S.V.Parameshwar Bhat Birth Anniversary: ‘ಬಡಕವಿಯ ಮನೆಗೆ ನುಗ್ಗಿದ ಕಳ್ಳ ತಾನೇ ಐದು ರೂಪಾಯಿ ಇಟ್ಟು ಹೋಗಿದ್ದ’

|

Updated on: Feb 08, 2022 | 3:24 PM

Poetry : ‘ಹೆಂಡತಿಯನ್ನು ಲೇವಡಿ ವಸ್ತುವನ್ನಾಗಿಸಿಕೊಳ್ಳುವ ಪ್ರವೃತ್ತಿ ಆಂಗ್ಲ ಸಾಹಿತ್ಯದಿಂದ ಬಂದದ್ದು. ಹಾಸ್ಯ ಸಾಹಿತ್ಯದ ಮೂಲಕ ಲಟ್ಟಣಿಗೆ ಹಿಡಿದು ಅಬ್ಬರಿಸುವ ಹೆಂಡತಿಯನ್ನು ತಮ್ಮ ಮುಕ್ತಕಗಳಲ್ಲಿಯೂ ತಂದು ಸ್ತ್ರೀವಿರೋಧಿ ಎಂಬ ವಿಶ್ಲೇಷಣೆಗೂ ಪರಮೇಶ್ವರ ಭಟ್ಟರು ಒಳಗಾಗಬೇಕಾಯಿತು. ಎನ್. ಎಸ್. ಶ್ರೀಧರಮೂರ್ತಿ

S.V.Parameshwar Bhat Birth Anniversary: ‘ಬಡಕವಿಯ ಮನೆಗೆ ನುಗ್ಗಿದ ಕಳ್ಳ ತಾನೇ ಐದು ರೂಪಾಯಿ ಇಟ್ಟು ಹೋಗಿದ್ದ’
ಎಸ್. ವಿ. ಪರಮೇಶ್ವರ ಭಟ್
Follow us on

ಎಸ್. ವಿ. ಪರಮೇಶ್ವರ ಭಟ್ | S.V. Parameshwar Bhat : ‘ಹೊಸಗನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಏನು’ ಎಂದು ಕೇಳಿದಾಗ ಕೊಂಚವೂ ಯೋಚಿಸದೆ ಥಟ್ ಎಂದು ಪರಮೇಶ್ವರ ಭಟ್ಟರು ಹೇಳಿದ್ದು ‘ಮುಕ್ತಕ’ಗಳು ಎಂದು. ಚುಟುಕ, ಹನಿಗವನಗಳು ಕನ್ನಡದಲ್ಲಿ ಸಾಕಷ್ಟು ಇದ್ದರೂ ಅದನ್ನು ಛಂದೋರೂಪದಲ್ಲಿ ನೀಡಿದ ಹೆಗ್ಗಳಿಕೆ ಅವರದು. ಸುಮಾರು ಮೂರು ಸಾವಿರದಷ್ಟು ಮುಕ್ತಕಗಳನ್ನು ಭಟ್ಟರು ರಚಿಸಿದ್ದಾರೆ. ಸಾಂಗತ್ಯ, ತ್ರಿಪದಿ,ಏಳೆಗಳಲ್ಲಿ ಅವರು ಇವುಗಳನ್ನು ರಚಿಸಿದ್ದಾರೆ. ಸಾಂಗತ್ಯ ಅವರಿಗೆ ಬಹಳ ಪ್ರಿಯವಾದ ಛಂದೋರೂಪ. ಹೆಚ್ಚಿನ ಮುಕ್ತಕಗಳು ರಚಿತವಾಗಿರುವುದು ಸಾಂಗತ್ಯದಲ್ಲೇ. ಇಂದ್ರಚಾಪ, ಚಂದ್ರವೀಧಿ, ಚಿತ್ರಪಥೆ, ಮಳೆಬಿಲ್ಲು ಸಾಂಗತ್ಯದಲ್ಲಿ ರಚಿತವಾದ ಮುಕ್ತಕಗಳ ಸಂಕಲನಗಳು. ಅದರಲ್ಲಿ ಚಿತ್ರಪಥೆ ಹಾಸ್ಯ ಮುಕ್ತಕಗಳ ಸಂಕಲನ. ಸುರಗಿ-ಸುರಹೊನ್ನೆ ತ್ರಿಪದಿಗಳಲ್ಲಿ ರಚಿತವಾದ ಮುಕ್ತಕಗಳ ಸಂಕಲನ. ತುಂಬೆ ಹೂ ಏಳೆಯಲ್ಲಿ ರಚಿತವಾದ ಮುಕ್ತಕಗಳ ಸಂಕಲನ.

