ಸಿಂಪಿ ಲಿಂಗಣ್ಣ | Simpi Linganna : ತಂದೆ, ತಾಯಿ, ಅಣ್ಣ, ಅತ್ತಿಗೆ ಅವರ ಜನಪದ ಪ್ರತಿಭೆಯ ಜೊತೆಗೆ ಊರಿನಲ್ಲಿ ನಡೆಯುತ್ತಿದ್ದ ಜನಪದ, ಕೋಲಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಲಿಂಗಣ್ಣನವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹಲಸಂಗಿ ಗೆಳೆಯರಾದ ಮಧುರಚೆನ್ನ, ಕಾಪಸೆ ಸೀನಪ್ಪ, ಪಿ. ಧೂಲಾ ಅವರೊಂದಿಗೆ ಸೇರಿ ರಚಿಸಿದ ಜನಪದ ಸಾಹಿತ್ಯದ ಪ್ರಮುಖ ಮಾರ್ಗದರ್ಶಿ ಸಂಗ್ರಹಗಳಾದ ‘ಗರತಿ ಹಾಡು’, ‘ಜೀವನ ಸಂಗೀತ’, ‘ಮಲ್ಲಿಗೆ ದಂಡೆ’, ಮುಂತಾದ ಗ್ರಂಥಗಳು ಅವರಿಗೆ ಜನಪ್ರಿಯತೆಯನ್ನು ತಂದುದಲ್ಲದೆ ನಾಡಿನ ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಯಿತು. ‘ಗರತಿಯ ಹಾಡು’, ‘ಜೀವನ ಸಂಗೀತ’ ಸಂಗ್ರಹಗಳು ಇಂದಿಗೂ ಕಾವ್ಯದ ದೃಷ್ಟಿಯಿಂದ ಅದ್ವಿತೀಯ ಸಂಗ್ರಹಗಳೆಂದು ಆಧುನಿಕ ಸಾಹಿತ್ಯದ ಪ್ರಸಿದ್ಧ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರು ಅಭಿಪ್ರಾಯ ಪಟ್ಟಿದ್ದಾರೆ. ಲಿಂಗಣ್ಣನವರು ರಚಿಸಿದ ಉತ್ತರ ಕರ್ನಾಟಕದ ಜನಪದ ಕತೆಗಳು ಎಂಬ ಗ್ರಂಥದಲ್ಲಿ ಸುಮಾರು 73 ಕಥೆಗಳನ್ನು ಸಂಗ್ರಹಿಸಿ ಅವುಗಳನ್ನು ಶಾಸ್ತ್ರೀಯವಾಗಿ ಎಂಟು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ.
ತಿರು ಶ್ರೀಧರ, ಲೇಖಕರು
*
ಭಾಗ – 2
ಲಿಂಗಣ್ಣನವರ ‘ಜನಪದ ಜೀವಾಳ’ ಎಂಬ ಮೌಲಿಕ ಗ್ರಂಥವು ಜನಪದ ಸಾಹಿತ್ಯದ ಅಧ್ಯಯನಕ್ಕೆ ಅಡಿಗಲ್ಲಾಗಿದೆ. “ಜನಪದ ಸತ್ವದಿಂದ ಪರಿಪುಷ್ಟವಾದ ಸಿಂಪಿಯವರ ಪರಿಪಕ್ವ ಭಾವಕೋಶದ ಅಭಿವ್ಯಕ್ತಿಯನ್ನೇ ಇಲ್ಲಿ ಕಾಣಬಹುದು” ಎಂದು ಖ್ಯಾತ ಕವಿ ಚೆನ್ನವೀರ ಕಣವಿಯವರು ಹೇಳಿದ್ದಾರೆ. ಉತ್ತರ ಕರ್ನಾಟಕದ ವೈವಿಧ್ಯಮಯ ಹಾಡುಗಳನ್ನು ಪರಿಚಯಿಸುವುದು ‘ಉತ್ತರ ಕರ್ನಾಟಕದ ಜನಪದ ಗೀತೆಗಳು’ ಎಂಬ ಗ್ರಂಥವಾದರೆ, ‘ಅಯ್ದಕಥೆ’ ದೃಷ್ಟಾಂತ ಕಥೆಗಳ ಸ್ವಾರಸ್ಯವನ್ನು ಸ್ವಲ್ಪದರಲ್ಲೇ ತಿಳಿಸುವುದು. ‘ಕಿರಿದರೊಳೆ ಪಿರಿದರ್ಥದ ಚಲಕ” ಎಂಬುದು ಉಪನ್ಯಾಸ ಗ್ರಂಥ. ಉತ್ತರ ಕರ್ನಾಟಕದ ಪ್ರಸಿದ್ಧ ಲಾವಣಿಗಳ ಸಂಗ್ರಹವಾದ ‘ಲಾವಣಿಗಳು’ ಎಂಬ ಗ್ರಂಥದಲ್ಲಿ ಲಾವಣಿಗಳ ಹುಟ್ಟು, ಸ್ವರೂಪ ಬೆಳವಣಿಗೆಯನ್ನು ಕುರಿತು ಲಿಂಗಣ್ಣನವರು ವಿವೇಚಿಸಿದ್ದಾರೆ.
