ಅಮಾರೈಟ್ | AmaRight : ನಮಗೆ ಎಲ್ಲವನ್ನೂ ಬದಲಾಯಿಸೋ ಹುಚ್ಚು, ವಿರೋಧಿಸುವ ಹುಚ್ಚು, ಇದ್ದದ್ದನ್ನ ಇರುವ ಹಾಗೇ ಇರಲೂ ಬಿಡದೆ ಒಕ್ಕಲೆಬ್ಬಿಸುವ ಹುಚ್ಚು. ಅಫ್ಕೋರ್ಸ್, ಬದುಕಿಗೆ ದಡ್ಡತನ ಎಷ್ಟು ಮುಖ್ಯ ಅಂತ ಗೊತ್ತಾಗುವುದೇ ನಮ್ಮ ಬುದ್ಧಿವಂತಿಕೆ, ನಮ್ಮ ಬದುಕಿಗೆ ನೆಮ್ಮದಿ ಕೊಡುವುದರಲ್ಲಿ ಸೋಲುತ್ತಿದೆ ಅಂತ ಗೊತ್ತಾದಾಗಲೇ. ಓದಿದಷ್ಟು ಪ್ರಬುದ್ಧಳಾಗುತ್ತೀಯ ಅಂದರೆ ಓದುವುದು ಸುಲಭ ಮತ್ತು ಇಷ್ಟದ ಕೆಲಸ. ಅದೇ ಓದುವುದರಿಂದ ಬುದ್ಧಿವಂತರಾಗುತ್ತಾರೆ ಅನ್ನುವುದಾದರೆ ಅದರ ಪ್ರಯೋಜನವೇನು? ಓದುವುದಕ್ಕೆ ಮತ್ತು ಬರೆಯುವುದಕ್ಕೆ ಸಿಗುವ ಮಾರ್ಕ್ಸ್‌ಕಾರ್ಡಿನ ಯಾವ ಮೂಲೆಯಲ್ಲಾದರೂ ನಾವು ಕೂಡಿಸಿಕೊಂಡ, ಅರಗಿಸಿಕೊಂಡ, ಮೈಗೂಡಿಸಿಕೊಂಡ ಮನುಷ್ಯತ್ವದ ಪರ್ಸೆಂಟೇಜ್ ಬರೆದುಕೊಡುವುದಿಲ್ಲವಾದರೆ…! ಟಿವಿ ನೋಡುತ್ತಾ ಕೂತ ಅರವತ್ತೆಪ್ಪತ್ತು ವರ್ಷದ ಅಜ್ಜಿ “ಅಯ್ಯೋ, ಈ ಸುಖಕ್ ಯಾಕಾರೂ ಓದ್ಬೇಕಿತ್ತು ಬಿಡಿ” ಅನ್ನುವುದು ನಿಜಾ ತಾನೇ?
ಭವ್ಯಾ ನವೀನ, ಕವಿ (Bhavya Naveen)
*
(ಬಿಲ್ಲೆ 4)
ನನಗೆ ಗಣಿತ ಕಷ್ಟವಿದ್ದ ಕಾಲವಿತ್ತು. ಈಗ ಕಷ್ಟವಿಲ್ಲ ಅಂತಲ್ಲ, ಆದರೆ ಅದನ್ನು ಕಷ್ಟ ಅಂತ ಹೇಳುವ ಯಾವ ಪರೀಕ್ಷೆಗಳನ್ನೂ ನಾನೀಗ ಎದುರಿಸಬೇಕಾಗಿಲ್ಲ ಅನ್ನುವುದೇ ಸದ್ಯದ ಸಮಾಧಾನವಾಗಿತ್ತು. ಕೈಗೆ ಸಿಕ್ಕ ನೋಟುಗಳನ್ನು ಲಯಬದ್ಧವಾಗಿ ಎಣಿಸುವುದಕ್ಕಾಗಲಿ, 50 ಪೈಸೆಗೂ ಕಣ್ಣಿಟ್ಟು ಆಫೀಸಿನಲ್ಲಿ ಲೆಕ್ಕ ಬರೆಯುವಾಗಾಗಲೀ ನಾನು ಕಲಿಯದೇ ಉಳಿಸಿದ ಗಣಿತ ಇಲ್ಲಿಯವರೆಗೆ ಕಾಡಿಲ್ಲ.
