Transgender World : ಗಂಡಸರೇ, ಸಂಜೆ ಆರು ಗಂಟೆ ಮೇಲೆ ಮನೆಯಿಂದ ಆಚೆ ಬರಬೇಡಿ!

|

Updated on: Feb 15, 2022 | 8:27 AM

Gender Equality : ‘ಫಮೀಲ, ನನ್‌ ಪ್ರಾಣದ ಗೆಳತಿ. ಆಕೆ ಟ್ರಾನ್ಸ್​ ವುಮನ್. ಒಂದ್‌ ಸಾರಿ ಬಾರ್​ನಲ್ಲಿ ಕುಡೀತಾ ಕೂತಿರುವಾಗ ಹೇಳಿದ್ಲು, “ಈ ಸಾಮಾನ್ಯ ಜನ ಬರೋ ಬಾರ್​ಗೆ ನಾನು ಸುಲಭವಾಗಿ ಬರೋಹಾಗೆ ನಿಂಗೆ ಬರಕ್ಕಾಗಲ್ಲ ಯಾಕೆ?” ಆಗ ನಾನು ನನ್ನದಲ್ಲದ ಜೆಂಡರ್​ನಲ್ಲಿ ಇನ್ನೂ ಸುಮತಿ ಆಗಿದ್ದೆ.’ ರೂಮಿ ಹರೀಶ್

Transgender World : ಗಂಡಸರೇ, ಸಂಜೆ ಆರು ಗಂಟೆ ಮೇಲೆ ಮನೆಯಿಂದ ಆಚೆ ಬರಬೇಡಿ!
Follow us on

Rumi Column : ರೂಮಿ ಕಾಲಂ : ಒಬ್ಬ ದಲಿತ ಮಹಿಳೆಯ ಬಲಾತ್ಕಾರವಾದಾಗ ಒಂದು ಪ್ರತಿಬಟನೆ ನಡೆಯಿತು. ಆಗ ಅದರ ವಿರುದ್ದ ಒಬ್ಬರು ದಲಿತ ಮಹಿಳಾ ಕಾರ್ಯಕರ್ತರು ಮಾತನಾಡುತ್ತಿದ್ದರು ಮತ್ತು ನಡುನಡುವೆ ಅವರು ಸ್ಲೋಗನ್ಸ್‌ ಕೂಗಿಸುತ್ತಿದ್ದರು. ಅವರ ನಂತರ ಶೋಷಣೆ ಮಾಡುವ ಜಾತಿಯ ಗಂಡಸರೊಬ್ಬರು, ಅವರೂ ಪ್ರಗತಿಪರರು, ಮಾತನಾಡಲು ನಿಂತರು. ಅವರು ಶುರುಮಾಡಿದರು, “ಹೆಣ್ಣು ಮಕ್ಕಳು ರಾತ್ರಿ ಹೊತ್ತು ಓಡಾಡುವ ರಿಸ್ಕ್‌ ತಗೋಬಾರ್ದು, ಅವರು ಸುರಕ್ಷಿತವಾಗಿ ಮನೇಲಿ ಇರ್ಬೇಕು” ಅಂತ. ಹೀಗಂದಿದ್ದೇ ತಡ, ನಮ್‌ ಸುನಿಲ ಮತ್ತು ಜೀ ಇಬ್ರು ಅವರ ಹತ್ರ ಮೈಕ್‌ ಕಿತ್ಕೊಂಡು, “ಕನಿಷ್ಟ ಪ್ರಜ್ಞೆ ಬೇಡ್ವಾ ನಿಮಗೆ, ಸರಿ ಇನ್ಮೇಲೆ ನೀವು ಗಂಡಸರು 6 ಗಂಟೆ ಮೇಲೆ ಆಚೆ ಬರ್ಬೇಡಿ. ನಿಮ್ಗೆ ನಿಮ್‌ ಲೈಂಗಿಕ ಆಸೆಯನ್ನು ಕಂಟ್ರೋಲ್‌ ಮಾಡ್ಕೊಳಕ್ಕೆ ಆಗಲ್ಲಾಂದ್ರೆ, ಯಾಕೆ ರಿಸ್ಕು ಆಚೆ ಬರೋದು? ಹುಡುಕಿ ಹುಡುಕಿ ಜಾತಿ, ಧರ್ಮ, ವರ್ಗ, ಅವರ ಸ್ಟೇಟಸ್‌ ನೋಡಿ ರೇಪ್‌ ಮಾಡದನ್ನ ನಿಲ್ಲಿಸಬಹುದಲ್ಲ? ಶೋಷಣೆ ಮಾಡೋ ಜಾತಿಗಳ ಗಂಡಸರಿಗೆ, ಎಲ್ಲಾ ಹೆಣ್ಣುದೇಹಗಳ ಮೇಲೆ ತಮಗೆ ಅಧಿಕಾರ ಇದೆ ಅಂತ ಯಾಕೆ ಅನ್ನಿಸೋದು? ಯಾಕೆ ಅವರು ‘ಒಪ್ಪಿಗೆ’ ಅನ್ನೋದನ್ನ ಮರೆಯೋದು?
ರೂಮಿ ಹರೀಶ್, ಟ್ರಾನ್ಸ್​ ಮ್ಯಾನ್

