ಕತಾರ್ ಮೇಲ್ | Qatar Mail : ಹಳೆಯ ಕಂಪನಿ ಬಿಟ್ಟು ಹೊಸ ನೌಕರಿ ಸಿಕ್ಕಿದ ಮೇಲೆ ಅವನ ಶೋಕಿ ಒಂದು ಕೈ ಜಾಸ್ತಿಯಾಯಿತೆಂದೇ ಹೇಳಬೇಕು. ಬ್ಯಾಂಕಿನಿಂದ ಸಾಲ ಪಡೆದು ಲ್ಯಾಂಡ್ ಕ್ರೂಸರ್ ಖರೀದಿಸಿದ, ಅವನ ಹೊಸ ಗೆಳೆಯರೆಲ್ಲರ ಬಳಿಯೂ ಅದೇ ಕಾರಿರುವುದು ಗಮನಕ್ಕೆ ಬಂದು, ಆರೇ ತಿಂಗಳಿನಲ್ಲಿ ಅದನ್ನು ಮಾರಿ ಮತ್ತೆ ಸಾಲ ಪಡೆದು ನಿಸಾನ್ ಪ್ಯಾಟ್ರೋಲ್ ಖರೀದಿಸಿದ. ಪಾರ್ಟಿ ಹುಚ್ಚು ಹಿಡಿದವನಿಗೆ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ಹುಚ್ಚು ಹಿಡಿಯುವುದೆಷ್ಟು ಹೊತ್ತು? ಹೊಸ ಕಂಪನಿಯಲ್ಲಿ ಆತನಿಗೆ ಮದುವೆಯಾಗಿ ಒಬ್ಬ ಮಗಳಿರುವ ವಿಚಾರ ಸಹೋದ್ಯೋಗಿಗಳಿಗೆ ತಿಳಿದೇ ಇರಲ್ಲಿಲ್ಲ. ಅವನ ಫೇಸ್ ಬುಕ್ ಅಕೌಂಟಿನಲ್ಲೂ ತಾನು ವಿವಾಹಿತನೆಂದಾಗಲಿ, ತನಗೆ ಮಗಳಿರುವುದಾಗಲಿ ಅವನು ಎಂದೂ ತಿಳಿಸಿರಲಿಲ್ಲ. ಇದು ಅಚ್ಚರಿಯೆನಿಸಿದರೂ, ಇನ್ನೊಬ್ಬ ಗೆಳೆಯನೂ ಇದೇ ರೀತಿ ತನಗೆ ಮದುವೆಯಾಗಿದೆಯೆಂದು ಗೆಳೆಯರೊಂದಿಗೆ ವರ್ಷದವರೆಗೂ ಹೇಳಿಕೊಂಡೇ ಇರಲಿಲ್ಲ. ಅವನಿಗೊಂದು ಮಗು ಹುಟ್ಟಿ, ಹೆಂಡತಿ ಕತಾರಿಗೆ ಕಾಲಿಟ್ಟ ಮೇಲೆಯೇ ಆತನ ವಿವಾಹದ ಗುಟ್ಟು ರಟ್ಟಾಗಿದ್ದು!ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)
(ಪತ್ರ 7, ಭಾಗ 2)
ತಾನು ವಿದೇಶದಲ್ಲಿ ಪದವಿ ಪಡೆದಿರುವುದಾಗಿಯೂ, ಈ ಮುಂಚೆ ಅಲ್-ಜಜೀರ ಟಿವಿ ಚಾನೆಲ್ ನಲ್ಲಿ ಕೆಲಸ ಮಾಡಿರುವುದಾಗಿಯೂ ಸಜಿ ಫೇಸ್ ಬುಕ್ಕಿನಲ್ಲಿ ಮತ್ತು ಕೆಲಸಕ್ಕೆ ಸೇರಿದ ಚಾನೆಲ್ಲಿನ ಗೆಳೆಯರೊಂದಿಗೆ ಹೇಳಿಕೊಂಡಿದ್ದ. ನಾನು ಅಲ್-ಜಜೀರದಲ್ಲಿ ಕೆಲಸ ಮಾಡುತ್ತಿದ್ದಾಗ ಅವನನ್ನು, “ನೀನು ಯಾವಾಗ ನಮ್ಮ ಕಂಪನಿಯಲ್ಲಿ ಕೆಲಸ ಮಾಡಿದ್ದೆಯೋ?” ಎಂದು ಒಂದೆರಡು ಬಾರಿ ಅವನನ್ನು ಚುಡಾಯಿಸಿದ್ದೆ. ಅದಕ್ಕವನು, “ಸುಮ್ಮನಿರಿ ಚೇಚಿ, ಯಾಕೆ ರೇಗಿಸುತ್ತೀರಿ?” ಎಂದು ಮಾತು ಹೊರಳಿಸಿದ್ದ.
