Literature: ನೆರೆನಾಡ ನುಡಿಯೊಳಗಾಡಿ; ಒಣಗಿದೆಲೆಗಳ ಮೇಲೆ ಸಾವಕಾಶ ಅಡಿಯಿರಿಸಿ, ಎಂದೋ ಒಮ್ಮೆ ನೆರಳು ಕೊಟ್ಟಿದ್ದವಿವು

|

Updated on: Apr 08, 2022 | 10:23 AM

Vijaya Brahmankar’s Marathi Short Story : ಈ ವೃದ್ದಾಶ್ರಮ ಮುಚ್ಚಿಹೋದರೆ? ಹೊಸ ಪೀಳಿಗೆಯ ಮೇಲೆ ಅವರಿಗೆ ಕೋಪವೂ ಬಂದಿತ್ತು; ನಾಯಿಬೆಕ್ಕುಗಳನ್ನು ಸಾಕಿ ಪ್ರೀತಿ ತೋರಿಸುತ್ತಾರೆ. ಆದರೆ ತಾವು ಯಾವ ಮೊದಲ ಮೆಟ್ಟಿಲಿನಿಂದ ಉನ್ನತಿ ಹೊಂದಿರುತ್ತಾರೊ ಅದೇ ಮೆಟ್ಟಿಲನ್ನೇ ಮರೆತುಬಿಡುತ್ತಾರೆ!

Literature: ನೆರೆನಾಡ ನುಡಿಯೊಳಗಾಡಿ; ಒಣಗಿದೆಲೆಗಳ ಮೇಲೆ ಸಾವಕಾಶ ಅಡಿಯಿರಿಸಿ, ಎಂದೋ ಒಮ್ಮೆ ನೆರಳು ಕೊಟ್ಟಿದ್ದವಿವು
ಮರಾಠಿ ಲೇಖಕಿ ವಿಜಯಾ ಬ್ರಾಹ್ಮಣಕರ ಮತ್ತು ಅನುವಾದಕಿ ಮಾಲತಿ ಮುದಕವಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನಂದಾತಾಯಿಯು ಕುರ್ಚಿಯಿಂದ ಎದ್ದರು. ದಿನಪತ್ರಿಕೆಯನ್ನು ಮಡಿಚಿ ಎದುರಿಗಿನ ಟೇಬಲ್ಲಿನ ಮೇಲೆ ಇಟ್ಟು ಹೊರಗೆ ಬಂದರು. ಅವರ ಗಮನವು ಗೇಟಿನ ಕಡೆಗೆ ಹೋಗಿತ್ತು. ಏಕೆಂದರೆ ಒಂದು ಮಾರುತಿ ಝೆನ್ ಕಾರು ಗೇಟಿನೆದುರು ಬಂದು ನಿಂತಿತು. ಕಣ್ಣುಗಳ ಮೇಲಿನ ಚಶ್ಮಾವನ್ನು ಸರಿಪಡಿಸಿಕೊಳ್ಳುತ್ತ ನಂದಾತಾಯಿ ಗೇಟಿನೆಡೆಗೆ ನೋಡಿದ್ದರು. ಡ್ರೈವರ್ ಕಾರಿನ ಬಾಗಿಲನ್ನು ತೆರೆದ. ಅರತ್ತರ ಆಸುಪಾಸಿನ ಮಹಿಳೆ ಇಳಿದರು. ಆನಂತರ ಒಬ್ಬ ವಯಸ್ಸಾದ ಮಹಿಳೆ. ಅವರ ಹಿಂದೆಯೇ ಒಬ್ಬ ತರುಣಿ, ಕೈಯಲ್ಲಿ ಪುಟ್ಟಮಗುವನ್ನು ಎತ್ತಿಕೊಂಡು ಇಳಿದಳು. ಮಧ್ಯವಯಸ್ಸಿನ ಆ ಮಹಿಳೆಯ ಒಂದು ಕೈಯಲ್ಲಿ ಒಂದು ಪುಟ್ಟ ಬ್ಯಾಗು ಇತ್ತು. ಜೊತೆಗೇ ಇನ್ನೊಂದು ಕೈಯಿಂದ ಅವಳು ಆ ವಯೋವೃದ್ಧ ಅಜ್ಜಿಯ ಕೈಯನ್ನು ಹಿಡಿದುಕೊಂಡು ಬಾಗಿಲಿನತ್ತಲೇ ಬರುತ್ತಲಿದ್ದಳು. ಹಿಂದೆಯೇ ಆ ತರುಣಿ. ಅವರು ಥಟ್ಟನೆ ಅಲ್ಲಿಯೇ ನಿಂತಿದ್ದರು. ಅಲ್ಲಿ ಯಾರನ್ನು ಕಾಣಬೇಕೆಂಬುದೇ ಅವರಿಗೆ ತಿಳಿದಿರಲಿಲ್ಲ. ಆಗಲೇ ನಂದಾತಾಯಿ ಅವರೆದುರು ಬಂದಿದ್ದರು.