*

(ಅಲೆ – 6)

ಫಮೀಲ, ನನ್‌ ಪ್ರಾಣದ ಗೆಳತಿ. ಆಕೆ ಟ್ರಾನ್ಸ್​ ವುಮನ್. ಒಂದ್‌ ಸಾರಿ ಬಾರ್​ನಲ್ಲಿ ಕುಡೀತಾ ಕೂತಿರುವಾಗ ಹೇಳಿದ್ಲು, “ಈ ಸಾಮಾನ್ಯ ಜನ ಬರೋ ಬಾರ್​ಗೆ ನಾನು ಸುಲಭವಾಗಿ ಬರೋಹಾಗೆ ನಿಂಗೆ ಬರಕ್ಕಾಗಲ್ಲ ಯಾಕೆ?” ಆಗ ನಾನಿನ್ನೂ ನನ್ನದಲ್ಲದ ಜೆಂಡರ್​ನಲ್ಲಿ ಇನ್ನೂ ಸುಮತಿ ಆಗಿದ್ದೆ. ನಾನು ಹೇಳ್ದೆ “ನಮ್ಮಂಥ ಹೆಂಗಸರಿಗೆ ಎಲ್ಲಾ ಸ್ಪೇಸಸ್ಸೂ ಸುಲಭವಾಗಿ ಸಿಗುವುದಿಲ್ಲ” ಅಂತ. ಅದಕ್ಕೆ ಫಮೀಲ ಜೋರಾಗಿ ನಕ್ಕು, “ರಿಯಲಿ? ವಾಟ್‌ ಫನ್”‌ ಅಂದ್ಲು. ನಾನು ಕಣ್‌ ಕಣ್‌ ಬಿಟ್ಟೆ. ಅವಳು ಮುಂದುವರಿಸಿದಳು, “ನಿಮ್‌ ಹೈ ಫೈ ಪಬ್​ಗಳಲ್ಲಿ ಇಲ್ಲಿರೋ ಜನ ಬರಕ್ಕಾಗುತ್ತಾ. ಅಲ್ಲಿ ನೋಡು, ಆ ಮುದಿಹೆಂಗ್ಸು ಇಲ್ಲಿಗೆ ಪ್ರತೀ ದಿನ ಬರ್ತಾಳೆ. 90 ಹೊಡ್ಕೊಂಡು ಅಕ್ಕಪಕ್ಕದವರ ಜೊತೆ, ಅಂದರೆ ಅಲ್ಲಿರುವ ಗಂಡಸರೊಂದಿಗೆ ಕುಡಿದು ಹೋಗ್ತಾಳೆ, ಅವಳ ಕೆಲಸ ಏನೆಂದು ಗೊತ್ತಿಲ್ಲ. ಅಂಥ ಹೆಂಗಸರು ಇಲ್ಲಿ ಬರ್ತಾರೆ ಅಂದ್ರೆ ನಿಂಗೆ ಯಾಕೆ ಬರಕ್ಕೆ ಆಗಲ್ಲ? ಅಲ್ಲಾ… ಈ ಹೆಂಗಸರು, ಹೆಂಗಸರು ಅಲ್ವ? ಯಾಕೆ ಯಾವಾಗ್ಲು ನಮ್ಮಂಥ ಹೆಂಗಸರು ಅಂತ ಹೇಳ್ತಿಯಾ?” ನಾನು ಏನ್‌ ಹೇಳ್ಬೇಕು ಅಂತ ಗೊತ್ತಾಗದೆ ಒಂದು ಸಿಪ್‌ ತೊಗೊಂಡು ಯೋಚನೆ ಮಾಡ್ದೆ, ಹೌದಲ್ವ? ನಾನು ಇಲ್ಲೂ ಹೇಗಾದ್ರು ಮಾಡಿ ಬರಬಹುದು ಮತ್ತೆ ಪಬ್​ಗಳಿಗೂ ಹೋಗಬಹುದು ಅಂತ.