ಎನ್. ಎಸ್. ಶ್ರೀಧರಮೂರ್ತಿ, ಹಿರಿಯ ಪತ್ರಕರ್ತರು

*

ಅನ್ಯಭಾಷೆಯ ಸೂಕ್ತಿ ಹಲವು ಬಂದಿಹವಿಲ್ಲಿ

ನನ್ನವು ಕೆಲವಿಹವಿಲ್ಲಿ

ಮುನ್ನಿನರ‍್ಯರ ಮಾತು ಚೆನ್ನ ಕನ್ನಡದಲ್ಲಿ

ನನ್ನಿಂದಲಳವಟ್ಟುದಿಲ್ಲಿ

ಎಂದು ತಮ್ಮ ಮುಕ್ತಕ ರಚನೆಯ ಕುರಿತು ಪರಮೇಶ್ವರ ಭಟ್ಟರು ಹೇಳಿಕೊಂಡಿದ್ದಾರೆ. ಇವುಗಳ ರಚನೆಯಂತೆ ಅವರು ಆಯ್ದು ಕೊಳ್ಳುವ ವಿಷಯಗಳೂ ಸರಳವಾದದ್ದು. ಗಹನ ವೇದಂತಗಳನ್ನು ತರಲು ಅವರು ಪ್ರಯತ್ನಿಸಿದವರಲ್ಲ. ಪ್ರೇಮ ಅದಕ್ಕೆ ಹೊಂದಿಕೊಂಡಂತೆ ಕೌಟಂಬಿಕ ಸರಸ ವಿರಸ, ಲೋಕಾನುಭವದ ನುಡಿಗಳು, ಆಧುನಿಕ ಬದುಕಿನ ತಲ್ಲಣಗಳು ಎಲ್ಲವೂ ಇಲ್ಲಿ ಬಂದಿವೆ.

ಬಾಳೆಹಣ್ಣಾದರೂ ತಿನ್ನಿರಿ ನೀವೆಂದು

ಒತ್ತಾಯ ಮಾಡಿದರವರು

ಬಾಳೆ ಹಣ್ಣಾಗಿದೆ ಬೇರೊಂದು ಬೇಡೆಂದು

ನುಡಿದೆ ನಾ ನಕ್ಕರು ಕೆಲರು

ಎನ್ನುವಂತಹ ಶಬ್ದ ಚಾತುರ್ಯ ಅವರ ಮುಕ್ತಕಗಳಲ್ಲಿ ವ್ಯಾಪಕವಾಗಿ ಬಂದಿದೆ.