ಅವನ ರೂಪಕ್ಕೆ, ಮಾತಿಗೆ ಮರುಳಾಗಿ ಹುಡುಗಿಯರು ಅವನ ಜೊತೆ ಪಾರ್ಟಿಗಳಿಗೆ ತೆರಳುತ್ತಿದ್ದರು. ಫೇಸ್ ಬುಕ್ಕಿನ ತುಂಬಾ ಹುಡುಗಿಯರ ಜೊತೆ ಆತ ಪಾರ್ಟಿಗಳಲ್ಲಿ ತೆಗೆದುಕೊಂಡ ನೂರಾರು ಚಿತ್ರಗಳು ರಾರಾಜಿಸುತ್ತಿದ್ದವು. ಅವನ ವೈಯಕ್ತಿಕ ಜೀವನದ ಬಗ್ಗೆ ಅರಿವಿದ್ದ ಬೆರಳೆಣಿಕೆಯಷ್ಟು ಗೆಳೆಯರನ್ನು, ನನ್ನ ಗಂಡನನ್ನೂ ಸೇರಿದಂತೆ, ಸಾಧ್ಯವಾದಷ್ಟು ದೂರವಿರಿಸಿದ್ದ. ಆದರೂ ಹೆಂಡತಿ ಮತ್ತು ಸಂಬಂಧಿಕರ ಕಣ್ಣಿಗೆ ಬೀಳದಂತೆ ಹೇಗೆ ಅಷ್ಟು ವರ್ಷ ತನ್ನ ಇಮೇಜನ್ನು ಸಜಿ ಕಾಪಾಡಿಕೊಂಡಿದ್ದ ಎನ್ನುವುದು ಮಾತ್ರ ನಮ್ಮ ಪಾಲಿಗೆ ಈಗಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಆತನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಮೆರಾಮ್ಯಾನ್ ಒಬ್ಬ ಸಜಿಯ ಹಳೆಯ ಕಂಪೆನಿಯ ಮಾಲೀಕನನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡಿದಾಗ, ಮಾತುಕತೆಯ ನಡುವೆ ಸಜಿ ಬಗ್ಗೆ ವಿಚಾರಿಸಿದಾಗ ಅವನಿಗೆ ಅಚ್ಚರಿಯೊಂದು ಕಾದಿತ್ತು. ಸಜಿ ಹಳೆಯ ಕಂಪನಿಯಲ್ಲಿ ಕಾರ್ ಡ್ರೈವರ್ ಆಗಿದ್ದನೆನ್ನುವ ಸತ್ಯ ತಿಳಿದು ದಂಗಾದ ಕ್ಯಾಮೆರಾಮ್ಯಾನ್ ಈ ವಿಚಾರವನ್ನು ಆಫೀಸಿನಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತಿಳಿಸಿದ. ಈಗಾಗಲೇ ಅವನನ್ನು ಸಹಾಯಕ ಕ್ಯಾಮೆರಾಮ್ಯಾನ್ ಆಗಿ ನೌಕರಿಗೆ ಸೇರಿಸಿಕೊಂಡು, ವರ್ಷದಿಂದಲೂ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಿದ್ದ ಕಂಪನಿ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವನ ವಿದ್ಯಾಭ್ಯಾಸದ ಸರ್ಟಿಫಿಕೇಟುಗಳನ್ನು ಕೇಳುವಷ್ಟರಲ್ಲಿ ಆತ ಸದ್ದಿಲ್ಲದಂತೆ ಒಂದು ದಿನ ಮಾಯವಾಗಿಬಿಟ್ಟ. ಅವನ ನಾಪತ್ತೆಯ ಹಿಂದೆ ಬೇರೆಯೇ ಕಾರಣವಿತ್ತು!
