Vaidehi’s Birthday: ‘ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು’ ನುಡಿಗೂ ಬೆಳಕಿದೆ

|

Updated on: Feb 12, 2022 | 10:11 PM

Kannada Writer Vaidehi : “ಕಲ್ಪನೆಯ ಕುದುರೆಗೆ ಎಂದೂ ಲಂಗುಲಗಾಮಿಲ್ಲ. ಕವಿ ಶಾಪ ಗೀಪ ಇತ್ಯಾದಿಗಳನ್ನೆಲ್ಲ ಅಡ್ಡ ಇಟ್ಟು ಪುರುಷರ ಲಂಪಟತ್ವವನ್ನು ಮುಚ್ಚಿಡಲು ಹವಣಿಸಿದ. ಎಲ್ಲ ಜಾಣಮರೆವಿನ ಮಲ್ಲರನ್ನು ತನ್ನ ತೆಕ್ಕೆಯೊಳಗೆ ಸುರಕ್ಷಿತವಾಗಿರಿಸುವ ಪುರುಷ ಕಟ್ಟಿದ ವಿಸ್ಮರಣೆಯ ಕತೆ ರುಚಿಸಲೇಬೇಕು. ಕಾವ್ಯಮೀಯುವುದೇ ತನಗೆ ಬೇಕಾದ ಸುಖೋಷ್ಣ ಕಲ್ಪನೆಯಲ್ಲಿ” ವೈದೇಹಿ

Vaidehi’s Birthday: ‘ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು’ ನುಡಿಗೂ ಬೆಳಕಿದೆ
ವೈದೇಹಿಯವರೊಂದಿಗೆ ಡಾ. ಗೀತಾ ವಸಂತ
Follow us on

ವೈದೇಹಿ | Vaidehi : ಸಾಹಿತ್ಯ ರಾಜಕಾರಣದೆಡೆಗೆ ಮಾತು ಹೊರಳಿದಾಗ ಅವರೆಂದದ್ದು ಹೀಗೆ “ಬರವಣಿಗೆಯೆಂಬುದು ಅತ್ಯಂತಿಕವಾಗಿ ನಮ್ಮನ್ನು ಎಲ್ಲ ಚೌಕಟ್ಟುಗಳಿಂದ ಬಿಡುಗಡೆಗೊಳಿಸುವ ಮಾರ್ಗ ಅಲ್ಲವಾ?”. “ಹೌದು. ಆದರೆ ಧರ್ಮ, ಜಾತಿ, ಲಿಂಗಗಳ ಚೌಕಟ್ಟಿನೊಳಗೆ ಬರಹಗಾರರನ್ನು ಎಳೆತಂದು ಅಳೆಯುವ ಇಂದಿನ ಸಂದರ್ಭವನ್ನು ದಾಟುವುದು ಹೇಗೆ? ಇವೆಲ್ಲವುಗಳ ಆಚೆ ಇರುವ ಸ್ತ್ರೀತ್ವದ ಅಂತಃಶಕ್ತಿಯ ಧಾರೆಗಳನ್ನು ಹುಡುಕಿಕೊಳ್ಳುವುದು ಹೇಗೆ? ಅವುಗಳನ್ನು ಬೆಸೆಯುವುದು ಹೇಗೆ?” ಕೊನೆಯಿಲ್ಲದ ಪ್ರಶ್ನೆಗಳಿದ್ದವು, ಆದರೆ ಉತ್ತರವೆಂಬುದು ಸಿದ್ಧಸೂತ್ರವಲ್ಲವಲ್ಲ! ಅಂಗುಲಂಗುಲ ನಡೆಯುತ್ತಲೇ ಉತ್ತರಗಳು ಸಿಗುತ್ತವೆ ಅಲ್ಲವಾ? “ನೋವು, ಅವಮಾನ, ಸಂದೇಹ, ಸಂಕಟಗಳನ್ನು ಅನುಭವಿಸಿಯೇ ಅದನ್ನು ದಾಟಬೇಕು. ಅನುಭವಗಳನ್ನೇ ನಿರಾಕರಿಸಿ ದಡಸೇರುವುದು ಸಾಧ್ಯವಾ?” ಇದು ಪಕ್ಪಗೊಂಡ ಜೀವವೊಂದು ಮಾತ್ರ ನುಡಿಯಬಲ್ಲ ನುಡಿ.

