Literature : ನೆರೆನಾಡ ನುಡಿಯೊಳಗಾಡಿ: ಹರುಕಿ ಮುರಾಕಮಿ ಬರೆದ ಕಥೆ

|

Updated on: Feb 25, 2022 | 1:12 PM

Haruki Murakami : ಅವಳು ತನ್ನ ಮೊಣಕೈಯಿಂದ ಅವನನ್ನು ತಿವಿದು ‘ನೀನು ತುಂಬಾ ಸೂಕ್ಷ್ಮ. ಆದರೆ ಚಿಂತೆ ಬೇಡ, ನಾವು ಅಲ್ಲಿಂದ ಇಲ್ಲಿಯವರೆಗೆ ಹಾರಿಕೊಂಡು ಬಂದಿದ್ದೇವೆ, ಇನ್ನೊಂದಿಷ್ಟು ಸಾಹಸ ಮಾಡೇ ಬಿಡೋಣ’ ಎಂದಳು.

Literature : ನೆರೆನಾಡ ನುಡಿಯೊಳಗಾಡಿ: ಹರುಕಿ ಮುರಾಕಮಿ ಬರೆದ ಕಥೆ
ಹರುಕಿ ಮುರಕಾಮಿ ಮತ್ತು ರವಿಕುಮಾರ ಹಂಪಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಜಪಾನಿ ಬರಹಗಾರ ಹರುಕಿ ಮುರಾಕಮಿ ಹುಟ್ಟಿದ್ದು ಜನವರಿ 12, 1949. ಏಳು ವರ್ಷಗಳ ಕಾಲ ಸಣ್ಣ ಜಾಝ್ ಬಾರ್‌ನ ಮಾಲೀಕರಾಗಿ ಕೆಲಸ ಮಾಡಿದ ನಂತರ ತಮ್ಮ ಮೊದಲ ಕಾದಂಬರಿ ‘ಹಿಯರ್ ದಿ ವಿಂಡ್ ಸಿಂಗ್’ (1979) ಪ್ರಕಟಿಸಿದರು. ಒಬ್ಬ ವೃತ್ತಿಪರ ಬರಹಗಾರನ ಮಿತಿ ಮತ್ತು ಸಾಧ್ಯತೆಯನ್ನು ತೋರಿಸಿಕೊಡುವ ನಮ್ಮ ಕಾಲದ ಅತ್ಯುತ್ತಮ ನಿದರ್ಶನವೆಂದರೆ ಮುರಾಕಮಿ. ‘ಮಿಷಿಮಾ’ನಂತಹ ಮಾರ್ಗ ಪ್ರವರ್ತಕನ ಧ್ವನಿ ಇವರದಲ್ಲದಿದ್ದರೂ, ತನ್ನ ಕಾಲದ ಓದುಗ ಸ್ನೇಹಿ ಬರಹಗಾರರಾಗಿ ಹೊರಹೊಮ್ಮಿದ್ದಾರೆ. ಮಾರ್ಕ್ವೆಜ್​ನಂತೆ ಈತನೂ ಸಹಿತ ‘ಕಾಫ್ಕಾ’ನ ಮತ್ತೊಬ್ಬ ಮಾನಸಪುತ್ರ. ‘ಅನ್ಯ ಮನಸ್ಕತೆ ಹಾಗೂ ಒಬ್ಬಂಟಿತನವೇ’ ಈತನ‌ ಸಾಹಿತ್ಯದ ಯಾವತ್ತೂ ವಸ್ತು. ಇವರ ಕೃತಿಗಳು 50 ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ. ಪ್ರಸ್ತುತ ಕಥೆಯನ್ನು ‘ಬ್ಲೈಂಡ್ ವಿಲೋ ಸ್ಲೀಪಿಂಗ್ ವುಮನ್’ ಕಥಾ ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಕಥೆ : ಕ್ರ್ಯಾಬ್ಸ್​ | ಮೂಲ : ಹರುಕಿ ಮುರಾಕಾಮಿ | ಕನ್ನಡಕ್ಕೆ : ರವಿಕುಮಾರ ಹಂಪಿ

*

(ಭಾಗ 1)