“ಅಕ್ಕಿ, ಬೇಳೆ ಇಷ್ಟಿದೆ ಎಂದರೆ ವಾರದ ಕೊನೆತನಕ ಆರಾಮು, ಎರಡು ಟೊಮೊಟೊ ನಾಲ್ಕು ಮೆಣಸಿನಕಾಯಿ ಮಿಕ್ಕಿದೆ ಅಂದರೆ ನಾಳೆ ಬೆಳಿಗ್ಗೆ ಉಪ್ಪಿಟ್ಟಿಗೆ, ಒಪ್ಪತ್ತಿನ ತಿಳಿಸಾರಿಗೆ ಮೋಸವಿಲ್ಲ. ಫ್ರಿಡ್ಜಿನಲ್ಲಿಟ್ಟಿದ್ದ ಚಾಕಲೇಟು ಇಷ್ಟೇಯ ಉಳಿದದ್ದೂ?, ಎರಡು ಕಾಳು ಉಪ್ಪು ಹಾಕಿದ್ದು ಇಷ್ಟು ಮಜ್ಜಿಗೆಗೆ ಜಾಸ್ತಿಯಾಯಿತಾ? ಜಾಸ್ತಿಯೇ ಆಯಿತೆನ್ನಿ ಈಗ ಇನ್ನೆಷ್ಟು ನೀರು ಹಾಕಿದರೆ ಈ ನೀರ್‌ಮಜ್ಜಿಗೆ ತಡೆಯಬಹುದು” ಎನ್ನುವ ಆ ಎಲ್ಲಾ ಲೆಕ್ಕಾಚಾರಗಳಿಗೂ ನನ್ನ ಹೈಸ್ಕೂಲ್, ಕಾಲೇಜಿನ ಗಣಿತ ಕೆಲಸಕ್ಕೆ ಬಂದಿಲ್ಲ.
“ಎದುರುಮನೆ ಆಂಟಿ ಮಾತಿಗೆ ಸಿಕ್ಕಿ ಎಷ್ಟು ದಿನಾಯ್ತು? ಕೆರೆಏರಿಯ ಕಟ್ಟೆಯ ಮೇಲೆ ಕೂರುತ್ತಿದ್ದ ಅಜ್ಜ ಕಾಣದೆ ತಿಂಗಳಾಯಿತಲ್ಲವಾ? ಇವನು ನಗುತ್ತಾ ಮಾತಾಡಿದ್ದು ಯಾವಾಗ? ಮಕ್ಕಳ ಕೊರಳು ತಬ್ಬಿ ಮಲಗಿ ಇವತ್ತಿಗೆ ವಾರವಾಯಿತು, ಎಲ್ಲರೂ ಜೊತೆಗೆ ಕೂತು ಊಟಮಾಡಿದ್ದು ದೀಪಾವಳಿಗೆ ಕಡೆ..” ಹೀಗೇ ನೆನಪಿನ ಆಡಿಟಿಂಗ್‌ಗೆ ಜಿಯೋಮೆಟ್ರಿ, ಆಲ್‌ಜೀಬ್ರಾ, ಮ್ಯಾಟ್ರಿಕ್ಸು, ಕ್ಯಾಲ್ಕುಲಸ್ ಯಾವುದೂ ಬೇಕಾಗಲೇ ಇಲ್ಲ.