ಡಾ. ಗೀತಾ ವಸಂತ, ಕವಿ, ಲೇಖಕಿ

*

ಒಮ್ಮೆ ಮಣಿಪಾಲವನ್ನು ಹಾಯ್ದು ಬರುವಾಗ ಥಟ್ಟನೆ ವೈದೇಹಿ ನೆನಪಾದರು. ಮುಸ್ಸಂಜೆಯ ಬಣ್ಣಗಳಲ್ಲಿ ತೊಯ್ದು ಹೈವೇಯಿಂದ ಒಳಸರಿದು ಅವರ ಮನೆ ‘ಇರುವಂತಿಗೆ’ಯ ಮುಂದೆ ನಿಂತಾಗ ದೀಪಗಳು ಹೊತ್ತಿಕೊಂಡವು. ಹೆಣ್ಣಿನ ಒಳಜಗತ್ತನ್ನು ಕನ್ನಡ ಕಥಾಲೋಕದ ಜಗುಲಿಗೆ ತಂದು ನಿಲ್ಲಿಸಿದ ವೈದೇಹಿ ನಮ್ಮನ್ನು ಹೊಸಿಲೊಳಗೆ ಬರಮಾಡಿಕೊಂಡರು. ಮೆತ್ತಗಿನ ಕಾಟನ್ ಸೀರೆಯುಟ್ಟ ಪುಟ್ಟ ಜೀವ. ಚುರುಕು ಕಣ್ಣಲ್ಲಿ ಚೂಪು ನೋಟ… ಅಷ್ಟೇ ಖಚಿತ ಮಾತು. ಒಳಗೆ ಅಂತರಗಂಗೆಯಂಥ ಝುಳು ಝುಳು ಪ್ರೀತಿ… ಮಕ್ಕಳು, ಮನೆ, ವೃತ್ತಿ, ಬರವಣಿಗೆ ಹೀಗೆ ಎಲ್ಲ ಲೌಕಿಕ ಉಪದ್ವ್ಯಾಪಗಳ ಬಗ್ಗೆ ವಿಚಾರಿಸಿಕೊಂಡು, ಬೇಡಬೇಡವೆಂದರೂ ಸಿಹಿ ಅವಲಕ್ಕಿ ಮೊಸರು ತಿನಿಸಿ ಅಮ್ಮನ ವಾತ್ಸಲ್ಯವನ್ನು ನೆನಪಿಸಿದರು. 

ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚಹಚ್ಚಿದವರು ವೈದೇಹಿ. ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ. ಇವರೊಳಗೆ ಸ್ಪೋಟಕ್ಕೆ ಕಾದಿದ್ದ ಇಂಥಾ ಕಾವು ಇತ್ತಾ? ಎಂದು ನಿಬ್ಬೆರಗಾಗುವಂತೆ ಮಾಡಿದ ವೈದೇಹಿ, ಹೆಂಗಸರ ಮೂಕಸಂಕಟಗಳ ಲೋಕದ ಪರದೆ ಸರಿಸಿಬಿಟ್ಟರು. ಸದ್ದಿಲ್ಲದ ಚೀತ್ಕಾರವನ್ನು ಹೀಗೂ ಕೇಳಬಹುದೆಂದು ತಿಳಿಸಿದರು. ಇವೆಲ್ಲ ಕಟ್ಟಿದ ಕತೆಗಳ ಲೋಕವಲ್ಲ ಕಾಣುವ ಲೋಕದ ಕತೆಗಳಿವು. ಆ ಪಾತ್ರಗಳ ಭುಸುಗಡುವಿಕೆ, ನಿಟ್ಟುಸಿರು, ಒಳಗೊಳಗೇ ನುಂಗಿಕೊಂಡ ಬಿಕ್ಕುಗಳು ಎಲ್ಲವೂ ಕೇಳಿಸುವಂತೆ ಅವರು ಸಂವೇದನೆಯನ್ನೇ ಸೂಕ್ಷ್ಮಗೊಳಿಸಿದರು.