ಈ ಪರಂಪರಾನುಗತ ಅನುಕೂಲ ಅಂದ್ರೆ ಪ್ರಿವಿಲೇಜ್.‌ ಇದು ಇದೆ ಅಂತ ಹೇಗೆ ಗೊತ್ತಾಗುತ್ತೆ? ನಂಗೆ ಚಿಕ್‌ ವಯಸ್ಸಲ್ಲಿ ನಮ್‌ ಮನೇಲಿ ಒಂದ್‌ ವರ್ಷದಲ್ಲಿ ಆರು ತಿತಿ ಮಾಡೋವ್ರು. ಯಾರಯಾರಿಗೆ ಅಂತ ಗೊತ್ತಿಲ್ಲ. ಆದ್ರೆ ಒಂದೊಂದು ತಿತಿ ಮಾಡುವಾಗ್ಲೂ ಮನೆ ತುಂಬಾ ಜನ ಪುತುಪುತುಪುತು, ಕೆಟ್ಟದಾಗಿ ತೆಲುಗು ಮಾತಾಡ್ಕೊಂಡು “ಏಮೇ ವಸ್ತ್ವೇ ಮೇ, ಏಮ್‌ ಊರಗಾಯ್ಲು ಚೇಶಿನ್ನಾರೇ” ಅಂದ್ಕೊಂಡು. ಅಮ್ಮ ಮಾತ್ರ ಬೆಳಿಗ್ಗೆಯಿಂದ ಬರೀ ಹೊಟ್ಟೇಲಿ, ಯಾರ ಹೆಲ್ಪ್‌ ಇಲ್ದೆ, ಅಷ್ಟೂ ಜನಕ್ಕೆ ಅಷ್ಟೆಲ್ಲಾ ಅಡುಗೆ ಮಾಡಿ ಹಾಕೋವ್ಳು. ಆವತ್ತು ನಮ್‌ ಮನೆಗೆ ಕೆಲಸಕ್ಕೆ ಬರುವ ಹುಡುಗಿ ಮಾತ್ರ ಒಳಗೆ ಬಂದ್ರೂ ಅಡುಗೆ ಮನೆಗೆ ಹೋಗ್ಬಾರ್ದು. ಅವಳು ಪಾತ್ರೆ ತೊಳೆದ ಮೇಲೆ ಅದಕ್ಕೆ ಅಮ್ಮ ಅಲ್ಲ ಮಿಕ್ಕ ಸಂಬಂಧಿಕರು ಮೇಲೆ ನೀರು ಚುಮುಕಿಸಿ ಒಳಗೆ ತೆಗೊಳ್ತಿದ್ರು.

