ಸೀತೆ ಪರಿಶುದ್ಧಳು ಎನ್ನುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಅಂದು ಅಗ್ನಿಪರೀಕ್ಷೆಯಲ್ಲಿಯೇ ಗೆದ್ದುಬಂದವಳು ಅವಳು. ಆದರೆ, ಅಯೋಧ್ಯೆಯ ಪ್ರಜೆಗಳು ಸೀತೆಯ ಶೀಲದ ಕುರಿತು ಸಂಶಯ ವ್ಯಕ್ತಪಡಿಸುತ್ತಾ ಇದ್ದಾರೆ. ಆ ವಿಚಾರ ತಿಳಿದು, ಸೀತಾರಾಮತ್ವಕ್ಕಿಂತಲೂ ರಾಜಾರಾಮತ್ವಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿ ಅವಳನ್ನು ಕಾಡಿಗೆ ಕಳಿಸಿದವನು ನಾನು. ಈಗಲೂ ಅವಳು ಪರಿಶುದ್ಧಳು ಎನ್ನುವುದನ್ನು ಅಯೋಧ್ಯೆಯ ಜನರು ಒಪ್ಪಬೇಕು. ತಾನು ಪರಿಶುದ್ಧೆ ಎಂದು ಸೀತೆ ಶಪಥಗೈಯಬೇಕು. ಲೋಕದ ಜನರನ್ನು ಮೆಚ್ಚಿಸಬೇಕು ಹಾಗಿದ್ದರೆ ಮಾತ್ರ ಅವಳನ್ನು ಸ್ವೀಕರಿಸುತ್ತೇನೆ ಎಂದು ರಾಮ ಹೇಳುತ್ತಾನೆ.
ಜಾನಕಿ ಪರಿಶುದ್ಧೆ ಸಂಶಯವಿಲ್ಲ
ಮಾನಿನಿ ಜನರಿದ ಒಪ್ಪಬೇಕಲ್ಲ
ಮಾನಿನಿ ಶಪಥವಗೈದರೆ ಸಾಕು
ಮಾನವಲೋಕವ ಮೆಚ್ಚಿಸಬೇಕು
ಇದು ಪ್ರೊ. ಎಂ.ಎ. ಹೆಗಡೆ ಬರೆದ ಸೀತಾ ವಿಯೋಗ ಎಂಬ ಪ್ರಸಂಗದ ಒಂದು ಪದ್ಯ. ವಾಲ್ಮೀಕಿ ಮಹರ್ಷಿಗಳು ಲವಕುಶರನ್ನು ರಾಮನಿಗೆ ಒಪ್ಪಿಸುವುದಕ್ಕಾಗಿ ಅಯೋಧ್ಯೆಯ ರಾಜಸಭೆಗೆ ಬರುತ್ತಾರೆ. ಜೊತೆಗೆ ಸೀತೆಯನ್ನೂ ಕರೆದುಕೊಂಡು ಬಂದಿರುತ್ತಾರೆ. ಆಗ ರಾಮನಲ್ಲಿ ಸೀತೆ ಪರಿಶುದ್ಧಳು, ಅವಳನ್ನು ಸ್ವೀಕರಿಸು ಎಂದು ಕೇಳುತ್ತಾರೆ. ಆ ಸಂದರ್ಭದಲ್ಲಿ ರಾಮ ಆಡುವಂಥ ಮಾತು ಇದು.