ಎಂದಿನಂತೆ ಪಾರ್ಟಿಯೊಂದಕ್ಕೆ ತೆರಳಿದ ಸಜಿ ಆ ರಾತ್ರಿ ಒಬ್ಬ ಸುಂದರ ವಿದೇಶಿ ಹುಡುಗಿಯನ್ನು ಭೇಟಿ ಮಾಡಿದ. ಪರಿಚಯವಾದ ಮೇಲೆ ಆಕೆಯ ಮದ್ಯಕ್ಕೆ ಈತನೇ ಹಣ ತೆತ್ತಿದ್ದಾನೆ. ಕುಡಿತದ ಅಮಲಿನಲ್ಲಿ ಆಕೆ ಏನು ಹೇಳಿದಳೊ, ಈತ ಏನು ಕೇಳಿದನೋ ಗೊತ್ತಿಲ್ಲ. ಸುತ್ತಲೂ ಇದ್ದ ಗೆಳೆಯರ ಪ್ರಕಾರ ಸಜಿ ಆಕೆಯನ್ನು ಎಳೆದಾಡಿದನಂತೆ, ಮತ್ತೆ ಕೆಲವರ ಪ್ರಕಾರ ಮಾತಿಗೆ ಮಾತು ಬೆಳೆದು ಆಕೆಯ ಕೆನ್ನೆಗೆ ಹೊಡೆದನಂತೆ.
ಮಾರನೆಯ ದಿನ ಆಕೆ ಕತಾರ್ ಪ್ರವಾಸ ಮುಗಿಸಿ ಮರಳಿ ತನ್ನ ದೇಶಕ್ಕೆ ಹೊರಟು ನಿಂತಳು. ಹೋಗುವ ಮುನ್ನ, ವಿಮಾನ ನಿಲ್ದಾಣದ ಪೊಲೀಸರಿಗೆ ತನ್ನ ಮೇಲೆ ಸಜಿ ಹಲ್ಲೆ ನಡೆಸಿದ ಎಂದು ದೂರು ನೀಡಿದಳು. ಪೊಲೀಸರಿಂದ ಠಾಣೆಗೆ ಹಾಜರಾಗುವಂತೆ ಕರೆ ಬಂದೊಡನೆ, ದೂರಿನ ಬಗ್ಗೆ ಅರಿಯದ ಸಜಿ ಹೋಗಿ ಪೊಲೀಸರ ಮುಂದೆ ನಿಂತದ್ದೇ ತಡ, ಅವನನ್ನು ಬಂಧಿಸಿದರು. ಬಂಧನಕ್ಕೊಳಗಾದ ಮೇಲೆ ಅವನಿಗೆ ವಿದೇಶಿ ಹುಡುಗಿಯ ದೂರಿನ ಬಗ್ಗೆ ಅರಿವಾಯಿತು. ಮೂರ್ನಾಲ್ಕು ದಿನಗಳಾದರೂ ಸಜಿ ಪತ್ತೆಯಿಲ್ಲದ್ದು ಕಂಡು ಆತನ ಪತ್ನಿ ಅವರಿವರನ್ನು ವಿಚಾರಿಸಿ ಆತ ಜೈಲಿನಲ್ಲಿರುವ ವಿಚಾರವನ್ನು ತಿಳಿದುಕೊಂಡಳು.
ಇದನ್ನೂ ಓದಿ : Qatar Mail : ಕತಾರ್ ಮೇಲ್ ; ಏಯ್, ನಮ್ಮ ಮನೆಯಲ್ಲಿರೋದು ಲ್ಯಾಂಡ್ ಕ್ರೂಸರ್, ನಿಮ್ಮ ಕಾರು ಯಾವುದೋ?
ವಾರಗಟ್ಟಲೆ ಆತ ಗೈರು ಹಾಜರಾದಾಗ ಆಫೀಸಿನಲ್ಲೂ ಗುಸು ಗುಸು ಹಬ್ಬಿತು. ಕೆಲವರು ಆತ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದಾನೆ ಎಂದು ಸುದ್ದಿ ಹಬ್ಬಿಸಿದರು. ಕೊನೆಗೊಂದು ದಿನ ಬೇಲ್ ಮೇಲೆ ಹೊರಬಂದ ಸಜಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ದೂರು ನೀಡಲಾಗಿದೆ ಎಂದು ಸಹೋದ್ಯೋಗಿಗಳೊಡನೆ ನೋವು ತೋಡಿಕೊಂಡ.