ಅದು ಯಾಕೆ ಅಂತ ಕೇಳಿದ್ದಕ್ಕೆ, ಅವ್ಳು ಕೆಲಸದವಳು ಶುದ್ದ ಇಲ್ಲ ಅಂದ್ರು. ಅವತ್ತು ನಂಗೆ ಫರ್ಸ್ಟ್‌ ಅರ್ಥಾಗಿದ್ದು ಮನುಷ್ಯರಲ್ಲಿ ಶುದ್ದ ಅಶುದ್ದ ಅಂತ ನಮ್ಮನೇಲಿ ಮಾತ್ರ ಮಾಡ್ತಾರೆ ಅಂತ. ನಂಗೆ ಆ ಹುಡ್ಗಿ ತುಂಬಾ ಒಳ್ಳೆ ಫ್ರೆಂಡ್.‌ ಹೀಗೆ ಮಾಡಿದ್ದು ನಂಗೆ ತುಂಬಾ ಕೋಪಬಂದು ಕಂಕು ಹತ್ರ ಕೇಳ್ದೆ. ಯಾಕೆ ಅವಳು ಅಶುದ್ದ ಅಂತಾರೆ ನಮ್ಮನೇಲಿ ಅದು ತಪ್ಪಲ್ವ. ಕಂಕು ಹೇಳ್ತು ನಮ್ಮನೇಲಿ ಮಾತ್ರ ಅಲ್ಲ, ನಂ ದೇಶದಲ್ಲಿ ಇರೋ ರೋಗ ಅದು ಅಂತು. ಆ ಟೈಮಿಗೆ ಕಾಸ್ಟ್‌ ಸಿಸ್ಟಂ ಬಗ್ಗೆ ಸ್ಕೂಲ್‌ನಲ್ಲೂ ಹೇಳಿದ್ರು. ಅಲ್ಲದೇ ಸ್ಕೂಲ್‌ನಲ್ಲಿ ನಂ ಪ್ರಿನ್ಸಿಪಾಲ್ ಒಂದು ದಿವ್ಸ ನನ್ನ ಕರೆದು, ಕೃಷ್ಣ ಕಾಂಟೆಸ್ಟ್‌ ಅಂತ ಇದೆ ಅದಕ್ಕೆ ನೀ ಹೋಗು. ಬ್ರಾಮಿನ್‌ ಕೃಷ್ಣನ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ ನಿನಗೆ ಅಂದ್ರು. ನಂಗೆ ಫುಲ್‌ ಕನ್‌ಫ್ಯೂಷನ್‌ ಬ್ರಾಮಿನ್‌ ಆದ್ರೆ ಕೃಷ್ಣನ ಬಗ್ಗೆ ಹೆಂಗೆ ಫುಲ್‌ ಗೊತ್ತಿರುತ್ತೆ. ಆಗ್ಲೂ ಸೂಪರ್‌ ಆಗಿ ಆ ಟೆಸ್ಟ್‌ನಲ್ಲಿ ಫೇಲಾದೆ. ನಾನು ಇಂಥ ಜಾತಿ ಅಂತ 8ನೇ ವಯಸ್ಸಿನಲ್ಲಿ ತಿಳಿಯೋದು ನನಗಿದ್ದ ಪರಂಪರಾಗತ ಅನುಕೂಲ. ಹಂಗಂತ ನನಗೆ ಜಾತೀಯತೆ ಇಲ್ಲ ಅಂತ ಅಲ್ಲ. ಅದು ಇದ್ದೇ ಇರುತ್ತೆ. ನಮ್‌ ಪ್ರಜ್ಞೆಯಲ್ಲಿ ಅದನ್ನು ಕುಟುಂಬದವರು ಸೇರಿಸಿಬಿಡ್ತಾರೆ. ಅದನ್ನು ಅಂಶಅಂಶವಾಗಿ ಮೈಯಿಂದ ಕಿತ್ತಾಕ್ಬೇಕು. ನಾನು ಪ್ರಜ್ಞಾಪೂರ್ವಕವಾಗಿ ಇಲ್ಲ ಹೀಗೆ ಮಾಡ್ಬಾರ್ದು, ಹೀಗೆ ನಡ್ಕೊಬಾರ್ದು, ಅದರಲ್ಲಂತೂ ಸುನಿಲ ನಂಗೆ ಹೆಜ್ಜೆ ಹೆಜ್ಜೆಗೂ ರಿಮೈಂಡ್‌ ಮಾಡ್ತಾನೆ.

