ನೋ ಡಿಲೀಟ್ ಆಪ್ಷನ್ | No Delete Option : ಸಲಾಹುದ್ದೀನ್, ನಾನು ಪರೀಕ್ಷೆಗೆ ಬೀದರ್ಗೆ ಬಂದಿದ್ದೆ. ವಾಪಸ್ ಹೋಗ್ತಿದೀನಿ. ಈಗ ನಾಂದೇಡ್ ಟ್ರೈನ್ನಲ್ಲಿದ್ದೀನಿ. ಟ್ರೈನ್ನಲ್ಲಿ ಊಟ ಬಂದಿಲ್ಲ… ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದೆ. ಆ ಕಡೆಯಿಂದ ಮಾತನಾಡಿದ್ದು ಏನೊಂದೂ ಕೇಳಲಿಲ್ಲ. ಫೋನ್ ಕಟ್ ಆಗಿಬಿಟ್ಟಿತು. ಆಗಲೇ ರಾತ್ರಿ 10.30ಆಗಿತ್ತು. ಬ್ಯಾಗಿನಲ್ಲಿ ನೀರಿನ ಬಾಟಲಿ ಬಿಟ್ಟರೆ ಬೇರೇನೂ ಇರಲಿಲ್ಲ. ಆದದ್ದು ಆಯಿತು ಎಂದು ಅನಿವಾರ್ಯವಾಗಿ ತೆಪ್ಪಗೆ ಕುಳಿತೆ. ಅಂದು ಬೀದರ್ನಿಂದ ಹೊರಟಾಗ ಸಾಯಂಕಾಲ 7ಗಂಟೆ. ಆ ಸಮಯದಲ್ಲಿ ಏನೂ ತಿನ್ನುವ ಅಭ್ಯಾಸ ನನಗಿಲ್ಲ. ಟ್ರೈನ್ನಲ್ಲಿ ಏನಾದರೂ ತಿಂದರಾಯಿತು ಎಂದುಕೊಂಡಿದ್ದೆ. ಸಂಜೆ 9ರವರೆಗೆ ಅದೂ ಇದೂ ತಿಂಡಿ ಬಂದಿತ್ತಾದರೂ ಇಷ್ಟು ಬೇಗ ಬೇಡವೆನಿಸಿ ತೆಗೆದುಕೊಳ್ಳಲಿಲ್ಲ. ನಂತರ ನೋಡಿದರೆ ಅದರ ಸುದ್ದಿನೇ ಇಲ್ಲ. ಆಗ ಥಟ್ಟನೆ ನೆನಪಿಗೆ ಬಂದಿದ್ದು ಸೇಡಂನಲ್ಲಿರುವ ಸ್ನೇಹಿತ ಸಲಾಹುದ್ದಿನ್. ಅವನಿಗೆ ಫೋನ್ ಮಾಡಿದ್ದೆ.
ಡಾ. ಶಿವು ಅರಿಕೇರಿ, ಬಳ್ಳಾರಿ (Dr. Shivu Arakeri)
*
(ಭಾಗ 1)
ಫೆಬ್ರವರಿ ತಿಂಗಳ ಮುಸುಕಿನ ಮಂಜನ್ನು ಕೊರೆಯುತ್ತಾ ರೈಲು ಶರವೇಗದಲ್ಲಿ ಸಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಹಾಕುವ ಅದರ ಜೋರಾದ ಶಿಳ್ಳೆ ನನ್ನ ಹೊಟ್ಟೆಯನ್ನು ಚುರ್ರೆನಿಸಿ ಎಚ್ಚರಿಸುತ್ತಿತ್ತು. ರಾತ್ರಿ 11.30ಕ್ಕೆ ಸೇಡಂ ತಲುಪಿತು. ಹೆಚ್ಚೆಂದರೆ ಎರಡು ನಿಮಿಷದ ಸ್ಟಾಪ್. ಯಾವುದಕ್ಕೂ ಬಾಗಿಲು ಬಳಿ ಬಂದುನಿಂತೆ. ಹೊರಗೆ ಕಣ್ಣಾಡಿಸುತ್ತಿದ್ದೆ. ಎರಡು ನಿಮಿಷ ಕಳೆದು ರೈಲು ಮತ್ತೆ ಜೋರಾಗಿ ಶಿಳ್ಳೆ ಹೊಡೆದು ನಿಧಾನವಾಗಿ ಚಲಿಸಲಾರಂಭಿಸಿತು. ಇಲ್ಲಿಗೆ ಮುಗಿಯಿತು ಎಂದು ಡೋರ್ನಿಂದ ಆಚೆ ಸರಿಯುವಷ್ಟರಲ್ಲಿ ಶಿವೂ… ಎನ್ನುವ ಜೋರಾದ ದನಿ! ಗೆಳೆಯ ಸಲಾಹುದ್ದೀನ್ ರೈಲಿನ ಜೊತೆಗೇ ಓಡಿಬರುತ್ತಿದ್ದ. ಒಂದು ಕ್ಷಣ ಆತಂಕವಾಯಿತು ಅವನ ಓಡುಬರುತ್ತಿರುವ ರೀತಿಗೆ. ಬಂದವನೇ ಊಟದ ಡಬ್ಬಿ ಕೈಗಿಟ್ಟು ಮರೆಯಾಗಿಬಿಟ್ಟ! ಥ್ಯಾಂಕ್ಸ್ ಹೇಳುವಷ್ಟು ಅಥವಾ ಅದನ್ನು ಪಡೆಯುವಷ್ಟು ದೂರದ ಸ್ನೇಹ ಮತ್ತು ಸಂಬಂಧ ನಮ್ಮದಲ್ಲವಾದರೂ, ಓಡುವ ರೈಲು ಒಂದು ಮಾತನ್ನೂ ಆಡಲು ಅವಕಾಶ ಕೊಡಲಿಲ್ಲ. ಅಂದು ಘಮಘಮಿಸುವ ಬಿರಿಯಾನಿ ಆ ಚಳಿಯಲ್ಲಿ ಕರುಳನ್ನು ಬೆಚ್ಚಗೆ ಮಾಡಿತ್ತು.
