ಡಾ. ಕೆ. ಎಸ್. ನಿಸಾರ್ ಅಹಮ್ಮದ್ | Dr. K.S Nissar Ahmed : ನವ್ಯಕಾವ್ಯದ ಏರುದಿನಗಳಲ್ಲಿ ಗೋಪಾಲಕೃಷ್ಣ ಅಡಿಗ, ರಾಮಚಂದ್ರ ಶರ್ಮ ಮೊದಲಾದವರು ನವ್ಯಕಾವ್ಯದ ಪಂಕ್ತಿಯನ್ನು ಹಾಕುತ್ತಿದ್ದ ದಿನಗಳವು. ಹಿಂದೆ ಬಂದಿದ್ದ ಕಾವ್ಯಗಳೆಲ್ಲವೂ ವಾಸ್ತವದಿಂದ ದೂರ ಸರೆದು, ಕಲ್ಪನೆಯಲ್ಲಿ ಗೂಡುಕಟ್ಟಿದವು ಎಂದು ಗಣಿಸಿ, ಅವುಗಳನ್ನು ಕಾವ್ಯವೇ ಅಲ್ಲ ಎಂದು ತಿರಸ್ಕರಿಸಿದ್ದ ಕಾಲ. ಕಾವ್ಯವೆಂದರೆ ಅದು ಅಡಿಗರು ಬರೆಯುತ್ತಿದ್ದ ಮಾದರಿಯವು ಮಾತ್ರ ಎಂದು ತೀರ್ಮಾನ ಮಾಡಿಯಾಗಿತ್ತು. ಅಡಿಗರ ಪ್ರಭಾವಲಯವನ್ನು ತಪ್ಪಿಸಿಕೊಳ್ಳುವುದು ಸುಲಭಸಾಧ್ಯವಾದ ಮಾತಾಗಿರಲಿಲ್ಲ. ಅಡಿಗರು ‘ನನ್ನ ನುಡಿಯೊಳಗಣೆ ಬಣ್ಣಬಣ್ಣದಲಿ ಬರೆವ ಪನ್ನತಿಗೆ ಬರುವ ತನಕ ನನ್ನ ಬಾಳಿದು ನರಕ’ ಎಂದು ಹೇಗೆ ನಿರ್ಧರಿಸಿ ಇತರರಿಗಿಂತ ಭಿನ್ನವಾದ ತಮ್ಮ ಧ್ವನಿಯ ಹುಡುಕಾಟಕ್ಕೆ ತೊಡಗಿದ್ದರೋ ಹಾಗೇ ನಿಸಾರರಿಗೂ ತಮ್ಮ ಧ್ವನಿಯ ಹುಡುಕಾಟ ಮುಖ್ಯವೇ ಆಗಿತ್ತು.
ಪಿ. ಚಂದ್ರಿಕಾ, ಕವಿ, ಲೇಖಕಿ
*
(ಭಾಗ – 1)
ನಿಮ್ಮೊಡನಿದ್ದೂ ನಿಮ್ಮಂತಾಗದೆ
‘ಮನೋರಮಾ ಮನೋರಮಾ ಸಾಲದೇನೇ ನಿನ್ನ ಹೆಸರೇ ಮಲಗೋಬದ ಘಮಘಮ? ಹದಿನೆಂಟು ವಸಂತಿಸಿ ಅಂಗಾಂಗ ಲಲಲಾಲ’ ‘ಮನೋರಮಾ’ ಎನ್ನುವ ಪದ್ಯ ನವ್ಯ ಮಾದರಿಯದು. ಆದರೆ ನಿಸಾರ್ ನವೋದಯದ ಗೇಯತೆಯನ್ನು ನವ್ಯದ ಹೊಸತನವನ್ನೂ ಒಟ್ಟಿಗೆ ಇರಿಸಿಕೊಂಡರು. ಅವರಿಗೆ ಈಗ ನಡೆಯುತ್ತಿರುವ ಟ್ರ‍್ರೆಂಡ್ ಯಾವುದು ಎಲ್ಲರೂ ಒಪ್ಪುವ ಹಾಗೆ ಅದನ್ನು ಬರೆಯಬೇಕು ಎನ್ನುವುದು ಖಂಡಿತಾ ಇರಲಿಲ್ಲ. ಅವರ ನಿಷ್ಠೆ ಓದುಗನ ಎದೆಗೆ ತಲುಪಿಸಬಹುದಾದ ಸರಳ ಮಾರ್ಗಕ್ಕೆ. ಅದಕ್ಕೆ ನವ್ಯದ ಕ್ಲಿಷ್ಟವಾದ ಪ್ರತಿಮಾನಿಷ್ಠತೆಯನ್ನು ದೂರವಿರಿಸಿ, ಈವರೆಗೂ ಇಲ್ಲದೆ ಇದ್ದ ಹೊಸ ಮಾದರಿಯನ್ನು ತಮ್ಮದಾಗಿಸಿಕೊಂಡರು. ಹೇಳುವುದು ಅರ್ಥವಾಗುವ ಹಾಗೇ ಹೇಳಬೇಕು. ಅರ್ಥವಾದರೆ ಮಾತ್ರ ಒಳಾರ್ಥ ಗೊತ್ತಾಗುತ್ತದೆ ಎಂದು ನಂಬಿದ್ದ ನಿಸಾರ್ ಪ್ರತಿಮಾ ನಿಷ್ಠತೆಯನ್ನು ಎಂದೂ ತಮ್ಮ ಕವಿತೆಗಳಲ್ಲಿ ತರಲೇ ಇಲ್ಲ. ಬದಲಿಗೆ ಅವರು ತಂದಿದ್ದು ಅರ್ಥ ನಿಷ್ಠತೆಯನ್ನು, ಜೀವನ ಜಿಜ್ಜಾಸೆಯನ್ನು.