ಚಿಕ್ಕವಳಿದ್ದಾಗ ಅಪ್ಪ ಹೇಳುತ್ತಿದ್ದ ದುಷ್ಯಂತ ಶಕುಂತಲೆಯರ ಕತೆ ನನಗೆ ತುಂಬ ಇಷ್ಟವಾಗಿತ್ತು. ಆ ಉತ್ಕಟ ಪ್ರೇಮ, ಆ ಅಪರಿಮಿತ ದುಃಖ… ಇವುಗಳ ಎರಡು ತುದಿಯ ನಡುವೆ ದುಂಬಿ, ಶಾಪ, ಉಂಗುರ ನುಂಗಿದ ಮೀನು, ಮುದ್ರೆಯುಂಗುರ ನೋಡಿ ಮರುಕಳಿಸುವ ನೆನೆಪು ಇಂತಹ ಎಷ್ಟೆಲ್ಲ ರೋಮಾಂಚಕ ತಿರುವುಗಳು! ವೈದೇಹಿಯವರದೂ ಒಂದು ಕತೆಯಿದೆ. ‘ಶಕುಂತಲೆಯೊಂದಿಗೆ ಒಂದು ಅಪರಾಹ್ನ’ ಅಂತ. ಅದರಲ್ಲಿ ದುಷ್ಯ್ಟಂತನೆಂಬ ಪಳಗಿದ ಪ್ರಣಯಿಯ ನಿಪುಣತೆ ಬೇರೆಯೇ ಥರ ಕಾಣುತ್ತದೆ! ದುಷ್ಯಂತ ಶಕುಂತಲೆಯರನ್ನು ಅವರು ಹೀಗೆ ಹೀಗೆಂದು ಲೋಕಕ್ಕೆ ಕಾಣಿಸುವ ಕವಿಯಿದ್ದಾನಲ್ಲ! ಅವನು ಇನ್ನೂ ನಿಪುಣ! ದುಷ್ಯಂತನ ಮರೆವಿಗೆ ಶಾಪದ ನೆಪವೊಡ್ಡಿ ಅವನನ್ನು ಪುರುವಂಶದ ಸತ್ಯಸಂಧನಾಗಿಯೇ ಉಳಿಸಿಬಿಡುತ್ತಾನೆ. “ಕಲ್ಪನೆಯ ಕುದುರೆಗೆ ಎಂದೂ ಲಂಗುಲಗಾಮಿಲ್ಲ. ಕವಿ ಶಾಪ ಗೀಪ ಇತ್ಯಾದಿಗಳನ್ನೆಲ್ಲ ಅಡ್ಡ ಇಟ್ಟು ಪುರುಷರ ಲಂಪಟತ್ವವನ್ನು ಮುಚ್ಚಿಡಲು ಹವಣಿಸಿದ. ಎಲ್ಲ ಜಾಣಮರೆವಿನ ಮಲ್ಲರನ್ನು ತನ್ನ ತೆಕ್ಕೆಯೊಳಗೆ ಸುರಕ್ಷಿತವಾಗಿರಿಸುವ ಪುರುಷ ಕಟ್ಟಿದ ವಿಸ್ಮರಣೆಯ ಕತೆ ರುಚಿಸಲೇಬೇಕು. ಕಾವ್ಯಮೀಯುವುದೇ ತನಗೆ ಬೇಕಾದ ಸುಖೋಷ್ಣ ಕಲ್ಪನೆಯಲ್ಲಿ” ಎಂಬ ಕತೆಗಾರ್ತಿಯ ವ್ಯಂಗ್ಯ ಕಾವ್ಯ – ಪುರಾಣಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣವನ್ನು ಬಯಲು ಮಾಡುತ್ತದೆ. ಲಿಂಗರಾಜಕಾರಣದತ್ತ ಕೈ ತೋರುತ್ತದೆ.

ಇದನ್ನೂ ಓದಿ : Vaidehi’s Birthday: ‘ಬರಹಗಾರರು ವಿಷಯಗಳ ಸೂಕ್ಷ್ಮನಾಡಿ ಮುಟ್ಟಿ ಜೀವಕಲೆಯಾಗಿಸಬೇಕು’ ವೈದೇಹಿ