ಜನಪದ ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಪ್ರಬುದ್ಧ ಪ್ರಬಂಧಗಳ ಸಂಕಲನ ‘ಹೆಡೆಗೆ ಜಾತ್ರೆ’ಯಾದರೆ, ಹೆಣ್ಣು, ಮಗಳು, ಸೊಸೆ, ಸತಿ, ತಾಯಿಯಾಗುವ ಗರತಿಯ ನಾಲ್ಕು ಅವತಾರಗಳನ್ನು ಹಾಡಿನ ಮೂಲಕ ವ್ಯಾಖ್ಯಾನಿಸಿರುವ ಗ್ರಂಥ ‘ಗರತಿಯ ಬಾಳ ಸಂಹಿತೆ’. ಗಾದೆಗಳ ಮೂಲ ಸ್ವರೂಪ, ಅರ್ಥವ್ಯಾಪ್ತಿ ಅವುಗಳಲ್ಲಿರುವ ಕಾವ್ಯಾಂಶ ಮತ್ತು ಪ್ರಭಾವ ಕುರಿತು ವಿಶ್ಲೇಷಿಸಿರುವ ‘ಗಾದೆಗಳ ಗಾರುಡಿ’ ಗ್ರಂಥದ ಲಿಂಗಣ್ಣನವರ ಈ ಸಾಧನೆಗಾಗಿ ‘ಗಾದೆಯ ವೇದವನ್ನು ಕ್ರೋಢೀಕರಿಸಿದ ಇಂದಿನ ವೆದವ್ಯಾಸರೆಂದು’ ಎನ್ಕೆ ಅವರು ಲಿಂಗಣ್ಣನವರನ್ನು ಕೊಂಡಾಡಿದ್ದಾರೆ. ಸಿಂಪಿ ಲಿಂಗಣ್ಣನವರು 100ಕೃತಿಗಳನ್ನು ರಚಿಸಿದರೂ ಅವರ ಜನಪದ ಕೃತಿಗಳು ಚಿರಂತನವಾದವು. ಹಳ್ಳಿಯ ಬಾಳಿನಲ್ಲಿ ಬೆರೆತು ಜನಜೀವನದ ಮಾತುಕತೆ ಸಂಗ್ರಹಿಸಿ ಸಂಪಾದಿಸಿ ವಿಮರ್ಶಿಸಿ ಬದುಕಿದ ಲಿಂಗಣ್ಣನವರು “ಜಾನಪದ ಸಂಗಮ ವಿಶ್ವವಿದ್ಯಾಲಯವೇ” ಆಗಿದ್ದರು.
ಕನ್ನಡ ಸಾಹಿತ್ಯದ ನವೋದಯದ ಸಂದರ್ಭದಲ್ಲಿ ಸಿಂಪಿ ಲಿಂಗಣ್ಣನವರು ಕವಿತೆಗಳನ್ನು ಬರೆದರು. 1936ರಲ್ಲಿಯೇ ಅವರು ಹಿಂದಿಯ ಪ್ರಸಿದ್ಧ ರಾಮನರೇಶ ತ್ರಿಪಾಠಿಯವರು ಬರೆದ ‘ಮಿಲನ’ ಎಂಬ ಖಂಡಕಾವ್ಯವನ್ನು ಪ್ರಥಮವಾಗಿ ಕನ್ನಡಕ್ಕೆ ಅನುವಾದಿಸಿದರು. ಅರವಿಂದರ ಅನುಯಾಯಿಗಳಾದ ಹತ್ತು ವರ್ಷಗಳ ನಂತರ ಅಧ್ಯಾತ್ಮದ ಅನುಭಾವ ಗೀತವಾದ 62 ಕವನಗಳಿಂದ ಕೂಡಿದ ‘ಮುಗಿಲ ಜೇನು’ ಎಂಬ ಹೊಸ ಸಂಕಲನವನ್ನು ನೀಡಿದರು. ಬಸವಣ್ಣನವರ ಜೀವನ ಹಾಗೂ ಸಾಧನೆಗಳನ್ನು ಕುರಿತ 63ಕವನಗಳ ಸಂಗ್ರಹ ‘ಶ್ರುತಾಶ್ರುತ’.