ಸಿಂಗಾಪೂರ್‌ಗೆ ಹನಿಮೂನಿಗೆಂದು ಬಂದ ಆ ಯುವಜೋಡಿ ಸಂಜೆಹೊತ್ತು ಬೀಚಿನಲ್ಲಿ ತುಂಟಾಟ ಆಡುತ್ತ ಆಡುತ್ತ ಪಕ್ಕದ ಕಿರುಓಣಿ ಪ್ರವೇಶಿಸಿ, ಅಕಸ್ಮಾತಾಗಿ ಆ ಪುಟ್ಟ ರೆಸ್ಟೊರೆಂಟ್​ನ ಒಳಗೇ ಬಂದುಬಿಟ್ಟಿತು. ಸಣ್ಣದಾಗಿದ್ದ ಆ ರೆಸ್ಟೊರೆಂಟ್, ಗಿಡ್ಡ ಪಾಮ್ ಗಿಡಗಳನ್ನು ಮತ್ತು ಐದು ಕಟ್ಟಿಗೆಯ ಟೇಬಲ್‌ಗಳನ್ನು ಹೊಂದಿದ್ದು, ಸೊಂಟದೆತ್ತರದ ಕಂಪೌಂಡ್ ಗೋಡೆಯ ಮಧ್ಯದಲ್ಲಿತ್ತು. ಆ ‘ಸ್ಟಕ್ಕೋ’ ರೆಸ್ಟೊರೆಂಟ್​ನ ಮುಖ್ಯ ಕಟ್ಟಡಕ್ಕೆ ಗಾಢಗುಲಾಬಿ ಬಣ್ಣ ಬಳಿಯಲಾಗಿತ್ತು. ಪ್ರತಿಯೊಂದು ಟೇಬಲ್‌ಗಳು ಬಣ್ಣ ಮಾಸಿದ ಬಿಸಿಲುಕೊಡೆಗಳ ಆಶ್ರಯದಲ್ಲಿದ್ದವು. ಇನ್ನೂ ಸಂಜೆಯಾಗಿರಲಿಲ್ಲವಾದ್ದರಿಂದ ಅಲ್ಲಿನ್ನೂ ಗಿರಾಕಿಗಳಿರಲಿಲ್ಲ. ಚೀನಿಗಳಂತೆ ಕಾಣುತ್ತಿರುವ ಗಿಡ್ಡ ಕೂದಲಿನ ಇಬ್ಬರು ಮುದುಕರು ಬಗೆಬಗೆಯ ಕುರುಕಲುಗಳನ್ನು ತಿನ್ನುತ್ತ, ಬಿಯರ್ ಹೀರುತ್ತ ಎದುರುಬದುರು ಮೌನವಾಗಿ ಕುಳಿತಿದ್ದರು. ಅವರ ಪಕ್ಕದಲ್ಲಿ ಕಪ್ಪಾದ ಒಂದು ದೊಡ್ಡ ನಾಯಿ ಆಯಾಸಗೊಂಡಂತೆ ಅರ್ಧ ಕಣ್ಣು ಬಿಟ್ಟುಕೊಂಡು ಮಲಗಿತ್ತು. ಅಡುಗೆಮನೆಯ ಕಿಟಕಿಯಿಂದ ಭೂತ ಬರುತ್ತಿರುವಂತೆ ದಟ್ಟ ಹೊಗೆ ಹೊರಗೆ ಬರುತ್ತಿತ್ತಲ್ಲದೆ ಎಂಥವರನ್ನೂ ತನ್ನೆಡೆಗೆ ಸೆಳೆವ ಘಮವೂ ಅದಕ್ಕಿತ್ತು.  ಒಳಗೆ, ಅಡುಗೆಯವರು ಜೋರಾಗಿ ನಗುತ್ತ ಅಡುಗೆ ಪಾತ್ರೆಗಳ ಸದ್ದು ಮಾಡುತ್ತ ಅಡುಗೆ ಮಾಡುತ್ತಿದ್ದರು. ಮುಳುಗುತ್ತಿರುವ ಕೆಂಪು ಸೂರ್ಯನ ಬೆಳಕಲ್ಲಿ ಪಾಮ್ ಗಿಡದ ಗರಿಗಳು ತಂಗಾಳಿಗೆ ಸಿಕ್ಕು ಅಲುಗಾಡುತ್ತಿದ್ದವು.

ಆ ಯುವತಿ ಒಳಗೆ ಬಂದು ಕುರ್ಚಿ ಮೇಲೆ ಕುಳಿತಳು.

‘ನಾವು ಇಲ್ಲೇ ಊಟ ಮಾಡಿದರೆ ಹೇಗೆ?’ ಅವಳು ಕೇಳಿದಳು.