ವೈದೇಹಿಯವರ ಮನೆಯಲ್ಲಿ ಆ  ದಿನ ಡಾ. ಗೀತಾ ವಸಂತ

ಪ್ರಕೃತಿ-ಪುರುಷರ ಮಿಲನ ಎಷ್ಟು ಉತ್ಕಟವೋ ಚಂದವೋ ಅಷ್ಟೇ ಸಂಘರ್ಷಮಯ. ತಾದಾತ್ಮ್ಯ ಹಾಗೂ ಸಂಘರ್ಷದ ನೆರಳು ಬೆಳಕಿನ ಆಟ ಅಲ್ಲುಂಟು. ಏಕೆಂದರೆ ಅದೊಂದು ಪ್ರಾಕೃತಿಕ ಪ್ರೇರಣೆಯಾಗಿಯಷ್ಟೇ ಉಳಿಯದೆ ಅಲ್ಲೊಂದು ಅಧಿಕಾರ ಸಂಬಂಧ ಅರಿವಿಲ್ಲದಂತೆ ಸ್ಥಾಪನೆಯಾಗಿ ಬಿಡುತ್ತದೆ. ಪ್ರೇಮದಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುವ ಪ್ರಕೃತಿ ಹೆಣ್ಣಾದರೆ, ಅದನ್ನು ಗೆದ್ದನೆಂದು ಸಂಭ್ರಮಿಸುವಾತ ಪುರುಷ. ಒಂದೊಂದು ಗೆಲುವಿನ ಮದವೂ ಅವನನ್ನು ದಂಡಯಾತ್ರೆಗೆ ಪ್ರೇರೇಪಿಸುತ್ತದೆ ಸಾಮ್ರಾಜ್ಯ ವಿಸ್ತರಿಸುತ್ತ, ಅಂತಃಪುರಗಳನ್ನು ಗೆಲ್ಲುತ್ತ ನಡೆಯುವ ವ್ಯವಹಾರಸ್ಥ ಆತ. ‘ಕುಲಪ್ರತಿಷ್ಠೆಗೆ ಕಾರಣಳಾಗುವ ಈ ಶಕುಂತಲೆ ಮತ್ತು ಸಮುದ್ರವೇ ಒಡ್ಯಾಣವಾಗಿರುವ ವಸುಂಧರೆ ಇವರನ್ನು ಬಿಟ್ಟರೆ ಎನಗೆ ಪ್ರಿಯಕರವಾದದ್ದಿಲ್ಲ’ ಎಂದು ಪ್ರೇಮದ ಅಮಲಿನಲ್ಲಿ ಹೇಳಬಲ್ಲ ಈತ, ಅಲ್ಲಿಂದ ಹೊರನಡೆದಾಗ ಜಾಣಮರೆವಿನ ದೋಣಿಯಲ್ಲಿ ಜಾರಿಕೊಳ್ಳಬಲ್ಲ ಜಾರ! ಮರ, ಗಿಡ, ಬಳ್ಳಿಗಳ ಜೊತೆ ಸಂಭಾಷಿಸಬಲ್ಲ ಶುದ್ಧ ಪ್ರಕೃತಿಯೇ ಆದ ಶಕುಂತಲೆ ವಿರಹ, ನೋವು ಅವಮಾನಗಳಲ್ಲಿ ಉರಿಯುತ್ತ ಕೊನೆಯಲ್ಲಿ ಸುಟ್ಟ ಮಣ್ಣಿನ ಮಡಕೆಯಂತೆ ಗಟ್ಟಿಯಾಗಿ ಬಿಡುತ್ತಾಳೆ. “ಕಹಿ ನುಂಗಬೇಕು, ನೋವು ಕಳೆಯಬೇಕು, ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಬೇಕು, ಒಂದೇ ನೆಗೆತಕ್ಕಲ್ಲ ತೀಕ್ಷ್ಣ ತಮಗಳನ್ನು  ಅಂಗುಲಂಗುಲ ನಡೆದು ತೀರಿಸಿಯೇ” ಶಕುಂತಲೆಯ ಈ ಮಾತು ಅಂದು ವೈದೇಹಿಯವರ ಮಾತುಗಳಲ್ಲೂ ಪ್ರತಿಫಲಿಸುತ್ತಿತ್ತು.

