಅರಳಿಸಿಕೊಂಡು ಓಡಿದವು. ಮತ್ತೆ ಕುತೂಹಲಕ್ಕಾಗಿಯೂ ಟ್ರೈಪಾಡ್ ಗೆ ತೊಂದರೆ ಕೊಡಲಿಲ್ಲ.

ನನ್ನ ಗೆಳೆಯ ‘‘ಮಾಡಕೆ ಅಷ್ಟೊಂದು ಕೆಲಸ ಇದೆ. ಮಕ್ಕಳಿಗೆ ಅದೆಲ್ಲ ವಿವರಿಸೋ ಅವಶ್ಯಕತೆ ಏನಿದೆ?’’ ಅಂತ ಕೇಳಿದ. ನಾನು ‘‘ಆಕೆ ಒಮ್ಮೆ ಮಗು ಹೇಗೆ ಹುಟ್ಟುತ್ತದೆ ಅಂತ ಕೇಳಿದಳು. ಅದಕ್ಕೆ ನನ್ನ ಹೆಂಡತಿ ಮಗು ಹುಟ್ಟುವ ಎಲ್ಲಾ ವಿವರಗಳನ್ನು ಆಕೆಗೆ ಹೇಳಿಕೊಟ್ಟಿದ್ದಾಳೆ. ಏನಾದರೂ ಡೌಟಿದ್ದರೆ ಕೇಳು ನನ್ನ ಮಗಳು ನಿನಗೆ ಪಾಠ ಮಾಡುತ್ತಾಳೆ. ಮಕ್ಕಳ ಕುತೂಹಲ ತಣಿಸುವುದಕ್ಕಿಂತ ದೊಡ್ಡ ಪ್ರಿಯಾರಿಟಿಯ ಕೆಲಸ ಜಗತ್ತಿನಲ್ಲಿ ಯಾವುದೂ ಇಲ್ಲ. ನನ್ನ ಮಗಳಿಗಾಗಿ ಎಲ್ಲ ಕೆಲಸವನ್ನೂ ನಿಲ್ಲಿಸಬಲ್ಲೆ’’ ಅಂತ ಹೇಳಿದೆ.

‘‘ಮಗು ಹುಟ್ಟುವ ಬಗ್ಗೆ ಏನಂತ ಹೇಳಿದೆ. ದೇವರು ತರುತ್ತಾನೆ ಅಂತಲಾ?’’ ಅಂತ ಕೇಳಿದ.

‘‘ಇಲ್ಲಪ್ಪಾ ಸ್ಪರ್ಮು ಎಗ್ಗು ಭ್ರೂಣ ಹೊರಗೆ ಬರೋದು ಕರಳು ಬಳ್ಳಿ ಕತ್ತರಿಸೋದು ಎಲ್ಲಾ ಗೊತ್ತು ಅವಳಿಗೆ. ದೇವರು ಇದ್ದಾನೆ ಅಂತಲೂ ಹೇಳಿಕೊಟ್ಟಿಲ್ಲ ಇಲ್ಲ ಎಂತಲೂ ಹೇಳಿಕೊಟ್ಟಿಲ್ಲ. ಆಕೆ ಮುಂದೆ ತಾನೇ ತಿಳಿದುಕೊಳ್ಳಲಿ’’ ಅಂತ ಹೇಳಿದೆ.

‘‘ನಾಲ್ಕು ವರ್ಷದ ಮಗುವಿಗೆ ಅಂತಾದೆಲ್ಲ ಹೇಳಿಕೊಟ್ಟಿದ್ದೀಯಾ?’’ ಅಂತ ಆತ ಬಾಯಿಬಾಯಿ ಬಿಟ್ಟ.

‘‘ಅದಷ್ಟೇ ಅಲ್ಲ ಊಟ ಹೇಗೆ ಅರಗುತ್ತದೆ, ಉಸಿರಾಟ ಹೇಗೆ ನಡೆಯುತ್ತದೆ, ಮಿದುಳು ಹೇಗೆ ಕೆಲಸ ಮಾಡುತ್ತದೆ, ಹೃದಯ ರಕ್ತ ಪರಿಚಲನೆ ಎಲ್ಲಾ ಹೇಳಿ ಕೊಟ್ಟಿದ್ದೇವೆ. ಹಾಗೆಯೇ ಇದೂ ಕೂಡ.’’

ಇಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಬದುಕುವುದೊಂದು ಸವಾಲು. ವಲಸೆ ಬಂದವರ ಮಕ್ಕಳು ಇಲ್ಲಿಯೆ ಇದ್ದವರ, ತಮಗಿಂತ ಮೊದಲು ವಲಸೆ ಬಂದವರ ಮತ್ತು ತಮಗಿಂತ ಉತ್ತಮ ದೇಶದಿಂದ ವಲಸೆ ಬಂದವರ ನಡುವಿನ ಪದರಗಳಲ್ಲಿ ಬಾಳಬೇಕು. ಮಕ್ಕಳು ಬೇಡಬೇಡವೆಂದರೂ ಅದೆಷ್ಟೇ ಮುಗ್ಧತನದಿಂದ ಗೆಳೆತನವನ್ನು ಮಾಡಿಕೊಳ್ಳುತ್ತವೆ ಎಂದುಕೊಂಡರೂ ಸಾಂಸ್ಕೃತಿಕ ವಿಲೀನ ಬಹಳ ಕಷ್ಟದ ಕೆಲಸ. ಒಮ್ಮೆ ನನ್ನ ಮಗಳು ಇದ್ದಕ್ಕಿದ್ದಂತೆ ‘‘We are brown’’ ಅಂತ ಹೇಳಲು ಶುರು ಮಾಡಿದಳು. ಈ ರೀತಿ ಆಕೆಯ ಶಿಕ್ಷಕರು ಹೇಳಿಕೊಡುವ ಸಾಧ್ಯತೆಗಳು ಬಹಳ ಕಡಿಮೆ. ಅಥವಾ ಅವರವರು ಮಾತನಾಡಿಕೊಳ್ಳುವಾಗ ಕೇಳಿಸಿಕೊಂಡಳೇ ಗೊತ್ತಿಲ್ಲ. ನಿಧಾನವಾಗಿ ಪುಸಲಾಯಿಸಿ ಕೇಳಿದಾಗ ಆಕೆಯ ಗೆಳತಿಯೊಬ್ಬಳು ಹಾಗೆ ಹೇಳಿಕೊಟ್ಟಿದ್ದಳಂತೆ. ಇದನ್ನು ಹೇಗೆ ನಿರ್ವಹಿಸಬೇಕು ಎಂಬುದು ಮೊದಮೊದಲು ನಮಗೆ ತಿಳಿಯಲಿಲ್ಲ.

ಕಂತು 10 : Sydney Diary : ತಿಪ್ಪತಿಪ್ಪಿಯ ದಾಂಪತ್ಯಕಲಹವೂ ಅಂಕಲ್​ನ ಕಲ್ಲಲೆ ಬಲ್ಲಲೆ ಶೌವಲೆಯೂ ಮತ್ತು ಕೆಲ ಸತ್ಯಗಳೂ

How to Raise your children Sydney Diary by Kannada Writer Shriharsha Salimat

ಪ್ರಾತಿನಿಧಿಕ ಚಿತ್ರ

ಹೀಗೆ ಒಮ್ಮೆ ಕಾರಲ್ಲಿ ಪ್ರವಾಸಕ್ಕೆ ಹೋಗುವಾಗ ನನ್ನ ಹೆಂಡತಿ ಮಗಳಿಗೆ ಗಿಡಮರಗಳ ಬಗ್ಗೆ ಹೇಳಿಕೊಡುತ್ತಾ. ‘‘ಗಿಡಗಳು ಯಾಕೆ ಹಸಿರಾಗಿವೆ ಗೊತ್ತಾ, ಅದರಲ್ಲಿ ಕ್ಲೋರೊಫಿಲ್ ಇರುತ್ತೆ. ಕನ್ನಡದಲ್ಲಿ ಪತ್ರಹರಿತ್ತು. ಅದಕ್ಕೆ ಗಿಡ ಹಸಿರಾಗಿರುತ್ತೆ. ಹಾಗೆ ನಮ್ಮ ಚರ್ಮದಲ್ಲಿ ಮೆಲನಿನ್ ಅಂತ ಇರುತ್ತೆ. ಮೆಲನಿನ್ ಕಡಿಮೆ ಇದ್ದರೆ ನಮ್ಮ ಚರ್ಮ ಬೆಳ್ಳಗೆ ಇರುತ್ತೆ. ಸಲ್ಪ ಜಾಸ್ತಿ ಇದ್ದರೆ ಕಂದು ಬಣ್ಣ ಇರುತ್ತೆ. ಇನ್ನೂ ಜಾಸ್ತಿ ಇದ್ದರೆ ಕಪ್ಪು ಬಣ್ಣ ಇರುತ್ತೆ’’ ಅಂತ ಹೇಳಿಕೊಟ್ಟಳು. ಆಗ ನನ್ನ ಮಗಳು ‘‘Means if we are Brown we are rich in Melanin ?’’ ಅಂತ ಕೇಳಿದಳು. ಹೌದು ಅಂತ ಹೇಳಿದ ಮೇಲೆ ಆಕೆಗೆ ತನ್ನ ಮೈಬಣ್ಣದ ಬಗ್ಗೆ ಅಭಿಮಾನವುಂಟಾಯಿತು. ಅದನ್ನು ತನ್ನ ಗೆಳೆಯ ಗೆಳತಿಯರ ಜೊತೆಗೆ ಹೇಳಿಕೊಂಡು ಎಲ್ಲರೂ ಹೆಮ್ಮೆಪಟ್ಟುಕೊಂಡರಂತೆ. ಗಿಡಗಳ ಬಗ್ಗೆ ವಿವರಿಸುವಾಗೆಲ್ಲ ಆಕೆ ತಪ್ಪದೇ ಒಮ್ಮೆ ಮೆಲನಿನ್ ಬಗ್ಗೆ ಹೇಳುವುದುಂಟು.