ಇದನ್ನೂ ಓದಿ : S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು
ಬಹುಮುಖ ವ್ಯಕ್ತಿತ್ವದ ಸಿಂಪಿ ಲಿಂಗಣ್ಣನವರು ಅನೇಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಮಧುರಚೆನ್ನ, ಬೇಂದ್ರೆ, ಬಸವಣ್ಣ, ರಾಮಕೃಷ್ಣ ಪರಮಹಂಸ, ರಬೀಂದ್ರನಾಥ ಠಾಕೂರ್, ರಾಮತೀರ್ಥ, ಶ್ರೀಮಾತೆ, ಅರವಿಂದರು, ಇವುಗಳಲ್ಲಿ ಪ್ರಮುಖವಾಗಿವೆ. ‘ಮೂವತ್ತೈದು ವರ್ಷ’, ‘ಕನ್ನಡದ ಕುಲದೀಪ ಬಸವಣ್ಣನವರ ಜೀವನ’, ‘ಪ್ರಿಯದರ್ಶಿ ಅಶೋಕ’ , ‘ಶ್ರೀ ಮಧುರಚೆನ್ನರ ಸ್ಮೃತಿಗಳು – ಅವರ ಜೀವನ ಮತ್ತು ಕಾರ್ಯ’, ‘ವಿಶ್ವಕವಿ’, ‘ಸಿಡಿಲು ಸನ್ಯಾಸಿ’, ‘ಮಹತ್ಕ್ರಾಂತಿಯ-ಮಹಾಮನು’ ಮುಂತಾದ ಕೃತಿಗಳು ಕನ್ನಡ ಸಾಹಿತ್ಯದ ಜೀವನ ಚರಿತ್ರೆಗಳಲ್ಲಿ ಮೈಲಿಗಲ್ಲಾಗಿವೆ.
ಸಿಂಪಿ ಲಿಂಗಣ್ಣನವರ ಕಥಾಸಂಕಲನಗಳು ‘ಕಣ್ಮಸಕು’ ಮತ್ತು ‘ಮಧುವನ’. ಟಾಲ್ಸ್ ಟಾಯ್ ಅವರ ಏಳು ಕತೆಗಳನ್ನು ಹಿಂದಿಗೆ ಭಾಷಾಂತರಿಸಿದ ಪ್ರೇಮಚಂದರ ಕೃತಿಯನ್ನು ಸಿಂಪಿ ಲಿಂಗಣ್ಣನವರು ‘ಪವಿತ್ರ ಜೀವನ’ ಎಂಬ ಹೆಸರಿಟ್ಟು ಕನ್ನಡದ ಅನುವಾದವಾಗಿ ಪ್ರಕಟಿಸಿದರು. ಅರವಿಂದಾಶ್ರಮದ ಶ್ರೀ ಮಾತೆಮಹಾಮಾತೆಯವರ ಜೀವನ ಸಂದೇಶ ವಿವರಿಸುವ ‘ಸುಂದರ ಕತೆಗಳು’ ಎಂದಾಗಿಯೂ, ಸಿದ್ಧೇಶ್ವರ ಸ್ವಾಮಿಗಳ ಪ್ರವಚನದಲ್ಲಿ ಮೂಡಿಬಂದ ಕಥಾನಕಗಳನ್ನು ‘ಡಾಳಿಸಿದ ದೀಪ’ ಎಂಬ ಕಥಾ ಸಂಕಲನವನ್ನಾಗಿಯೂ ಹಾಗೂ ಉತ್ತರ ಕರ್ನಾಟಕದ ಹಿಂದಿನ ತಲೆಮಾರಿನ ಜನರ ರೀತಿ-ನೀತಿ ಕುರಿತು ಮನೋಜ್ಞವಾಗಿ ಬರೆದ ಕತೆಗಳ ಸಂಕಲನವನ್ನು ‘ಸತ್ಯಕತೆಗಳು’ ಎಂದಾಗಿಯೂ ಲಿಂಗಣ್ಣನವರು ಪ್ರಕಟಿಸಿದರು.