ಹಿಡಿದರೆ ಹಿಡಿ ತುಂಬಾ ಬಿಟ್ಟರೆ ಜಗವೆಲ್ಲಾ

ಕವಿಯ ಸುಭಾಷಿತ ಹೀಗೆ

ಒಂದಡಿ ಇಳೆಗೆಲ್ಲಾ ಒಂದಡಿ ನಭಕೆಲ್ಲಾ

ವಾಮನ ಬೆಳೆದೆದ್ದ ಹಾಗೆ

ಹೀಗೆ ಪೌರಾಣಿಕ ವಸ್ತುವನ್ನು ಆಧುನಿಕ ನೆಲೆಗೆ ತರುವಲ್ಲಿ ಅವರ ಕುಶಲತೆ ಎದ್ದು ಕಾಣುತ್ತದೆ. ಸರಳ ಸುಂದರ ಸಂದೇಶಗಳೂ ಅವರ ಮುಕ್ತಕಗಳಲ್ಲಿವೆ. ಕೆಲವು ಮುಕ್ತಕಗಳಲ್ಲಿ ವ್ಯಂಗ್ಯದ ಮೊನಚು ವಾಸ್ತವದ ಕುರಿತು ಬೆಳಕನ್ನು ಚೆಲ್ಲುತ್ತದೆ. ಕೆಲವು ಸೂಕ್ಷ್ಮವಾದವುಗಳು, ಇನ್ನೂ ಕೆಲವು ಸೂಚ್ಯವಾದವುಗಳು. ಆದರೆ ‘ಮಂಕುತಿಮ್ಮನ ಕಗ್ಗ’ದಂತಹ ಒಳನೋಟಗಳು ದೊರಕುವುದಿಲ್ಲ. ಪರಮೇಶ್ವರ ಭಟ್ಟರು ತಮಗಿದ್ದ ಅಪಾರ ಜೀವನಾನುಭವ, ಪಾಂಡಿತ್ಯದ ಹಿನ್ನೆಲೆಯಲ್ಲಿ ದೊರಕಬಹುದಾದ ಸಾಧ್ಯತೆಗಳಿಗೆ ಪ್ರಯತ್ನಿಸಲಿಲ್ಲ. ಇದು ಒಂದು ಮಾದರಿಯಲ್ಲಿ ಕೊರತೆಯಾಗಿ ಕಾಡುತ್ತದೆ.

ಭಾಗ 3 : S.V. Parameshwar Bhat Birth Anniversary: ಬಡವ ತಬ್ಬಲಿ ಎಂದು ಚಡಪಡಿಸದಿಹೆ, ಕೊಡುವಾತ ಬಿಡುವಾತ ನನ್ನೊಳಗಿಹನು

‘ನಾನು ಹಾಸ್ಯವೊಂದೇ ರಸವೆಂಬ ಪಂಥದವನು’ ಎನ್ನುತ್ತಿದ್ದ ಎಸ್.ವಿ.ಪರಮೇಶ್ವರ ಭಟ್ಟರು ಹಾಸ್ಯವನ್ನು ತಮ್ಮ ಮುಕ್ತಕಗಳಲ್ಲಿ ವ್ಯಾಪಕವಾಗಿ ತಂದರು. ಚಿತ್ರಪಥೆ ಎನ್ನುವ ಸಂಕಲನ ಹಾಸ್ಯ ಮುಕ್ತಕಗಳಿಗಾಗಿಯೇ ಮೂಡಿ ಬಂದಿತು. ಅವರದು ಸಹಜ ಹಾಸ್ಯ. ವ್ಯಕ್ತಿತ್ವದಲ್ಲಿಯೇ ಮೂಡಿದ್ದ ಲವಲವಿಕೆ ಅವರ ಮುಕ್ತಕಗಳಲ್ಲೂ ಮೈದಾಳಿದೆ. ಈಗಾಗಲೇ ಪ್ರಚಲಿತವಾಗಿರುವ, ಕಾವ್ಯಗಳಲ್ಲಿ ಬಂದಿರುವ ಹಾಸ್ಯವನ್ನು ಮುಕ್ತಕಗಳಲ್ಲಿ ಅವರು ಮರು ರೂಪಿಸಿದ್ದಾರೆ.

