AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ‘ಕಾಡುಪ್ರಾಣಿಗಳನ್ನು ಒಮ್ಮೆಲೆ ನೋಡಿದರೆ ಹೇಗಿರುತ್ತದೆಯೋ ಹಾಗಿದ್ದಾಳೆ ಆ ಹೆಂಗಸು!’

Anton Chekhov’s Story; A Slander: ‘‘ನನಗಂತೂ ತಮಾಷೆ ಎನಿಸಿತು, ಯಾರಾದರೂ ನನಗೆ ಚುಂಬಿಸೆಂದರೆ ಒಂದು ನಾಯಿ ಬೇಕಾದರೂ ಚುಂಬಿಸ್ತಿನೇನೋ! ಆದರೆ ಆ ಮಾರ್ಫಾಳನ್ನು ಮಾತ್ರ ಚುಂಬಿಸಲಾರೆ” ಎಂದು ಹೇಳಿ ಅಹಿನಿವ್‌ರು ಸುತ್ತಲೂ ನೋಡ್ತಾ ಇದ್ದ ಹಾಗೆ ಅವರ ಹಿಂದೆಯೇ ಜ್ಯೂನಿಯರ್ ತೆರಿಗೆ ಅಧಿಕಾರಿ ನಿಂತಿದ್ದರು!

Literature: ನೆರೆನಾಡ ನುಡಿಯೊಳಗಾಡಿ; ‘ಕಾಡುಪ್ರಾಣಿಗಳನ್ನು ಒಮ್ಮೆಲೆ ನೋಡಿದರೆ ಹೇಗಿರುತ್ತದೆಯೋ ಹಾಗಿದ್ದಾಳೆ ಆ ಹೆಂಗಸು!’
ಆ್ಯಂಟನ್ ಚೆಕಾವ್ ಮತ್ತು ನಾಗರೇಖಾ ಗಾಂವಕರ್
ಶ್ರೀದೇವಿ ಕಳಸದ
|

Updated on:Feb 18, 2022 | 12:24 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi: ಹ್ಹೆಹ್ಹೆಹ್ಹೆ! ಏನು ಮಾಡ್ತಿದ್ದೀರಿ… ನೀವಿಲ್ಲಿ ಚುಂಬಿಸ್ತಿದ್ದಿರಾ? ಅಡುಗೆ ಕೆಲಸದ ಮಾರ್ಫಾಳಿಗೆ ಚುಂಬಿಸ್ತಿದೀರಾ?  ಎಂದ. ಎಷ್ಟು ಅಸಭ್ಯ ಊಹಿಸಿದ ನೋಡಿ! ಕೀಳು ಮನುಷ್ಯ. ಆ ಹೆಂಗಸು ಅದೆಷ್ಟು ಭಯಂಕರ ಇದ್ದಾಳೆ ಅಂದರೆ ಎಲ್ಲ ಕಾಡು ಪ್ರಾಣಿಗಳನ್ನು ಒತ್ತಟ್ಟಿಗೆ ಇಟ್ಟಹಾಗೆ, ಮತ್ತೆ ಈ ಮನುಷ್ಯ ನೋಡಿದರೆ ಚುಂಬನದ ಬಗ್ಗೆ ಹೇಳ್ತಿದ್ದಾನೆ. ವಿಚಿತ್ರ ಮನುಷ್ಯ (ಮೀನು!)”, “ಯಾರು ವಿಚಿತ್ರ ವ್ಯಕ್ತಿ?” ಈಗ ಗಣಿತ ಶಿಕ್ಷಕರು ಮೇಲೆದ್ದು ಅಹಿನಿವ್ ಹತ್ತಿರ ಬರುತ್ತಾ ಕೇಳಿದರು. “ಯಾರಂತಾ ಕೇಳ್ತಿರಾ? ಅಲ್ನೋಡಿ ನಿಂತಿದ್ದಾನೆ – ವ್ಯಾನ್ಕಿನ್! ನಾನು ಅಡುಗೆ ಕೋಣೆಗೆ ಹೋದ್ನಾ…’’ ಅಹಿನಿವ್ ವ್ಯಾನಕಿನ್‌ನ ಕಥೆಯನ್ನ ಮತ್ತೊಮ್ಮೆ ಹೇಳಿದರು. ‘‘ನನಗಂತೂ ತಮಾಷೆ ಎನಿಸಿತು, ವ್ಯಾನ್ಕಿನ್ ವಿಚಿತ್ರ ವ್ಯಕ್ತಿ! ಯಾರಾದರೂ ನನಗೆ ಚುಂಬಿಸೆಂದರೆ ಒಂದು ನಾಯಿ ಬೇಕಾದರೂ ಚುಂಬಿಸ್ತಿನೇನೋ! ಆದರೆ ಆ ಮಾರ್ಫಾಳನ್ನು ಮಾತ್ರ ಚುಂಬಿಸಲಾರೆ” ಎಂದು ಹೇಳಿ ಅಹಿನಿವ್‌ರು ಸುತ್ತಲೂ ನೋಡ್ತಾ ಇದ್ದ ಹಾಗೆ ಅವರ ಹಿಂದೆಯೇ ಜ್ಯೂನಿಯರ್ ತೆರಿಗೆ ಅಧಿಕಾರಿ ನಿಂತಿದ್ದರು.