ನಮ್‌ನಮಗೆ ಗೊತ್ತಿದ್ದ ಗಣಿತದಲ್ಲೇ ಹೇಗೋ ಮ್ಯಾನೇಜ್ ಮಾಡಿಕೊಂಡು ದಿನಗಳೆದಿದ್ದ ಸಾಮಾನ್ಯ, ಸಾಮಾನ್ಯ ನಾವುಗಳು ಗಣಿತದ ಹೊಸ ಹೊಸ ಪ್ರಮೇಯಗಳನ್ನು, ಅದರ ಹೊಸ ಹೊಸ ಆಯಾಮಗಳನ್ನು ಸಿಲಬಸ್‌ಗಿಂತ ಸೀರಿಯಸ್ಸಾಗಿ ಬದುಕುತ್ತಿದ್ದೇವೆ ಅನ್ನುವ ನಂಬಿಕೆಯೊಂದಿತ್ತು ನೋಡಿ, ಬದುಕು ಹಾಗೀಗೇ ಸರಾಗವಾಗೇ ಹೋಗುತ್ತಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೇ ನನಗೆ ನಾವು ಕಲಿಯಬೇಕಿದ್ದ ಗಣಿತ ಮತ್ತೊಂದಿತ್ತಲ್ಲ ಅನ್ನಿಸಿತು, ಏನೂ ಮಾತಾಡದೆ ಮೌನವಾಗಿದ್ದುಬಿಡಬೇಕು ಅಂದುಕೊಂಡ ಈ ದುರ್ಗಮ ದಿನಗಳಲ್ಲೂ ನಿಮಗೆ ಈ ಹೊಸ ಗಣಿತ ಪ್ರಮೇಯವನ್ನು ಒಮ್ಮೆ ತಿಳಿಸುವ ಅಂತಲೇ ಬರೆಯುತ್ತಿದ್ದೇನೆ. ನಮ್ಮ ಗುಲ್ಜಾರ್ ಸಾಹೇಬರ ‘ಯೆ ದೋಸ್ತಿ ಕಾ ಗಣಿತ್ʼ ಅನ್ನುವ ಥಿಯರಂ ಅದು.. ಅದರ ಪ್ರಕಾರ,
ಇದು ಗೆಳೆತನದ ಗಣಿತ ಸಾಹೇಬ್
ಇಲ್ಲಿ ಎರಡರಲ್ಲಿ ಒಂದು ಕಳೆದರೆ
ಏನೂ ಉಳಿಯುವುದಿಲ್ಲ..
-ಗುಲ್ಜಾರ್
ಇದನ್ನೂ ಓದಿ : No Delete Option: ಸುಂಕಪ್ಪನ ಹೋಟೆಲ್ಗೆ ಹೋಗೋಣವಾ; ಎಲ್ಲೆಲ್ಲಿದ್ದೀರಿ ಕೃಷ್ಣಾ, ಅಜ್ಮತ್, ಸಲಾಹುದ್ದೀನ್, ರೆಡ್ಡಿ, ಪಾಷಾ, ರಾಘು
ಹ್ಮ್.. ಗೆಳೆತನದ ಗಣಿತದಲ್ಲಿ ಎರಡರಿಂದ ಒಂದು ಕಳೆದರೆ ಉಳಿಯುವುದು ಶೂನ್ಯ ಅನ್ನುವುದನ್ನು ನಾವೀಗ ಒಂದು ಇಡೀ ದಿನ ತಿರುಗಿ ಮುರುಗಿ ತಿದ್ದುತ್ತಲೇ ಕೂತರೆ ಏನಾದರೂ ಸುಧಾರಿಸುತ್ತೇವೇನೋ ನೋಡಬೇಕು ಅಂತ ಅನ್ನಿಸಿತು. ಆದರೆ ನಾವೀಗಾಗಲೇ ಶೂನ್ಯದ ಒಳಗೆ ಸಿಗಿಬಿದ್ದಿದ್ದೀವಾ ಅಂತಲೂ ಭಯವಾಯಿತು.
ಬೆಳಗಾದರೆ ಟೀವಿ, ಪೇಪರಿನ ತುಂಬಾ 2-1=೦ ಅನ್ನುವಂತದ್ದೇ ಸಮೀಕರಣ ನೋಡಿ ನೋಡಿ ಸಾಕಾಗಿ ಹೋಗಿರುವಾಗಲೂ “ನೋಡಿ, ಇಂಥದ್ದೊಂದು ಲೆಕ್ಕ ಇದೆ ಅಂತಲೋ ಅಥವಾ ಅದೇ 6-5=2 ಅಂತ ದೆವ್ವದ ಫಿಲ್ಮಿತ್ತಲ್ಲಾ, ಅದಕ್ಕಿನ್ನ ಭಯಾನಕ ಮತ್ತು ಘನಘೋರವಾದ ಈ ಲೆಕ್ಕವನ್ನು ಪ್ಲೀಸ್, ಒಂಚೂರು ನಿಂತು, ಒಂದು ಸಲಕ್ಕಾದರೂ ಬಿಡಿಸಿ ಏನಾದರೂ ಮಾಡಬಹುದಾ ನೋಡಿ” ಅನ್ನುವ ಮನಸ್ಸು. ಆದರೆ ಈಗಾಗಲೇ ಒಂದೊಂದೂ ಒಂದೊಂದು ಕಡೆ ಬರೀ “ಬಣ್ಣ”ಗಳನ್ನೇ ನೆಚ್ಚಿಕೊಂಡು ಬೀದಿಗಿಳಿದಿರುವಾಗ ಯಾವ ಲೆಕ್ಕ? ಯಾವ ಮನಸ್ಸು? ಯಾವ ಗೆಳೆತನ?
