ಕಾಡೇ ಕಾಡತಾವ ಕಾಡ | Kaade Kaadataava Kaada : ಯೆಸ್ ಸರ್, ಹೊರಡೋಣಾ, ಅನ್ನುತ್ತಾ ಇವನೂ ತಂಡವನ್ನು ಸೇರಿಕೊಂಡ. ಎಲ್ಲರೂ ಅವರವರು ಬಂದ ಜೀಪಿನಲ್ಲಿ ಕುಳಿತಂತೇ ಆ ತಡರಾತ್ರಿಯಲ್ಲಿ ಜೀಪುಗಳು ಹೊರಟವು. ಸಂತೋಷ್ ಎಸಿಎಫ್ ಇದ್ದ ಜೀಪಿನಲ್ಲಿಯೇ ಕುಳಿತಿದ್ದ, ಜೊತೆಗೆ ಒಬ್ಬರು ರೇಂಜರ್ ಮತ್ತು ಮತ್ತೊಬ್ಬ ಅವನದೇ ಬ್ಯಾಚಿನ ಫಾರೆಸ್ಟರ್ ಇದ್ದರು. ದಾರೀಲಿ ಹೋಗ್ತಾ ಎಸಿಎಫ್ ಮಾತು ಶುರು ಮಾಡಿದರು. ಸಂತೋಷ್, ಮಾಹಿತಿ ಪಕ್ಕಾ ಇದೆ. ಎಲ್ಲಾ ನಾವಂದುಕೊಂಡ ಹಾಗೇ ನಡೀತಿದೆ. ಅವ್ರಿಗೆ ಇದುವರೆಗೂ ಯಾವುದೇ ಮಾಹಿತಿ ತಲುಪಿಲ್ಲ. ಇವತ್ತು ರಾತ್ರಿವರೆಗೂ ಅವರೆಲ್ಲರೂ ಅದೇ ಸ್ಪಾಟ್ ನಲ್ಲಿರುವುದು ಕನ್ಫರ್ಮ್ ಆಗಿದೆ, ಹಾಗಾಗಿ ಈ ಸಡನ್ ಪ್ಲಾನ್. ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಲು ಬಿಡಬಾರದು. ಎಲ್ಲರೂ ಬಹಳಾ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸ್ಪಾಟ್ ತಲುಪುವುದು ಸ್ವಲ್ಪ ಕಷ್ಟವೇ, ಆದರೆ ಹಾಗಂತ ಬಿಡುವ ಹಾಗಿಲ್ಲ. ಆದಷ್ಟು ಬೇಗ ಸ್ಪಾಟ್ ತಲುಪಬೇಕು ಅಂದರು.
ವಿ.ಕೆ. ವಿನೋದ್ ಕುಮಾರ್ (V. K. Vinod Kumar)
*
(ಕಥೆ 5, ಭಾಗ 2)
ಸರ್, ಬೇರೆ ಯಾರಿಗೂ ಆ ಜಾಗದ ವಿವರ ಗೊತ್ತಿಲ್ಲ ಅಲ್ವಾ? ಸಂತೋಷ್ ಕೇಳಿದ.
ಇಲ್ಲ ಯಾರಿಗೂ ಗೊತ್ತಿಲ್ಲ. ಇವರಿಬ್ಬರಿಗೆ ಇವತ್ತು ಮಧ್ಯರಾತ್ರೀಲಿ ನಾನೇ ಕರೆಮಾಡಿ ಹೇಳಿದ್ದು. ಮನು ಫಾರೆಸ್ಟರಿಗೆ ಜಾಗದ ಬಗ್ಗೆ ಗೊತ್ತಿದೆ, ಹಾಗಾಗಿ ಒಂದು ಕಡೆಯಿಂದ ಇವರನ್ನು ಮುಂದೆ ಬಿಡೋಣ, ಅನ್ನುವ ಪ್ಲಾನ್ ನಂದು ಅಂದರು.
ಸರಿ ಸರ್, ಹಾಗೇ ಮಾಡುವ. ನಾವು ಎಷ್ಟು ಜನ ಇದ್ದೀವಿ ಸರ್? ಗನ್ ಎಷ್ಟಿದೆ ಸರ್? ಮನು ಕೇಳಿದರು. ನಾವು ಟೋಟಲ್ 35 ಜನ ಇದೀವಿ, 12 ಕೋವಿ ಇದೆ. ಸಾಕಲ್ವಾ? ಅಂದರು ಎಸಿಎಫ್. ಹೋ, ಧಾರಾಳವಾಗಿ ಸಾಕು ಸರ್. ಕರೆಕ್ಟಾಗಿ ಪ್ಲಾನ್ ಮಾಡ್ಬೇಕು ಅಷ್ಟೇ ಅಂದರು ಗಾಡಿಯಲ್ಲಿ ಕುಳಿತಿದ್ದ ರೇಂಜರ್
ಪ್ಲಾನ್ ಕರೆಕ್ಟಾಗಿದೆ. ಹೇಳ್ತೀನಿ ಕೇಳಿ ಅನ್ನುತ್ತಾ ಎಸಿಎಫ್ ಶುರು ಮಾಡಿದರು. ನಾವೀಗ ದಾರೀಲಿ ಹೋಗ್ತಾ, ಬಿಸ್ಕೆಟ್, ನೀರು ಮತ್ತು ಬಾಳೆ ಹಣ್ಣು ತಗಳಣ. ನೀರು ಮಾತ್ರ ಪ್ರತಿಯೊಬ್ಬರೂ ಒಂದೊಂದು ಲೀಟರ್ ಬಾಟ್ಲಿ ಹಿಡ್ಕೋಬೇಕು. ಬೆಟ್ಟ ಹತ್ತೋದು ಭಾಳಾ ಕಷ್ಟ ಇದೆ. ಟಾರ್ಚ್ಗಳೂ ಇದಾವೆ. ದಾರೀಲಿ ಆನೆ ಹುಲಿ ಏನೂ ಇಲ್ಲ, ಅದೊಂದು ಪುಣ್ಯ ನಮ್ದು ಅಂದರು ಎಸಿಎಫ್.
