ಕಾಡೇ ಕಾಡತಾವ ಕಾಡ | Kaade Kaadataava Kaada : ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದವಳಿಗೆ, ಗಂಡನ ಮೊಬೈಲ್ ರಿಂಗಾಗುತ್ತಿರುವುದು ನಿದ್ರೆಯಿಂದ ಎಚ್ಚರಿಸಿತು. ಅಸಮಾಧಾನದಿಂದಲೇ ತಿರುಗಿ ನೋಡಿದಳು, ಗಂಡ ಜೋರು ನಿದ್ರೆಯಲ್ಲಿದ್ದ. ಮೊಬೈಲು ಪಕ್ಕದಲ್ಲೇ ಇತ್ತು. ಕಾಲ್ ಕಟ್ ಮಾಡಿ ಮಲಗಿದಳು. ಮತ್ತೆ ರಿಂಗಾಯಿತು, ಥೂ ಕರ್ಮ, ನಿದ್ರೆ ಮಾಡಕ್ಕೂ ಬಿಡಲ್ಲ, ಇವ್ರದ್ದೊಂದು ಡಿಪಾರ್ಟುಮೆಂಟು ಅನ್ನುತ್ತಾ ಮೊಬೈಲು ತೆಗೆದು ನೋಡಿದಳು. ಅಗಲವಾದ ಮೊಬೈಲು ಸ್ಕ್ರೀನಿನ ಮೇಲೆ ಎ.ಸಿ.ಎಫ್. ಸರ್ ಎನ್ನುವ ಇಂಗ್ಲೀಷ್ ಹೆಸರಿತ್ತು. ಹೋ ಆಫೀಸರ್! ಏನ್ಮಾಡೋದು? ಒಂದ್ವಾರದಿಂದ ಇದೇ ಆಗಿದೆ. ಸರಿ ನಿದ್ರೆಯೇ ಇಲ್ಲ. ಈಗಿನ್ನೂ ಮಧ್ಯರಾತ್ರಿ ಒಂದೂವರೆ ಗಂಟೆ. ಇಷ್ಟೊತ್ತಿಗೆ ಏನ್ ಕೆಲ್ಸ? ಬೇಡ ಕಟ್ ಮಾಡಿದ್ರಾಯ್ತು, ಅನ್ನುತ್ತಾ ಕಾಲ್ ಕಟ್ ಮಾಡಬೇಕು ಅನ್ನುವಷ್ಟರಲ್ಲಿ ಅದೇ ಕಟ್ ಆಯ್ತು. ಒಳ್ಳೇದಾಯ್ತು ಅನ್ನುತ್ತಾ ಮಲಗಿದಳು. ನಿಮಿಷ ಮುಗಿಯುವಷ್ಟರಲ್ಲಿ ಮೆಸೇಜ್ ಶಬ್ದ ಬಂತು. ಮೊಬೈಲು ತೆಗೆದು ನೋಡಿದಳು. ಬಹಳಾ ಮುಖ್ಯವಾದ ಕೆಲಸ, “ಆಪರೇಷನ್ ಮೌಂಟೇನ್’’, ಕೂಡಲೇ ನನ್ನನ್ನು ಭೇಟಿ ಮಾಡಿ, ಅನ್ನುವ ಮೆಸೇಜ್.