ಹೀಗೆ ಒಮ್ಮೆ ಯಾವುದೋ ಪ್ರಶ್ನೆ ಹಿಡಿದುಕೊಂಡು ಮನೆಯ ಪಕ್ಕದಲ್ಲಿದ್ದ ಗೆಳತಿಯನ್ನು ಕರೆದುಕೊಂಡು ಬಂದಿದ್ದಳು. ಈಕೆ ಮತ್ತು ಈಕೆಯ ಗೆಳತಿ ಯಾವುದೊ ಪ್ರಶ್ನೆಯನ್ನು ಗೆಳತಿಯ ಅಪ್ಪನಿಗೆ ಕೇಳಿದ್ದಾರೆ. ಆತ ಬಹುಷಃ ತನಗೆ ಕೆಲಸ ಇದ್ದು ಇವರಿಗೆ ಉತ್ತರ ಕೊಟ್ಟಿಲ್ಲ. ಈಕೆ ‘ನಮ್ಮಪ್ಪ ಸ್ಟ್ರಾಂಗ್ ಮ್ಯಾನ್ ನಮ್ಮಪ್ಪನಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಗೊತ್ತು’ ಅಂತ ಹೇಳಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಾನು ಅವರಿಬ್ಬರ ಪ್ರಶ್ನೆಗೆ ಉತ್ತರ ಕೊಟ್ಟ ನಂತರ ಆ ಹುಡುಗಿ ಅವರಪ್ಪನ ಬಳಿ ನನ್ನ ಬಗ್ಗೆ ಹೊಗಳಿರಬೇಕು ಆತ ಮಾತನಾಡುವುದನ್ನು ನಿಲ್ಲಿಸಿದ್ದಲ್ಲದೇ ಮಗಳನ್ನು ನಮ್ಮ ಮನೆಗೆ ಕಳಿಸುವುದನ್ನೂ ನಿಲ್ಲಿಸಿದ!