ಇದನ್ನು ಕೇಳಿದ ಸೀತೆಯ ಮನಸ್ಥಿತಿ ಹೇಗಿರಬಹುದು. ಆದರೂ ತಾಳ್ಮೆಯನ್ನು ಕಳೆದುಕೊಳ್ಳದ ಅವಳು ಲೋಕದಲ್ಲಿ ಜನಾರ್ದನನನ್ನು ಆದರೂ ಮೆಚ್ಚಿಸಬಹುದು ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ. ತಾನು ಪರಿಶುದ್ಧೆ ಎನ್ನುವುದನ್ನು ರಾಮ ನಂಬಿದ್ದಾನಲ್ಲ. ರಾಮನನ್ನು ಬಿಟ್ಟು ಅನ್ಯರನ್ನು ಕನಸು ಮನಸಿನಲ್ಲಿಯೂ ಧ್ಯಾನಿಸಿದವಳಲ್ಲ ನಾನು. ಇದು ಸತ್ಯ ಅಂತಾದರೆ ಭೂಮಾತೆಯೇ ಮೈದೋರಿ ನನ್ನನ್ನು ತನ್ನ ಒಡಲಿನಲ್ಲಿ ಸೇರಿಸಿಕೊಳ್ಳಲಿ ಅಂತ ಕೇಳಿಕೊಳ್ಳುತ್ತಾಳೆ. ಭೂಜಾತೆ ಗರ್ಭವನ್ನು ಸೇರಿಬಿಡುತ್ತಾಳೆ.
‘ರಾಮಾಯಣ’ ರಾಮನ ಜೀವನ ಚರಿತ್ರೆಯನ್ನು ಆಧರಿಸಿದ ಕಥೆ. ಜಗತ್ತಿಗೆ ಮಾದರಿಯಾದ ಒಬ್ಬ ಪುರುಷನ ಕಥೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಹಾಗೆಯೇ ಅದು ಒಬ್ಬ ಹೆಣ್ಣು ಮಗಳು ಬೇಕಾದಷ್ಟು ಅನುಮಾನ, ಅವಮಾನ ಅನುಭವಿಸಿದ ಮತ್ತು ಸಾಕಷ್ಟು ಮಾನ, ಸಮ್ಮಾನಗಳಿಗೂ ಪಾತ್ರಳಾದ ಸೀತೆ ಎಂಬ ಸ್ತ್ರೀಯ ಕಥೆಯೂ ಹೌದು. ವಾಲ್ಮೀಕಿ ಮಹರ್ಷಿಗಳೇ ‘ಸೀತಾಯಾಶ್ಚರಿತಂ ಮಹತ್’ ಎಂದು ಹೇಳಿದ್ದಾರೆ.
ಪ್ರಪಂಚದ ಯಾವ ಮಹಿಳೆಯೂ ಕಂಡಿರದಷ್ಟು ದುಷ್ಟರನ್ನು, ಕ್ರೂರಿಗಳನ್ನು ಬಹುಶಃ ಸೀತೆ ಕಂಡಿದ್ದಾಳೆ. ಅಂತಹ ಸ್ವರೂಪದ ಅನಿರೀಕ್ಷಿತ, ಅಸಾಮಾನ್ಯ ಕೆಲವು ಘಟನೆಗಳಿಗಾದರೂ ಸಾಕ್ಷಿಯಾದ ಬೇಕಾದಷ್ಟು ಮಂದಿ ನಡುವೆಯೂ ಇರಬಹುದು. ನಮಗೂ ಅಂತಹ ಕೆಲ ಸಣ್ಣ ಅನುಭವವಾದರೂ ಆಗಿರಬಹುದು. ಹಾಗಾಗಿ, ನಮಗೆಲ್ಲಾ ಸೀತೆ ಎಂದರೆ ಹೆಚ್ಚು ಪ್ರೀತಿ, ಅನುಕಂಪ, ಆತ್ಮೀಯತೆ.