ಸಾಹಿತ್ಯ ರಾಜಕಾರಣದೆಡೆಗೆ ಮಾತು ಹೊರಳಿದಾಗ ಅವರೆಂದದ್ದು ಹೀಗೆ “ಬರವಣಿಗೆಯೆಂಬುದು ಅತ್ಯಂತಿಕವಾಗಿ ನಮ್ಮನ್ನು ಎಲ್ಲ ಚೌಕಟ್ಟುಗಳಿಂದ ಬಿಡುಗಡೆಗೊಳಿಸುವ ಮಾರ್ಗ ಅಲ್ಲವಾ?”. “ಹೌದು. ಆದರೆ ಧರ್ಮ, ಜಾತಿ, ಲಿಂಗಗಳ ಚೌಕಟ್ಟಿನೊಳಗೆ ಬರಹಗಾರರನ್ನು ಎಳೆತಂದು ಅಳೆಯುವ ಇಂದಿನ ಸಂದರ್ಭವನ್ನು ದಾಟುವುದು ಹೇಗೆ? ಇವೆಲ್ಲವುಗಳ ಆಚೆ ಇರುವ ಸ್ತ್ರೀತ್ವದ ಅಂತಃಶಕ್ತಿಯ ಧಾರೆಗಳನ್ನು ಹುಡುಕಿಕೊಳ್ಳುವುದು ಹೇಗೆ? ಅವುಗಳನ್ನು ಬೆಸೆಯುವುದು ಹೇಗೆ?” ಕೊನೆಯಿಲ್ಲದ ಪ್ರಶ್ನೆಗಳಿದ್ದವು, ಆದರೆ ಉತ್ತರವೆಂಬುದು ಸಿದ್ಧಸೂತ್ರವಲ್ಲವಲ್ಲ! ಅಂಗುಲಂಗುಲ ನಡೆಯುತ್ತಲೇ ಉತ್ತರಗಳು ಸಿಗುತ್ತವೆ ಅಲ್ಲವಾ? “ನೋವು, ಅವಮಾನ, ಸಂದೇಹ, ಸಂಕಟಗಳನ್ನು ಅನುಭವಿಸಿಯೇ ಅದನ್ನು ದಾಟಬೇಕು. ಅನುಭವಗಳನ್ನೇ ನಿರಾಕರಿಸಿ ದಡಸೇರುವುದು ಸಾಧ್ಯವಾ?” ಇದು ಪಕ್ಪಗೊಂಡ ಜೀವವೊಂದು ಮಾತ್ರ ನುಡಿಯಬಲ್ಲ ನುಡಿ.

ಇದನ್ನೂ ಓದಿ : Vaidehi‘s Birthday: ವಾರದೊಳಗೆ ‘ಅಕ್ಕು’ವಿಗೆ ಕುಂದಾಪುರ ಭಾಷೆಯಲ್ಲಿ ವೈದೇಹಿ ಸಂಭಾಷಣೆ ರಚಿಸಿದರು

ಅಂದು ವೈದೇಹಿಯವರ ಮನೆಯಿಂದ ಹೊರಡುವಾಗ

ಶಕುಂತಲೆ ಶುದ್ಧ ಪ್ರಕೃತಿಯಾದರೆ, ದುಷ್ಟಂತ ವ್ಯವಸ್ಥೆಯಾಗಿ ಕಾಣತೊಡಗಿದ. ವ್ಯವಸ್ಥೆಯ ಅಧಿಕಾರದ ಭಾಷೆಗೆ ಸಂಯಮದ ಪಾಠ ಕಲಿಸುವವರು ಯಾರು? ಸಂಯಮದಿಂದ ಕಾಣುವುದನ್ನು, ಆಲಿಸುವುದನ್ನು ಮರೆತುಹೋದರೆ, ಅರಿವು ಮೂಡುವುದಾದರೂ ಹೇಗೆ? “ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು, ಬರೆಯಬೇಕು ಏನೆಲ್ಲವ ದಾಟುತ್ತ ದಾಟುತ್ತ ಗಟ್ಟಿಗೊಳ್ಳುವ ಅಂಥ ಸ್ಥಿತಿಯೊಂದು ಎಲ್ಲರಿಗೂ ಬರುತ್ತದೆ” ಅನ್ನುತ್ತ ಮಾತು ನಿಲ್ಲಿಸಿದರು ವೈದೇಹಿ. ನುಡಿಗೂ ಬೆಳಕಿರುತ್ತದೆ ಎಂಬ ಅಲ್ಲಮನ ಮಾತನ್ನು ನೆನಪಿಸಿಕೊಳ್ಳುತ್ತ ಉಡಿಯೊಳಗೆ ನುಡಿಗಳನ್ನು ತುಂಬಿಕೊಂಡು ಹೊಸಿಲು ದಾಟಿದೆವು. ಗೇಟಿನವರೆಗೂ ಬಂದು ಅವರು ಬೀಳ್ಕೊಟ್ಟರು ಮತ್ತೆ ಮುಂದಿನ ಪಯಣಕ್ಕಾಗಿ ಹೈವೇ ಸೇರಿದೆವಾದರೂ ವೈದೇಹಿಯವರ ಕಾಲುದಾರಿಯ ಕಥನಗಳು ಕಾಡತೊಡಗಿದವು.

ಇದನ್ನೂ ಓದಿ : Vaidehi‘s Birthday: ‘ಈ ಗೌರವ ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಬೇಕಾ ಇದೆಲ್ಲಾ, ಯೋಚಿಸು’ ಎಂದರು ವೈದೇಹಿ