ಕಥೆ: ಅಪನಿಂದೆ (A Slander) | ಮೂಲ : ಆ್ಯಂಟನ್ ಚೆಕಾವ್ | ಕನ್ನಡಕ್ಕೆ : ಪ್ರೊ. ನಾಗರೇಖಾ ಗಾಂವಕರ

*

(ಭಾಗ 3)

“ನಾವು ವ್ಯಾನ್ಕಿನ್ ಬಗ್ಗೆ ಮಾತಾಡುತ್ತಿದ್ದೆವು’’ ಎನ್ನುತ್ತ ಅಹಿನಿವ್, “ಅವನೊಬ್ಬ ವಿಲಕ್ಷಣ ಪ್ರಾಣಿ! ಕಿಚನ್‌ಗೆ ಹೋದವನಿಗೆ ನಾನು ಮಾರ್ಫಾಳ ಪಕ್ಕ ನಿಂತಿದ್ದು ಕಂಡಿದೆ ನೋಡಿ… ನೋಡಿದ ಕೂಡಲೇ ಎಲ್ಲ ನಮೂನೆಯ ಕ್ಷುಲ್ಲಕ ಕಥೆಗಳನ್ನು ಹುಡ್ಕೋಕೇ ಶುರು ಇಟ್ಕೊಂಡಿದ್ದಾನೆ. “ನೀವ್ಯಾಕೆ ಚುಂಬಿಸ್ಕೋತಾ ಇದ್ರಿ?” ಅಂತಾ ಕೇಳ್ತಾನೆ ಅವ. ಬಹುಶಃ ಸರಿಯಾಗಿ ಕುಡಿದಿದ್ದ ಕಾಣುತ್ತದೆ. ನಾನವಂಗೆ ಹೇಳಿದೆ, ‘‘ಆ ಮಾರ್ಫಾ ಬದಲಿಗೆ ಒಂದು ಟರ್ಕಿ ಕೋಳಿನಾದರೂ ನಾನು ಮುದ್ದಿಸಬಲ್ಲೆ. ಅಲ್ವೋ ಮೂರ್ಖ, ಅಷ್ಟಕ್ಕೂ ನನಗೆ ನನ್ನ ಹೆಂಡತಿ ಇದ್ದಾಳೆ ಅಂದೆ. ಒಟ್ಟಿನಲ್ಲಿ ನನಗಂತೂ ಇವನಿಂದ ದೊಡ್ಡ ತಮಾಷೆನೇ ಆಯ್ತು!”

“ಯಾರು ನಿಮಗೆ ತಮಾಷೆ ಮಾಡಿದರು?” ಅಹಿನಿವ್‌ನಿಗೆ ಶಾಲಾ ದಿನಗಳಲ್ಲಿ ಮೊದಲ ಅಕ್ಷರ ಕಲಿಸಿದ ಗುರು  ಅವರತ್ತ ಬರುತ್ತಾ ಕೇಳಿದರು.

“ಅದೇ ಆ ವ್ಯಾನ್ಕಿನ್! ಅಡುಗೆಗೆ ತಂದ ಸ್ಟರ್ಜಿಯನ್ ಮೀನು ನೋಡುತ್ತಾ ನಾನು ಅಡುಗೆ ಕೋಣೆಯಲ್ಲಿ ನಿಂತಿದ್ದೆ…”

ಹೀಗೆ ಮುಂದುವರೆದಿತ್ತು. ಅರ್ಧಗಂಟೆಯೊಳಗೆ ಎಲ್ಲ ಅತಿಥಿಗಳಿಗೂ ಸ್ಟರ್ಜಿಯನ್ ಮೀನು ಮತ್ತು ವ್ಯಾನ್ಕಿನ್‌ನ ಈ ಘಟನೆ ತಿಳಿದುಹೋಗಿತ್ತು.

ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

“ಈಗ ಬೇಕಾದರೆ ಅವ ಯಾರಿಗೆ ಬೇಕಾದರೂ ಹೇಳಲಿ. ಏನು ಬೇಕಾದರೂ ಹೇಳಿಕೊಳ್ಳಲಿ!’’ ಒಂದೊಮ್ಮೆ ಅವನು ತನ್ನ ಕಥೆ ಶುರು ಮಾಡಿದರೆ ಅವರೆಲ್ಲ ಅವನಿಗೆ ಹೀಗೆ ಉಗಿಬಹುದು; “ನಿನ್ನ ಸುಳ್ಳು ಸುಳ್ಳೆ ಹುಚ್ಚುತನ ಸಾಕುಮಾಡು, ಮೂರ್ಖ! ನಮಗೆ ಇದೆಲ್ಲ ಮೊದಲೇ ಗೊತ್ತು” ಕೈಕೈ ಹಿಸುಕಿಕೊಳ್ಳುತ್ತಾ ಅಹಿನಿವ್ ತನ್ನಷ್ಟಕ್ಕೆ ಅಂದುಕೊಂಡರು.

ಅಹಿನಿವ್ ಈಗ ನಿರುಮ್ಮಳತೆಯಿಂದ ಖುಷಿಯಾದರು. ಅದೇ ಸಂತೋಷದಲ್ಲಿ ನಾಲ್ಕು ಗ್ಲಾಸುಗಳಿಗಿಂತ ಹೆಚ್ಚೇ ಕುಡಿದರು. ಯುವ ಜೋಡಿಯನ್ನು ಅವರ ಕೋಣೆಗೆ ಕಳಿಸಿದ ಮೇಲೆ ಅಹಿನಿವ್ ತನ್ನ ಕೋಣೆಗೆ ಹೋಗಿ ಮಗುವಿನಂತೆ ನಿದ್ರಿಸಿದರು. ಮಾರನೇ ದಿನ ಸ್ಟರ್ಜಿಯನ್ ಮೀನಿನ ಈ ಯಾವ ಘಟನೆಯ ಬಗ್ಗೆಯೂ ಅವರು ಯೋಚಿಸಲಿಲ್ಲ. ಆದರೆ ದುರಾದೃಷ್ಟ ಹೇಗಿರುತ್ತೆ ನೋಡಿ… ಮನುಷ್ಯ ಅಂದುಕೊಂಡಿದ್ದು ಒಂದಾದರೆ ದೇವರು ಮಾಡೋದೆ ಇನ್ನೊಂದು. ಹಾಳುಬಾಯಿ ಅನ್ನೋದು ತನ್ನ ದುಷ್ಟಗುಣ ತೋರಿಸಿಬಿಟ್ಟಿತ್ತು. ಅಹಿನಿವ್ ಹಾಕಿದ ಯೋಜನೆಗಳಾವುದೂ ಉಪಯೋಗಕ್ಕೆ ಬರಲೇ ಇಲ್ಲ. ಸರಿಯಾಗಿ ಒಂದೇ ಒಂದು ವಾರದ ನಂತರ, ಬುಧವಾರದ ದಿನ ಮೂರನೇ ಪಿರಿಯಡ್ ನಂತರ, ವೈಸ್ಕಿನ್ ಎಂಬ ಹುಡುಗನ ಅಸಂಬದ್ಧ ಪ್ರೇಮ ಪ್ರಸಂಗದ ಸಂಗತಿಯನ್ನು ಪ್ರಸ್ತಾಪಿಸಲು ಅಹಿನಿವ್ ಶಿಕ್ಷಕರ ಕೋಣೆಯ ಮಧ್ಯಭಾಗದಲಿ ನಿಂತಿದ್ದ. ಆಗ ಹೆಡಮಾಸ್ಟರ್ ಅಹಿನಿವ್‌ನ ಹತ್ತಿರ ಹೋಗಿ, ಅವರನ್ನು ಪಕ್ಕಕ್ಕೆ ಕರೆದೊಯ್ದರು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’

Published On - 12:19 pm, Fri, 18 February 22