ಇದನ್ನೂ ಓದಿ : Forest Stories: ಕಾಡೇ ಕಾಡತಾವ ಕಾಡ; ಮೋರಿ ಕೆಳಗೆ ಕುಳಿತು ಕಾಯ್ದು ಕಾಯ್ದು ಬೇಸರವಾದರೂ
ಸಾರ್, ಆ ಬೆಟ್ಟದಲ್ಲಿ ಕರಡಿ ಮತ್ತು ಚಿರತೆ ಇದಾವೆ ಸರ್, ನಾನೇ ಎರಡ್ ಸಲ ಸಿಕ್ಕಾಕಂಡಿದಿನಿ. ಕರಡಿಗಳು ಭಾಳಾ ಡೇಂಜರ್ರು ಅಂದರು ಮನು. ಹುಂ, ನೋಡ್ಕಂಡ್ ಹೋಗ್ಬೇಕು ಮಾರಾಯ. ಕರಡಿ ಚಿರತೆ ಇದೆ ಅನ್ನುವುದು ಗೊತ್ತಿರುವುದರಿಂದಲೇ ಅವರು ಆ ಸ್ಪಾಟ್ ಆಯ್ದುಕೊಂಡಿರುವುದು. ಕಳ್ಳರು ಭಾಳಾ ಹುಷಾರಿರ್ತಾರೆ, ಧೈರ್ಯವಂತರಿರ್ತಾರೆ. ನಾವು ಅವ್ರನ್ನು ಮೀರಿಸಲೇಬೇಕು. ನಮ್ಮತ್ರ ಯೂನಿಫಾರ್ಮ್ ಇದೆ, ಗನ್ ಇದೆ, ಇಷ್ಟೊಂದ್ ಜನ ಇದೀವಿ ಸಾಲಲ್ವಾ? ಭಯ ಯಾಕೆ ಅಂದರು ಎಸಿಎಫ್.
ಗನ್ನೂ, ಯೂನಿಫಾರ್ಮ್ ಮಾತ್ರ ಸಾಕಾ ಸರ್? ಮುಖ್ಯವಾಗಿ ಧೈರ್ಯ ಬೇಕು, ಮಾಡ್ತಿರೋ ಕೆಲ್ಸದಲ್ಲಿ ಶ್ರದ್ಧೆ ಬೇಕು ಅಂದರು ರೇಂಜರ್. ಅದೆಲ್ಲಾ ಇರೋದ್ಕೆ ತಾನೆ ಇವ್ರು ಫಾರೆಸ್ಟರ್ ಸೆಲೆಕ್ಷನ್ ಆಗಿದಾರೆ, ನಮ್ಮುಡುಗರ ಮೇಲೆ ನಂಗೆ ನಂಬಿಕೆ ಇದೆ ಅಂದರು ಎಸಿಎಫ್. ಸರ್, ನಾವು ಟಾರ್ಚ್ ಭಾಳಾ ಹುಷಾರಾಗಿ ಬಳಸಬೇಕು. ರಾತ್ರಿ ಸಣ್ಣ ಬೆಳಕಿನ ಕಿರಣ ಕಂಡರೂ ಕಳ್ಳರು ಹುಷಾರಾಗಿ ಬಿಡ್ತಾರೆ ಅಂದ ಸಂತೋಷ.
ಹೌದು ನಿಜ, ಆದರೆ ನಾವು ಮೊದಲ 7 ಕಿಲೋಮೀಟರ್ ನಡೆಯುವ ದಾರಿ ಏನೂ ತೊಂದರೆ ಇಲ್ಲ. ನಂತರ ಬಯಲು ಪ್ರದೇಶ ದಾಟಬೇಕಲ್ಲಾ? ಅಲ್ಲೇ ಹುಷಾರಾಗಿರ್ಬೇಕು, ಅಲ್ಲಿ ಕಳ್ಳರು ನಮ್ಮನ್ನು ಕಾಣದಂತೆ ಎಚ್ಚರ ವಹಿಸಬೇಕು ಅಂದರು. ಅಷ್ಟರಲ್ಲಿ ಗಾಡಿ ನಿಲ್ಲಿಸಿದ ಡ್ರೈವರ್, ಸಾರ್ ತಿಂಡಿ? ಅಂದ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : Forest Stories: ಕಾಡೇಕಾಡತಾವ ಕಾಡ; ‘ಆಪರೇಷನ್ ಮೌಂಟೇನ್’
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kaade-kaadataava-kaada
Published On - 10:22 am, Sat, 12 March 22