ನೀನೀಗ ಹೊಸ ಹುಟ್ಟು: ಮಳೆಗುಡಿಸಿದಾಕಾಶ
ಮೊದಲಗಿತ್ತಿಯ ಲಜ್ಜೆ, ನಗೆ ಹಿಲಾಲು
ಎಲೆ ತೊಗಟೆ ಗರಿ ಜಾರು
ಋತುಮಾಸದಾಟಕ್ಕೆ ಮತ್ತೆ ಬಯಲು.
ಕವಿತೆ ಎಂದರೆ ನಿರಾಳತೆ. ಅದು ಕಿವಿ ಮೇಲೆ ಬಿದ್ದ ತಕ್ಷಣ ತರಂಗಿತವಾಗಿ ಅರ್ಥ ಪರಂಪರೆಗಳನ್ನು ಬಿಚ್ಚಿಕೊಳ್ಳಬೇಕು. ಅದಕ್ಕಾಗಿ ಪ್ರಾಸಗಳನ್ನು ಪ್ರಾಯೋಗಿಕವಾಗಿ ನಿಯಮಿತ ಹಾಗೂ ಅನಿಯಮಿತವಾಗಿ ಬಳಸಿದರು. ಹಿಗ್ಗಿಗೆ ಭಾಷೆಗಳ ಒಗ್ಗಿಸುವ ಪರಿ, ಇನ್ನೂ ಉಳಿದ ಅನಂತ ಬಯಕೆ ಮುಂದಾಗಬೇಕಾದ ಹೊಸ ಸೃಷ್ಟಿಗೆ ಜಗದೆಚ್ಚರ. ಹೀಗೆ ಬರೆಯಬಲ್ಲವರು ಎಂದರೆ ನಿಸಾರರು ಮಾತ್ರ. ಹೊಸಮಾದರಿಗೆ ತಮ್ಮನ್ನು ತಾವು ಅಣಿಮಾಡಿಕೊಂಡ ರೀತಿಯೂ ಹೌದು. ಗಿರಡ್ಡಿಯವರು ಇದನ್ನು ‘ಭಾವಗೀತೆಯ ಸ್ವರೂಪವನ್ನೇ ನವ್ಯ ಕಾವ್ಯಕ್ಕೆ ಕಸಿ ಮಾಡಿರುವಂತೆ ಕಾಣುತ್ತದೆ’ ಎಂದು ಗುರುತಿಸಿದ್ದಾರೆ. ಈ ಭಿನ್ನತೆಯೇ ನಿಸಾರರ ಕಾವ್ಯದ ಕಾವ್ಯತತ್ವ ಕೂಡಾ.
ಇದ್ದ ಮಾದರಿಗಳು ಸಿದ್ಧ ಮಾದರಿಗಳಿಂದ ಮತ್ತು ನವ್ಯದ ಪ್ರಭಾವದಿಂದ ದೊಡ್ದ ಬಿಡುಗಡೆಯಾಗಿ ಅವರಿಗೆ ಕಂಡಿದ್ದು ಗೇಯತೆ. ಪದಗಳ ಲಾಲಿತ್ಯವನ್ನು ಅದರ ಸರಳ ಸುಂದರ ರೂಪದಲ್ಲಿ ಹಿಡಿದ ನಿಸಾರರಿಗೆ ಕಾವ್ಯ ಕೈ ಹಿಡಿಯಿತು. ಇದೇ ಮುಂದೆ ಹಾಡುಗಾರರನ್ನು ಆಕರ್ಷಿಸಿ ನಾಡಿನ ದೇಶದ ವಿದೇಶಗಳಲ್ಲಿ ಕೂಡಾ ಇವರ ಕವಿತೆಗಳನ್ನು ತಲುಪಿಸಲು ಸಾಧ್ಯವಾಯಿತು.
(ಮುಂದಿನ ಭಾಗ ನಿರೀಕ್ಷಿಸಿ)
(ಸೌಜನ್ಯ : ಡಾ. ಕೆ. ಎಸ್. ನಿಸಾರ್ ಅಹಮ್ಮದ್, ನಾಡಿಗೆ ಹತ್ತಿರ ಇನ್ನಷ್ಟು ಎತ್ತರ. ಪ್ರಕಾಶಕರು : ಕೆ. ಎಸ್. ನರಸಿಂಹಸ್ವಾಮಿ ಟ್ರಸ್ಟ್. 9916796832)
ಇದನ್ನೂ ಓದಿ : Poetry : ಅವಿತಕವಿತೆ ; ‘ನೆಲೆ ಇಲ್ಲದ ಊರಲ್ಲಿ ನೆಲೆ ಹುಡುಕುತ ಹೊರಟೇನು ತಂಟೆ-ತಕರಾರುಗಳನ್ನು ಎಂಟಾಣೆಗೆ ಮಾರೇನು’
Published On - 3:24 pm, Sat, 5 February 22