Forest Stories: ಕಾಡೇ ಕಾಡತಾವ ಕಾಡ; ಗಾಂಜಾ ಬೆಳೆದ ತಂಡದ ಸದಸ್ಯನೇ ನಮ್ಮ ಡ್ರೈವರ್ ಆಗಿದ್ದ!

|

Updated on: Mar 12, 2022 | 11:59 AM

Operation Mountain : ಗಾಂಜಾ ಬೆಳೆಯಲು, ಆ ಪ್ರದೇಶದ ಅಲ್ಲಲ್ಲಿ 100 ವರ್ಷಗಳಿಗೂ ಮೀರಿ ಬೆಳೆದಿದ್ದ ದೊಡ್ಡದೊಡ್ಡ ನಂದಿ, ಹೊನ್ನೆ, ಬೀಟೆ ಮರಗಳನ್ನು ಕಡಿದಿದ್ದರು. ಅವುಗಳನ್ನು ನೋಡಿ ಎಸಿಎಫ್‌ ಕಣ್ಣಲ್ಲಿ ನೀರು ಜಿನುಗಿತು. 

Forest Stories: ಕಾಡೇ ಕಾಡತಾವ ಕಾಡ; ಗಾಂಜಾ ಬೆಳೆದ ತಂಡದ ಸದಸ್ಯನೇ ನಮ್ಮ ಡ್ರೈವರ್ ಆಗಿದ್ದ!
ಫೋಟೋ : ವಿ. ಕೆ. ವಿನೋದ್​ ಕುಮಾರ್
Follow us on

ಕಾಡೇ ಕಾಡತಾವ ಕಾಡ | Kaade Kaadataava Kaada : ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನುಗ್ಗಿ ಗಾಂಜಾ ಬೆಳೆ ಬೆಳೆದಿದ್ದರು ಕಳ್ಳರು. ಇವರು ನಿಂತಿದ್ದ ಎದುರು ಬದಿಯಲ್ಲಿ ಅದಾಗಲೇ ಒಂದು ಬಾರಿ ಬೆಳೆಯನ್ನು ಕಟಾವು ಮಾಡಿದ್ದ ಗುರುತು ಕಾಣುತ್ತಿತ್ತು. ಇನ್ನೇನು ಕೆಲವೇ ವಾರದಲ್ಲಿ ಬಾಕಿ ಉಳಿದಿರುವ ಬೆಳೆ ಕೂಡಾ ಕಟಾವಿಗೆ ಬಂದು ಕೋಟಿಗಟ್ಟಲೆ ಆದಾಯ ಕೊಡುತ್ತಿತ್ತು. ಗಾಂಜಾ ಬೆಳೆಯಲು, ಆ ಪ್ರದೇಶದ ಅಲ್ಲಲ್ಲಿ 100 ವರ್ಷಗಳಿಗೂ ಮೀರಿ ಬೆಳೆದಿದ್ದ ದೊಡ್ಡ ದೊಡ್ಡ ನಂದಿ, ಹೊನ್ನೆ, ಬೀಟೆ ಮರಗಳನ್ನು ಕಡಿದಿದ್ದರು. ಅವುಗಳನ್ನು ನೋಡಿ ಎಸಿಎಫ್‌ ಕಣ್ಣಲ್ಲಿ ನೀರು ಜಿನುಗಿತು. ಎಲ್ಲರೂ ಸುಸ್ತಾಗಿ ಕುಳಿತಿದ್ದರು. ಅಪರಾತ್ರಿಲಿ ಮನೆ ಬಿಟ್ಟು ಬಂದು, ಕಿಲೋಮೀಟರ್​ಗಟ್ಟಲೆ ನಡೆದಿದ್ದ ಸುಸ್ತು ಜೊತೆಗೆ ಕಳ್ಳರು ತಪ್ಪಿಸಿಕೊಂಡಿದ್ದು, ಎಲ್ಲರನ್ನೂ ತೀವ್ರ ಹತಾಶೆಗೆ ತಳ್ಳಿತ್ತು. ಸರಿ, ಮೊದ್ಲು ಎಲ್ಲರೂ ತಿಂಡಿ ತಿನ್ನಿ ನಂತರ ಇದೆಲ್ಲವನ್ನೂ ಕಡಿದು ನಾಶ ಮಾಡೋಣ ಅಂದರು.
ವಿ.ಕೆ. ವಿನೋದ್ ​ಕುಮಾರ್ (V. K. Vinod Kumar)

*

ಕಥೆ 5, ಭಾಗ 5)

ಎಲ್ಲಾ ಸೇರಿ ಬ್ರೆಡ್ಡು, ಬಿಸ್ಕೆಟ್‌ ತಿಂದು ಖಾಲಿ ಮಾಡಿ ನೀರು ಕುಡಿದು ಬೆಳೆದಿದ್ದ ಗಾಂಜಾ ಬೆಳೆಯನ್ನು ನಾಶ ಮಾಡಿ ಬೇಸರದಿಂದ ಹೊರಡಲು ಅನುವಾದರು. ಎಲ್ಲರೂ ಇದ್ದೀರಲ್ವಾ? ಸಂತೋಷ್‌ ಲೆಕ್ಕ ಹಾಕಿ ಅಂದರು. ಲೆಕ್ಕ ಹಾಕಿದ ಸಂತೋಷ್‌, ಸರ್‌ 34 ಇದ್ದೀವಿ! ಅಂದ ಆಶ್ಚರ್ಯದಿಂದ.  ‌ಹುಂ. 34! ಯಾರದು ಕಳ್ಳ? 35 ನೇಯವ ಅಂದರು ಎಸಿಎಫ್.‌ ಸರ್‌, ನಮ್ಮ ಮಲಯಾಳೀ ಡ್ರೈವರ್‌ ಕಾಣ್ತಿಲ್ಲ ಅಂದರು ರೇಂಜರ್.‌ ಎಲ್ಲೋದ್ನಪ್ಪಾ ಅವ್ನು?