ಅದೇ ಶೋಷಿತ ಜಾತಿಯವರಿಗೆ ಚಿಕ್ಕ ವಯಸ್ಸಿನಲ್ಲೇ ತಿಳಿದುಬಿಡುತ್ತೆ. ಅದು ಈ ಪ್ರಿವಿಲೇಜ್‌ ಇಲ್ಲದೇ ಇರೋದು ಅಂತ. ಹಾಗೇ ಇಂಗ್ಲೀಷ್‌ ಸುಲಭವಾಗಿ ಮಾತಾಡಲು ಬೇಕಾಗಿರುವ ಶಿಕ್ಷಣ ಮತ್ತು ಮಾಹೋಲು, ಎಲ್ಲರಿಗೂ ಸುಲಭವಾಗಿ ಸಿಗಲ್ಲ. ಅದು ಎಲ್ಲಾ ತುಳಿತಕ್ಕೊಳಗಾದ ಸಮುದಾಯಗಳಲ್ಲಿ ಸತ್ಯ. ತಮ್ಮ ಪ್ರಿವಿಲೇಜ್‌ ತಿಳಿದುಕೊಂಡು, ಅದರ ಪ್ರಜ್ಙೆ ಇಟ್ಟುಕೊಂಡು ನಾವು ಎಷ್ಟು ಮಾತಾಡಬಹುದು, ಭಾಗವಹಿಸಬಹುದು, ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ಎಷ್ಟು ಪಾಲು ನಮ್ಮದಿರಬೇಕು… ಇಂಥ ಅರಿವು ಬಹಳ ಮುಖ್ಯ.

ರೋಹಿತ್‌ ವೇಮುಲ ತೀರ್ಕೊಂಡ ದಿವಸ ಪ್ರತಿಭಟನೆಗೆ ಹೋಗಿದ್ದಾಗ ನೋಡಿ ತುಂಬಾ ಬೇಜಾರಾಯಿತು. ಪ್ರಗತಿಪರ ಜನ ಸಮೂಹಗಳಲ್ಲಿಯೂ ಈ ಅರಿವು ಇಲ್ಲ. ಅಲ್ಲದೇ ನಾವು ಅಲ್ಲಿ ಹೋಗಿದ್ದೂ ನಮ್ಮ ಕೋಪ ವ್ಯಕ್ತಪಡಿಸಲು. ಅಲ್ಲಿ ನೋಡಿದರೆ ಒಬ್ರಾದ್ಮೇಲೆ ಒಬ್ರು ಶೋಷಣೆ ಮಾಡುವ ಜಾತಿ ಗಂಡಸರು ಮಾತಾಡಿ ಮಾತಾಡಿ… ಇಟ್ರು; ಅದೊಂದು ಬಾಷೆ ತಗ್ಲಾಕ್ಕೊಂಡು ಬಿಟ್ಟಿದ್ದಾರೆ, ಪ್ರಗತಿಪರ ಬಾಷೆ. ಆ ಬಾಷೆ ಪ್ರತಿಬಟನೆಯಲ್ಲಿ ನಿಂತಿರುವ ಜನಕ್ಕೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ಒಬ್ಬೊಬ್ರು ಕನಿಷ್ಟ 1 ಗಂಟೆ ಮಾತಾಡಿದ್ರು. ಅಬ್ಬ… ಆದ್ರೆ ನಮಗೆ ಆವತ್ತು ಬೇಕಿದ್ದುದು ಜೋರ್‌ ಜೋರ್‌ ಆಗಿ ಗಂಟಲು ಹರಿಯುವಂತೆ ಜಾತಿ ವ್ಯವಸ್ಥೆಯ ವಿರುದ್ಧ ಕೂಗಿ ಕೂಗಿ ರೋಷ ತೋರಿಸಬೇಕಾಗಿರೋವಂತದ್ದು. ಪ್ರತಿಬಟನೆಯಲ್ಲಿ ಮಾತಾಡೋರು ಯಾವಾಗ ಎಷ್ಟು ಹೊತ್ತು ಹೇಗೆ ಮಾತಾಡಬೇಕು ಅನ್ನೋ ಪ್ರಜ್ಞೆ ಇರಬೇಕು. ಆ ಇಡೀ ಪ್ರತಿಬಟನೆಯಲ್ಲಿ ತುಂಬಾ ಹೃದಯಕ್ಕೆ ನಾಟುವ ಹಾಗೆ ಮಾತಾಡಿದ್ದು ನಮ್ ಕೆ. ರಾಮಯ್ಯ ಸರ್.‌ ಅದು ನಂಗೆ ಇಂದಿಗೂ ನೆನಪಿದೆ.