 

ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ

(ಭಾಗ 2)

“ಯಾರು ಬೇಕಾಗಿತ್ತು ನಿಮಗೆ?”
“ನಮಗ ಇಲ್ಲಿಯ ಮ್ಯಾನೇಜರ್ ಅವರನ ಭೆಟ್ಟಿ ಆಗಬೇಕಾಗಿತ್ತು.. ”
“ನಾನೇ ಇಲ್ಲಿಯ ಉಸ್ತುವಾರಿ ನೋಡಿಕೋತೇನಿ.. ಏನು ಕೆಲಸ ಇತ್ತು?”
“ಹೌದೇ? ನಮ್ಮ ಅವ್ವನ್ನ ಇಲ್ಲಿ ಇಡಬೇಕಾಗಿತ್ತು..”

ನಿಜಕ್ಕೂ ಈ ಮಾತನ್ನು ಹೇಳುವಾಗ ಆ ಮಹಿಳೆಗೆ ನೋವಾಗುತ್ತಲಿತ್ತು ಎಂಬುದು ಅವಳ ಮಾತುಗಳಲ್ಲಿ ವ್ಯಕ್ತವಾಗುತ್ತಲಿತ್ತು. ಅಂದರೆ ಅಜ್ಜಿಯನ್ನು ಇಲ್ಲಿಯ ವೃದ್ಧಾಶ್ರಮದಲ್ಲಿ ಇರಿಸಲು ಬಂದಿದ್ದಾರೆ ಎಂಬಂತಾಯಿತು ಎಂಬ ಆಲೋಚನೆಯು ನಂದಾತಾಯಿಯ ಮನಸ್ಸಿನಲ್ಲಿ ಬಂದಿತ್ತು.

“ರ‍್ರಿ.. ಆಫೀಸಿನಲ್ಲಿ ಕೂಡ್ರೋಣ..”

ನಂದಾತಾಯಿಯ ಹಿಂದೆಯೇ ಎಲ್ಲರೂ ಆಫೀಸಿನಲ್ಲಿ ಬಂದಿದ್ದರು. ಟೇಬಲ್ಲಿಗೆ ಹೊಂದಿಕೊಂಡಂತಿರುವ ಒಂದು ಬದಿಯ ಕುರ್ಚಿಯಲ್ಲಿ ನಂದಾತಾಯಿ ಕುಳಿತಿದ್ದರು. ಇನ್ನೊಂದು ಪಕ್ಕದಲ್ಲಿಯ ಕುರ್ಚಿಯ ಮೇಲೆ ಅಜ್ಜಿ ಹಾಗೂ ಆ ಮಹಿಳೆಯು ಕುಳಿತಿದ್ದರು. ಗೋಡೆಗೆ ಆನಿಸಿ ಇಟ್ಟಿದ್ದ ಬೆಂಚಿನ ಮೇಲೆ ಆ ತರುಣಿಯು ಕುಳಿತಿದ್ದಳು. ಕೈಯಲ್ಲಿಯ ಮಗುವಿನ ಬ್ಯಾಗನ್ನು ಅವಳು ಅಲ್ಲಿಯೇ ತನ್ನ ಪಕ್ಕದಲ್ಲಿ ಇರಿಸಿಕೊಂಡಿದ್ದಳು.

“ಹೂಂ.. ಏನು ವಿಷಯ.. ಹೇಳಬಹುದು..”

