ನಿವೃತ್ತಿ ಬದುಕಿಗೆ ರೂ. 1.5 ಕೋಟಿ ಉಳಿಸಲು ಇಲ್ಲಿದೆ ಮಾರ್ಗ; ತೆರಿಗೆ ಅನುಕೂಲದ ಜತೆಗೆ ಇದು ಹೇಗೆ, ಏನು ಎಂಬ ವಿವರ ಇಲ್ಲಿದೆ

| Updated By: Srinivas Mata

Updated on: Jan 20, 2022 | 11:32 AM

ಪಬ್ಲಿಕ್ ಪ್ರಾವಿಡೆಂಟ್​ ಫಂಡ್​ನಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿವೃತ್ತ ನಿಧಿ 1.5 ಕೋಟಿ ರೂಪಾಯಿ ಉಳಿಸುವುದು ಹೇಗೆ ಎಂಬ ಬಗ್ಗೆ ಲೆಕ್ಕಾಚಾರ ಸಹಿತ ಮಾಹಿತಿ ಇಲ್ಲಿದೆ.

ನಿವೃತ್ತಿ ಬದುಕಿಗೆ ರೂ. 1.5 ಕೋಟಿ ಉಳಿಸಲು ಇಲ್ಲಿದೆ ಮಾರ್ಗ; ತೆರಿಗೆ ಅನುಕೂಲದ ಜತೆಗೆ ಇದು ಹೇಗೆ, ಏನು ಎಂಬ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) ಎಂಬುದು ಅತ್ಯಂತ ಆರೋಗ್ಯಕರ, ತೆರಿಗೆಮುಕ್ತ ನಿವೃತ್ತಿ ನಿಧಿ ಸೃಷ್ಟಿಸಲು ಸುರಕ್ಷಿತವಾದ ಮಾರ್ಗ. ಸಮಯದೊಂದಿಗೆ ಹೂಡಿಕೆಯನ್ನು ಹೆಚ್ಚಿಸುತ್ತಾ ಹೋಗುವ ಹಾಗೂ ತೆರಿಗೆ ಮುಕ್ತ ರಿಟರ್ನ್ಸ್ ಜನರೇಟ್ ಮಾಡುವ ಕೆಲವೇ ಉಳಿತಾಯಗಳಲ್ಲಿ ಇದೂ ಒಂದು. ಇತರ ಹೆಚ್ಚಿನ ರಿಟರ್ನ್ ಉತ್ಪನ್ನಗಳಾದ ಎನ್​ಪಿಎಸ್​, ಮ್ಯೂಚುವಲ್ ಫಂಡ್ಸ್ ಇವುಗಳಿಗೆ ವಿಥ್​ಡ್ರಾ ಅಥವಾ ಹಂತಹಂತವಾಗಿ ರಿಡೀಮ್ ವೇಳೆ ತೆರಿಗೆ ಆಗುತ್ತದೆ. ಈ ಕಾರಣಕ್ಕಾಗಿ ಪಬ್ಲಿಕ್ ಪ್ರಾವಿಡೆಂಡ್​ ಫಂಡ್ ಆಕರ್ಷಕವಾಗಿದೆ. ಪಿಪಿಎಫ್​ ಮೇಲಿನ ಬಡ್ಡಿ ದರವು FY22 ಮೊದಲನೇ ತ್ರೈಮಾಸಿಕದಿಂದ ಶೇ 7.1ರಲ್ಲೇ ಇದ್ದು, ಯಾವುದೇ ಬದಲಾವಣೆ ಇಲ್ಲ. ಹಾಗಂತ ಇತರ ಆಕರ್ಷಕ ರಿಟರ್ನ್ ನೀಡುವ ಮ್ಯೂಚುವಲ್ ಫಂಡ್ಸ್​ ಇಎಲ್​ಎಸ್​ಎಸ್​ನಂತೆ ಇಲ್ಲದಿರಬಹುದು. ಆದರೆ ಪಿಪಿಎಫ್ ಅಪಾಯದಿಂದ ಮುಕ್ತವಾಗಿದೆ. ಪಿಪಿಎಫ್​ನಲ್ಲಿ ತಿಂಗಳಿಗೆ 12,500 ರೂಪಾಯಿ ಅಥವಾ ವರ್ಷಕ್ಕೆ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅದು ಶೇ 7.10 ರಿಟರ್ನ್ ನೀಡಿದಲ್ಲಿ ಹೂಡಿಕೆದಾರರು 1 ಕೋಟಿ ರೂಪಾಯಿ ನಿಧಿ ಸೃಷ್ಟಿಸಬಹುದು. ಈ ಮೊತ್ತವನ್ನು ಇನ್ನಷ್ಟು ಹೆಚ್ಚಾಗಬೇಕು ಅಂದರೆ, ಹೂಡಿಕೆ ಅವಧಿಯನ್ನು 5 ವರ್ಷದ ಬ್ಲಾಕ್​ನಂತೆ ಹೆಚ್ಚಿಸಬಹುದು. ​