ನಾವು ಓದುತ್ತಿರುವ ಸಿಲಬಸ್‌ಗಳು ಮತ್ತು ನಾವು ಬದುಕುತ್ತಿರುವ ಕಾಲದ ಭಾವನಾತ್ಮಕ ಸೀಕ್ವೆನ್ಸ್‌ಗಳು ಒಂದಕ್ಕೊಂದು ಹೊಂದಾಣಿಕೆಯಾಗದಿದ್ದರೆ ಏನೇನೆಲ್ಲಾ ಆಗಬಹುದು ಅನ್ನುವುದನ್ನು ನಾವೀಗ ಮನೆಯಲ್ಲೇ ಕೂತು ನೇರಪ್ರಸಾರದಲ್ಲಿ ನೋಡುತ್ತಿದ್ದೇವೆ. ರಿಮೋಟ್ ಬದಲಿಸಿದಷ್ಟೂ ವೈವಿಧ್ಯಮಯ ನಿರೂಪಣೆಯ ಅದೇ ‘ಬುದ್ಧಿವಂತಿಕೆ ನಮ್ಮನ್ನು ಸೋಲಿಸಿದ ಪಾಠʼ ಕೇಳಸಿಗುತ್ತಿದೆ. ಕೆಲವೊಂದನ್ನು ನೇರವಾಗಿ, ವಸ್ತುನಿಷ್ಠವಾಗಿ ಹೇಳಿದರೆ ಅದು ಬರೀ ಸುದ್ದಿಯಾಗುತ್ತದೆ ಅನ್ನುವುದು ಚೆನ್ನಾಗಿ ಗೊತ್ತಿದ್ದಕ್ಕೇ, ನಾನು ಬಹಳಷ್ಟು ಸಾರಿ ಸುತ್ತಿ ಬಳಸಿ ಮಾತಾಡುತ್ತೇನೆ. ಸೂಚ್ಯ ಸಂಗತಿಗಳು ಆಗೀಗ ಮಾತ್ರ ಅಪರೂಪಕ್ಕೆ, ಕೆಲವರಿಂದಲೇ ಓದಿಸಿಕೊಂಡರೂ ನಾಳೆ, ನಾಡಿದ್ದು, ಮುಂದಿನ ವಾರ, ತಿಂಗಳು, ವರ್ಷ ಯಾವತ್ತಿಗೂ ಹಳಸಲಾಗುವುದಿಲ್ಲ. ಪ್ರತಿ ಬಾರಿ ಓದಿದಾಗೆಲ್ಲಾ ಯಾವ್ಯಾವುದಕ್ಕಾದರೂ ಹೋಲಿಸಿ ‘ಹೂಂʼಗುಟ್ಟಿಕೊಳ್ಳಬಹುದು. ಮೊನ್ನೆ ಮೊನ್ನೆವರೆಗೂ ಕನ್ನಡದ ಬಗ್ಗೆ ಮಾತಾಡಿ ನಿಲ್ಲಿಸಿದರು, ಆಮೇಲೆ ಹಿಜಾಬು – ಕೇಸರಿ ಶಾಲು, ಮತ್ತೆ ಸಿಂಧೂರ-ಬಳೆ, ಜೊತೆಗೆ ಈಗ ಪ್ರಾಣ ತೆಗೆಯುವಷ್ಟು ಅಮಾನವೀಯತೆ. ಬುದ್ಧಿವಂತ ಜಗತ್ತಿಗೆ ಸುದ್ದಿಯಾಗಲು, ಸುದ್ದಿ ಮಾಡಲು ಸಾಕಷ್ಟಿರುತ್ತದೆ. ಆದರೆ.. ಈ ಮೇಲೆ ಹೇಳಿದಂತೆ ಪ್ರಬುದ್ಧತೆ ಇಲ್ಲದ ಯಾವ ಬುದ್ಧಿವಂತಿಕೆ ಕಟ್ಟಿಕೊಂಡು ಏನಾಗಬೇಕಿದೆ ಅಂತ?
