Humanity : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲೇಖಕ, ಅನುವಾದಕ ದಾದಾಪೀರ್ ಜೈಮನ್ ಬರೆದ ಕವಿತೆ.
ಕಲ್ಲಂಗಡಿ ಪರಮಾತ್ಮ
ಕೆಂಪು ಸಮುದ್ರ ಪ್ರೊಟೋನೂ
ಕರಿಬೀಜಗಳು ಇಲೆಕ್ಟ್ರಾನೂ
ಕಲ್ಲಂಗಡಿ ಪರಮಾಣುವಿಗೆ ಮಾದರಿಯೂ
ಜೆ ಜೆ ಥಾಮ್ಸನ್ ಹೇಳಿದ
ದಾಹ ತೀರುತ್ತದೆ ಬನ್ನಿರೋ
ಬಾಯಾರಿಕೆ ತಣಿಸುತ್ತದೆ ಕೊಳ್ಳಿರೋ
ನಿಮ್ಮದೂ ನನ್ನದೂ
ಹೇಳುತ್ತಾನೆ
ರಣಬಿಸಿಲಲ್ಲಿ ಕೂತು
ಹಣ್ಣುಮಾರುವ ಆ ಬಡಸಾಬಿ
ನುಗ್ಗಿಕೇರಿಯ ಗುಡಿ ಹನುಮಪ್ಪನದು
ಹದಿನೈದು ವರುಷ ವ್ಯಾಪಾರ ಹಣ್ಣಿನದು
ಮನಸಿನ್ಯಾಗ ಕಾದಿದ್ದೆ ಬಂತು
ರಾಮನಿಗೆ ಶಬರಿಯ ಹಾಗೆ
‘ಎಂದಾದರೊಂದು ದಿನ ರಾಮ ಬೀದಿಗೆ ಬಂದು
ಹಣ್ಣು ತಿಂದು ನನ್ನ ಕಂಗಳು ತುಂಬಿ ಬಂದು!’
ಹುಡುಗರು ಬಂದರು ಅವರು
ದುರುಳರು ಬಂದರು ಅವರು
ಗಾಡಿಯ ಕಲ್ಲಂಗಡಿಯೆಲ್ಲಾ ಚೆಲ್ಲಾಪಿಲ್ಲಿ
ಬೀದಿಯ ತುಂಬೆಲ್ಲಾ ಕೆಂಪು ಸಮುದ್ರ
ನೀನೊಬ್ಬಳೇ ಅದೃಷ್ಟವಂತೆ ಶಬರಿ
ನಿನ್ನ ರಾಮನ ಹಾದಿಯಲ್ಲಿ ಇರಲಿಲ್ಲವ್ಯಾವ ಸೇನೆ
ಇರುಳಿನಲಿ ಹೋದಾನು ಪರಮಾತ್ಮ ಸಾಬಿಯ ಮನೆಗೆ
ಕಪಟಗಳ ಕೀಲಿಸಿಕೊಂಡು ಕೆಡವಿಕ್ಕಿದ ಕಿವಿಗಳೇ ಕೇಳಿ
ನಿಮಗೆ ನೂರು ಜನುಮದಲೆಲ್ಲು ಕೇಳಿದರೂ ರಾಮನಾಮ
ಸಿಗದೆ ಕೊರಗುವಿರಿ ಅನಾಥರಾಗಿ
ಕಾರಣವ ಕೇಳಿರಿ
ಪರಮಾಣುವಿನೊಳಗಿನ ಪರಮಾತ್ಮ ಪುರುಷೋತ್ತಮ
ಎದೆಯ ಭಕ್ತಿಗೆ ಮಾತ್ರ ಒಲಿಯುವ ಶಬ್ಧಾವತಾರಿ
*
ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ : tv9kannadadigital@gmail.com
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಸುಗಂಧ ಸೂಸುವ ನದಿಯಂತೆ, ಮೃತನದಿಯನ್ನು ಸೇರಲಿಹವು
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’