ನಂದಾತಾಯಿಯು ಹೇಳಿದ್ದರು. ಜೊತೆಗೇ ಛೋಟುವನ್ನು ಕರೆದು ನೀರು ತರಲು ಹೇಳಿದ್ದರು. ಛೋಟು ಒಂದು ಟ್ರೇಯಲ್ಲಿ ನೀರಿನ ಗ್ಲಾಸುಗಳನ್ನು ಇರಿಸಿಕೊಂಡು ಬಂದಿದ್ದನು. ಎಲ್ಲರೂ ಗ್ಲಾಸುಗಳನ್ನು ಎತ್ತಿಕೊಂಡಿದ್ದರು. ಒಂದೆರಡು ಗುಟುಕು ನೀರನ್ನು ಕುಡಿದ ಅಜ್ಜಿಯು ಗ್ಲಾಸನ್ನು ಟೇಬಲ್ಲಿನ ಮೇಲಿನ ಟ್ರೇಯಲ್ಲಿ ಇರಿಸಿ, ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕರವಸ್ತ್ರದಿಂದ ಬಾಯಿಯನ್ನು ಒರೆಸಿಕೊಂಡಿದ್ದರು. ನಂದಾತಾಯಿಯು ಸೂಕ್ಷ್ಮವಾಗಿ ಅಜ್ಜಿಯನ್ನು ದೃಷ್ಟಿಸಿದ್ದರು. ನಾಜೂಕಾದ ತೆಳ್ಳಗಿನ ಶರೀರ, ವಿಶಾಲವಾದ ನೀಲಿ ಕಣ್ಣುಗಳು, ನಿರಿಗೆಗಟ್ಟಿದ ಮುಖ, ಹಿಂಬದಿಯ ಕುತ್ತಿಗೆಯ ಮೇಲೆ ಇದ್ದಂಥ ಪುಟ್ಟ ನಿಂಬೆ ಗಾತ್ರದ ತುರುಬು, ಕಿವಿಯಲ್ಲಿ ಸುಂದರವಾದ ಮುತ್ತಿನ ಓಲೆಗಳು. ಕೈಗಳಲ್ಲಿ ಒಂದೊಂದು ಬಂಗಾರದ ಬಳೆಗಳು. ಬಿಳಿಯ ಸೀರೆ, ಬಿಳಿಯ ಕುಪ್ಪುಸಗಳಲ್ಲಿ ಈ ವಯಸ್ಸಿನಲ್ಲಿಯೂ ಆಕೆ ಸುಂದರವಾಗಿಯೇ ಕಾಣುತ್ತಿದ್ದರು.

ಅವರು ಈಗ ಆ ಮಧ್ಯವಯಸ್ಸಿನ ಮಹಿಳೆಯತ್ತ ದೃಷ್ಟಿ ಹರಿಸಿದ್ದರು. ಕಪ್ಪು ಹಾಗೂ ನಡುನಡುವೆ ಬೆಳ್ಳಿ ಬಣ್ಣದ ಗುಂಗುರುಗೂದಲಿನ ದಪ್ಪವಾದ ಹೆರಳು. ಅವರ ಕೈಗಳು ಹಾಗೂ ಕೊರಳು ಬರಿದಾಗಿದ್ದವು. ಆದರೆ ಕೊರಳಿನ ಮೇಲೆ ಇಳಿಬಿದ್ದಿರುವ ಆ ಹೆರಳು ಒಂದು ಶೋಭೆಯನ್ನೇ ತಂದಿತ್ತು. ವಿಶಾಲವಾದ ಆ ಕಣ್ಣುಗಳು ಅಜ್ಜಿಯಂತೆಯೇ ನೀಲಿ ಬಣ್ಣದವು. ಯಾವುದೋ ಅರಿಯದ ಆಳವಾದ ವೇದನೆ ಅಲ್ಲಿತ್ತು. ನಂದಾತಾಯಿ ಮನಸ್ಸಿನಲ್ಲಿಯೇ ‘ಇದರ ಅರ್ಥ ಈ ಇಬ್ಬರೂ ತಾಯಿ-ಮಗಳು. ಈ ಅಜ್ಜಿಯನ್ನು ಇಲ್ಲಿ ಇರಿಸುವುದಕ್ಕೆಂದೇ ಬಂದಿರುವವರು’ ಎಂದುಕೊಂಡರು. ಈಗಿನ ಜನರಿಗೆ ವಯೋವೃದ್ಧರು ಮನೆಯಲ್ಲಿರುವುದು ಬೇಕಾಗಿಲ್ಲ. ಎಲ್ಲರೂ ಸ್ವಾತಂತ್ರ್ಯವನ್ನೇ ಬಯಸುವವರು. ವೃದ್ಧರ ನೆನಪುಗಳನ್ನೇ ಹೊರಕ್ಕೆ ಎಸೆಯಬಯಸುತ್ತಾರೆ. ಆದರೆ ಈ ಮಹಿಳೆಯು ಅಜ್ಜಿಯ ಸೊಸೆಯೋ? ಮಗಳೋ? ಮುಖವಂತೂ ಅಜ್ಜಿಯ ಹಾಗೆಯೇ ಇದೆ. ಈಗಿನ ಕಾಲದಲ್ಲಿ ಸೊಸೆಯರಷ್ಟೇ ಏಕೆ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೂ ನಂಬಲಿಕ್ಕೆ ಸಾಧ್ಯವಿಲ್ಲ. ತಂದೆ-ತಾಯಿಯರಿಗೆ ಮಕ್ಕಳು ಅದೆಷ್ಟು ಪ್ರಿಯರಾಗಿರುತ್ತಾರೆ! ಆದರೆ ಮಕ್ಕಳಿಗೆ! ಮಕ್ಕಳು ದೊಡ್ಡವರಾಗುತ್ತಿದ್ದಂತೆ ಸಂಬಂಧದ ಮೌಲ್ಯಗಳೇ ಬದಲಾಗಿಬಿಡುತ್ತವಲ್ಲ!