ವಿ.ಕೆ. ವಿನೋದ್ ಕುಮಾರ್ (V. K. Vinod Kumar)
(ಕಥೆ 5, ಭಾಗ 1)
ಆಪರೇಷನ್ ಮೌಂಟೇನ್! ಇದೇನಿದು? ಸಾಮಾನ್ಯವಾಗಿ ಕಚೇರಿ ಸಂಬಂಧ ಯಾವ ವಿಚಾರವನ್ನೂ ಗಂಡ ಅವಳ ಬಳಿ ಹೇಳುತ್ತಿರಲಿಲ್ಲ. ಹಾಗಾಗಿ ಅವಳಿಗೆ ಸ್ವಲ್ಪ ಗೊಂದಲವಾಯ್ತು. ಏನಿರಬಹುದು? ಯೋಚಿಸಿ ಸಾಕಾಗಿ, ಯಾವುದಕ್ಕೂ ಗಂಡನನ್ನು ಎಬ್ಬಿಸಿ ವಿಷಯ ತಿಳಿಸುವುದೇ ಮೇಲು, ಎಷ್ಟಾದರೂ ಆಫೀಸ್ ಕೆಲ್ಸ. ಅವರ ಕೆಲ್ಸದಿಂದ ತಾನೆ ನಮ್ಮ ಬದುಕು, ಎಸಿಎಫ್ ಲೆವೆಲ್ಲಿನ ಅಧಿಕಾರಿಯೇ ಒಂದೂವರೆಗೆ ಕರೆ ಮಾಡಿದ್ದಾರೆ ಅಂದ ಮೇಲೆ ಏನೋ ಮುಖ್ಯ ವಿಚಾರವೇ ಇರಬೇಕು ಅಂದುಕೊಳ್ಳುತ್ತಾ, ಮೆಲ್ಲನೇ ಗಂಡನನ್ನು ಎಬ್ಬಿಸಿದಳು. ವಾರದಿಂದ ವಿಪರೀತ ಕೆಲಸದಲ್ಲಿ ದಣಿದಿದ್ದ ಸಂತೋಷನಿಗೆ ಗಾಢ ನಿದ್ರೆ ಆವರಿಸಿತ್ತು. ನಿಧಾನಕ್ಕೆ ಎದ್ದವನೇ ಏನು ಅಂದ? ನಿಮ್ ಎಸಿಎಫ್ ಕಾಲ್ ಮಾಡಿದ್ರು, ಎರಡ್ ಸಲ, ನಾನು ಕಟ್ ಮಾಡ್ದೆ. ಈಗ ಮೆಸೇಜ್ ಮಾಡಿದಾರೆ. ಅದೇನೋ ಆಪರೇಷನ್ ಮೌಂಟೇನ್ ಅಂತೆ ಅಂದ್ಳು ಹೆಂಡ್ತಿ.
ಏನು? ಆಪ್ರೇಷನ್ ಮೌಂಟೇನಾ? ಗಾಬರಿಯಿಂದ ಫೋನ್ ಕಿತ್ತುಕೊಂಡವನೇ ಕೂಡಲೇ ಎಸಿಎಫ್ ಗೆ ಕರೆ ಮಾಡಿದ.
ಗಂಡನ ಮುಖದಲ್ಲಿನ ಗಾಬರಿ ಕಂಡು ಅವಳಿಗೆ ಆಶ್ಚರ್ಯವಾಯ್ತು!
ಅಷ್ಟರಲ್ಲಿ ಆತ ಮಾತು ಶುರು ಮಾಡಿದ. ನಮಸ್ತೇ ಸರ್, ಇಲ್ಲಾ ಸರ್, ನಿನ್ನೆ ನೈಟ್ ಡ್ಯೂಟಿ ಇಂದ ಬಂದವನು ಮಲ್ಗಿದ್ದೆ ಹಾಗಾಗಿ ಕಾಲ್ ಗೊತ್ತಾಗ್ಲಿಲ್ಲ, ಇಲ್ಲಾಸರ್ ಅದು ಕಾಲ್ ಪಿಕ್ ಮಾಡುವಾಗ ಕಟ್ ಆಯ್ತು, ನಾನು ಕಾಲ್ ಕಟ್ ಮಾಡಿಲ್ಲ ಸಾರ್ ಅನ್ನುತ್ತಾ ಇವಳ ಕಡೆ ಮುಖ ಮಾಡಿ ಸಿಂಡರಿಸಿಕೊಂಡ.
ಆಯ್ತು ಸರ್, ಓಕೆ ಸರ್ ಡನ್! ನಾನಿವಾಗ್ಲೇ ಹೊರಡ್ತಿನಿ ಸರ್, ಅಲ್ಲಿಗೇ ಬರ್ತೀನಿ ಸರ್, ನಮಸ್ತೇ ಅನ್ನುತ್ತಾ ಕಾಲ್ ಕಟ್ ಮಾಡಿದ.