ಇನ್ನೊಂದ್‌ ಸರ್ತಿ ಒಬ್ಬ ದಲಿತ ಮಹಿಳೆಯ ಬಲಾತ್ಕಾರವಾದಾಗ ಒಂದು ಪ್ರತಿಬಟನೆ ನಡೆಯಿತು. ಆಗ ಅದರ ವಿರುದ್ದ ಒಬ್ಬರು ದಲಿತ ಮಹಿಳಾ ಕಾರ್ಯಕರ್ತರು ಮಾತನಾಡುತ್ತಿದ್ದರು ಮತ್ತು ನಡುನಡುವೆ ಅವರು ಸ್ಲೋಗನ್ಸ್‌ ಕೂಗಿಸುತ್ತಿದ್ದರು. ಅವರ ನಂತರ ಶೋಷಣೆ ಮಾಡುವ ಜಾತಿಯ ಗಂಡಸರೊಬ್ಬರು, ಅವರೂ ಪ್ರಗತಿಪರರು, ಮಾತನಾಡಲು ನಿಂತರು. ಅವರು ಶುರುಮಾಡಿದರು, “ಹೆಣ್ಣು ಮಕ್ಕಳು ರಾತ್ರಿ ಹೊತ್ತು ಓಡಾಡುವ ರಿಸ್ಕ್‌ ತಗೋಬಾರ್ದು, ಅವರು ಸುರಕ್ಷಿತವಾಗಿ ಮನೇಲಿ ಇರ್ಬೇಕು” ಅಂತ. ಹೀಗಂದಿದ್ದೇ ತಡ, ನಮ್‌ ಸುನಿಲ ಮತ್ತು ಜೀ ಇಬ್ರು ಅವರ ಹತ್ರ ಮೈಕ್‌ ಕಿತ್ಕೊಂಡು, “ಕನಿಷ್ಟ ಪ್ರಜ್ಞೆ ಬೇಡ್ವಾ ನಿಮಗೆ, ಸರಿ ಇನ್ಮೇಲೆ ನೀವು ಗಂಡಸರು 6 ಗಂಟೆ ಮೇಲೆ ಆಚೆ ಬರ್ಬೇಡಿ. ನಿಮ್ಗೆ ನಿಮ್‌ ಲೈಂಗಿಕ ಆಸೆಯನ್ನು ಕಂಟ್ರೋಲ್‌ ಮಾಡ್ಕೊಳಕ್ಕೆ ಆಗಲ್ಲಾಂದ್ರೆ, ಯಾಕೆ ರಿಸ್ಕು ಆಚೆ ಬರೋದು? ಹುಡುಕಿ ಹುಡುಕಿ ಜಾತಿ, ಧರ್ಮ, ವರ್ಗ, ಅವರ ಸ್ಟೇಟಸ್‌ ನೋಡಿ ರೇಪ್‌ ಮಾಡದನ್ನ ನಿಲ್ಲಿಸಬಹುದಲ್ಲ? ಶೋಷಣೆ ಮಾಡೋ ಜಾತಿಗಳ ಗಂಡಸರಿಗೆ, ಎಲ್ಲಾ ಹೆಣ್ಣುದೇಹಗಳ ಮೇಲೆ ತಮಗೆ ಅಧಿಕಾರ ಇದೆ ಅಂತ ಯಾಕೆ ಅನ್ನಿಸೋದು? ಯಾಕೆ ಅವರು ‘ಒಪ್ಪಿಗೆ’ ಅನ್ನೋದನ್ನ ಮರೆಯೋದು? ಆವತ್ತು ಆ ಗಂಡಸಿನ ಮುಂದೆ ನಾವೆಲ್ಲಾ ಜೋರ್‌ ಜೋರ್‌ ಆಗಿ ಕೂಗಿದ್ವಿ, “ನಿಲ್ಲಿಸಿ ನಿಲ್ಲಿಸಿ ನಿಮ್ಮ ಹೀನಾಯ ಬುದ್ದಿ ನಿಲ್ಲಿಸಿ, ಎಲ್ಲಾ ಹೆಣ್ಣುದೇಹಗಳು ನಿಮ್ಮ ಹಕ್ಕಲ್ಲಾ” ಅಂತ.