“ನೀವು ಅಜ್ಜಿಗೆ ಏನಾಗಬೇಕು?”
ಆ ಮಧ್ಯವಯಸ್ಸಿನ ಮಹಿಳೆಯತ್ತ ನೋಡುತ್ತ ನಂದಾತಾಯಿಯು ಕೇಳಿದರು.

“ನಾನು ಇವರ ಮಗಳು. ಇವರು ನನ್ನ ತಾಯಿ.. ವಯಸ್ಸಾಗಿದೆ.. ”
“ಇಲ್ಲಿ ಯಾಕೆ ಕರಕೊಂಡಬಂದೀರಿ? ಇಲ್ಲಿ ಇಡಲಿಕ್ಕೇ ಅಲ್ಲ?”
“ಹೌದು..”

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಪ್ರಾಣಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ

ಆ ಮಹಿಳೆಯು ಮುಖವನ್ನು ಕೆಳಗೆ ಹಾಕಿ ಹೇಳಿದ್ದಳು. ಅವಳು ಮುಖವೆತ್ತಿ ನೋಡಿದಾಗ ಅವಳಿಗೆ ಗೋಡೆಯ ಮೇಲೆ ಬರೆದಂಥ ಬರೆಹವು ಗೋಚರಿಸಿತ್ತು.

“ಒಣಗಿದ ಎಲೆಗಳ ಮೇಲೆ ಸಾವಕಾಶವಾಗಿ ಅಡಿಯಿರಿಸಿರಿ. ಏಕೆಂದರೆ ಇವೇ ಎಲೆಗಳು ಎಂದೋ ಒಮ್ಮೆ ನಿಮಗೆ ನೆರಳು ಕೊಟ್ಟಿದ್ದವು..”

ಅದನ್ನು ಓದಿದ ಆ ಮಹಿಳೆಯು ಒಂದಿಷ್ಟು ಗಲಿಬಿಲಿಗೊಂಡಿದ್ದಂತೆನ್ನಿಸಿತ್ತು.

“ಅಜ್ಜೀ, ನೀವು ಇಲ್ಲೆ ಇರತೀರೀ?”
ಅಜ್ಜಿಯತ್ತ ನೋಡುತ್ತ ನಂದಾತಾಯಿಯು ಕೇಳಿದ್ದರು.

“ಹೂಂ.. ಇರತೇನಿ.. ಮೂರು ತಿಂಗಳ ಮಟ್ಟಿಗಿನ ಪ್ರಶ್ನೀ!”
ಅಜ್ಜಿಯು ಹೇಳಿದ್ದರು. ಆಗಲು ಆ ಮಹಿಳೆಯು ಕರವಸ್ತ್ರದಿಂದ ಕಣ್ಣುಗಳನ್ನು ಒರೆಸಿಕೊಂಡಿದ್ದರು.
ನಂತರ ಆ ಯುವತಿಯೇ ಮಾತನಾಡಿದ್ದಳು.

“ಮಾವಶೀ.. ನಾ ನಿಮಗ ಮಾವಶಿ ಅಂತ ಕರದರ ನಡೀತದಲಾ?”