ಕಷ್ಟಕ್ಕೆ ಕೊರಗಿದವಳಲ್ಲ ಸೀತೆ
ಸೀತೆಯ ಜೀವನದಲ್ಲಿ ಅವಳು ಅದೆಷ್ಟು ಕಷ್ಟವನ್ನು ಅನುಭವಿಸಿದರೂ ಒಂದು ದಿನವೂ ಅದಕ್ಕಾಗಿ ಕೊರಗುತ್ತಾ ಕೂತವಳಲ್ಲ. ಹಾಗೆ ಮಾಡಿದರೆ ಬದುಕನ್ನು ಅವಮಾನಿಸಿದಂತೆ ಎಂದು ಭಾವಿಸಿದವಳು ಅವಳು. ಬಂದದ್ದನ್ನು ಬಂದಂತೆ ಸ್ವೀಕರಿಸಬೇಕು. ಎಷ್ಟೇ ಕಷ್ಟ ಬಂದರೂ ಧರ್ಮದ ದಾರಿಯನ್ನು ಬಿಡಬಾರದು ಎನ್ನುವ ಅವಳ ಆದರ್ಶ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ.
ಅಯೋಧ್ಯೆಯ ಸಿಂಹಾಸನವನ್ನು ಏರುವುದಕ್ಕೆ ಸಿದ್ಧರಾಗಿ ಬಂದವಳು ಪೊಡವಿಯ ಸಮಸ್ತ ಸಂಪತ್ತು, ಭೋಗ, ಭಾಗ್ಯಗಳನ್ನು ನಿಂತ ಹೆಜ್ಜೆಯಲ್ಲಿ ಕೊಡವಿಹಾಕಿ, ಅಡವಿಗೆ ಹೋಗಬೇಕಾಗಿ ಬಂದಾಗ ತಟ್ಟನೆ ಸಿದ್ಧಳಾದವಳು ಸೀತೆ. ಆಗ ಅವಳ ಮನಸ್ಥಿತಿ ಹೇಗಿದ್ದಿರಬಹುದು? ದಶರಥನ ಮಾತನ್ನು ಉಳಿಸುವುದಕ್ಕಾಗಿ ರಾಮ ಲಕ್ಷ್ಮಣ ಸೀತೆ ತೆತ್ತ ಬೆಲೆ ಬಹಳ ದುಬಾರಿಯಾದುದು. ಈ ಘಟನೆಯೇ ಮುಂದೆ ಇತಿಹಾಸದ ಘನಘೋರ ಯುದ್ಧಕ್ಕೆ ನಾಂದಿಯಾಯಿತು. ಸೀತೆಯ ಬದುಕನ್ನು ವಿವಿಧ ಬಗೆಯಿಂದ ಅಗ್ನಿಪರೀಕ್ಷೆಗೆ ಈಡುಮಾಡಿತು.
ಹೀಗೆ ಸೀತೆಯ ಬದುಕನ್ನು ನೋಡಿದಾಗ ನೋವುಗಳನ್ನು ಅನುಭವಿಸುವುದಕ್ಕಾಗಿಯೇ ಹುಟ್ಟಿದವಳಾ ಇವಳು ಅಂತ ಅನಿಸಿಬಿಡುತ್ತದೆ. ಯಾವ ಮಹಿಳೆಗೂ ಇಂತಹ ಸ್ಥಿತಿ ಬರಬಾರದು ಅಂತ ಬಯಸುವಂತಾಗುತ್ತದೆ.