ಇದನ್ನೂ ಓದಿ : No Delete Option: ಮಾರುವೇಷದ ಹದ್ದುಗಳು; ವ್ಯವಸ್ಥಿತ ಮತಬ್ಯಾಂಕ್ ರಾಜಕೀಯದಾಟವಿದು, ಅರಿಯದ್ದೇನಲ್ಲ
ಹಕ್ಕುಗಳು ಕರ್ತವ್ಯಕ್ಕಿಂತ ಮುಖ್ಯವಾಗುವ ಮನಸ್ಥಿತಿಯಲ್ಲಿ ಬೆಳೆದುಬರುವುದು ನಮ್ಮ ಭಾರತೀಯತೆಯ ಒಂದಂಶವೇ ಇರಬೇಕು. ಆದರೂ ನಾವಿದನ್ನು ಎಂಜಾಯ್ ಮಾಡುತ್ತಲೋ, ಇಲ್ಲವೇ ಇಗ್ನೋರ್ ಮಾಡುತ್ತಲೋ ಬಂದಿದ್ದೇವೆ. ಇಲ್ಲಿ ಹೆಚ್ಚಿಗೆ ಮಾತಾಗುವುದಿದ್ದರೆ ಅದು ಹಕ್ಕುಗಳ ಬಗ್ಗೆ ಮಾತ್ರ. ನಮ್ಮ ನಮ್ಮ ಕರ್ತವ್ಯಗಳ ಪರಿಚಯವೂ ಬಹುತೇಕ ನಮಗಿರುವುದೇ ಇಲ್ಲ. ಈ ಬಗ್ಗೆ ಮಾತಾಡುವಾಗ ನಮ್ಮ ಗಂಟಲಿಗೆ ಏನೂ ಸಿಕ್ಕಿಕೊಳ್ಳುವುದೇ ಇಲ್ಲ ಯಾಕೆ? ಅಂತ ಪ್ರಶ್ನೆಯೂ ಏಳದಷ್ಟರ ಮಟ್ಟಿಗೆ ಇದೆಲ್ಲಾ ಸಲೀಸು. ಅದರಲ್ಲೂ ಸದ್ಯದ ಜನರೇಶನ್ನಿನ ಜನಸಂಖ್ಯೆ ಇದೆಯಲ್ಲ ಅದು ಆಗಾಗ ವಿಚಿತ್ರವಾಗಿ ಸ್ಫೋಟಿಸುವ ಕುರಿತು ಇಲ್ಲಿ ನಾನು ಬರೆದೇ ನೀವು ಓದಬೇಕಂತೇನಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತು. ಎಂಟೊಂಬತ್ತನೇ ಕ್ಲಾಸಿಗೆಲ್ಲ ಸಂವಿಧಾನದ ಪಾಠ ಒಂದಷ್ಟು ಬಾಯಿಪಾಠ ಆಗಿಹೋಗಿರುತ್ತದಲ್ಲ, ಅದನ್ನು ಅರ್ಥ ಮಾಡಿಸುವ, ಅಥವಾ ಮಾಡಿಕೊಳ್ಳುವ ಕುರಿತು ಯಾರಿಗೂ ಪುರುಸೊತ್ತಿಲ್ಲ. ಅದರ ಚಲಾವಣೆಗೆ ಬೇಕಿದ್ದರೆ ಕೇಳಿ – ನನ್ನದೂ ಒಂದು ಮಾತು ಸೇರಿಸುವುದಕ್ಕೆ ಅವಕಾಶ ಸಿಕ್ಕರೆ ಬಹುಶಃ ನನಗೂ ಅಭ್ಯಂತರವಿರುವುದಿಲ್ಲವಾ ಅಂತ!