ಮಕ್ಕಳಿಗೆ ಶಿಕ್ಷಣಕ್ಕಿಂತ ಲೋಕಜ್ಞಾನವನ್ನು ಕೊಡುವುದು ಮುಖ್ಯ. ಮೊದಲು ಇದು ಪರಿಸರ ಮತ್ತು ಸುತ್ತಮುತ್ತಲಿನವರನ್ನು ಪ್ರೀತಿಸುವುದರೊಂದಿಗೆ ಶುರು ಆಗಬೇಕು ಅಂತ ನನ್ನ ಅನಿಸಿಕೆ. ನನ್ನ ಜೊತೆ ಕೆಲಸ ಮಾಡುವರು ಒಮ್ಮೆ ಗೋಳಾಡಿಕೊಳ್ಳುತ್ತಿದ್ದರು. ಮಕ್ಕಳು ದಿನಕ್ಕೊಂದು ಟಿಶ್ಯು ಬಾಕ್ಸ್ ಖಾಲಿ ಮಾಡುತ್ತಾರೆ, ಬ್ರಶ್ ಮಾಡುವುದು ಮುಗಿಯುವವರೆಗೆ ನೀರು ಬಿಟ್ಟುಕೊಂಡೇ ಇರುತ್ತಾರೆ, ಯಾವಾಗಲೂ ಏಸಿ ಉರಿಯುತ್ತಿರಬೇಕು. ಇವೆಲ್ಲ ನನಗೆ ತೊಂದರೆಯೇ ಅಲ್ಲ. ನಾನು ಲೈಟ್ ಆಫ್ ಮಾಡುವದು ಮರೆತರೂ, ನೀರು ಬಿಟ್ಟು ಬಂದರೂ ಹಾಳು ಮಾಡುತ್ತಿರುವುದಕ್ಕಾಗಿ ಮಗಳ ಬಳಿ ಬೈಸಿಕೊಳ್ಳಬೇಕು. ಯಾಕೆಂದರೆ ನಾವು ಆಕೆ ಮೊದಲು ಕಲಿಸಿದ್ದೇ ಸರಳ ಜೀವನಶೈಲಿಯನ್ನು! ಅತಿ ಕಡಿಮೆ ವೆಚ್ಚದಲ್ಲಿ ಬದುಕುವುದನ್ನು. ಜೀವನದ ಅವಶ್ಯಕತೆ ಯಾವುದು, ಅಲ್ಲದ್ದು ಯಾವುದು ಇವೆಲ್ಲ ಶಾಲೆಯ ಶಿಕ್ಷಣಕ್ಕಿಂತ ಮೊದಲು ಬರುತ್ತದೆ. ಅನೇಕರು ಮಕ್ಕಳಿಗೆ ಐದು ವರ್ಷದವರೆಗೆ ಡೈಪರ್ ಹಾಕುವುದನ್ನು ನೋಡಿದ್ದೇನೆ. ನನ್ನ ಮಗಳಿಗೆ ಒಂದೂವರೆ ವರ್ಷಕ್ಕೆ ಟಾಯ್ಲೆಟ್ ಟ್ರೇನಿಂಗ್ ಕೊಟ್ಟು ಡೈಪರ್ ಬಳಕೆಯನ್ನು ನಿಲ್ಲಿಸಿದೆವು. ಡೈಪರ್ ಪ್ಲಾಸ್ಟಿಕ್​ನಂತೆ ಪರಿಸರಕ್ಕೆ ಅಪಾಯಕಾರಿಯಾದುದು. ಇದು ಕರಗಿ ಮಣ್ಣಾಗಲು ಐನೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈಗಲೂ ಮಗುವಿಗೆ ಔಷಧಿ ಹಾಕುವ ಮೊದಲು ಆ ಔಷಧವನ್ನು ಯಾಕೆ ತೆಗೆದುಕೊಳ್ಳಬೇಕು ಅದರಿಂದ ಉಪಯೋಗಗಳೇನು ಅಂತ ವಿವರಿಸಿಯೇ ಔಷಧ ಹಾಕುವುದು. ಒಮ್ಮೊಮ್ಮೆ ಆಕೆ ಔಷಧ ತೆಗೆದುಕೊಳ್ಳುವಾಗ ಹಠ ಮಾಡದಿದ್ದರೆ ಈಕೆ ನಿಜಕ್ಕೂ ಔಷಧದ ಉಪಯೋಗದ ಬಗ್ಗೆ ಮನವರಿಕೆಯಾಗಿ ತೆಗೆದುಕೊಳ್ಳುತ್ತಿದ್ದಾಳೋ ಅಥವಾ ನಮ್ಮ ಒತ್ತಾಯಕ್ಕೆ ಶರಣಾಗಿದ್ದಾಳೋ ಎಂದು ಅನುಮಾನ ಬರುವುದುಂಟು. ಮನವರಿಕೆಯಾಗಿದ್ದರೆ ಸರಿ, ಆದರೆ ಶರಣಾಗಿದ್ದರೆ ಮತ್ತೊಂದು ರೌಂಡು ಶರಣಾಗತಿಯನ್ನು ವಿರೋಧಿಸುವುದರ ಬಗ್ಗೆ ಟ್ರೇನಿಂಗ್ ಕೊಡಬೇಕು!

 (ಈ ಅಂಕಣ ಮುಗಿಯಿತು)

ಹಿಂದಿನ ಕಂತು : Sydney Diary : ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಬೆಳೆಸಿ ಗಂಡುಹುಡುಗರನ್ನು ಹೊರಗೆ ಬೆಳೆಸಿದರೆ ಇನ್ನೇನಾಗುತ್ತದೆ?

ಈ ಅಂಕಣದ ಎಲ್ಲಾ ಕಂತುಗಳನ್ನು ಇಲ್ಲಿ ಓದಿ : https://tv9kannada.com/tag/sydney-diary

Published On - 1:20 pm, Sun, 20 February 22