ಸಿಂಪಿ ಲಿಂಗಣ್ಣನವರು ಬರೆದದ್ದು ಒಂದೇ ಕಾದಂಬರಿ. ಅದು ‘ಬೆಟ್ಟದ ಹೊಳೆ’. ಹಳ್ಳಿಯ ಬಡಯುವಕನೊಬ್ಬ ಕಷ್ಟ ಅನುಭವಿಸಿ ಶಿಕ್ಷಕನಾಗಿ ಆದರ್ಶವ್ಯಕ್ತಿ ಹಾಗೂ ಸಾಹಿತಿಯಾಗಿ, ಅನುರೂಪಳಾದ ಹೆಂಡತಿ ಪಡೆದು ಸುಖ ಸಂಸಾರಿಯಾದುದನ್ನೇ ಚಿತ್ರಿಸುತ್ತದೆ. ಒಂದು ರೀತಿಯಲ್ಲಿ ಇಂದು ಸಿಂಪಿ ಲಿಂಗಣ್ಣನವರ ಆತ್ಮ ಚರಿತ್ರೆಯೇ ಆಗಿದೆ. ಹಲವು ಏಕಾಂಕ ನಾಟಕಗಳು, ಮಕ್ಕಳಿಗಾಗಿ ಹಲವಾರು ಕಥೆಗಳು, ರಾಮತೀರ್ಥರ ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯದಲ್ಲಿ ಹನ್ನೆರಡು ಕೃತಿಗಳು ಇವೆಲ್ಲ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗಗಳಾಗಿವೆ.
ಹೀಗೆ ಡಾ. ಸಿಂಪಿ ಲಿಂಗಣ್ಣನವರು ಕನ್ನಡ ನಾಡಿನ ಹಿರಿಯ ಜಾನಪದ ವಿದ್ವಾಂಸರಾಗಿ, ಕಥೆಗಾರರಾಗಿ, ಭಾಷಣಕಾರರಾಗಿ, ಪ್ರಕಾಶಕರಾಗಿ ಮತ್ತು ಅಧ್ಯಾತ್ಮಿಕವಾದಿಗಳಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದಂತೆ, ಕನ್ನಡಿಗರ ಮನವನ್ನೂ ಗೆದ್ದರು. ಅವರು ಬಿಸಿಲನಾಡಿನ ಅನುಭವಗಳನ್ನು ಕುರಿತು ವೈವಿಧ್ಯಮಯವಾದ ಲೇಖನಗಳನ್ನು ಬರೆದು ‘ಬಯಲನಾಡಿನ ಭೈರವರಾಗಿದ್ದಾರೆ’.
ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳೆದು ಶಿಕ್ಷಕನಾಗಿ, ಸಾಹಿತಿಯಾಗಿ, ಯಾವ ಬಲವಿಲ್ಲದೆ ಸ್ವಪ್ರಯತ್ನದಿಂದ, ಗೆಳೆಯರೊಡನೆ ಪ್ರೀತಿಯಿಂದ ಕೂಡಿ ಹಲವು ಕಾರ್ಯಗಳನ್ನು ನಾಡಿನ ಜನಮೆಚ್ಚುವಂತೆ ಮಾಡಿ, ಸಾಹಿತ್ಯದಲ್ಲಿ ಸಿದ್ದಹಸ್ತರಾದಂತೆ ಅಧ್ಯಾತ್ಮದಲ್ಲಿಯೂ ಸಿದ್ಧಿಯನ್ನು ಪಡೆದ ಮೇರುಸದೃಶ ವ್ಯಕ್ತಿತ್ವದ ಸಿಂಪಿ ಲಿಂಗಣ್ಣನವರು 1993ರ ಮೇ 5ರಂದು ತಮ್ಮ ಅಪಾರ ಗೆಳಯರು, ಅಭಿಮಾನಿಗಳನ್ನು ಬಿಟ್ಟು ಅಗಲಿದರು.
(ಮುಗಿಯಿತು)
ಭಾಗ 1 : Simpi Linganna Birth Anniversary: ಉಪ್ಪು ಮಾರಿ, ಬಟ್ಟೆ ನೇಯ್ದು ‘ವಾಗ್ವಿಲಾಸ’ ವಾಚನಾಲಯ ತೆರೆದ ಸಿಂಪಿ ಲಿಂಗಣ್ಣ
ಇದನ್ನೂ ಓದಿ : S.V. Parameshwar Bhat Birth Anniversary: ನನ್ನಂತರಂಗದಿ ನಂದದೆ ನಿಂದೀಪ ನಂದಾದೀಪವಾಗಿರಲಿ ದೀಪ ಹಚ್ಚಾ
Published On - 2:51 pm, Thu, 10 February 22