ಮೊಮ್ಮಕ್ಕಳು ನೀರಾಟ ಆಡಿ ಒದ್ದೆಯಾದಾಗ ವಾಚಾಮಾಗೋಚರ ಬೈಯ್ಯುವ ಮತ್ತು ಮನೆಯ ಬೇಕು-ಬೇಡಗಳ ಮೇಲೆ ನಿಗಾ ವಹಿಸಿ ಗಂಡ-ಮಕ್ಕಳ ಮೇಲೆ ಬ್ರಹ್ಮಾಂಡ ಸಿಟ್ಟು ತೋರಿಸುವ ಅಮ್ಮನಿಗೆ ವಾಕ್ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಗೊತ್ತೇ ಇಲ್ಲ. ಮನೆಯಲ್ಲಿ ಸೂಕ್ಷ್ಮ ಸಂಗತಿಗಳು ನಡೆಯುವಾಗ ಸೈಲೆಂಟಾಗಿದ್ದು ಬಿಡುವ ಅವಳ ಗಾಂಭೀರ್ಯದಲ್ಲಿ ಏನನ್ನಾದರೂ ಅಭಿವ್ಯಕ್ತಿಸುವ ಉಮೇದು ಕಾಣುವುದಿಲ್ಲ. ಆದರೂ ನಮ್ಮೆಲ್ಲರ ಅಮ್ಮಂದಿರು ಆಯಾ ಕಾಲಕ್ಕೆ, ಆಯಾ ಸನ್ನಿವೇಶಕ್ಕೆ ತಕ್ಕುದಾಗಿ ಮಾತು ಮತ್ತು ಮೌನಗಳನ್ನು ಸರಿದೂಗಿಸಿಕೊಂಡು ಬರುವುದನ್ನು ವರ್ಷಾನುಗಟ್ಟಲೆ ನೋಡಿರುತ್ತೇವೆ. ಹಕ್ಕುಗಳನ್ನು ಚಲಾಯಿಸುವುದಕ್ಕಿಂತ, ಹಕ್ಕುಗಳನ್ನು ಗಳಿಸುವುದು ಮತ್ತು ಉಳಿಸಿಟ್ಟುಕೊಳ್ಳುವುದು ಅವಳಿಗೆ ಜೀವನ ಕಲಿಸಿದ ಪಾಠ. “ಅಯ್ಯೋ ದಡ್ಡಿ ಅಮ್ಮ” ಅಂತ ಅನಿಸಿಕೊಳ್ಳುವ ಅಮ್ಮನ ದಡ್ಡತನವೇ ನಮ್ಮನ್ನು ಎಷ್ಟು ಕಾಲದಿಂದ ಇನ್ನೂ ಎಷ್ಟು ಕಾಲದವರೆಗೂ ಪೊರೆಯಲಿದೆ ಅನ್ನುವ ಸಣ್ಣ ಕ್ಲ್ಯೂ ಕೂಡ ನಮಗಿಲ್ಲ. ಅಂಥದ್ದೊಂದು ಪ್ಯೂರೆಸ್ಟ್ ದಡ್ಡತನವನ್ನು ನಮ್ಮ ಕಾಲವೇ ಮಿಸ್ ಮಾಡಿಕೊಳ್ಳುತ್ತಿರುವಾಗ, ನಮ್ಮ ಮುಂದಿನ ಪೀಳಿಗೆಗಳೆಲ್ಲಾ ಹುಟ್ಟಾ ಬುದ್ಧಿವಂತರೇ ಆಗಿರುತ್ತಾರೇನೋ ಅನ್ನುವ ಕನಿಷ್ಟ ಭಯವಾದರೂ ಇರಬೇಕು. ಯಾಕೆಂದರೆ ಒಬ್ಬನ ಬುದ್ಧಿವಂತಿಕೆಯಷ್ಟು ಹಾನಿಕಾರಕ ಸಂಗತಿ ಏನಾದರೂ ಇದ್ದರೆ ಅದು ಯಾವಾಗಲೂ ಮತ್ತೊಬ್ಬನ ಬುದ್ಧಿವಂತಿಕೆಯೇ ಆಗಿರುತ್ತದೆ, ನಮಗೆಲ್ಲರಿಗೂ ಇದರ ಅನುಭವ ಇದ್ದೇ ಇದೆ.