ರಾವಣ ವಧೆಯ ಬಳಿಕ ರಾಮನ ಬಳಿಗೆ ಬಂದ ಸೀತೆಗೆ, ರಾಮ, ನಿನ್ನನ್ನು ನಾನು ಕಷ್ಟದಿಂದ ಪಾರು ಮಾಡಬೇಕಾಗಿತ್ತು. ಅದು ನನ್ನ ಕರ್ತವ್ಯ. ಇನ್ನು ನೀನು ಸ್ವತಂತ್ರಳು. ನಿನ್ನ ಇಷ್ಟಬಂದಲ್ಲಿಗೆ ಹೋಗಬಹುದು. ರಾಕ್ಷಸರ ನಾಡಿನಲ್ಲಿ ಇದ್ದವಳನ್ನು ಸೇರಿಸಿಕೊಳ್ಳಲಾರೆ. ಲೋಕದ ಜನ ಇದನ್ನು ಒಪ್ಪುವುದಿಲ್ಲ. ನಾನು ಪ್ರಜೆಗಳಿಗೆ ಅಧೀನ ಎಂದು ಕಡ್ಡಿಮುರಿದಂತೆ ಹೇಳಿದಾಗ, ರಾಮನ ನಿಲುವನ್ನು ಸೀತೆ ಅರಗಿಸಿಕೊಂಡದ್ದು ಹೇಗೆ? ಕಲ್ಲಾಗಿ ಬಿದ್ದಿದ್ದ ಹೆಣ್ಣಿಗೆ ಮರುಜೀವ ಕೊಟ್ಟ ಕರುಣಾಮೂರ್ತಿ ರಾಮ ಸೀತೆಯ ವಿಚಾರದಲ್ಲಿ ಅದೇಕೆ ಕಲ್ಲಾದ?
ಅಲ್ಲಿಯೂ ಸೀತೆ ಅವನನ್ನು ಆಕ್ಷೇಪಿಸಲಿಲ್ಲ. ಭೂಮಿಯ ಮಗಳಾದ ಅವಳಿಗೆ ಭೂಮಿಯಷ್ಟೇ ಸಹನೆ ಇದೆ ಎಂಬುದು ರಾಮಾಯಣದ ಉದ್ದಕ್ಕೂ ನಮಗೆ ಕಾಣಸಿಗುತ್ತದೆ. ಎಲ್ಲಿಯೂ ಆಕೆ ತಾಳ್ಮೆ ತಪ್ಪಿ ವ್ಯವಹರಿಸಿದ್ದೇ ಇಲ್ಲ. ವ್ಯಕ್ತಿತ್ವದ ಪೂರ್ಣ ವಿಕಸನದಲ್ಲಿ ತಾಳ್ಮೆಯ ವ್ಯಾಪಕ ಮಹತ್ವವನ್ನು ಸಾರುವ ವ್ಯಕ್ತಿಯಾಗಿಯೇ ಸೀತೆ ನಮಗೆ ಗೋಚರಿಸುತ್ತಾಳೆ.
ತಾಳ್ಮೆಯಿಂದ ಬಂದ ಕಷ್ಟಗಳನ್ನು ಎದುರಿಸಬೇಕು
ಬದುಕಿನಲ್ಲಿ ಎಲ್ಲರೂ ಒಂದಲ್ಲಾ ಒಂದು ತೆರನಾದ ಸಂಕಟವನ್ನು ಅನುಭವಿಸಲೇಬೇಕು. ಕೆಲವರು ಸಂಕಟ ಬಂದಾಗ ದಿಕ್ಕು ತೋಚದೆ ಹತಾಶರು, ನಿರುತ್ಸಾಹಿಗಳು, ನಿರಾಶಾವಾದಿಗಳೂ ಆಗುತ್ತಾರೆ. ತಮ್ಮ ಸಂಕಟಕ್ಕೆ ಇತರರು ಕಾರಣ ಎಂದು ಅವರನ್ನು ನಿಂದಿಸಿ ಆತ್ಮತೃಪ್ತಿಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಕೆಲವರು ದುಃಖವನ್ನು ತಡೆಯಲಾರದೆ ಆತ್ಮಹತ್ಯೆಯಂತಹ ಹೀನ ಕಾರ್ಯಕ್ಕೆ ಮುಂದಾಗುತ್ತಾರೆ. ಸುಖ ದುಃಖಗಳು ಮನುಷ್ಯನ ಬದುಕಿನಲ್ಲಿ ಸ್ಥಾಯಿಯಲ್ಲ.