ಬಡ ಕವಿಯೊಬ್ಬನ ಮನೆಯೆಂದು ತಿಳಿಯದೆ

ಕಳ್ಳ ನುಗ್ಗಿದ್ದನು ತಾಯಿ

ಇಟ್ಟು ಹೋಗಿದ್ದನು ಏನನು ಒಯ್ಯದೆ

ತಾನೆ ತನ್ನೈದು ರೂಪಾಯಿ

ಎನ್ನುವಂತಹ ಕಡೆ ಈ ಮರುರೂಪಿಸುವಲ್ಲಿ ಕೂಡ ಅವರ ಜಾಣ್ಮೆ ವ್ಯಕ್ತವಾಗಿದೆ. ಆಧುನಿಕ ಹಾಸ್ಯದಲ್ಲಿ ಹೆಂಡತಿಯನ್ನು ಲೇವಡಿಯ ವಸ್ತುವನ್ನಾಗಿಸಿಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿದೆ. ಆಂಗ್ಲ ಸಾಹಿತ್ಯದ ಪ್ರೇರಣೆಯಿಂದ ಬಂದ ಇಂತಹ ಮನೋಭಾವ ಸುರಕ್ಷಿತತೆಯ ಕಾರಣಕ್ಕೂ ಮೂಡಿ ಬಂದಿದೆ. ಲಟ್ಟಣಿಕೆ ಹಿಡಿದು ಅಬ್ಬರಿಸುವ ಹೆಂಡತಿಯನ್ನು ಹಾಸ್ಯ ಸಾಹಿತ್ಯದಲ್ಲಿ ಮಾತ್ರ ನೋಡಬಹುದು. ಇಂತಹ ಪ್ರವೃತ್ತಿಯನ್ನು ತಮ್ಮ ಮುಕ್ತಕಗಳಲ್ಲಿಯೂ ತಂದು ಸ್ತ್ರೀವಿರೋಧಿ ಎಂಬ ವಿಶ್ಲೇಷಣೆಗೂ ಪರಮೇಶ್ವರ ಭಟ್ಟರು ಒಳಗಾಗಬೇಕಾಯಿತು. ಆದರೆ ಇದು ಯಾವುದೋ ಕೆಲವು ಮುಕ್ತಕಗಳಿಗೆ ಮಾತ್ರ ಸೀಮಿತವಾದ ಮಾತು…

ಹೆಣ್ಣಿಗೆ ನಾಯಿಗೆ ಹೋಲಿಪೆಯಾದರೆ

ನಾಯಿಯೆ ಹೆಣ್ಣಿಗೆ ಮಿಗಿಲು

ಬೊಗಳದು ತನ್ನೊಡಯನು ಬಂದನೆಂದರೆ

ಶ್ವಾನವು ಹೆಣ್ಣಿನವೋಲು

ಎನ್ನುವಲ್ಲಿ ತಿಳಿ ಹಾಸ್ಯವನ್ನು ಮಾತ್ರ ಗುರುತಿಸಬೇಕು. ಇದು ತಾತ್ವಿಕ ನೆಲಗಟ್ಟಿನ್ನು ನಿರ್ಣಯಿಸಿ ಮೌಲ್ಯಮಾಪನ ಮಾಡುವ ಪ್ರಕಾರವೆಂದುಕೊಂಡರೆ ತಪ್ಪಾದ ಓದಾದಾದೀತು. ಅಷ್ಟೇ ಅಲ್ಲ

ಎಷ್ಟು ಓದಿದರೇನು ಎಷ್ಟು ಬರೆದರೇನು

ಗೃಹಿಣಿಯವಾಗುವ ಕಲೆ ಬೇರೆ

ಎಂದು ಅವರು ಮೆಚ್ಚಿ ಕೂಡ ಬರೆದಿದ್ದಾರೆ.

(ಮುಗಿಯಿತು)

ಎಸ್. ವಿ. ಪರಮೇಶ್ವರ ಭಟ್ಟರ ಬಗ್ಗೆ ಎನ್​. ಎಸ್. ಶ್ರೀಧರಮೂರ್ತಿಯವರು ಬರೆದ ಎಲ್ಲ ಭಾಗಗಳನ್ನೂ ಓದಿ : https://tv9kannada.com/tag/nimagido-shubhashaya

 

Published On - 3:22 pm, Tue, 8 February 22