ನಾವೇನು ಮಾಡುತ್ತಿದ್ದೇವೆ? ಅನ್ನುವುದರ ಬಗ್ಗೆ ನಮಗೇ ಗೊತ್ತಿರುವುದರಿಂದ ಅದರ ಬಗ್ಗೆ ಮಾತಾಡುವುದು ಬೇಡ. ಗುರುತಾದ ಮೇಲೆ ಸುಖಗಳು ಹೇಗೆ ಬೆಲೆ ಕಳೆದುಕೊಳ್ಳುತ್ತವೋ ಹಾಗೆಯೇ ಚಾಲ್ತಿಯಾದ ಮೇಲೆ ಸಂಗತಿಗಳೂ ಪ್ರಾಮುಖ್ಯತೆ ಕಳೆದುಕೊಳ್ಳುತ್ತವೆ ಅನ್ನುವುದನ್ನಂತೂ ಹೇಳಲೇಬೇಕಿತ್ತು. ನಮಗೆ ಎಲ್ಲವನ್ನೂ ಬದಲಾಯಿಸೋ ಹುಚ್ಚು, ವಿರೋಧಿಸುವ ಹುಚ್ಚು, ಇದ್ದದ್ದನ್ನ ಇರುವ ಹಾಗೇ ಇರಲೂ ಬಿಡದೆ ಒಕ್ಕಲೆಬ್ಬಿಸುವ ಹುಚ್ಚು. ಅಫ್ಕೋರ್ಸ್, ಬದುಕಿಗೆ ದಡ್ಡತನ ಎಷ್ಟು ಮುಖ್ಯ ಅಂತ ಗೊತ್ತಾಗುವುದೇ ನಮ್ಮ ಬುದ್ಧಿವಂತಿಕೆಗಳು, ನಮ್ಮ ಬದುಕಿಗೆ ನೆಮ್ಮದಿ ಕೊಡುವುದರಲ್ಲಿ ಸೋಲುತ್ತಿವೆ ಅಂತ ಗೊತ್ತಾದಾಗಲೇ.
ಇದನ್ನೂ ಓದಿ : No Delete Option: ಮಾರುವೇಷದ ಹದ್ದುಗಳು; ಶೈಕ್ಷಣಿಕ ಹಿನ್ನಡೆಗೆ ಮುನ್ನವೇ ಎಚ್ಚೆತ್ತುಕೊಳ್ಳಿ ಪೋಷಕರೇ, ವಿದ್ಯಾರ್ಥಿಗಳೇ
ಜಗತ್ತಿನ ಮಹತ್ವದ ಅನಾಹುತ/ವಿಪತ್ತುಗಳನ್ನು ಗಮನಿಸಿದರೆ, ಅದರ ಹಿಂದೆ ಇರುವುದೆಲ್ಲಾ ದೊಡ್ಡ ದೊಡ್ಡ ವಿದ್ಯಾವಂತ ಬುದ್ಧಿವಂತರ ಕೊಡುಗೆಗಳೇ. ‘ವರ್ಲ್ಡ್ ವಾರ್ 2 ರಲ್ಲಿ ಸಿಕ್ಕ ಪತ್ರʼ ಅಂತ ಗುರುತಿಸಿಕೊಂಡ ಒಂದು ಸಂದೇಶದಲ್ಲಿ “ನಾನು ಶಿಕ್ಷಣವನ್ನು ಅನುಮಾನದಿಂದ ನೋಡುತ್ತೇನೆ. ಅಸಂಖ್ಯ ಸಾವು-ನೋವಿಗೆ ಕಾರಣವಾದ ಈ ಯುದ್ಧದಲ್ಲಿ ಪಾಲ್ಗೊಂಡವರೆಲ್ಲ ಬಹಳಷ್ಟು ಓದಿದ ಇಂಜಿನಿಯರ್‌ಗಳು, ಫಿಜಿ಼ಷಿಯನ್ಸ್, ನರ್ಸ್, ಮತ್ತು ಸ್ಕೂಲು-ಕಾಲೇಜಿನ ವಿದ್ಯಾರ್ಥಿಯರು” ಅಂತ ಬರೆಯಲಾಗಿದೆ. ಶತಮಾನದ ನಂತರದಲ್ಲೂ, ಪ್ರಸ್ತುತ ನಾಡಿನ ತುಂಬಾ ಭುಗಿಲೆದ್ದಿರುವ ವಾದ-ವಿವಾದಗಳ ಮೂಲದಲ್ಲಿರುವವರೂ ಇವೇ ಓದು ಬರಹ ಕಲಿತವರು ಅನ್ನುವ ಕುರಿತು ಯಾರಿಗಾದರೂ ಯಾವ ಅನುಮಾನಗಳೂ ಇರಲು ಸಾಧ್ಯವಿದೆಯಾ?