“ಬೇಕಾಧಂಗ ಕರೀಯವಾ..”

“ಮಾವಶೀ, ಇವರು ನನ್ನ ಅಜ್ಜಿ ಮೀರಾ. ವಯಸ್ಸು ತೊಂಬತ್ತು! ಅಜ್ಜಿ ಇವತ್ತಿಗೂ ಗಟ್ಟಿಮುಟ್ಟಾಗಿದ್ದಾಳ. ಯಾವುದೇ ಔಷಧಾ ಅಕೀ ಇವತ್ತಿಗೂ ತೊಗೋಳಂಗಿಲ್ಲಾ. ಇಕೀ ನಮ್ಮ ಅವ್ವಾ.. ಮನಸ್ವಿನಿ. ನಾನು ಮಾನಸಿ. ಇಂವಾ ನನ್ನ ಮಗಾ ಮಾಣಿಕ.” ಮಗುವಿನತ್ತ ನೋಡುತ್ತ ಮಾನಸಿ ಹೇಳಿದ್ದಳು.

“ಮಾಣಿಕ ಛಂದದ ಹೆಸರು..”

“ಅಜ್ಜೀನೇ ಇಟ್ಟ ಹೆಸರು. ಅಜ್ಜಂದೂ ಇದೇ ಹೆಸರಿತ್ತಂತ!”

“ಓ.. ಹೌದೇ? ಭಾಳ ಛೊಲೋ ಅದ.”

“ಮಾವಶೀ, ನಮ್ಮ ಪಾಪೂನ ತಂದೆ ಹೆಸರೂ ಮ ದಿಂದಲೇ ಶುರುವಾಗ್ತದೆ .. ಇದೂ ಒಂದು ಯೋಗಾಯೋಗಾನೇ ಅಲ್ಲೇನ್ರೀ?”
ಮಾನಸಿ ಮಾತನಾಡುತ್ತಲಿದ್ದಳು. ಮನಸ್ಸಿನಿ ಅಲ್ಲಿದ್ದೂ ಇಲ್ಲದವಳಂತೆ ಕುಳಿತಿದ್ದಳು. ಅವಳ ಮನಸ್ಸಿನಲ್ಲಿ ವಿಚಾರಗಳ ಸರಣಿ ಅಡೆತಡೆಯಿಲ್ಲದೆ ಸಾಗಿತ್ತು. ಜೀವನದ ವಿವಿಧ ಮಜಲುಗಳು ಕಣ್ಣೆದುರು ಬಂದಿದ್ದವು. ಪುಟ್ಟ ಮಾನಸಿ ನೆನಪಿಗೆ ಬಂದಿದ್ದಳು. ತಂದೆಯ ಮುದ್ದಿನ ಮಗಳು. ಮಾನಸಿಗೆ, “ಮಗೂ, ನೀನು ನನಗೆ ಮಗಳಲ್ಲಾ.. ಮಗಾ!” ಎಂದು ಹೇಳುತ್ತಿದ್ದರು. ಮಾನಸಿಗೆ ಅವರು ಎಂದೂ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ. ನಾನೋ ಏಕಾಂಗಿ. ನನಗೆ ತವರು ಇರಲಿಲ್ಲವಲ್ಲ.. ಆದರೆ ವಾಸ್ತವವೆಂದರೆ ನನ್ನ ಅವ್ವ ನನ್ನ ಜೊತೆಗೇ ಇದ್ದಳು!”
ಮೀರಾ ಅಜ್ಜಿಯು ಶಾಂತವಾಗಿ ಕುಳಿತಿದ್ದರು. ಅವರಿಗೆ ತಮ್ಮ ಕೊನೆಯ ದಿನಗಳು ಈ ರೀತಿ ವೃದ್ಧಾಶ್ರಮದ ಬಾಗಿಲಲ್ಲಿ ಕಳೆಯಲಿವೆ ಎಂಬ ಅರಿವೂ ಇರಲಿಲ್ಲ. ದೈವವು ಅವಳ ಜೀವನದಲ್ಲಿ ಅನೇಕ ಅವತಾರಗಳನ್ನು ತೋರಿಸಿತ್ತು. ಈಗ ಜೀವನದ ಇನ್ನೊಂದು ಬಣ್ಣವನ್ನು ತೋರಿಸಲಿತ್ತು.. ತನ್ನ ಜೀವನದ ಸಂಜೆಯು ಚೆನ್ನಾಗಿ ಕಳೆದೀತೆ? ಎಂಬ ಪ್ರಶ್ನೆಯು ಅಜ್ಜಿಯ ಮನದಲ್ಲಿ ಎದ್ದಿತ್ತು.