ಅವತಾರ ಪುರುಷ ಎಂದು ನಂಬಿರುವ ರಾಮನನ್ನೂ ರಾಜಕುಮಾರಿಯಾಗಿ ಜನಿಸಿ, ಮಹಾಮಹಿಮನ ಕೈಹಿಡಿದ ಸೀತೆಯನ್ನೂ ಬಿಡದ ಕಷ್ಟ, ನಿಂದನೆಯ ನುಡಿಗಳು, ಅಪವಾದಗಳು ನಮ್ಮಂತಹ ಜನಸಾಮಾನ್ಯರನ್ನು ಬಿಟ್ಟೀತೆ? ತಾಳ್ಮೆಯಿಂದ ಬಂದ ಕಷ್ಟಗಳನ್ನು ಎದುರಿಸಬೇಕು. ಸಚ್ಚಾರಿತ್ರ್ಯದಿಂದ ಅವುಗಳನ್ನು ಗೆಲ್ಲಬೇಕು ಎನ್ನುವುದನ್ನು ಸೀತೆಯನ್ನು ನೋಡಿ ನಾವು ಕಲಿಯಬೇಕು.
ಹಾಗಂತ ಅಪಪ್ರಚಾರ ಮತ್ತು ನಿಂದನೆಗಳನ್ನು ನುಂಗಿ ಎಲ್ಲದಕ್ಕೂ ಸುಮ್ಮನೆ ಕುಳಿತಿರಬೇಕು ಅಂತಲ್ಲ. ಎಲ್ಲಿ ಅದನ್ನು ವಿರೋಧಿಸುವುದು ಯುಕ್ತವೋ ಪ್ರತಿಕ್ರಿಯೆ ತೋರಿಸುವುದು ಸಹಜವೋ ಅಲ್ಲಿ ಅದನ್ನು ಕರ್ತವ್ಯದ ದೃಷ್ಟಿಯಿಂದ ಮಾಡಲೇಬೇಕು. ಆದರೆ, ಜಗತ್ತಿನಲ್ಲಿ ಎಲ್ಲರ ಬಾಯಿ ಮುಚ್ಚುಸವುದು ಸಾಧ್ಯವಿಲ್ಲ. ಕೇಳುವುದು ಬೇಡ ಅನಿಸುವಂತಹ ಮಾತುಗಳೂ, ನೋಡುವುದು ಬೇಡ ಅನಿಸುವ ಸಂದರ್ಭಗಳು ಕೂಡ ನಮಗೆ ಎದುರಾಗುತ್ತದೆ. ಇದರಿಂದ ವಿಚಲಿತರಾಗುವುದಾಗಲೀ ಎಲ್ಲರ ಬಾಯನ್ನು ಮುಚ್ಚಿಸುತ್ತೇನೆ ಎಂದು ಹೊರಡುವುದಾಗಲೀ ಹುಚ್ಚುತನವೇ ಆಗುತ್ತದೆ. ಸನ್ಮಾರ್ಗದಿಂದ, ಸಹನೆಯಿಂದ ಇದ್ದರೆ ಒಳ್ಳೆಯದೇ ಆಗುತ್ತದೆ. ಹಾಗಾಗಿಯೇ ಹೇಳುವುದು ತಾಳಿದವನು ಬಾಳಿಯಾನು, ತಾಳದವನು ಹಾಳಾದಾನು.
ಬರಹ: ಗೀತಾ ಹೆಗಡೆ, ಸಾಲ್ಕಣಿ
***
ಟಿವಿ9 ಕನ್ನಡ ಡಿಜಿಟಲ್ ಹೊಸ ಪ್ರಯತ್ನ
ಪುರಾಣ ಪಾತ್ರಗಳು, ಪುರಾಣದ ಘಟನೆಗಳು, ಅನುಭವ, ಆಸ್ವಾದನೆ ಬದುಕಿಗೆ ದಾರಿದೀಪ ಆಗಬಲ್ಲವು. ಒಂದಷ್ಟು ಹೊಸನೋಟ, ತಿಳುವಳಿಕೆಯನ್ನೂ ನೀಡಬಲ್ಲವು. ಮನಸಿಗೆ ಸಂತೋಷ, ನೆಮ್ಮದಿಯನ್ನೂ ತುಂಬಬಲ್ಲವು.