ಠಾಣೆಯಿಂದ ಹೊರಬಿದ್ದ ಮೇಲೆ ಸಜಿ ಎಚ್ಚೆತ್ತುಕೊಂಡಿದ್ದ. ಯಾವಾಗ ಬೇಕಾದರೂ ತಾನು ಮತ್ತೆ ಜೈಲು ಪಾಲಾಗಬಹುದು ಎನ್ನುವ ಭಯ ಅವನನ್ನು ಸದಾ ಕಾಡಹತ್ತಿತ್ತು. ಈ ನಡುವೆ ಪೊಲೀಸರು ಭಾನುವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವನಿಗೆ ಒಂದು ಗುರುವಾರ ನೋಟೀಸ್ ಕಳುಹಿಸಿದರು. ತಂದೆಗೆ ಹುಷಾರಿಲ್ಲವೆಂದು ಹೇಳಿ ಆಫೀಸಿನಲ್ಲಿ ಒಂದು ವಾರ ರಜಾ ಹಾಕಿ ಶುಕ್ರವಾರವೇ ಹೆಂಡತಿ ಮತ್ತು ಮಗುವಿನ ಜೊತೆ ಮರಳಿ ಭಾರತ ತಲುಪಿಬಿಟ್ಟ. ವಾರ, ತಿಂಗಳಾದರೂ ಆತ ಮರಳದಿದ್ದಾಗ ಗೆಳೆಯರಿಗೆ ಸಂಶಯವಾಯಿತು. ಅವನ, ಮತ್ತವನ ಹೆಂಡತಿಯ ಫೇಸ್ ಬುಕ್ ಅಕೌಂಟುಗಳೂ ಇದ್ದಕ್ಕಿದ್ದಂತೆಯೇ ಮಾಯವಾಗಿಬಿಟ್ಟವು. ಬ್ಯಾಂಕಿನಲ್ಲಿ ಕಾರಿಗೆ ತೆಗೆದುಕೊಂಡ ಸಾಲ, ವೈಯಕ್ತಿಕ ಸಾಲದ ಕಂತು ಪಾವತಿಯಾಗದೆ ಆಫೀಸಿಗೆ ಬ್ಯಾಂಕಿನ ನೋಟೀಸ್ ಗಳು ಬರತೊಡಗಿದಾಗ ಸಹೋದ್ಯೋಗಿಗಳಿಗೆ ಆತ ತಲೆಮರೆಸಿಕೊಂಡಿರುವುದುಮನದಟ್ಟಾಯಿತು. ಆಫೀಸಿನಲ್ಲಿ ತೆಗೆದುಕೊಂಡ ಸಾಲವೂ ಗುಳುಂ!
ಮತ್ತೆ ಆತ ಕತಾರಿಗೆ ಮರಳಲು ಸಾಧ್ಯವೇ ಇಲ್ಲ. ಬಂದರೆ ಕಂಬಿ ಎಣಿಸುವುದಂತೂ ಗ್ಯಾರಂಟಿ. ನೆರೆಯ ದೇಶಗಳೊಡನೆ ಕತಾರ್ ರಾಜಕೀಯ ಬಿಕ್ಕಟ್ಟನ್ನೆದುರುಸುತ್ತಿದ್ದಾಗ, ಅವರಿವರ ಕಾಲು ಹಿಡಿದು ದುಬೈನಲ್ಲಿ ಕೆಲಸ ಗಿಟ್ಟಿಸಿದ ಎಂದು ಕೆಲವರು ಮಾತನಾಡಿಕೊಳ್ಳುವುದು ಕಿವಿಗೆ ಬಿದ್ದದ್ದು ಬಿಟ್ಟರೆ ಸಜಿಯ ಬಗ್ಗೆ ಹೆಚ್ಚಿನ ಸುದ್ದಿ ಇಲ್ಲ. ಆ ಸಮಯದಲ್ಲಿ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹಣಕಾಸು ವಿಚಾರದಲ್ಲಿ ಸಿಕ್ಕಿಬಿದ್ದು, ರಾತ್ರೋರಾತ್ರಿ ತಲೆ ಮರೆಸಿಕೊಂಡು ಕತಾರ್ ಬಿಟ್ಟವರೆಲ್ಲಾ ದುಬೈ ಸೇರಿಕೊಂಡಿದ್ದು, ಕೆಲವರು ಅಲ್ಲಿಗೆ ತೆರಳುವ ಮುನ್ನ ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಂಡಿದ್ದು ಓಪನ್ ಸೀಕ್ರೆಟ್!
ಒಟ್ಟಿನಲ್ಲಿ ಹೆಣ್ಣನ್ನು ಕೆಣಕಿ ಯಾರು ಉದ್ಧಾರವಾದರೋ ಬಿಟ್ಟರೋ, ಸಜಿ ಮಾತ್ರ ದೇಶವನ್ನೇ ಬಿಟ್ಟು, ಎಲ್ಲರಿಂದ ತಲೆ ಮರೆಸಿಕೊಂಡು ಬದುಕುವ ಸ್ಥಿತಿ ತಂದುಕೊಂಡ.
(ಮುಗಿಯಿತು)
(ಮುಂದಿನ ಪತ್ರ : 15.4.2022)
ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/qatar-mail