ಇದನ್ನೂ ಓದಿ : Forest Stories: ಕಾಡೇ ಕಾಡತಾವ ಕಾಡ; ತಪ್ಪಿದ ಕೇಸು, ಗಾಯವಾದ ತಲೆ, ಮನೆಕಡೆ ಹೆಜ್ಜೆ
ಏನ್ರೀ? ಯಾಕೆ ಗಾಬ್ರಿ?
ಏನಿಲ್ವೇ, ಅದೊಂದ್ ಮುಖ್ಯವಾದ ಆಪ್ರೇಷನ್, ತುಂಬಾ ಸೀಕ್ರೇಟ್, ನಾನಿಗ್ಲೇ ಹೊರಡ್ಬೇಕು ಅನ್ನುತ್ತಾ ಹಾಸಿಗೆಯಿಂದ ಧಡಕ್ಕನೆ ಎದ್ದು ಬಾತ್ ರೂಂ ಕಡೆ ನಡೆದ.
ಗಾಢ ನಿದ್ರೆಯಲ್ಲಿದ್ದೂ, ಅದೆಷ್ಟೊತ್ತಾದರೂ ಸರಿ, ಡ್ಯೂಟಿ ಅಂದ ಕೂಡಲೇ ಪೂರ್ತಿ ಹುಮ್ಮಸ್ಸಿನಿಂದ ತಯಾರಾಗುವ ಗಂಡನ ಮೇಲೆ ಆಕೆಗೆ ಹೆಮ್ಮೆ, ಅಭಿಮಾನ.
ಯೂನಿಫಾರ್ಮ್ ಧರಿಸಿ, ತಯಾರಾಗಿ ಬಂದವನನ್ನು ಕೇಳಿದಳು ಏನು ಮ್ಯಾಟ್ರು?
ಸೀಕ್ರೆಟ್ ಕಣೇ, ನೀನೇನೂ ತಲೆ ಕೆಡಿಸ್ಕೋಬೇಡ, ಸಂಜೆ ಒಳಗೆ ಮನೆಗೆ ಬರ್ತಿನಿ. ನಾನೊಬ್ನೇ ಹೋಗ್ತಿಲ್ಲ. ಪೂರ್ತಿ ಟೀಂ, ಸುಮಾರು ಮೂವತ್ತೈದು ಜನ ಹೋಗ್ತಿದಿವಿ. ತಿಂಗ್ಳಿಂದ ನಾನು ಎ.ಸಿ.ಎಫ್. ಸಾರ್ ಇದ್ರ್ ಬಗ್ಗೆ ಪ್ಲಾನ್ ಮಾಡಿದ್ವಿ. ಯೂ ಡೋಂಟ್ ವರಿ ಅಂದವನೇ ಹೊರಟ.
ಆಯ್ತು ಹುಷಾರಾಗಿ ಹೋಗ್ಬನ್ನಿ, ಫ್ರೀ ಆದಾಗ ಮೆಸೇಜ್ ಮಾಡಿ ಅನ್ನುತ್ತಾ ಗಂಡನನ್ನು ಬೀಳ್ಕೊಟ್ಟಳು
ಸಂತೋಷ್ ಅವ ತಲುಪಬೇಕಾದ ಸ್ಥಳ ತಲುಪುವಾಗ, ಅದಾಗಲೇ ಎಸಿಎಫ್ ಮತ್ತು ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಅನೇಕರು ಹಾಜರಿದ್ದರು. ಇವನನ್ನು ಕಂಡೋಡನೇ ಎಸಿಎಫ್, ಬನ್ನೀ ಸಂತೋಷ್, ನೀವೇ ಬಾಕಿ ಇದ್ರಿ. ಹೊರಡೋಣ್ವಾ ಅಂದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಹಿಂದಿನ ಕಥೆ : Forest Stories: ಕಾಡೇ ಕಾಡತಾವ ಕಾಡ; ‘ನಿಮ್ಮ ಕೆಲಸ ಈ ಥರಾ ಅಂತ ಗೊತ್ತಿದ್ರೆ ಮದುವೆಗೇ ಒಪ್ಕೋತಿರಲಿಲ್ಲ’
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kaade-kaadataava-kaada
Published On - 9:45 am, Sat, 12 March 22