ಸರ್‌, ನಾವು ತಿಂಡಿ ತಗಂಡ್ವಲ್ಲಾ ಸಾರ್?‌ ಅಲ್ಲಿ ಅವ್ನು ನಂಗ್ಯಾಕೋ ಹೊಟ್ಟೆ ನೋವಾಗ್ತಿದೆ, ಲೂಸ್‌ ಮೋಶನ್ನು, ನಾನ್‌ ಬರಲ್ಲ ಅಂದ ಸಾರ್‌, ನೀವ್‌ ಬೈತೀರಿ ಅಂತ ನಾವ್‌ ಹೇಳಿಲ್ಲ. ಗಾಡೀನ ನಾನೇ ಓಡಿಸ್ಕಂಡ್‌ ಬಂದೆ ಒಬ್ಬ ಸಿಬ್ಬಂದಿ ಮುಂದೆ ಬಂದು ಹೇಳಿದ.

ಎಸಿಎಫ್​ಗೆ ಒಂದೇ ಕ್ಷಣದಲ್ಲಿ ಎಲ್ಲವೂ ಸ್ಪಷ್ಟವಾಯಿತು. ಎಲ್ಲರ ಮುಖವನ್ನೊಮ್ಮೆ ನೋಡಿ ಕೆಳಗೇ ಕುಳಿತುಬಿಟ್ಟರು. ಅವರು ಏನು ಹೇಳಬಹುದು ಎಂದು ಅವರನ್ನೇ ನೋಡುತ್ತಿದ್ದರು. ಈಗ ನಾವೇನೂ ಮಾಡಲಾಗುವುದಿಲ್ಲ. ನಮ್ಮ ಶ್ರಮ ಎಲ್ಲವೂ ವೇಸ್ಟ್​. ಗಾಂಜಾ ಬೆಳೆದ ತಂಡದ ಸದಸ್ಯನೇ ನಮ್ಮ ಡ್ರೈವರ್ ಆಗಿದ್ದ!

ಭಾಗ 4 : Forest Stories: ಕಾಡೇ ಕಾಡತಾವ ಕಾಡ; ಖಾಲೀ ಗುಡಿಸಲು ಬಿಯರು ಬಾಟಲಿಗಳು

ಸಮಯ, ಸಂದರ್ಭ ನೋಡಿಕೊಂಡು ಡ್ರೈವರ್‌ ಆಗಿ ಇಲಾಖೆ ಸೇರಿಕೊಂಡಿದ್ದಾನೆ. ನಾವು ಎಷ್ಟೇ ಜಾಗರೂಕರಾಗಿದ್ದರೂ ಇದೆಲ್ಲ ಎಲ್ಲ ಸಲವೂ ನಮ್ಮ ಅರಿವಿಗೆ ಬರುವುದೇ ಇಲ್ಲ. ನಾವೆಷ್ಟೇ ಚಕ್ರವ್ಯೂಹಗಳನ್ನು ದಾಟಿಕೊಳ್ಳಲು ಪ್ರಯತ್ನಿಸಿದರೂ ಮತ್ತೆ ಮತ್ತೆ ಇವು ಹೆಣೆದುಕೊಳ್ತಾನೇ ಇರ್ತಾವೆ. ಒಟ್ಟಿನಲ್ಲಿ ಇವತ್ತಿನ ಆಪರೇಷನ್‌ ಬಗ್ಗೆ ಅವನಿಗೆ ಇಂದು ಬೆಳಿಗ್ಗೆಯೇ ಸುಳಿವು ಸಿಕ್ಕಿದೆ. ಅವನೇ ಮಾಹಿತಿ ಕೊಟ್ಟಿದ್ದಾನೆ. ಹಾಗಾಗಿ ಕಳ್ಳರು ಆರಾಮಾಗಿ ಓಡಿ ಹೋಗಿದ್ದಾರೆ.

ದೊಡ್ಡದಾಗಿ ನಿಟ್ಟುಸಿರು ಬಿಟ್ಟು, ಯಾರೊಂದಿಗೂ ಮಾತನಾಡದೇ, ಬೆಟ್ಟ ಹತ್ತತೊಡಗಿದರು. ಬರುವಾಗ ಇದ್ದ ವೇಗ ಈಗ ಇರಲಿಲ್ಲ ಅಷ್ಟೇ.

(ಮುಗಿಯಿತು)

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kaade-kaadataava-kaada

Published On - 11:55 am, Sat, 12 March 22