ಹೈದರಾಬಾದ್: ತೆಲಂಗಾಣದಲ್ಲಿ ನಾಳೆ (ಮೇ 12)ಯಿಂದ 10 ದಿನಗಳ ಲಾಕ್ಡೌನ್ ಜಾರಿಯಾಗಲಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳ ಸಾಲಿಗೆ ಇದೀಗ ತೆಲಂಗಾಣವೂ ಸೇರಿದ್ದು, ಕರ್ನಾಟಕ ಮಾದರಿಯಲ್ಲೇ ಕಠಿಣ ನಿಯಮ ಜಾರಿಗೊಳಿಸಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ನಾಳೆಯಿಂದ 10 ದಿನಗಳ ಕಾಲ ಮುಂಜಾನೆ 6ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯವಸ್ತುಗಳು ಸಿಗಲಿವೆ.
ನಾಳೆ ಬೆಳಗ್ಗೆ 10ಗಂಟೆಯಿಂದ ಲಾಕ್ಡೌನ್ ಜಾರಿಗೊಳಿಸಲು ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಜನರು ಮುಂಜಾನೆ 6ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಆಂಧ್ರಪ್ರದೇಶದಲ್ಲಿ ಮಾತ್ರ ಇನ್ನೂ ಭಾಗಶಃ ಕರ್ಫ್ಯೂ ಇರುವುದು ಬಿಟ್ಟರೆ, ದಕ್ಷಿಣದ ಉಳಿದ ರಾಜ್ಯಗಳಲ್ಲಿ ಲಾಕ್ಡೌನ್ ಹೇರಲಾಗಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮೇ 24ರವರೆಗೆ ಲಾಕ್ಡೌನ್ ಮುಂದುವರಿಸಲಾಗಿದೆ. ಹಾಗೇ ಕೇರಳದಲ್ಲಿ ಮೇ 16ರವರೆಗೂ ಲಾಕ್ಡೌನ್ ಇರಲಿದೆ.
ದೇಶದಲ್ಲಿ ಎರಡನೇ ಅಲೆಯ ಕೊರೊನಾ ವಿಪರೀತವಾಗಿ ಹೆಚ್ಚಾಗಿರುವ ಕಾರಣ ಬಹುತೇಕ ರಾಜ್ಯಗಳು ಲಾಕ್ಡೌನ್ ಮೊರೆಹೋಗಿವೆ. ಸ್ವಲ್ಪ ದಿನಗಳ ಹಿಂದೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸರ್ಕಾರಗಳು ಲಾಕ್ಡೌನ್ನ್ನು ಕೊನೇ ಅಸ್ತ್ರವನ್ನಾಗಿ ಪ್ರಯೋಗಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಬಿಟ್ಟು ಬೇರೆ ಮಾರ್ಗ ಇಲ್ಲದಂತಾಗಿದೆ.
ಕೊರೊನಾ ಉಲ್ಬಣದ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ಅಭಾವ ಕಂಡುಬಂದಿದೆ. ಅದೆಷ್ಟೋ ರೋಗಿಗಳು ಆಮ್ಲಜನಕ ಇಲ್ಲದೆ ಮೃತಪಟ್ಟಿದ್ದಾರೆ. ಇದರಿಂದ ಇನ್ನಷ್ಟು ಆತಂಕ ಮನೆ ಮಾಡಿದೆ.
ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆದ ನಂತರವೂ ಆಸ್ಪತ್ರೆಯ ಏಳು ಸಿಬ್ಬಂದಿಗಳಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗಲುತ್ತದೆ: ಅಧ್ಯಯನ ವರದಿ