ಹಾಗಾದರೆ ಓದಿ ಬರೆಯುವುದೇ ತಪ್ಪಾ? ಅಂತ ವಾದಕ್ಕಿಳಿಯುವವರಿದ್ದಾರೆ. ನಾನಾದರೂ ಅದನ್ನೇ ಕೇಳುತ್ತೇನೆ. ಆದರೆ ಅನ್ನವನ್ನು ತಿಂದು ಅನ್ನ ಅಂತಲೇ ಅರಗಿಸಿಕೊಳ್ಳಬೇಕು. ಮಣ್ಣು ತಿಂದು ಅರಗದಿದ್ದರೆ ಅಲ್ಲಿ ಅನ್ನದ ತಪ್ಪೂ ಇಲ್ಲ, ಅದು ಮಣ್ಣಿನ ತಪ್ಪೂ ಅಲ್ಲ. ದಡ್ಡತನ ಅನ್ನುವುದನ್ನು ಮುಗ್ಧತೆ ಅಂತಲೇ ಅರ್ಥೈಸಿಕೊಳ್ಳುತ್ತಿದ್ದ ಕಾಲದಿಂದ ತುಂಬಾ ದೂರ ಮುಗ್ಧತೆಯನ್ನೇ ದಡ್ಡತನ ಅಂದುಕೊಳ್ಳುವ ಕಾಲಕ್ಕೆ ಬಂದು ನಿಂತಿರುವಾಗ ಒಂಚೂರಾದರೂ ಆತ್ಮಪ್ರಜ್ಞೆ ಕಾಡದಿದ್ದರೆ ಉಳಿಗಾಲವಿದೆಯಾ? ಮನುಷ್ಯತ್ವವನ್ನು ಪಣಕ್ಕಿಟ್ಟು ನಾವು ಹೊದ್ದು ನಿಂತಿರುವ, ಹಾರಿಸಲು ಹೆಣಗಾಡುತ್ತಿರುವ, ಧರಿಸಲು ಕಾದಾಡುತ್ತಿರುವ ಯಾವುದೇ ಆದರೂ ಅದು ಪ್ರೀತಿ-ಗೌರವವನ್ನು, ಸೂಕ್ಷ್ಮತೆ ಮತ್ತು ಮಧುರತೆಯನ್ನು, ಮುಖ್ಯವಾಗಿ ಕಳೆದು ಹೋದ ಪ್ರಾಣವನ್ನು ಮತ್ತೆ ತಂದುಕೊಡುವುದರ ಬಗ್ಗೆ ಯಾವ ಖಾತ್ರಿಯೂ ಇಲ್ಲದಿದ್ದ ಮೇಲೆ,
ಹಸಿವಿಗಿಂತ… ಬದುಕಿಗಿಂತ… ಜೀವಕ್ಕಿಂತ ಮಿಗಿಲಾದ ಧರ್ಮವಿದೆಯಾ…
ಅಮಾರೈಟ್?
(ಮುಂದಿನ ಬಿಲ್ಲೆ : 8.3.2022)
ಪ್ರತಿಕ್ರಿಯೆಗಾಗಿ : tv9kannadadigital@gmail.com
*
ಹಿಂದಿನ ಬಿಲ್ಲೆ : Valentine‘s Day 2022: ಅಮಾರೈಟ್; ಕಂಪ್ಲೇಂಟ್ ಸ್ವೀಕರಿಸಲು ತಯಾರಾಗಿಯೇ ಈ ಕಾಂಪ್ಲಿಕೇಟೆಡ್ ಕತೆ ಹೇಳಿದ್ದೇನೆ
Published On - 10:41 am, Tue, 22 February 22