ನೀವು 25ರಿಂದ 30 ವರ್ಷ ವಯಸ್ಸಿನಲ್ಲಿ ಪಿಪಿಎಫ್​ ಖಾತೆ ಆರಂಭಿಸಿದಲ್ಲಿ, 5 ವರ್ಷದ ಬ್ಲಾಕ್​ನಂತೆ ಮೂರು ಸಲ ವಿಸ್ತರಣೆ ಮಾಡಿದರೆ ನಿವೃತ್ತರಾಗುವ ಮುನ್ನ ಹೂಡಿಕೆಯನ್ನು ಸುಲಭವಾಗಿ ಮೂವತ್ತು ವರ್ಷಗಳಿಗೆ ಹೆಚ್ಚಿಸಬಹುದು. ಪ್ರತಿ ವರ್ಷ 1.5 ಲಕ್ಷ ರೂಪಾಯಿಯಂತೆ 30 ವರ್ಷಕ್ಕೆ ಅದರ ಮೆಚ್ಯೂರಿಟಿ ಮೊತ್ತವು 1.54 ಕೋಟಿ ರೂಪಾಯಿ ಆಗುತ್ತದೆ. ಆದರೆ ಹಾಗೆ ಆಗುವುದಕ್ಕೆ ನಿರಂತರವಾಗಿ ಈಗಿನ ಬಡ್ಡಿ ದರವಾದ ಶೇ 7.1ರಷ್ಟೇ ಇರಬೇಕು. ಈ 1.54 ಕೋಟಿ ರೂಪಾಯಿ ಹಣದಲ್ಲಿ 45 ಲಕ್ಷ ರೂಪಾಯಿ ಸ್ವಂತ ಹೂಡಿಕೆ ಮತ್ತು ಬಾಕಿ 1.09 ಕೋಟಿ ರೂಪಾಯಿ 30 ವರ್ಷಗಳ ಅವಧಿಗೆ ಬರು ಬಡ್ಡಿ ಮೊತ್ತವಾಗಿ ಇರುತ್ತದೆ.

ಪಿಪಿಎಫ್ ಎಂಬ ಸಣ್ಣ ಉಳಿತಾಯ ಯೋಜನೆಗೆ ಸರ್ಕಾರದ ಬೆಂಬಲ ಇದೆ. ಸಾಧಾರಣವಾದ ರಿಟರ್ನ್ಸ್ ಜತೆಗೆ ಹಲವು ತೆರಿಗೆ ಅನುಕೂಲಗಳು, ತೆರಿಗೆ ವಿನಾಯಿತಿ ಮತ್ತು ಬಂಡವಾಳ ಸುರಕ್ಷತೆಯ ಭರವಸೆಯೊಂದಿಗೆ ಈ ಯೋಜನೆ ದೊರೆಯುತ್ತದೆ. ಬಡ್ಡಿ ಮತ್ತು ರಿಟರ್ನ್ಸ್​ಗೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಯಾವುದೇ ತೆರಿಗೆ ಬೀಳುವುದಿಲ್ಲ. ಪಿಪಿಎಫ್​ನಲ್ಲಿ ಒಂದೇ ಕಂತಿಗೆ ಅಥವಾ ಹನ್ನೆರಡು ತಿಂಗಳ ಅವಧಿಯುದ್ದಕ್ಕೂ ಹೂಡಿಕೆ ಮಾಡಬಹುದು. ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 1.5 ಲಕ್ಷ ಹೂಡಬಹುದು. ಸದ್ಯಕ್ಕೆ ಇದರ ಬಡ್ಡಿ ದರ ಶೇ 7.1ರಷ್ಟಿದ್ದು, ಮೆಚ್ಯೂರಿಟಿ ಅವಧಿ 15 ವರ್ಷಗಳಾಗಿದೆ.

ವರ್ಷಕ್ಕೆ 1.5 ಲಕ್ಷ ರೂಪಾಯಿ ತನಕದ ಠೇವಣಿಗೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯ ಸೆಕ್ಷನ್ 80ಸಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ. ಈ ಕಾರಣಕ್ಕೆ ವೈಯಕ್ತಿಕ ವೇತನದಾರರಿಗೆ ಅತ್ಯುತ್ತಮ ತೆರಿಗೆ ಉಳಿತಾಯ ಯೋಜನೆ ಇದಾಗಿದೆ. ಇತರ ಸಣ್ಣ ಉಳಿತಾಯ ಯೋಜನೆಗಳಂತೆ ಪಿಪಿಎಫ್​ ಬಡ್ಡಿ ದರವನ್ನೂ ಸರ್ಕಾರವೇ ನಿರ್ಧಾರ ಮಾಡುತ್ತದೆ.

ಇದನ್ನೂ ಓದಿ: How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?

Published On - 11:31 am, Thu, 20 January 22