ಪುರಾಣ ಪಾತ್ರಗಳನ್ನು ತಿಕ್ಕಿ, ತೀಡಿ, ವಿರೋಧಿಸಿ, ಪ್ರಶ್ನಿಸಿ, ಎದುರಿಸಿ, ಒಪ್ಪಿ, ಅಪ್ಪುವ ಅವಕಾಶ ಯಕ್ಷಗಾನ ಕಲಾ ವಲಯದ ಜನತೆಗೆ ಹೆಚ್ಚು. ಪುರಾಣ ಪಾತ್ರಗಳನ್ನೂ ದಿನವೂ ಮಾತನಾಡಿಸುವಂತೆ.. ಏಕೆಂದರೆ ಇಲ್ಲಿ ದಿನನಿತ್ಯವೂ ನೂರಾರು ಆಟ.
ಈ ನೆಲೆಯಲ್ಲಿ ʼಪುರಾಣ ಪಾತ್ರಗಳ ವರ್ತಮಾನʼ ಎಂಬ ಸರಣಿಯನ್ನು ಪುರಾಣ ಮತ್ತು ಯಕ್ಷಗಾನದ ಸಮೀಕರಣದೊಂದಿಗೆ ಆರಂಭಿಸಿದ್ದೇವೆ. ಸದ್ಯ ಆಯ್ದ ಸಹೃದಯರು ಪುರಾಣ ಪಾತ್ರಧಾರಿಗಳಾಗಿ ತಮ್ಮ ಅನುಭವ, ಅದರ ತಯಾರಿಯಲ್ಲಿನ ಅನುಭವ, ಅಥವಾ ರಂಗಸ್ಥಳದಲ್ಲಿ ಪುರಾಣ ಪಾತ್ರಗಳನ್ನು ಕಂಡ ಬಗೆ, ರಂಗದ ಹಿಂದಿನ ಚೌಕಿಯ ನೆನಪು, ಮತ್ತು ಅದರಿಂದ ಬದುಕಿಗೇನು? ಬದುಕಲ್ಲಿ ಏನು? ಎಂದು ಚರ್ಚಿಸುತ್ತಾರೆ.
ಮುಂದೆ ಇದನ್ನು ವಿಸ್ತರಿಸುವ ಇರಾದೆ ಇದೆ. ಈ ನೆಲೆಯಲ್ಲಿ ತಾವೂ ಕೂಡ ಮೇಲಿನ ಉದ್ದೇಶಕ್ಕೆ ಸರಿಯಾಗಿ ತಮ್ಮ ಬರಹವನ್ನು ನಮಗೆ ಕಳುಹಿಸಿಕೊಡಬಹುದು. ಮೇಲ್ ಮಾಡುವಾಗ ‘ಯಕ್ಷಗಾನ’, ‘ಯಕ್ಷರಂಗ’ ಅಥವಾ ‘ಪುರಾಣ ಪಾತ್ರಗಳ ವರ್ತಮಾನ’ ಸರಣಿಗೆ ಲೇಖನ ಎಂದು ನಮೂದಿಸಲು ಮರೆಯಬೇಡಿ.
ನಮ್ಮ ಇಮೇಲ್ ವಿಳಾಸ: tv9kannadadigital@gmail.com
ಇದನ್ನೂ ಓದಿ: Yakshagana: ಬಡತನವೋ ಸಿರಿತನವೋ ಎಳೆಯರನ್ನು ಬಾಧಿಸದಿರಲಿ
Yakshagana: ಪುರಾಣ ಎಂದರೆ ಬಹಳ ಹಿಂದಿನದು, ಪುರಾತನ ಎನ್ನುವ ಅರ್ಥ ಮಾತ್ರವೇ?