ಇದನ್ನೂ ಓದಿ : No Delete Option: ‘ಯಾವಳೇ ಅವಳು ಅಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಗೆ!’ ವಾರ್ಡನ್ ರೌದ್ರಾವತಾರ
ಬಳ್ಳಾರಿಯ ಜೀವನವೇ ಹಾಗೆ. ನೂರಾರು ಜನ ಸ್ನೇಹಿತರು. ಸಾವಿರಾರು ನೆನಪುಗಳು. ಅಲ್ಲಿ ನಾವು ಕಾಲೇಜು ಮತ್ತು ಜೀವನದ ಪಾಠಗಳನ್ನು ಒಟ್ಟೊಟ್ಟಿಗೇ ಕಲಿತದ್ದಿದೆ. ಆಗ ಇಂದಿನಂತೆ ಸೌಲಭ್ಯಗಳು ಉಚಿತವಾಗಿ ಸಿಗುತ್ತಿರಲಿಲ್ಲ. ಕಾಲೇಜಿಗೆ ಹಾಸ್ಟೆಲ್ ಸೌಲಭ್ಯ ಇರಲಿಲ್ಲ. ಕಾಲೇಜಿನ ಎದುರಿನ ಸುಂಕಪ್ಪನ ಹೋಟೆಲ್ಲು ನಮಗಿದ್ದ ಒಂದೇ ಒಂದು ಆಸರೆ. ಸಂಜೆಗೆ ಯಾರು ಬೇಕಾದರೂ ಯಾರ ರೂಮಿನಲ್ಲೂ ಠಿಕಾಣಿ ಹೂಡಬಹುದಾಗಿತ್ತು. ನಾವೆಲ್ಲ ಹೆಚ್ಚು ಸೇರುತ್ತಿದ್ದುದು ಕೃಷ್ಣಾ ಇಲ್ಲವೇ ಸಲಾಹುದ್ದೀನ್ ರೂಮಿನಲ್ಲಿ.
ನಾನು, ಕೃಷ್ಣಾ, ಅಜ್ಮತ್, ಸಲಾಹುದ್ಧೀನ್, ರೆಡ್ಡಿ, ಪಾಷಾ, ರಾಘು ಎಲ್ಲ ಒಟ್ಟಿಗೇ ಸೇರುವುದು ಸಾಮಾನ್ಯವಾಗಿತ್ತು. ಕೃಷ್ಣಾ ಊರಿನಿಂದ ಖಡಕ್ ರೊಟ್ಟಿ, ಶೇಂಗಾ ಹಿಂಡಿ, ಶೇಂಗಾ ಹೋಳಿಗೆ ತಂದಿರುತ್ತಿದ್ದ. ಎಲ್ಲೆಲ್ಲೋ ಏನೇನೋ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಎಲ್ಲರಿಗೂ ‘ಅವ್ವನ ಕೈರುಚಿ’ ಸವಿಯುವ ಭಾಗ್ಯ ದಕ್ಕುತ್ತಿತ್ತು. ಹೌದು… ಎಲ್ಲರ ಅಮ್ಮಂದಿರು ಎಲ್ಲರಿಗೂ ಅವ್ವಂದಿರೆನ್ನುವ ಭಾವವನ್ನು ನಿಜಕ್ಕೂ ಈ ಮೂಲಕ ಅನುಭವಿಸುತ್ತಿದ್ದೆವು. ಎಲ್ಲ ಒಟ್ಟಿಗೆ ಕುಳಿತು ಬಾರಿಸುವಾಗ ನಮ್ಮ ಬ್ಯಾಟಿಂಗ್ ಅಂದಿನ 99ರ ವರ್ಲ್ಡ್ ಕಪ್ನಲ್ಲಿ ದ್ರಾವಿಡ್, ಗಂಗೂಲಿ, ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಅನ್ನೂ ನಾಚಿಸುತ್ತಿತ್ತು.
(ಮುಂದಿನ ಭಾಗವನ್ನು ನಿರೀಕ್ಷಿಸಿ)
ಗಮನಿಸಿ : ನಿಮ್ಮ ಮನಸ್ಸಿನಲ್ಲಿ ಹೂತ ಯಾವ ಘಟನೆ, ಪ್ರಸಂಗ, ನೆನಪುಗಳನ್ನೂ ‘No Delete Option’ ಅಂಕಣದಲ್ಲಿ ಬರೆಯಬಹುದು. ನುಡಿ ಅಥವಾ ಯೂನಿಕೋಡ್ನಲ್ಲಿ ಕನಿಷ್ಟ 300, ಗರಿಷ್ಠ 800 ಪದಗಳಿರಲಿ. ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ. ಮೇಲ್ : tv9kannadadigital@gmail.com
*
ಇದನ್ನೂ ಓದಿ : No Delete Option: ಆ ಅಸ್ತಿಪಂಜರದ ಸಾರು, ಈ ಪವಿತ್ರ ನುಸಿಚಿತ್ರಾನ್ನ, ಉಪವಾಸ ಸತ್ಯಾಗ್ರಹ ಮತ್ತು ರೊಟ್ಟಿ ಪಾರ್ಟಿ