ಯುವಕ ರೆಸ್ಟೊರೆಂಟ್​ನ ಬೋರ್ಡನ್ನೊಮ್ಮೆ ಓದಿ, ಸುತ್ತಲೂ ಮೆನು ಹುಡುಕಾಡಿದ. ಅಲ್ಲೆಲ್ಲೂ ಅವನಿಗೆ ಮೆನು ಕಾಣಲಿಲ್ಲವಾದ್ದರಿಂದ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ; ‘ಮ್, ನನಗೆ ಗೊತ್ತಿಲ್ಲ, ನಮಗೋ ಈ ದೇಶದ ಬಗ್ಗೆ ತಿಳಿದಿಲ್ಲ, ಊಟ ಹೇಗಿರುತ್ತೋ ಏನೋ?’

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಕಾಡುಪ್ರಾಣಿಗಳನ್ನು ಒಮ್ಮೆಲೆ ನೋಡಿದರೆ ಹೇಗಿರುತ್ತದೆಯೋ ಹಾಗಿದ್ದಾಳೆ ಆ ಹೆಂಗಸು!’

‘ಆದರೆ ನನ್ನ ಆರನೇ ಇಂದ್ರಿಯಕ್ಕೆ ರೆಸ್ಟೊರೆಂಟ್​ಗಳ ಬಗ್ಗೆ ಚೆನ್ನಾಗಿ ತಿಳಿಯುತ್ತದೆ. ಕೇವಲ ವಾಸನೆಯಿಂದಲೇ ಅದು ಚೆನ್ನಾಗಿದೆಯೋ ಇಲ್ಲವೋ ಎಂದು ಹೇಳಬಲ್ಲೆ ಮತ್ತು ಈ ರೆಸ್ಟೊರೆಂಟ್ ಖಂಡಿತ ಚೆನ್ನಾಗಿದೆ. ಒಂದು ಸಲ ಪ್ರಯತ್ನಿಸುವುದರಲ್ಲಿ ತಪ್ಪೇನಿದೆ?

ಅಲ್ಲಿ ಯಾವ ರೀತಿಯ ಆಹಾರ ಸಿಕ್ಕುತ್ತದೆಂದು ಅವನಿಗೆ ತಿಳಿದಿರಲಿಲ್ಲ. ಯುವಕ ಕ್ಷಣವೊತ್ತು ಕಣ್ಮುಚ್ಚಿ ದೀರ್ಘ ಉಸಿರೆಳೆದುಕೊಂಡ. ಅಡುಗೆಮನೆಯಿಂದ ಬರುತ್ತಿರುವ ಘಮಘಮ ವಾಸನೆ ಅವನನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ರೆಸ್ಟೊರೆಂಟ್​ನ ಸುತ್ತಲೂ ನೋಡಿ ‘ಇದು ಶುಚಿಯಾಗಿದೆ ಎಂದು ನಿನಗೆ ಅನ್ನಿಸ್ತಿದೆಯಾ?’ ಕೇಳಿದ.

ಅವಳು ತನ್ನ ಮೊಣಕೈಯಿಂದ ಅವನನ್ನು ತಿವಿದು ‘ನೀನು ತುಂಬಾ ಸೂಕ್ಷ್ಮ. ಆದರೆ ಚಿಂತೆ ಬೇಡ, ನಾವು ಅಲ್ಲಿಂದ ಇಲ್ಲಿಯವರೆಗೆ ಹಾರಿಕೊಂಡು ಬಂದಿದ್ದೇವೆ, ಇನ್ನೊಂದಿಷ್ಟು ಸಾಹಸ ಮಾಡೇ ಬಿಡೋಣ. ದಿನವೂ ಅದೇ ಹೋಟೆಲಿನ ಊಟ ನನಗಂತೂ ಬೇಜಾರು ತರಿಸಿದೆ, ಏನಾದರಾಗಲಿ ಒಂದು ಸಾರಿ ರುಚಿ ನೋಡೇ ಬಿಡೋಣ’ ಎಂದು ಹೇಳಿದಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

*

ರವಿಕುಮಾರ ಹಂಪಿ ಕವನಗಳನ್ನು ಓದಿ : Poetry : ಅವಿತಕವಿತೆ ; ‘ಚಹ ಮಾಡುವುದನ್ನು ಕಲಿತರೆ ಕೈ ಸುಡುವುದಿಲ್ಲ, ಖಂಡಿತವಾಗಿಯೂ ಯಶಸ್ಸು ಕಾಣುವಿರಿ’

Published On - 12:36 pm, Fri, 25 February 22