ಈಗ ನಮ್ ಮನೇಲಿ, ನನ್ನ ಪರಿಸರದಲ್ಲಿ ನಾನು ಸುನಿಲ್‌ ಒಂದು ತೀರ್ಮಾನ ಮಾಡಿದ್ದೀವಿ; ನಾವು ಯಾವ ರೀತಿಯ ತಾರತಮ್ಯವನ್ನೂ ಯಾವುದೇ ರೀತಿಯಲ್ಲಿ ಯಾರಿಗೂ ಮಾಡೋದು ಬೇಡ. ಯಾರೂ ನಮ್ಮನೆಗೆ ಬರಬಹುದು, ಇರಬಹುದು, ಅವರವರ ಆಸೆಯಂತೆ ನಮಗೆ ಗೊತ್ತಿರೋ ಅಡುಗೆಯನ್ನ ಮಾಡಿಕೊಡೋಣ.

ನಮ್ಮ ಕನಸು ಮತ್ತು ದೃಡ ನಂಬಿಕೆ ನಮ್‌ ಮನೆ ಬಾಬಾ ಸಾಹೇಬರ ಸಂವಿಧಾನದ ಥರ ಮುಕ್ತ ಮನಸ್ಸು ಹೃದಯ ಹೊಂದಿ ಊಹೆಗೂ ಮೀರಿ ಸೀಮೆಗಳನ್ನು ಒಡೆದು ಎಲ್ಲರನ್ನೂ ಅಪ್ಪುವ ಒಪ್ಪುವ ಗೌರವಿಸುವ ಒಂದು ತಾಣವಾಗಿರಬೇಕು. ಸ್ವಾಗತಿಸಲು ನಮ್ಮ ಜೊತೆ ಬಾಬಾ ಸಾಹೇಬರು ಇರಬೇಕು, ಜೊತೆಗೆ ನಂ ಜೋಹ್ರಾ,  ಗಂಗೂಬಾಯಿ, ಬೇಗಂ ಅಖ್ತರ್‌, ವಾದಿರಾಜ್‌ ಮಾಮ, ಮನ್ಸೂರರು, ಬೀಮಸೇನ ಜೋಶಿ, ರಾಮರಾಯಾರು ಮತ್ತು ನಾವು.

ಹಿಂದಿನ ಅಲೆ : Transgender World : ‘ಲತ್ ಹಿಡೀಬೇಕು, ಮನ್ಸೂರರಿಗೆ ಹಿಡಿದ ಶಿವನ ಚಟದಂತೆ, ಅಂಬೇಡ್ಕರರಿಗೆ ಹಿಡಿದ ಸಾಮಾಜಿಕ ನ್ಯಾಯದ ಚಟದಂತೆ’

Published On - 1:11 pm, Tue, 21 December 21