“ಮಾನಸಿ, ಕೂಸು ಅಳಲಿಕ್ಕತ್ತೇದ ನೋಡು.. ಅದನ್ನ ಎತ್ತಿಕೋ.”
“ಹೂಂ.. ಅಜ್ಜೀ..”
“ಹಾಲು ಕೊಡೂ..”

ಮಾನಸಿ ಬ್ಯಾಗಿನಲ್ಲಿಯ ಹಾಲಿನ ಬಾಟಲಿಯನ್ನು ತೆಗೆದು ನಿಪ್ಪಲನ್ನು ಮಗುವಿನ ಬಾಯಲ್ಲಿ ಇರಿಸಿದ್ದಳು.

“ಮಾನಸಿ, ಕೂಸಿನ್ನ ಎತ್ತಿಕೋ.. ಎತ್ತಿಕೊಂಡು ಹಾಲು ಕುಡಸಬೇಕು. ಅಂದ್ರ ಅದಕ್ಕ ಗಂಟಲಕ್ಕ ಹತ್ತಂಗಿಲ್ಲಾ. ಗೋಣು ಸ್ವಲ್ಪ ಎತ್ತರದಾಗಿಡೂ.”
“ಅಜ್ಜಿಗೆ ಕೂಸಿನ ಮ್ಯಾಲೆ ಭಾಳ ಪ್ರೀತಿ ಅಂತ ಅನಸತದ.”

ಮಾಣಿಕನ ಕಡೆಗೆ ಅತ್ಯಂತ ಸೂಕ್ಷö್ಮವಾದ ದೃಷ್ಟಿಯನ್ನು ಇರಿಸಿಕೊಂಡಿದ್ದ ಅಜ್ಜಿಯತ್ತ ನೋಡುತ್ತ ನಂದಾತಾಯಿ ಎಂದಿದ್ದರು.

“ಮಾವಶಿ, ಮೂರು ತಲೆಮಾರುಗಳ ನಂತರ ಹುಟ್ಟಿದಂಥ ಮಗಾ ಅಲ್ಲೇನ್ರಿ! ಅದಕ್ಕೇ ಒಂದಿಷ್ಟು ಹೆಚ್ಚೇ ಎನಿಸೋವಷ್ಟು ಪ್ರೀತಿ.. ಹುಡುಗಿ ಆಗಿದ್ರೂ ಸುದ್ಧಾ ಅಷ್ಟೇ ಪ್ರೀತಿ ಇರತಿತ್ತು ಬಿಡ್ರಿ..”
“ಟೊಪ್ಪಿಗೀ ಛಂದದ..”
“ಮಾವಶೀ, ಇದು ನಂದೇ ಟೊಪಿಗಿ.. ನಾ ಸಣ್ಣಾಕಿದ್ದಾಗಿನದೇ ಈ ಟೊಪಿಗಿ. ಅಜ್ಜಿಯೇ ಹೊಲಿದಿದ್ದಳಂತೆ ಇದನ್ನು. ನಮ್ಮ ಅಜ್ಜಿ ಟೀಚರಾಗಿದ್ಳು. ಅಜ್ಜಾ, ಅವ್ವ ಅಗದೀ ಸಣ್ಣಾಕಿದ್ದಾಗನ ತೀರಿಕೊಂಡಿದ್ರಂತ. ಅಜ್ಜಿ ಅವ್ವಗ ಏನೂ ಕಡಿಮೀ ಮಾಡಲಿಲ್ಲಾ. ಈಗ ನೀವು ಕೇಳಬಹುದು, ಮಾನಸಿ, ಇದೆಲ್ಲಾ ನಿನಗ ಹೆಂಗ ಗೊತ್ತಾತು ಅಂತ. ಎಲ್ಲಾ ಅಜ್ಜೀ, ಅವ್ವಾ ಹೇಳಿದ್ರು.”

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com 

ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಮಾಲತಿ ಮುದಕವಿ ಅನುವಾದಿಸಿದ ವಿಜಯಾ ಬ್ರಾಹ್ಮಣಕರ ಕಥೆ ‘ಋಣಾನುಬಂಧ’

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

 

Published On - 10:22 am, Fri, 8 April 22